UI Movie: ಪರದೆ ಮೇಲೆ ಕಾಣಿಸಿದ ಇದರ ಬಗ್ಗೆ ಯಾರೂ ಏಕೆ ಮಾತಾಡುತ್ತಿಲ್ಲ?! ದಡ್ಡ ವಿವಾದದ ಕುರಿತು ನಟ ಉಪೇಂದ್ರ ಆಶ್ಚರ್ಯಕರ ಪ್ರಶ್ನೆ
Dec 23, 2024 03:03 PM IST
UI Movie: ಪರದೆ ಮೇಲೆ ಕಾಣಿಸಿದ ಇದರ ಬಗ್ಗೆ ಯಾರೂ ಏಕೆ ಮಾತಾಡುತ್ತಿಲ್ಲ?! ಉಪೇಂದ್ರ ಪ್ರಶ್ನೆ
- UI Movie: ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದು ಹೋಗಿ ಎಂದು ಯುಐ ಸಿನಿಮಾದ ಆರಂಭದಲ್ಲಿ ತೋರಿಸಿರುವ ಕುರಿತು ಎಲ್ಲರೂ ಚರ್ಚಿಸುತ್ತಿದ್ದಾರೆ. ಇದೀಗ ನಟ ಉಪೇಂದ್ರ ಇದೇ ರೀತಿಯ ಇನ್ನೊಂದು ಡೈಲಾಗ್‌ನ ಫೋಟೋ ಹಂಚಿಕೊಂಡಿದ್ದು, "ಪರದೆ ಮೇಲೆ ಕಾಣಿಸಿದ ಇದರ ಬಗ್ಗೆ ಯಾರೂ ಏಕೆ ಮಾತಾಡುತ್ತಿಲ್ಲ" ಎಂದು ಆಶ್ವರ್ಯದಿಂದ ಪ್ರಶ್ನಿಸಿದ್ದಾರೆ.
UI Movie: ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದು ಹೋಗಿ ಎಂದು ಯುಐ ಸಿನಿಮಾದ ಆರಂಭದಲ್ಲಿ ತೋರಿಸಿರುವ ಕುರಿತು ಎಲ್ಲರೂ ಚರ್ಚಿಸುತ್ತಿದ್ದಾರೆ. ಇದೀಗ ನಟ ಉಪೇಂದ್ರ ಇದೇ ರೀತಿಯ ಇನ್ನೊಂದು ಡೈಲಾಗ್‌ನ ಫೋಟೋ ಹಂಚಿಕೊಂಡಿದ್ದು, "ಪರದೆ ಮೇಲೆ ಕಾಣಿಸಿದ ಇದರ ಬಗ್ಗೆ ಯಾರೂ ಏಕೆ ಮಾತಾಡುತ್ತಿಲ್ಲ" ಎಂದು ಆಶ್ವರ್ಯದಿಂದ ಪ್ರಶ್ನಿಸಿದ್ದಾರೆ. "ನಿಜವಾದ ಬುದ್ದಿವಂತರು ದಡ್ಡರ ತರಹ ಇರ್ತಾರೆ. ಆದ್ರೆ, ದಡ್ಡರು ತಾವು ಬುದ್ದಿವಂತರು ಅಂತ ಎಗರಾಡ್ತಿರ್ತಾರೆ" ಎಂಬ ಸಾಲನ್ನು ಹಂಚಿಕೊಂಡಿದ್ದಾರೆ. ಯುಐ ಸಿನಿಮಾದಲ್ಲಿ ಈ ಸಾಲಗಳು ಕೂಡ ಇದ್ದವು. ಅಂದರೆ, ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದು ಹೋಗಿ ಎಂಬ ಸೂಚನೆಗೆ ಅದೇ ಸಿನಿಮಾದ ಪರದೆಯಲ್ಲೇ ಉತ್ತರ ನೀಡಲಾಗಿತ್ತು. ಆದರೆ, ಯುಐ ಸಿನಿಮಾ ದಡ್ಡರಿಗೆ ಮಾತ್ರ ಎನ್ನುವುದೇ ಚರ್ಚೆಯಾಗಿದೆ.
ಪರದೆ ಮೇಲೆ ಕಾಣಿಸಿದ ಇದರ ಬಗ್ಗೆ ಯಾರೂ ಏಕೆ ಮಾತಾಡುತ್ತಿಲ್ಲ?
ಉಪೇಂದ್ರ ಅವರ ಈ ಟ್ವಿಟ್‌ಗೆ ಸಾಕಷ್ಟು ಜನರು ತಮಗೆ ತೋಚಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. "ಈ ಸಾಲು ಸಿನಿಮಾದಲ್ಲಿ ತೋರಿಸಿಲ್ಲ" ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ಇಲ್ಲ ಈ ಸಾಲುಗಳು ಕೂಡ ಇದ್ದವು. ಆದರೆ, ಸಿನಿಮಾದ ವೇಗದಲ್ಲಿ ಕೆಲವರು ಬುದ್ದಿವಂತರು ಎದ್ದು ಹೋಗಿ ಎನ್ನುವುದನ್ನು ಮಾತ್ರ ನೆನಪಿಟ್ಟುಕೊಂಡಿದ್ದಾರೆ" ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
"ನೀವೇ ಕೊನೆಗೆ ಹೇಳಿದ್ರಲ್ಲ ಸರ್ ಎಲ್ಲಾರಿಗೂ ಎಲ್ಲಾ ಗೊತ್ತು. ಆದ್ರೆ ಎಲ್ಲರೂ ಯಾರ್ಗೂ ಏನು ಗೊತ್ತಿಲ್ದೆ ಇರೋ ತರ ನಾಟಕ ಮಾಡ್ತಾ ಇದಾರೆ. ಎಲ್ಲಿ ಕೆಲವ್ರು ಉದ್ಧಾರ ಆಗಿ ಬಿಡ್ತಾರೋ ಅನ್ನೋ ಭಯ ಕೆಲವರಿಗೆ ಅದೇ ಅತಿ ಬುದ್ಧಿವಂತರಿಗೆ" ಎಂದು ವಿನ್ಸಿ ಮಸು ಎಂಬವರು ಪ್ರತಿಕ್ರಿಯೆ ನೀಡಿದ್ದಾರೆ. "UI ಅದ್ಭುತಗಳನ್ನು ಸೃಷ್ಟಿಸಿರುವ ಪ್ರಪಂಚದ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ನಿಮ್ಮನ್ನು ನಿಲ್ಲಿಸುತ್ತದೆ. ವಿಭಿನ್ನವಾಗಿ ಹೇಳುವ Ul ಅಲ್ಲಿ ಏನಿಲ್ಲ, ಏನೇನಿಲ್ಲ ಅಂತ U ಅನ್ನೋ ಕನ್ನಡಿ ಹಿಡಿದು I ಅನ್ನೋ ಅಂತರಾಳದ ಮೆದುಳಿನಿಂದ ನೋಡು ಅಂತ ನಿರ್ದೇಶಕನು ಪ್ರೇಕ್ಷಕನಿಗೆ ಜವಾಬ್ದಾರಿ ಕೊಟ್ಟಿದ್ದೀರಿ. ನೀವು ನಮ್ಮ ಕನ್ನಡದ ಪ್ರತಿಭಾವಂತ ನಿರ್ದೇಶಕ ಉಪೇಂದ್ರ" ಎಂದು ಅಜತ ಎನ್‌ವೈ ಎಂಬ ಟ್ವಿಟ್ಟರ್ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.
"ನೀವೇ ಉಪ್ಪಿ 2ನಲ್ಲಿ ಹೇಳಿದ್ರಲ್ಲ, ಮಾತನಾಡುವವರು ಕೆಲ್ಸಾ ಮಾಡಲ್ಲ, ಕೆಲ್ಸ ಮಾಡುವವರು ಜಾಸ್ತಿ ಮಾತನಾಡಲ್ಲ ಅಂತ. ಅದಕ್ಕೆ ಸೈಲೆಂಟ್ ಆಗಿದ್ದೇವೆ" "ನಿಮ್ಮ ಸಿನಿಮಾನೇ ಸಾಕಷ್ಟು ಜನರಿಗೆ ಅರ್ಥ ಆಗಿಲ್ಲ. ಇನ್ನು ಸ್ಕ್ರೀನ್ ಒಳಗೆ ತೋರಿಸುವ ಸ್ಕ್ರೀನ್ ಅನ್ನು ಯಾರು ಗಮನಿಸ್ತಾರೆ ಗುರುಗಳೇ" "ಇದನ್ನ ಬುದ್ಧಿವಂತ ಸಿನಿಮಾದಲ್ಲೇ ಪಂಚಾಕ್ಷರಿ ಪೂಜಾಗಾಂಧಿ ಕ್ಯಾರೆಕ್ಟರ್‌ನಲ್ಲಿ ತೋರಿಸಿ ಹೇಳಿ ಆಗಿದ್ಯಲ್ವ" "ಯಾಕೆಂದ್ರೆ ಅವರೆಲ್ಲ ಬುದ್ದಿವಂತರು ಅಂತ ಅಂದುಕೊಂಡಿರೋ ದಡ್ಡರು" "ನಾವು ನಿಜವಾದ ಬುದ್ಧಿವಂತರು ಸರ್, ಅದಕ್ಕೆ ಸೈಲೆಂಟ್ ಆಗಿದ್ದೇವೆ" ಹೀಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ.
ಏನಿದು ಯುಐ ದಡ್ಡ ವಿವಾದ?
ಉಪೇಂದ್ರ ಸಿನಿಮಾದ ಆರಂಭದಲ್ಲಿ ತೋರಿಸಿರುವ "ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದು ಹೋಗಿ, ದಡ್ಡರಾಗಿದ್ದರೆ ಸಿನಿಮಾ ನೋಡಿ" ಎನ್ನುವ ಅರ್ಥದ ಡೈಲಾಗ್ ತೋರಿಸಿದ್ದರು. ಈ ಹಿಂದೆಲ್ಲ ಉಪೇಂದ್ರ ಸಿನಿಮಾ ಬುದ್ದಿವಂತರಿಗೆ ಮಾತ್ರ ಎಂದಿರುತ್ತಿತ್ತು. ಈ ಸಿನಿಮಾದಲ್ಲಿ ದಡ್ಡರಿಗೆ ಮಾತ್ರ ಎಂದು ಹೇಳಿದ್ದರು. ಈ ಮೂಲಕ ಉಪ್ಪಿ ಸ್ಟೈಲ್‌ನಲ್ಲಿ ಸಿನಿಮಾ ತೋರಿಸಿದ್ದರು.
ಯುಐ ಸಿನಿಮಾ ವಿಮರ್ಶೆ
"ಇದು ಗಟ್ಟಿ ಕಥೆ ಇರುವ ಸಿನಿಮಾವಲ್ಲ. ನಿಜ ಏನೆಂದರೆ, ಈ ಚಿತ್ರದಲ್ಲಿ ನಿರ್ದಿಷ್ಟ ಕಥೆಯನ್ನು ಹುಡುಕುವುದು ಕಷ್ಟ. ವಾಸ್ತವದ ಚಿತ್ರಣ ನೀಡುವ ದೃಶ್ಯಗಳ ಹೆಣಿಗೆ ಎಂದು ಹೇಳಬಹುದು. ಸದ್ಯದ ಜಗತ್ತನ್ನು ತೋರಿಸಲು ಕೆಲವೊಂದು ಉಪಮೆಯಗಳಂತೆ ಕಥೆಗಳ ತುಣುಕುಗಳನ್ನು ಬಳಸಲಾಗಿದೆ ಎನ್ನಬಹುದು. "ಈ ಸಮಾಜಕ್ಕೆ ನಾನು ಏನು ಹೇಳಬೇಕೋ ಅದನ್ನು ಹೇಳಬೇಕು" ಮತ್ತು "ಜನರಿಗೆ ಅದು ಸಿನಿಮಾದ ರೀತಿಯಾಗಿಯೂ ಕಾಣಿಸಬೇಕು" ಎಂಬ ಎರಡು ತತ್ತ್ವಗಳಡಿ ಉಪೇಂದ್ರ ಈ ಸಿನಿಮಾ ಮಾಡಿದಂತೆ ಇದೆ" ಎಂದು ಈಗಾಗಲೇ ಹಿಂದೂಸ್ತಾನ್ ಟೈಮ್ಸ್ ಕನ್ನಡ ಯುಐ ಸಿನಿಮಾದ ವಿಮರ್ಶೆ ಪ್ರಕಟಿಸಿದೆ. ಯುಐ ಸಿನಿಮಾದ ಸಂಪೂರ್ಣ ವಿಮರ್ಶೆ ಓದಲು ಇಲ್ಲಿ ಕ್ಲಿಕ್ ಮಾಡಿ.