ದರ್ಶನ್ ತೂಗುದೀಪ್ ನವಗ್ರಹ ಸಿನಿಮಾ ರೀ ರಿಲೀಸ್; ಥಿಯೇಟರ್ ಮುಂದೆ ಕಟೌಟ್, ಬಂಟಿಂಗ್ಸ್ ಕಟ್ಟಿ ಹಬ್ಬದಂತೆ ಸಂಭ್ರಮಿಸಿದ ಅಭಿಮಾನಿಗಳು
2008 ರಲ್ಲಿ ತೆರೆ ಕಂಡಿದ್ದ ದರ್ಶನ್ ತೂಗುದೀಪ್ ಅಭಿನಯದ ನವಗ್ರಹ ಸಿನಿಮಾ ಇಂದು (ನವೆಂಬರ್ 8) ರೀ ರಿಲೀಸ್ ಆಗಿದೆ. ದರ್ಶನ್ ಸದ್ಯಕ್ಕೆ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆಯಲ್ಲಿ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ರವನ್ನು ಮೀನಾ ತೂಗುದೀಪ್ ನಿರ್ಮಿಸಿದ್ದು ದಿನಕರ್ ತೂಗುದೀಪ್ ನಿರ್ದೇಶನ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕಣದಲ್ಲಿ ಜೈಲು ಸೇರಿದ್ದ ದರ್ಶನ್ ಅನಾರೋಗ್ಯದ ಕಾರಣ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದಾರೆ. 6 ವಾರಗಳ ಕಾಲ ದರ್ಶನ್‌ಗೆ ಚಿಕಿತ್ಸೆ ಸಿಗಲಿದೆ. ಸದ್ಯಕ್ಕೆ ದರ್ಶನ್ ಆಸ್ಪತ್ರೆಯಲ್ಲಿ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದೆಡೆ ದರ್ಶನ್ ಅಭಿನಯದ ನವಗ್ರಹ ಸಿನಿಮಾ ಮರು ಬಿಡುಗಡೆ ಆಗಿದೆ.
ಮುಂಗಡ ಟಿಕೆಟ್ ಕಾಯ್ದಿರಿಸಿದ್ದ ಫ್ಯಾನ್ಸ್
ಬೆಂಗಳೂರು ಕೆಜಿ ರಸ್ತೆಯ ನರ್ತಕಿ, ಮಾಗಡಿ ರಸ್ತೆಯ ಪ್ರಸನ್ನ, ಕಾಮಾಕ್ಯ ಸೇರಿದಂತೆ ಸಾಕಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರೀ ರಿಲೀಸ್ ಆಗಿದೆ. ಚಿತ್ರತಂಡ ಕೆಲವು ದಿನಗಳಿಂದ ಚಿತ್ರದ ಪ್ರಚಾರ ಕಾರ್ಯ ಮಾಡಿತ್ತು. ಇತ್ತೀಚೆಗೆ ಚಿತ್ರತಂಡ ಮಾಧ್ಯಮದಲ್ಲಿ ಸಂದರ್ಶನ ಕೂಡಾ ನೀಡಿದ್ದರು. ದರ್ಶನ್ ಸಿನಿಮಾ ಮರು ಬಿಡುಗಡೆ ಆಗುತ್ತಿದೆ ಎಂದು ತಿಳಿದು ಅಭಿಮಾನಿಗಳು ಮುಂಗಡ ಟಿಕೆಟ್ ಬುಕ್ ಮಾಡಿದ್ದರು. ಥಿಯೇಟರ್ ಮುಂದೆ ಅಲಂಕಾರ ಮಾಡಿ ಸಿನಿಮಾವನ್ನು ಅದ್ದೂರಿಯಾಗಿ ಮತ್ತೆ ಬರಮಾಡಿಕೊಂಡರು. ನವಗ್ರಹ ರಿಲೀಸ್ ಆಗುವ ಥಿಯೇಟರ್‌ಗಳ ಮುಂದೆ ದರ್ಶನ್ ತೂಗುದೀಪ್, ದಿನಕರ್ ಹಾಗೂ ತಂದೆ ತೂಗುದೀಪ್ ಶ್ರೀನಿವಾಸ್ ಅವರ ದೊಟ್ಟ ಕಟೌಟ್ ನಿಲ್ಲಿಸಲಾಗಿದೆ. ಬಂಟಿಂಗ್, ಬ್ಯಾನರ್‌ಗಳನ್ನು ಕಟ್ಟಲಾಗಿದೆ. ಅಭಿಮಾನಿಗಳು ಕನ್ನಡ ಬಾವುಟ ಹಿಡಿದು ಸಂಭ್ರಮಿಸುತ್ತಿದ್ದಾರೆ.
ಪ್ರಸನ್ನ ಚಿತ್ರಮಂದಿರಲ್ಲಿ ಬೆಳಗ್ಗೆ 7 ಗಂಟೆ ಶೋ ಟಿಕೆಟ್‌ಗಳು ಪೂರ್ತಿ ಸೋಲ್ಡ್ ಔಟ್ ಆಗಿತ್ತು. ದರ್ಶನ್ ಅಭಿಮಾನಿಗಳು ಕುಟುಂಬದೊಂದಿಗೆ ಸ್ನೇಹಿತರೊಂದಿಗೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿದ್ದಾರೆ. ಮೊದಲ ಬಾರಿ ಸಿನಿಮಾ ರಿಲೀಸ್ ಆಗುತ್ತಿದೆ ಎನ್ನುವಷ್ಟರ ಮಟ್ಟಿಗೆ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಥಿಯೇಟರ್ ಒಳಗೆ ದರ್ಶನ್ ಎಂಟ್ರಿ ಸೀನ್ ನೋಡಿ ಶಿಳ್ಳೆ, ಚಪ್ಪಾಳೆ ಹಾಕುತ್ತಿದ್ದಾರೆ. ಸ್ಕ್ರೀನ್ ಮುಂದೆ ಹೋಗಿ ನಿಂತು ಮೆಚ್ಚಿನ ನಟನನ್ನು ಕಣ್ತುಂಬಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.
2008ರಲ್ಲಿ ತೆರೆ ಕಂಡಿದ್ದ ನವಗ್ರಹ
ನವಗ್ರಹ ಸಿನಿಮಾ 2008 ನವೆಂಬರ್ 7 ರಂದು ತೆರೆ ಕಂಡಿತ್ತು. ತೂಗುದೀಪ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಈ ಚಿತ್ರವನ್ನು ಮೀನಾ ತೂಗುದೀಪ್ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು. ಚಿತ್ರಕ್ಕೆ ದಿನಕರ್ ತೂಗುದೀಪ್ ಆಕ್ಷನ್ ಕಟ್ ಹೇಳಿದ್ದರು. ಚಿತ್ರದ ಹಾಡುಗಳಿಗೆ ವಿ. ಮನೋಹರ್ ಸಂಗೀತ ನೀಡಿದ್ದಾರೆ. ಚಿತ್ರದ ಕಣ್ ಕಣ್ ಸಲಿಗೆ ಹಾಡಂತೂ ಇಂದಿಗೂ ಯುವಜನರ ಮೋಸ್ಟ್ ಫೇವರೆಟ್ ಹಾಡು. ಚಿತ್ರದಲ್ಲಿ ದರ್ಶನ್ ಜೊತೆಗೆ ಸೃಜನ್ ಲೋಕೇಶ್, ಗಿರಿ ದಿನೇಶ್, ಧರ್ಮ ಕೀರ್ತಿರಾಜ್, ವಿನೋದ್ ಪ್ರಭಾಕರ್, ತರುಣ್ ಸುಧೀರ್, ನಾಗೇಂದ್ರ ಅರಸ್, ಶರ್ಮಿಳಾ ಮಾಂಡ್ರೆ, ವರ್ಷಾ ಹಾಗೂ ಇನ್ನಿತರರು ನಟಿಸಿದ್ದಾರೆ.
ಒಂದೇ ಬಾರಿಗೆ ಕೋಟಿ ಕೋಟಿ ಹಣ ಮಾಡಬೇಕೆಂಬ ಆಸೆಯಿಂದ 9 ಸ್ನೇಹಿತರ ತಂಡವೊಂದು ಮೈಸೂರು ಅರಮನೆ ಅಂಬಾರಿ ಕದಿಯಲು ಪ್ಲ್ಯಾನ್ ಮಾಡುತ್ತಾರೆ. ಆ ಅಂಬಾರಿ ಕದಿಯಲು ಹೇಗೆ ಪ್ಲ್ಯಾನ್ ಮಾಡುತ್ತಾರೆ? ಕದ್ದ ನಂತರ ಹೇಗೆ ಸಾಗಿಸುತ್ತಾರೆ? ಮಾರ್ಗ ಮಧ್ಯೆ ಅವರಿಗೆ ಎದುರಾಗುವ ಸವಾಲುಗಳೇನು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಗುಂಡೇಟು ಬಿದ್ದಿದ್ದರೂ ಜಗ್ಗು ಪಾತ್ರಧಾರಿ ದರ್ಶನ್ ಚಿತ್ರದ ಕೊನೆಯ ಶಾಟ್‌ನಲ್ಲಿ ಕಣ್ಣು ತೆರೆಯುತ್ತಾರೆ. ಈ ಮೂಲಕ ಬಹುಶಃ ನವಗ್ರಹ 2 ಸಿನಿಮಾ ಮಾಡಬಹುದು ಎಂಬ ಆಸೆ ಅಭಿಮಾನಿಗಳಲ್ಲಿತ್ತು. ಆದರೆ ಸಿನಿಮಾ ರಿಲೀಸ್ ಆಗಿ ಇಷ್ಟು ವರ್ಷಗಳಾದರೂ ಸೀಕ್ವೆಲ್ ಬಗ್ಗೆ ಯಾವುದೇ ಸುದ್ದಿ ಇಲ್ಲ.