ತಪ್ಪು ಮಾಡದೋರ್ ಯಾರವ್ರೆ ಎಂದು ಹಾಡಿ ನಿರ್ದೇಶಕ ಗುರುಪ್ರಸಾದ್, ನಟ ಜಗ್ಗೇಶ್ ಇಂಥ ತಪ್ಪು ಮಾಡಿದ್ದು ಸರೀನಾ? ಹಾಡಿನ ಲಿರಿಕ್ಸ್ ಇಲ್ಲಿದೆ
Nov 08, 2024 03:07 PM IST
ನಟ ಜಗ್ಗೇಶ್, ನಿರ್ದೇಶಕ ಗುರುಪ್ರಸಾದ್
ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಟ ಜಗ್ಗೇಶ್ ಕಾಮೆಂಟ್ ಮಾಡಿ ಟ್ರೋಲ್ ಆದರು. ತಮ್ಮ ಬಗ್ಗೆ ಮಾತನಾಡಿದವವರನ್ನು ಸೋಷಿಯಲ್ ಮೀಡಿಯಾದಲ್ಲಿ ಬ್ಲಾಕ್ ಮಾಡುತ್ತಾ ಬಂದರು. ಮಠ ಚಿತ್ರದಲ್ಲಿ ತಪ್ಪು ಮಾಡದೋರ್ ಯಾರವ್ರೇ ಅಂತ ಹಾಡಿ ಜಗ್ಗೇಶ್ , ಗುರುಪ್ರಸಾದ್ ಈ ರೀತಿ ತಪ್ಪು ಮಾಡಿದ್ದು ಸರೀನಾ ಎಂಬ ಪ್ರಶ್ನೆ ಎದುರಾಗಿದೆ.
ತಪ್ಪು ಮಾಡದೋರ್ ಯಾರವ್ರೆ, ತಪ್ಪು ಮಾಡದೋರ್ ಎಲ್ಲವ್ರೆ...ಮಠ ಸಿನಿಮಾದ ಈ ಹಾಡು ಎಷ್ಟು ಅರ್ಥಪೂರ್ಣವಾಗಿದೆ. ನಿರ್ದೇಶಕ ಗುರುಪ್ರಸಾದ್ ಸಾವಿನ ಸುದ್ದಿ ಕೇಳುತ್ತಿದ್ದಂತೆ ಎಲ್ಲರ ಕಣ್ಮುಂದೆ ಬಂದಿದ್ದು ಈ ಹಾಡು. ಗುರುಪ್ರಸಾದ್ ಅವರಂಥ ನಿರ್ದೇಶಕ ಆತ್ಮಹತ್ಯೆ ಮಾಡಿಕೊಂಡಾಗ ಅವರು ಈ ರೀತಿ ಮಾಡಿಕೊಳ್ಳಬಾರದಿದ್ದು ಎಂದು ಎಲ್ಲರೂ ಮಮ್ಮಲ ಮರುಗಿದರೆ, ನಟ ಜಗ್ಗೇಶ್ ಮಾತ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಬಿಟ್ಟು ಅವರ ಬೇರೆ ತಪ್ಪುಗಳನ್ನು ಹುಡುಕಲು ಹೊರಟರು.
ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಲು ಕನಸು ಕಂಡಿದ್ದ ಗುರುಪ್ರಸಾದ್
ನಿರ್ದೇಶಕ ಗುರುಪ್ರಸಾದ್ ಕನ್ನಡ ಚಿತ್ರರಂಗಕ್ಕೆ ಏನಾದರೂ ದೊಡ್ಡ ಕೊಡುಗೆ ನೀಡಬೇಕು ಅಂತ ಆಸೆ ಪಟ್ಟವರು. ನಾನು ಕನ್ನಡಕ್ಕೆ ಆಸ್ಕರ್ ತರುತ್ತೇನೆ ಎಂದು ಕೆಲವು ಇಂಟರ್‌ವ್ಯೂಗಳಲ್ಲಿ ಹೇಳಿಕೊಂಡಿದ್ದರು. ಆದರೆ ದುರಾದೃಷ್ಟವೋ ಏನೋ ಮಠ ನಂತರ ಅವರು ಮಾಡಿದ ಸಿನಿಮಾಗಳು ಕೈ ಹಿಡಿಯಲಿಲ್ಲ. ಜೊತೆಗೆ ಜಗ್ಗೇಶ್ ಜೊತೆಗಿನ ಸ್ನೇಹ ಕೂಡಾ ಹಾಳಾಯ್ತು. ಕೊನೆಗೊಮ್ಮೆ ಇಬ್ಬರೂ ಜೊತೆ ಸೇರಿ ರಂಗನಾಯಕ ಸಿನಿಮಾ ಮಾಡಿದರು. ಆದರೆ ಆ ಸಿನಿಮಾ ಕೂಡಾ ಸಕ್ಸಸ್ ಆಗಲಿಲ್ಲ. ಮಾನಸಿಕವಾಗಿ ಕುಗ್ಗಿದ ಗುರುಪ್ರಸಾದ್ ಆತ್ಮಹತ್ಯೆಯಂಥ ನಿರ್ಧಾರಕ್ಕೆ ಬಂದರು. ಅವರ ಸಾವಿನ ನಂತರ ಜಗ್ಗೇಶ್ ಅವರ ಮೇಲೆ ಆರೋಪಗಳ ಸುರಿಮಳೆ ಸುರಿಸಿದರು.
ಗುರುಪ್ರಸಾದ್ ಮೊದಲು ಚೆನ್ನಾಗಿದ್ದ, ಮಾಡಬಾರದವರ ಸ್ನೇಹ ಮಾಡಿ ಹಾಳಾದ, ಕುಡಿತಕ್ಕೆ ದಾಸನಾದ, ಎರಡನೇ ಮದುವೆ ಮಾಡಿಕೊಂಡ, ಪುನೀತ್ ರಾಜ್‌ಕುಮಾರ್‌ಗೆ ಕನ್ನಡ ಬರುವುದಿಲ್ಲ ಅಂತ ಕಾಮೆಂಟ್ ಮಾಡಿದ್ದ, ರಂಗನಾಯಕದಂಥ ಸಿನಿಮಾ ಮಾಡಿ, ಎಲ್ಲರೂ ನನ್ನನ್ನು ಬೈಯ್ಯುವಂತೆ ಮಾಡಿ ತಲೆ ಮೇಲೆ ಚಪ್ಪಡಿ ಹಾಕಿ ಹೋಗಿಬಿಟ್ಟ ಎಂದು ಜಗ್ಗೇಶ್, ಗುರುಪ್ರಸಾದ್ ಬಗ್ಗೆ ಮಾಡಿದ ಕಾಮೆಂಟ್‌ನಿಂದ ಹಲವರು ಬೇಸರ ವ್ಯಕ್ತಪಡಿಸಿದರು. ಸತ್ತ ವ್ಯಕ್ತಿಯ ಬಗ್ಗೆ ಹಾಗೆಲ್ಲಾ ಮಾತನಾಡಬಾರದು ಎಂದು ಸಲಹೆ ನೀಡಿದರು. ಜಗ್ಗೇಶ್ , ಟ್ರೋಲ್‌ಗಳಿಗೆ ಉತ್ತರ ಕೊಟ್ಟು ಮತ್ತೆ ಮತ್ತೆ ಟ್ರೋಲ್ ಆದ್ರು. ತಮ್ಮ ಬಗ್ಗೆ ಬರೆದವರನ್ನು ಬ್ಲಾಕ್ ಮಾಡಿದರು. ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡು ತಪ್ಪು ಮಾಡಿದ್ರೆ, ಜಗ್ಗೇಶ್, ಅವರ ಬಗ್ಗೆ ಕಾಮೆಂಟ್ ಮಾಡಿ ತಪ್ಪು ಮಾಡಿದ್ರು. ಮಠ ಚಿತ್ರದಲ್ಲಿ ತಪ್ಪು ಮಾಡವ್ರು ಯಾರವ್ರೆ ಎಂದು ಹಾಡಿ ಈ ರೀತಿ ತಪ್ಪು ಮಾಡಿಬಿಟ್ರಾ ಇಬ್ಬರೂ ಅಂತ ಜನರು ಪ್ರಶ್ನಿಸುತ್ತಿದ್ದಾರೆ.
ತಪ್ಪು ಮಾಡದೋರ್ ಯಾರವ್ರೆ ಹಾಡಿನ ಸಾಹಿತ್ಯ ಇಲ್ಲಿದೆ
ಸಂಗೀತ , ಸಾಹಿತ್ಯ: ವಿ ಮನೋಹರ್
ಗಾಯಕರು: ಸಿ ಅಶ್ವತ್ಥ್
ತಪ್ಪು ಮಾಡದೋರ್ ಯಾರವ್ರೆ, ತಪ್ಪೇ ಮಾಡದೋರ್ ಎಲ್ಲವ್ರೆ?
ತಪ್ಪು ಮಾಡದೋರ್ ಯಾರವ್ರೆ, ತಪ್ಪೇ ಮಾಡದೋರ್ ಎಲ್ಲವ್ರೆ?
ಅಪ್ಪಿ ತಪ್ಪಿ ತಪ್ಪಾಗುತ್ತೆ ಬೆಳ್ಳಿ ಕೂಡ ಕಪ್ಪಾಗುತ್ತೆ
ತಿದ್ಕೊಳ್ಳಕ್ಕೆ ದಾರಿ ಐತೆ.....
ತಪ್ಪು ಮಾಡದೋರ್ ಯಾರವ್ರೆ, ತಪ್ಪೇ ಮಾಡದೋರ್ ಎಲ್ಲವ್ರೆ?
ಘಮಘಮ ತಂಪು ತರೋ ಗಾಳಿ ಕೂಡ ಗಬ್ಬುನಾತ ತರೋದಿಲ್ವಾ
ಪರಮಪಾವನೆ ಗಂಗೆಯಲ್ಲೂ ಕೂಡ ಹೆಣಗಳು ತೇಲೋದಿಲ್ವಾ
ಕಳ್ರುನೆಲ್ಲ ಜೈಲಿಗೆ ಹಾಕೋದಾದ್ರೆ ಭೂಮಿಗೆ ಬೇಲಿ ಹಾಕಬೇಕಲ್ವಾ
ತೀರ್ಥ ಕುಡಿದ್ರೂ ಶೀತಾಗಲ್ವಾ ಮಂಗಳಾರತಿನೂ ಸುಡೋದಿಲ್ವಾ
ದೇವ್ರುಗಳೇ ತಪ್ ಮಾಡಿಲ್ವಾ?
ತಪ್ಪು ಮಾಡದೋರ್ ಯಾರವ್ರೆ, ತಪ್ಪೇ ಮಾಡದೋರ್ ಎಲ್ಲವ್ರೆ?
ಹೆಣ್ಣು ಹೊನ್ನು ಮಣ್ಣು ಮೂರರಿಂದ್ಲೇ ಎಲ್ಲಾ ರೀತಿ ಎಡವಟ್ಟು
ನಿನ್ನ ಪಾಡಿಗೆ ನೀನು ಇರೊದ್ಬಿಟ್ಟು ಪರರ ಸ್ವತ್ತಿಗ್ಯಾಕೆ ಪಟ್ಟು
ಮೆಳ್ಳಗಣ್ಣು ಇದ್ದರೂ ತಪ್ಪಿಲ್ಲ ಕಳ್ಳಗಣ್ಣು ಇರಬಾರ್ದು
ಕಲಿಯೋದಾದ್ರೆ ವಿದ್ಯೆ ಕಲಿ ತೊರೆದೆಬಿಡು ಕೇಡುಬುದ್ಧಿ
ಲದ್ದಿ ಬುದ್ಧಿ ಮಾಡು ಶುದ್ಧಿ
ತಪ್ಪು ಮಾಡದೋರ್ ಯಾರವ್ರೆ ತಪ್ಪೇ ಮಾಡದೋರ್ ಎಲ್ಲವ್ರೆ?
ನಾವೂ ನೀವೂ ಎಲ್ಲ ಒಂದೇ ತಪ್ಪು ಮಾಡೋ ಕುರಿಮಂದೆ
ತಿದ್ಕೊಳ್ಳಕ್ಕೆ ದಾರಿ ಐತೆ ಮುಂದೆ