logo
ಕನ್ನಡ ಸುದ್ದಿ  /  ಮನರಂಜನೆ  /  ರಿಯಲ್‌ ಲೈಫ್‌ನಲ್ಲೂ ಎಷ್ಟೋ ಬಾರಿ ಮರ್ಯಾದೆ ಪ್ರಶ್ನೆ ಎದುರಾಗಿದೆ; ನಟ ಪೂರ್ಣಚಂದ್ರ ಮೈಸೂರು ಇಂಟರ್‌ವ್ಯೂ

ರಿಯಲ್‌ ಲೈಫ್‌ನಲ್ಲೂ ಎಷ್ಟೋ ಬಾರಿ ಮರ್ಯಾದೆ ಪ್ರಶ್ನೆ ಎದುರಾಗಿದೆ; ನಟ ಪೂರ್ಣಚಂದ್ರ ಮೈಸೂರು ಇಂಟರ್‌ವ್ಯೂ

Rakshitha Sowmya HT Kannada

Nov 13, 2024 07:40 AM IST

google News

ಮರ್ಯಾದೆ ಪ್ರಶ್ನೆ ಸಿನಿಮಾ ನಟ ನಟ ಪೂರ್ಣಚಂದ್ರ ಮೈಸೂರು ಇಂಟರ್‌ವ್ಯೂ

  • ನವೆಂಬರ್‌ 22 ರಂದು ಬಿಡುಗಡೆ ಆಗುತ್ತಿರುವ ಮರ್ಯಾದೆ ಪ್ರಶ್ನೆ ಸಿನಿಮಾ ನಟ ಪೂರ್ಣಚಂದ್ರ ಮೈಸೂರು ತಮ್ಮ ರಂಗಭೂಮಿ ಜರ್ನಿ, ಸಿನಿಮಾಗಳು, ಮುಂದಿನ ಪ್ರಾಜೆಕ್ಟ್‌ ಬಗ್ಗೆ ಹಿಂದುಸ್ತಾನ್‌ ಟೈಮ್ಸ್‌ ಕನ್ನಡದೊಂದಿಗೆ ಮಾತನಾಡಿದ್ದಾರೆ. ಮರ್ಯಾದೆ ಪ್ರಶ್ನೆ ಸಿನಿಮಾ ಬಗ್ಗೆಯೂ ಪೂರ್ಣಚಂದ್ರ ಮಾತನಾಡಿದ್ದಾರೆ.

ಮರ್ಯಾದೆ ಪ್ರಶ್ನೆ ಸಿನಿಮಾ ನಟ ನಟ ಪೂರ್ಣಚಂದ್ರ ಮೈಸೂರು ಇಂಟರ್‌ವ್ಯೂ
ಮರ್ಯಾದೆ ಪ್ರಶ್ನೆ ಸಿನಿಮಾ ನಟ ನಟ ಪೂರ್ಣಚಂದ್ರ ಮೈಸೂರು ಇಂಟರ್‌ವ್ಯೂ (PC: Poornachandra Mysore Facebook, Instagram)

ಸಕ್ಕತ್‌ ಸ್ಟುಡಿಯೋ ಬ್ಯಾನರ್‌ ಅಡಿ ಆರ್‌ಜೆ ಪ್ರದೀಪ್‌ ನಿರ್ಮಿಸಿ ನಾಗರಾಜ್‌ ಸೋಮಯಾಜಿ ನಿರ್ದೇಶನ ಮಾಡಿರುವ ಮರ್ಯಾದೆ ಪ್ರಶ್ನೆ ಸಿನಿಮಾ ನವೆಂಬರ್‌ 22ಕ್ಕೆ ರಿಲೀಸ್‌ ಆಗುತ್ತಿದೆ. ಸಿನಿಮಾ ತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಕನ್ನಡಿಗರಿಗೆ ಮಾಡಿದ ಸಿನಿಮಾ ಇದು. ಚಿತ್ರತಂಡ ರಾಜ್ಯದ ವಿವಿಧ ಕಡೆ ಪ್ರಮೋಷನ್‌ ಮಾಡುತ್ತಿದೆ.

ಮರ್ಯಾದೆ ಪ್ರಶ್ನೆ ಚಿತ್ರದಲ್ಲಿ ಸುನಿಲ್‌ ರಾವ್‌, ರಾಕೇಶ್‌ ಅಡಿಗ, ಶೈನ್‌ ಶೆಟ್ಟಿ, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಪ್ರಭು ಮುಂಡ್ಕೂರ್‌, ರೇಖಾ ಕೂಡ್ಲಿಗಿ, ನಾಗೇಂದ್ರ ಶಾ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರದ ನಾಯಕರಲ್ಲಿ ಒಬ್ಬರಾಗಿರುವ ಪೂರ್ಣಚಂದ್ರ ಮೈಸೂರು, ಲೂಸಿಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದವರು. ಟಗರು, ನಾತಿಚರಾಮಿ, ದಯವಿಟ್ಟು ಗಮನಿಸಿ, ಪಾಪ್‌ಕಾರ್ನ್‌ ಮಂಕಿ ಟೈಗರ್‌ ಸೇರಿ ಪೂರ್ಣ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆರ್ಕೆಸ್ಟ್ರಾ ಮೈಸೂರು ಚಿತ್ರದ ಮೂಲಕ ನಾಯಕನಾಗಿ ಗಮನ ಸೆಳೆದರು. ಈ ಚಿತ್ರಕ್ಕೆ ಅವರೇ ಚಿತ್ರಕಥೆ ಕೂಡಾ ಬರೆದಿದ್ದಾರೆ. ಬೆಸ್ಟ್‌ ಆಕ್ಟರ್‌ ವಿಭಾಗದಲ್ಲಿ ಫಿಲ್ಮ್‌ಫೇರ್‌ ಕ್ರಿಟಿಕ್ಸ್‌ ಅವಾರ್ಡ್‌ ಕೂಡಾ ಬರೆದಿದ್ದಾರೆ.

ಪೂರ್ಣಚಂದ್ರ ಚಿತ್ರರಂಗಕ್ಕೆ ಬಂದಿದ್ದು ಹೇಗೆ? ಮರ್ಯಾದೆ ಪ್ರಶ್ನೆ ಚಿತ್ರದಲ್ಲಿ ಅವರ ಪಾತ್ರವೇನು? ಮುಂದಿನ ಪ್ರಾಜೆಕ್ಟ್‌ ಯಾವುದು? ಇನ್ನಿತರ ವಿಚಾರಗಳ ಬಗ್ಗೆ ಹಿಂದುಸ್ತಾನ್‌ ಟೈಮ್ಸ್‌ ಕನ್ನಡ ತಂಡದೊಂದಿಗೆ ಮಾತನಾಡಿದ್ದಾರೆ.

ರಂಗಭೂಮಿ, ಸಿನಿಮಾ ಬಗ್ಗೆ ಆಸಕ್ತಿ ಬಂದಿದ್ದು ಹೇಗೆ?

ನಾನು ಹುಟ್ಟಿ, ಬೆಳೆದದ್ದ ಮೈಸೂರು, ಮಹಾಜನ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದೇನೆ. ನಟನೆಗೆ ಬರುವ ಮುನ್ನ ಅನೇಕ ಕಡೆ ಕೆಲಸ ಮಾಡಿದ್ದೇನೆ. ನಮ್ಮ ಕಾಲೇಜಿಗೆ ರಂಗಾಯಣ ತಂಡದವರು ಬಂದು ಶಿಬಿರ ನಡೆಸುತ್ತಿದ್ದರು. ಮೊದಲಿನಿಂದಲೂ ಆಕ್ಟಿಂಗ್‌ ಬಗ್ಗೆ ಆಸಕ್ತಿ ಇತ್ತು. ರಂಗಭೂಮಿಗೆ ಸೇರಿದ ನಂತರ ನಟನೆ ಬಗ್ಗೆ ಸಂಪೂರ್ಣ ಚಿತ್ರಣ ದೊರೆಯಿತು. ಅಲ್ಲಿಂದ ನನಗೆ ನಟನೆ ಬಗ್ಗೆ ಸೆಳೆತ ಉಂಟಾಯ್ತು. ಲೂಸಿಯಾ ಚಿತ್ರಕ್ಕೆ ಕಲಾವಿದರ ಆಯ್ಕೆ ನಡೆಯುವಾಗ ನಾನು ಆಡಿಷನ್‌ ಅಟೆಂಡ್‌ ಮಾಡಿದ್ದೆ, ಅದರಲ್ಲಿ ನಾನು ಡ್ರಗ್‌ ಪೆಡ್ಲರ್‌ ಪಾತ್ರದಲ್ಲಿ ನಟಿಸಿದ್ದೆ. ಸಿನಿಮಾಗೆ ಬರಲು ರಂಗಭೂಮಿ ಬಹಳ ಸಹಾಯ ಮಾಡಿದೆ. ಅನೇಕ ಶೋಗಳಲ್ಲಿ ಭಾಗಿಯಾಗಿದ್ದೇನೆ.

ಚಿತ್ರರಂಗಕ್ಕೆ ಪ್ರತಿದಿನ ಹೊಸಬರು ಬರ್ತಾರೆ, ಎಲ್ಲರೂ ಗುರುತಿಸಿಕೊಳ್ಳುವುದು ಕಷ್ಟ, ನೀವು ಇಲ್ಲಿ ನಿಲ್ಲಲು ಯಾವ ರೀತಿ ಪ್ರಯತ್ನ ಮಾಡುತ್ತಿದ್ದೀರಿ?

ನಾನು ಎಲ್ಲಾ ಪಾತ್ರಗಳು, ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ಒಳ್ಳೆ ಪಾತ್ರಗಳಿಗೆ ಸಿನಿಮಾಗಳಿಗೆ ಆದ್ಯತೆ ಕೊಡುತ್ತೇನೆ, ಎಷ್ಟೇ ಒಳ್ಳೆ ನಟನಾದರೂ ಆತ ಯಾವ ಪಾತ್ರಗಳನ್ನು ಆರಿಸಿಕೊಳ್ಳುತ್ತಾನೆ, ಆತ ನಟಿಸಿರುವ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆ. ಆ ಸಿನಿಮಾದಿಂದ ನಮಗೆ ಎಷ್ಟು ಹೆಸರು ಗಳಿಸಿದ್ದೇವೆ ಅನ್ನೋದು ಮುಖ್ಯ. ನಾವು ಬೇರೆಯವರ ಜೊತೆ ಸ್ಪರ್ಧೆಗೆ ಇಳಿಯುವ ಮುನ್ನ ನಮ್ಮ ಜೊತೆಯೇ ನಾವು ಸ್ಪರ್ಧೆಗೆ ಇಳಿಯಬೇಕು. ನಟನಾದವನಿಗೆ ಬಹಳ ತಾಳ್ಮೆ ಮುಖ್ಯ. ನಮ್ಮ ವೃತ್ತಿಯಲ್ಲಿ ಏರಿಳಿತ ಇರುತ್ತದೆ. ಅದರಿಂದ ನಾವು ದೈಹಿಕವಾಗಿ, ಮಾನಸಿಕವಾಗಿ ಫಿಟ್‌ ಇರುವುದು ಮುಖ್ಯ. ಇದೆಲ್ಲದಲ್ಲಿ ನಾವು ಗೆದ್ದರೆ ಖಂಡಿತ ನೂರು ಜನರ ನಡುವೆ ಗುರುತಿಸಿಕೊಳ್ಳುವುದು ಬಹಳ ಸುಲಭ.

ಹೀರೋ-ವಿಲನ್‌, ನಿಮ್ಮ ಆಯ್ಕೆ ಯಾವುದು?

ನಾನು ನಾಯಕನಾಗಬೇಕು, ವಿಲನ್‌ ಆಗಬೇಕು ಅನ್ನೋದಕ್ಕಿಂತ ಒಳ್ಳೆ ನಟ ಆಗಬೇಕೆಂಬ ಕನಸು ಕಂಡವನು. ಯಾವುದೇ ಪಾತ್ರ ಕೊಟ್ಟರೂ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಪೂರ್ಣಚಂದ್ರ ಒಂದೇ ಪಾತ್ರಕ್ಕೆ ಸೀಮಿತ ಎಂದು ಹೇಳಿಸಿಕೊಳ್ಳುವುದು ನನಗೆ ಇಷ್ಟವಿಲ್ಲ, ಅದರ ಬದಲಿಗೆ ಇವನಿಗೆ ಯಾವುದೇ ಪಾತ್ರ ಕೊಟ್ಟರೂ ಮಾಡುತ್ತಾನೆ ಅಂತ ಎನ್ನಿಸಿಕೊಳ್ಳಬೇಕು. ಡಾ. ರಾಜ್‌ಕುಮಾರ್‌, ಡಾ ವಿಷ್ಣುವರ್ಧನ್‌, ಬಾಲಿವುಡ್‌ ನಟ ಇರ್ಫಾನ್‌ ಖಾನ್‌, ತಮಿಳು, ತೆಲುಗು ಭಾಷೆಗಳಲ್ಲಿ ಸೂಪರ್‌ಸ್ಟಾರ್‌ಗಳ ನಟನೆಯನ್ನು ನೋಡಿಕೊಂಡು ಬೆಳೆದಿದ್ದೇನೆ. ಅವರು ಮಾಡಿರುವ ಸಾಧನೆಯ ಶೇ 10ರಷ್ಟು ನಾವು ಮಾಡಿದರೆ ನಾವೇ ಧನ್ಯರು ಎಂಬ ಫೀಲ್‌ ಆಗುತ್ತೆ.

ನಿಮ್ಮ ಮನೆಯಲ್ಲಿ ಯಾವ ರೀತಿ ಸಪೋರ್ಟ್‌ ಮಾಡ್ತಾರೆ?

ನಮ್ಮ ಮನೆಯಲ್ಲಿ ಯಾರೂ ಸಿನಿಮಾ ಹಿನ್ನೆಲೆ ಇರುವವರು ಇಲ್ಲ. ಇದು ಗೊತ್ತಿಲ್ಲದ ಪ್ರಪಂಚ. ನಾನು ಮೊದಲು ಸಿನಿಮಾಗೆ ಎಂಟ್ರಿ ಕೊಟ್ಟಾಗ ಮನೆಯಲ್ಲಿ ಭಯ ಇತ್ತು. ಆದರೆ ಈಗ ನನ್ನ ಸಿನಿಮಾಗಳನ್ನು ನೋಡಿ ಖುಷಿಪಡ್ತಾರೆ. ಫೀಡ್‌ ಬ್ಯಾಕ್‌ ಕೊಡ್ತಾರೆ. ಅದರ ಬಗ್ಗೆ ಖುಷಿ ಇದೆ.

3-4 ನಾಯಕರ ನಡುವೆ ನಿಮ್ಮ ಪಾತ್ರಕ್ಕೆ ಆದ್ಯತೆ ಸಿಗುತ್ತೆ ಎಂಬ ಭರವಸೆ ಇದ್ಯಾ?

ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಆದ್ಯತೆ ಇದ್ದೇ ಇರುತ್ತದೆ. ಅಂತಹ ಬಹಳಷ್ಟು ಸಿನಿಮಾಗಳು ಕನ್ನಡ ಸೇರಿ ಅನೇಕ ಭಾಷೆಗಳಲ್ಲಿ ಬಂದಿವೆ. ನಮ್ಮ ಸಿನಿಮಾದಲ್ಲೂ ನಿರ್ದೇಶಕರು , ರೈಟರ್‌ ಪ್ರತಿ ಪಾತ್ರಕ್ಕೂ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಈ ಸಿನಿಮಾ ನೋಡಿದಾಗ ನನ್ನ ಪಾತ್ರದ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತದೆ.

ಪ್ರತಿ ಪಾತ್ರಕ್ಕೂ ತಯಾರಿ ಬೇಕಿರುತ್ತದೆ, ಈ ಸಿನಿಮಾಗಾಗಿ ನಿಮ್ಮ ಪ್ರಿಪರೇಷನ್‌ ಹೇಗಿತ್ತು?

ಯಾವುದೇ ಪಾತ್ರ ಆಗಲೀ, ಅದರ ಬಗ್ಗೆ ತಿಳಿದುಕೊಳ್ಳಲಿಲ್ಲವೆಂದರೆ ನಟಿಸುವುದು ಕಷ್ಟ. ಚಿತ್ರದಲ್ಲಿ ನಾನು ಕ್ಯಾಬ್‌ ಡ್ರೈವರ್‌ ಪಾತ್ರ ಮಾಡಿದ್ದೇನೆ. ಆದ್ದರಿಂದ ನಾನು ಅವರ ಬಾಡಿ ಲಾಂಗ್ವೇಜ್‌ ಗಮನಿಸಬೇಕಾಗುತ್ತದೆ. ಅವರು ಹೇಗೆ ನಡೆಯುತ್ತಾರೆ? ಹೇಗೆ ಮಾತನಾಡುತ್ತಾರೆ? ಎಂಬುದನ್ನು ಗಮನಿಸಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ಚಾಲಕರು ಇಯರ್‌ ಫೋನ್‌ ಹಾಕಿ, ಯಾರೊಂದಿಗಾದರೂ ಮಾತನಾಡುತ್ತಿರುತ್ತಾರೆ. ಕೆಲವರು ಹೆಚ್ಚು ದೈಹಿಕ ಚಟುವಟಿಕೆ ಮಾಡದೆ ಸದಾ ಕಾಲ ವಾಹನದಲ್ಲೇ ಓಡಾಡುವುದರಿಂದ ದಪ್ಪ ಇರುತ್ತಾರೆ. ಅವರಿಗೆ ವ್ಯಾಯಾಮ ಮಾಡಲು ಸಮಯ ಇರುವುದಿಲ್ಲ. ನಾನು ಈ ಪಾತ್ರಕ್ಕೆ ತಯಾರಾಗಲು ಕೆಲವು ದಿನಗಳಿಂದ ಜಿಮ್‌ ಮಾಡುವುದನ್ನು ಬಿಟ್ಟಿದ್ದೆ.

ಸಿನಿಮಾ ಬೇರೆ ಭಾಷೆಗಳಲ್ಲಿ ರಿಲೀಸ್‌ ಆಗ್ತಿದ್ಯಾ? ಪರಭಾಷೆಗಳಲ್ಲಿ ಆಫರ್‌ ಸಿಕ್ರೆ ಒಪ್ಪಿಕೊಳ್ತೀರಾ?

ಇಲ್ಲ ಇದು ಅಪ್ಪಟ ಕನ್ನಡ ಸಿನಿಮಾ, ಕನ್ನಡಿಗರಿಗಾಗಿ ತಯಾರಿಸಿರುವ ಸಿನಿಮಾ. ಕನ್ನಡದಲ್ಲಿ ಮಾತ್ರ ರಿಲೀಸ್‌ ಆಗುತ್ತಿದೆ. ಹೊರ ರಾಜ್ಯ, ವಿದೇಶ ಸೇರಿದಂತೆ ಎಲ್ಲೆಲ್ಲಿ ಕನ್ನಡಿಗರು ಇದ್ದಾರೋ ಅಲ್ಲಿ ರಿಲೀಸ್‌ ಮಾಡುವ ಪ್ಲ್ಯಾನ್‌ ಮಾಡುತ್ತಿದ್ದೇವೆ. ಇನ್ನು ನಮ್ಮ ಮನಸ್ಸು ಯಾವಾಗಲೂ ಕನ್ನಡವಾಗಿರುತ್ತೆ, ಆದರೆ ಆಸೆಗಳು ಎಲ್ಲವನ್ನೂ ಬಯಸುತ್ತೆ. ಬೇರೆ ಭಾಷೆಯಲ್ಲೂ ಅದ್ಬುತ ಕಲಾವಿದರಿದ್ದಾರೆ. ಒಂದು ವೇಳೆ ಅವರ ಜೊತೆ ನಟಿಸುವ ಅವಕಾಶ ಸಿಕ್ಕರೆ ನಮಗೆ ಅದು ಅದೃಷ್ಟ, ಅವಕಾಶ ದೊರೆತರೆ ಖಂಡಿತ ನಟಿಸುತ್ತೇನೆ.

ಮುಂದಿನ ಪ್ರಾಜೆಕ್ಟ್‌ಗಳು ಯಾವುದಿವೆ?

ಮರ್ಯಾದೆ ಪ್ರಶ್ನೆ ನವೆಂಬರ್‌ 22ಕ್ಕೆ ರಿಲೀಸ್‌ ಆಗ್ತಿದೆ, ಇದರ ನಂತರ ನಿಮಿತ್ತ ಮಾತ್ರ ಎಂಬ ಸಿನಿಮಾ ರಿಲೀಸ್‌ ಆಗಬೇಕಿದೆ. ಧನಂಜಯ್‌ ಅವರೊಂದಿಗೆ ಅಣ್ಣ ಫ್ರಮ್‌ ಮೆಕ್ಸಿಕೋ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲೇ ಫೈನಲ್‌ ಆಗಲಿದೆ.

ನಿಮ್ಮ ಜೀವನದಲ್ಲಿ ಯಾವತ್ತಾದರೂ ಮರ್ಯಾದೆ ಪ್ರಶ್ನೆ ಎದುರಾಗಿದ್ಯಾ?

ಬಹಳಷ್ಟು ಇದೆ , ಅದರಲ್ಲಿ ಒಂದು ಹೇಳಬೇಕೆಂದರೆ ನಾನು ಬಾಲ್ಯದಲ್ಲಿದ್ದಾಗ ಒಬ್ಬರು ನನ್ನ ಬಟ್ಟ ಬಗ್ಗೆ ಕಾಮೆಂಟ್‌ ಮಾಡಿದ್ದರು. ಆಗ ಬಹಳ ಬೇಸರವಾಗಿತ್ತು. ನಾನು ಕೆಲಸ ಮಾಡಲು ಆರಂಭಿಸಿದಾಗ ಸೂಟ್‌ ಹಾಕಿ ಫೋಟೋ ತೆಗೆಸಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದೆ. ಆಗ ಅದೇ ವ್ಯಕ್ತಿ , ನನಗೆ ನಿಮ್ಮ ನೆನಪಿದೆ ಎಂದು ಕಾಮೆಂಟ್‌ ಮಾಡಿದ್ದರು. ಒಳ್ಳೆ ಬಟ್ಟೆ ಹಾಕಿದರೆ ಎಲ್ಲರಿಗೂ ನೆನಪಿರುತ್ತೇವೆ, ಇಲ್ಲದಿದ್ದರೆ ಜನರು ನಮ್ಮನ್ನು ಕಡೆಗಣಿಸುತ್ತಾರೆ ಎಂದು ಉತ್ತರ ಕೊಟ್ಟಿದ್ದೆ. ಹೀಗೆ ಬಹಳಷ್ಟು ಇದೆ, ಮಿಡ್ಲ್‌ ಕ್ಲಾಸ್‌ ಫ್ಯಾಮಿಲಿಯವರು ಇಂಥ ವಿಚಾರಗಳನ್ನು ಫೇಸ್‌ ಮಾಡ್ತಾನೆ ಇರ್ತಾರೆ. 

ಕನ್ನಡ ಸಿನಿಪ್ರಿಯರಿಗೆ ಏನಾದರೂ ಹೇಳೋಕೆ ಇಷ್ಟಪಡ್ತೀರ?

ಮರ್ಯಾದೆ ಪ್ರಶ್ನೆ ಸಿನಿಮಾ ಸಕ್ಕತ್‌ ಸ್ಟುಡಿಯೋದಿಂದ ನಿರ್ಮಾಣವಾಗಿರುವ ಸಿನಿಮಾ, ಆರ್‌ಜೆ ಪ್ರದೀಪ್‌ ಹಾಗೂ ನಾಗರಾಜ್‌ ಸೋಮಯಾಜಿ ಅವರ ಕನಸಿನ ಕೂಸು. ಅವರ ಜೊತೆ ನಾನು ಇದಕ್ಕಿಂತ ಮೊದಲು ವೆಬ್‌ ಸಿರೀಸ್‌ ಮಾಡಿದ್ದೆ, ಪ್ರದೀಪ್‌ ಅವರಿಗೆ ಬಹಳ ಕನಸಿದೆ. ಸಿನಿಮಾದಲ್ಲಿ ನಟಿಸಿರುವ ಎಲ್ಲರೂ ನಟನೆಯಲ್ಲಿ ಪಳಗಿದವರು. ಅವರೆಲ್ಲರನ್ನೂ ಜೊತೆಗೂಡಿಸಿ ಇಂಥ ಸಿನಿಮಾ ಮಾಡಿರುವುದು ಬಹಳ ಗ್ರೇಟ್.‌ ಸಿನಿಮಾ ಗೆಲ್ಲಬೇಕೆಂಬ ಆಸೆ ಇದೆ. ಎಲ್ಲರೂ ಸಿನಿಮಾ ನೋಡಿ ಹರಸಿ, ಧನ್ಯವಾದಗಳು.

ಮರ್ಯಾದೆ ಪ್ರಶ್ನೆ ಸಿನಿಮಾ ಯಶಸ್ಚಿಯಾಗಲಿ, ಪೂರ್ಣಚಂದ್ರ ಮೈಸೂರು ಅವರಿಗೆ ಇನ್ನೂ ಹೆಚ್ಚಿನ ಅವಕಾಶಗಳು ದೊರೆಯಲಿ ಎಂದು ಹಾರೈಸೋಣ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ