ವಿಕ್ರಾಂತ್ ಮಾಸ್ಸಿ ಅಭಿನಯದ ‘ದಿ ಸಾಬರಮತಿ ರಿಪೋರ್ಟ್’ ಹಿಸ್ಟೋರಿಕಲ್ ಡ್ರಾಮಾ ಟ್ರೇಲರ್ ರಿಲೀಸ್; ನವೆಂಬರ್ 15ರಂದು ತೆರೆಕಾಣಲಿದೆ ಸಿನಿಮಾ
ವಿಕ್ರಾಂತ್ ಮಾಸ್ಸಿ ಅಭಿನಯದ ‘ದಿ ಸಬರಮತಿ ರಿಪೋರ್ಟ್’ ಹಿಸ್ಟೋರಿಕಲ್ ಡ್ರಾಮಾ ಟ್ರೇಲರ್ ರಿಲೀಸ್ ಆಗಿದೆ. ನವೆಂಬರ್ 15ರಂದು ಈ ಸಿನಿಮಾ ತೆರೆಕಾಣಲಿದೆ. ಫೆಬ್ರವರಿ 27, 2002 ರಂದು ಸಬರಮತಿ ಎಕ್ಸ್‌ಪ್ರೆಸ್‌ನಲ್ಲಿ ನಡೆದ ದುರಂತ ಘಟನೆಗಳ ಕುರಿತು ಈ ಸಿನಿಮಾ ಬೆಳಕುಚೆಲ್ಲಲಿದೆ.
The Sabarmati Report: ಅತ್ಯಂತ ಮಹತ್ವದ ಮತ್ತು ಪ್ರಭಾವಶಾಲಿ ಘಟನೆಗಳ ಮೇಲೆ ಬೆಳಕು ಚೆಲ್ಲಲಿರುವ ಸಿನಿಮಾ ಇದು. ಟೀಸರ್ ಈಗಾಗಲೇ ಹೊರಬಿದ್ದಿದ್ದು, ಟ್ರೈಲರ್ ಕೂಡ ಲಾಂಚ್ ಆಗಿದೆ. ಫೆಬ್ರವರಿ 27, 2002 ರಂದು ಸಬರಮತಿ ಎಕ್ಸ್‌ಪ್ರೆಸ್‌ನಲ್ಲಿ ನಡೆದ ದುರಂತ ಘಟನೆ ಮತ್ತು ಅದು ಭಾರತದ ಸಾಮಾಜಿಕ-ಸಾಂಸ್ಕೃತಿ ಮೇಲೆ ಬೀರಿದ ಪರಿಣಾಮದ ಬಗ್ಗೆ ಯಾರಿಗೂ ತಿಳಿದಿರದ ಸತ್ಯವನ್ನು ಹೊರಹಾಕುತ್ತಾ ಕಥೆ ಸಾಗುತ್ತದೆ. ವಿಕ್ರಾಂತ್ ಮಾಸ್ಸಿ, ರಾಶಿ ಖನ್ನಾ ಮತ್ತು ರಿಧಿ ಡೋಗ್ರಾ ಅವರು ಈ ಸಿನಿಮಾದಲ್ಲಿ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರ ಹೆಸರು ಕೇಳುತ್ತಿದ್ದಂತೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗುತ್ತದೆ. ವಿಕ್ರಾಂತ್ ಮಾಸ್ಸಿ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಗೋಧ್ರಾ ರೈಲಿನ (S6)ಒಂದು ರೈಲ್ವೆ ಬೋಗಿಗೆ ಹೇಗೆ ಬೆಂಕಿಬಿತ್ತು ಎಂಬುದನ್ನು ಕಂಡು ಹಿಡಿಯಲು ಪತ್ರಕರ್ತರು ಮುಂದಾಗುತ್ತಾರೆ. ಇಬ್ಬರು ಪತ್ರಕರ್ತರು ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುವಾಗ ಯಾವೆಲ್ಲ ಅನುಮಾನಗಳು ಬಂದವು? ಮತ್ತು ಅಲ್ಲಿ ಆಗಿದ್ದೇನು? ಎಂಬುದನ್ನು ತಿಳಿದುಕೊಳ್ಳುತ್ತಾ ಸಿನಿಮಾ ಸಾಗುತ್ತದೆ. ಇಂಗ್ಲೀಷ್ ಮತ್ತು ಹಿಂದಿ ನಡುವಿನ ಭಾಷಾ ಪ್ರಾಬಲ್ಯದ ಬಗ್ಗೆಯೂ ಅಲ್ಲಲ್ಲಿ ಮಾತುಗಳು ಬರುತ್ತದೆ. ಅಂದು ನಡೆದ ಘಟನೆಯ ಸುತ್ತ ಅನುಮಾನದ ಹುತ್ತಗಳೇ ಬೆಳೆದಿರಿತ್ತದೆ.
ರೈಲಿಗೆ ಬೆಂಕಿ ಬಿದ್ದಿರುವುದು ಯಾರೂ ಬೇಕೆಂದು ಈ ರೀತಿ ಮಾಡಿಲ್ಲ ಎಂದು ಕೆಲವರು ವಾದ ಮಾಡಿದರೆ ಅದು ಹಾಗಲ್ಲ ಎಂದು ಸಾಬೀತು ಮಾಡಲು ಹೊರಟವರು ಈ ಪತ್ರಕರ್ತರು. ದುರಂತ ಘಟನೆಯ ಹಿಂದಿನ ಸತ್ಯವನ್ನು ಬಿಚ್ಚಿಡಲು ರಾಶಿ ಖನ್ನಾ ಪಾತ್ರದೊಂದಿಗೆ ಹಿಂದಿಯಲ್ಲೇ ಮಾತನಾಡುತ್ತಾ ಸೈದ್ಧಾಂತಿಕ ಸಂಘರ್ಷವನ್ನು ಸಹ ಅಲ್ಲಿ ಕಾಣಿಸಲಾಗಿದೆ. ಇದು ಭಾರತದ ಅತ್ಯಂತ ಘೋರ ಘಟನೆಗಳ ಹಿನ್ನೆಲೆಯನ್ನು ಕಟ್ಟಿಕೊಡುವ ಸಿನಿಮಾ ಆಗಿದೆ. ಸಿನಿಮಾದಲ್ಲಿ ಸೂಕ್ಷ್ಮವಾದ ಮತ್ತು ಆಳವಾದ ಸಾಕಷ್ಟು ವಿಚಾರಗಳಿದೆ ಎಂದು ಟ್ರೇಲರ್ ಮೂಲಕವೇ ತಿಳಿಯುತ್ತದೆ.
ನವೆಂಬರ್ 15ರಂದು ಬಿಡುಗಡೆ
ಈ ಸಿನಿಮಾವನ್ನು ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ವಿಕಿರ್ ಫಿಲ್ಮ್ಸ್ ಪ್ರೊಡಕ್ಷನ್ ಪ್ರಸ್ತುತಪಡಿಸಿದ್ದು, ಧೀರಜ್ ಸರ್ನಾ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಶೋಭಾ ಕಪೂರ್, ಏಕ್ತಾ ಆರ್ ಕಪೂರ್, ಅಮುಲ್ ವಿ ಮೋಹನ್ ಮತ್ತು ಅಂಶುಲ್ ಮೋಹನ್ ನಿರ್ಮಿಸಿದ್ದಾರೆ. ನವೆಂಬರ್ 15, 2024 ರಂದು ಜೀ ಸ್ಟುಡಿಯೋಸ್‌ನಿಂದ ಥಿಯೇಟ್ರಿಕಲ್ ಬಿಡುಗಡೆಗೆ ಸಿದ್ಧವಾಗಿದೆ. ಹಿಸ್ಟೋರಿಕಲ್ ಡ್ರಾಮಾ ಇಷ್ಟಪಡುವವರು ಈ ಸಿನಿಮಾವನ್ನು ತುಂಬಾ ಇಷ್ಟಪಡುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ.