ಮಾವ ಜವರೇಗೌಡ ಪರ ಚುನಾವಣಾ ಪ್ರಚಾರಕ್ಕೆ ಇಳಿದ ಭಾವನಾ, ನಿನ್ನ ಗಂಡ ಸಿದ್ದೇಗೌಡ ಚಿನ್ನದಂಥ ಹುಡುಗ ಎಂದು ಹೊಗಳಿದ ಜನ; ಲಕ್ಷ್ಮೀ ನಿವಾಸ ಧಾರಾವಾಹಿ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್ 11ರ ಎಪಿಸೋಡ್‌ನಲ್ಲಿ ಮಾವ ಜವರೇಗೌಡ ಪರ ಭಾವನಾ ಚುನಾವಣಾ ಪ್ರಚಾರಕ್ಕೆ ಇಳಿಯುತ್ತಾಳೆ. ಮತ್ತೊಂದೆಡೆ ನಿಮ್ಮ ಬಗ್ಗೆ ನಿಮ್ಮ ಹೆಂಡತಿಗೆ ಎಲ್ಲವನ್ನೂ ಹೇಳಿದ್ದಾಗಿ ಜಯಂತ್ ಬಳಿ ವಾಚ್‌ಮ್ಯಾನ್ ನಿಜ ಒಪ್ಪಿಕೊಳ್ಳುತ್ತಾನೆ.
Lakshmi Nivasa Serial: ಸಿದ್ದೇಗೌಡನನನ್ನು ಮನೆಯವರು ತಿರಸ್ಕರಿಸುವುದನ್ನು ನೋಡಿದ ಭಾವನಾ ಅವನಿಗೆ ಸಮಾಧಾನ ಮಾಡುತ್ತಾಳೆ. ಪ್ರತಿ ಮಾತಿಗೂ ಜವರೇಗೌಡ ರೇಣುಕಾ, ಭಾವನಾಳನ್ನು ದೂರುವುದಕ್ಕೆ ಅವಳು ಬೇಸರಗೊಳ್ಳುತ್ತಾಳೆ. ಸಿದ್ದೇಗೌಡ, ಹೆಂಡತಿ ಬಳಿ ಹೋಗಿ ಕ್ಷಮೆ ಕೇಳುತ್ತಾನೆ. ಸಿದ್ದೇಗೌಡನ ಮಾತು, ಮನೆಯವರು ಅವನ ಬಳಿ ವರ್ತಿಸುವುದನ್ನು ನೋಡಿ ಅವಳಿಗೂ ಸಿದ್ದೇಗೌಡನ ಬಗ್ಗೆ ಕನಿಕರ ಉಂಟಾಗುತ್ತದೆ.
ಚುನಾವಣಾ ಪ್ರಚಾರಕ್ಕೆ ಹೋಗುವ ಜವರೇಗೌಡ ಕೋಪದಿಂದ ಮನೆಗೆ ವಾಪಸಾಗುತ್ತಾನೆ. ಎಲ್ಲಿಗೆ ಹೋದರೂ ಜನರು ಸಿದ್ದೇಗೌಡನ ಬಗ್ಗೆಯೇ ಮಾತನಾಡುತ್ತಿದ್ದಾರೆ. ನಿಮ್ಮ ಮಗ ಮದುವೆ ಆಗಿರುವ ಹುಡುಗಿ ಮನೆಯವರು ನಮಗೆ ಚೆನ್ನಾಗಿ ಗೊತ್ತು, ನಾವಂತೂ ಈ ಬಾರಿ ನಿಮಗೆ ಓಟು ಹಾಕುವುದು ಎನ್ನುತ್ತಿದ್ದಾರೆ. ಇವನು ಮಾಡಿದ ಕೆಲಸದಿಂದ ನಾನು ತಲೆ ತಗ್ಗಿಸುವಂತೆ ಆಗಿದೆ. ಇವನಿಂದ ಎಲ್ಲಿ ಹೋದರೂ ನನಗೆ ನೆಮ್ಮದಿ ಸಿಗುತ್ತಿಲ್ಲ. ಆ ಮುನಿಗೌಡ ಇದೆ ವಿಚಾರವನ್ನು ಮುಂದಿಟ್ಟುಕೊಂಡು ಎಲೆಕ್ಷನ್‌ನಲ್ಲಿ ತಾನು ಗೆಲ್ಲಬೇಕೆಂದು ಓಡಾಡುತ್ತಿದ್ದಾನೆ ಎಂದು ಮಗ ಸಿದ್ದೇಗೌಡನ ಮೇಲೆ ಕೋಪಗೊಳ್ಳುತ್ತಾನೆ. ಮಾಧ್ಯಮಗಳಲ್ಲಿ ಕೂಡಾ ತಮ್ಮ ಮನೆ ವಿಚಾರವೇ ಪ್ರಸಾರವಾಗುವುದನ್ನು ನೋಡಿ ಇನ್ನಷ್ಟು ಸಿಟ್ಟಾಗುತ್ತಾನೆ.
ಸಿದ್ದೇಗೌಡನ ಮನವಿ ಮೇರೆಗೆ ಮಾವನ ಪರ ಪ್ರಚಾರಕ್ಕೆ ನಿಂತ ಭಾವನಾ
ಭಾವನಾ ಬಳಿ ಬಂದ ಸಿದ್ದೇಗೌಡ, ನಾನು ಕೆಟ್ಟ ಉದ್ದೇಶದಿಂದ ತಪ್ಪು ಮಾಡಿಲ್ಲ. ನನ್ನಿಂದ ನಿಮಗೆ ನೋವಾಗುತ್ತಿದೆ ಅಂತ ನನಗೆ ಗೊತ್ತು. ಇದೇ ಸಮಯಕ್ಕೆ ಅಪ್ಪ ಎಲೆಕ್ಷನ್‌ನಲ್ಲಿ ಗೆಲ್ಲಲೇಬೇಕು ಅಂತ ಹಟ ಹಿಡಿದಿದ್ದಾರೆ. ಒಂದು ವೇಳೆ ಸೋತರೆ, ಅದಕ್ಕೆ ನಮ್ಮಿಬ್ಬರನ್ನೇ ಕಾರಣ ಮಾಡಿಬಿಡುತ್ತಾರೆ. ನೀವು ನನ್ನ ಜೊತೆ ಪ್ರಚಾರಕ್ಕೆ ಬನ್ನಿ ಎಂದು ಕರೆಯುತ್ತಾನೆ. ನಾನು ನಿಮ್ಮೊಂದಿಗೆ ಬರುವುದಿಲ್ಲ, ಅದೇನು ಮಾಡಬೇಕೋ ಹೇಳಿ, ನಾನೊಬ್ಬಳೇ ಮಾಡುತ್ತೇನೆ ಎನ್ನುತ್ತಾಳೆ. ಪಕ್ಷದ ಕಾರ್ಯಕರ್ತರ ಜೊತೆ ಭಾವನಾ , ಮಾವನ ಪರ ಪ್ರಚಾರಕ್ಕೆ ಹೊರಡುತ್ತಾಳೆ. ಊರಿನಲ್ಲಿ ಅವರನ್ನು ನೋಡಿದವರು ಸಿದ್ದೇಗೌಡ ಚಿನ್ನದಂಥ ಹುಡುಗ ಅವನನ್ನು ಕೈ ಹಿಡಿದಿದ್ದೀಯ ಚೆನ್ನಾಗಿರು, ನೀವಿಬ್ಬರೂ ಒಟ್ಟಿಗೆ ಪ್ರಚಾರಕ್ಕೆ ಬಂದರೆ ಚೆನ್ನಾಗಿರುತ್ತಿತ್ತು ಎಂದು ಎಲ್ಲರೂ ಸಿದ್ದುವನ್ನು ಹೊಗಳುವುದನ್ನು ನೋಡಿ ಭಾವನಾ ಒಂದು ಕ್ಷಣ ಮೌನವಾಗುತ್ತಾಳೆ.
ಮತ್ತೊಂದೆಡೆ ಜಾಹ್ನವಿಗೆ ಗಂಡನ ಮೇಲೆ ಅನುಮಾನ ಶುರುವಾಗಿದೆ. ವಾಚ್‌ಮ್ಯಾನ್ ಆ ರೀತಿ ಹೇಳಿದ್ದು ಏಕೆ? ನಿಜವಾಗಲೂ ನನಗೆ ಜಯಂತ್‌ನಿಂದ ತೊಂದರೆ ಇದ್ಯಾ ಎಂದು ಜಾಹ್ನವಿಗೆ ಚಿಂತೆ ಶುರುವಾಗುತ್ತದೆ. ಜಾಹ್ನವಿ ಯಾರಿಗೂ ಕರೆ ಮಾಡಬಾರದು, ಮನೆಯಿಂದ ಹೊರ ಹೋಗಬಾರದು ಎಂಬ ಕಾರಣಕ್ಕೆ ಜಯಂತ್ ಜಾಮರ್ ಆನ್ ಮಾಡಿ, ಎಲ್ಲೂ ಹೋಗಬೇಡ ಎಂದು ಕಂಡಿಷನ್ ಮಾಡಿ ಆಫೀಸಿಗೆ ಹೊರಡುತ್ತಾನೆ. ನನ್ನ ಕಷ್ಟವನ್ನು ಯಾರಿಗೆ ಹೇಳಿಕೊಳ್ಳುವುದು ಎಂದು ಜಾಹ್ನವಿ ಯೋಚಿಸುತ್ತಾಳೆ.
ಜಾಹ್ನವಿ ಬಳಿ ಜಯಂತ್ ವಿಚಾರ ಹೇಳಿದ್ದಾಗಿ ಒಪ್ಪಿಕೊಂಡ ವಾಚ್‌ಮ್ಯಾನ್
ಆಫೀಸಿಗೆ ಹೋಗುವೆ ಎಂದು ಹೇಳಿ ಬರುವ ಜಯಂತ್, ವಾಚ್‌ಮ್ಯಾನ್ ಹುಡುಕಲು ಹೋಗುತ್ತಾನೆ. ಸಿಸಿ ಟಿವಿಯಲ್ಲಿ ಅವನ ಫೋಟೋ ತೆಗೆದುಕೊಂಡು ಅದನ್ನು ಸಿಕ್ಕಸಿಕ್ಕವರ ಬಳಿ ತೋರಿಸಿ ವಾಚ್‌ಮ್ಯಾನ್ ಅಡ್ರೆಸ್ ಹುಡುಕುತ್ತಾನೆ. ಕೊನೆಗೂ ಆತ ಸಿಗುತ್ತಾನೆ. ಜಯಂತ್‌ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಆತ ಓಡಿ ಹೋಗುತ್ತಾನೆ. ಆದರೆ ಜಯಂತ್ ಮಾತ್ರ ಆತನನ್ನು ಬಿಡದೆ ಹಿಡಿಯುತ್ತಾನೆ. ನನ್ನ ಹೆಂಡತಿಯನ್ನು ನೀನು ಎಲ್ಲಿ ಭೇಟಿ ಆಗಿದ್ದೆ? ಅವಳಿಗೆ ಏನು ಹೇಳಿದೆ ಎಂದು ಜಯಂತ್ ಕೇಳುತ್ತಾನೆ. ವಾಚ್‌ಮ್ಯಾನ್ ಅವನಿಗೆ ಹೆದರಿ, ನಿಮ್ಮ ಬಗ್ಗೆ ಎಲ್ಲವನ್ನೂ ಹೇಳಿದೆ ಎನ್ನುತ್ತಾನೆ. ಅದನ್ನು ಕೇಳಿ ಜಯಂತ್ ಗಾಬರಿ ಆಗುತ್ತಾನೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ