‘ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿ, ದಡ್ಡರಾಗಿದ್ದರೆ..’; UI ಚಿತ್ರ ಶುರುವಿಗೂ ಮುನ್ನ ಹೀಗೊಂದು ಬರಹ
UI The Movie: ಯುಐ ಚಿತ್ರ ಶುರುವಾಗುವುದಕ್ಕೂ ಮುನ್ನವೇ ಆಡಿಯೆನ್ಸ್ ತಲೆಗೆ ಹುಳ ಬಿಟ್ಟಿದ್ದಾರೆ ನಟ, ನಿರ್ದೇಶಕ ಉಪೇಂದ್ರ. ಸಿನಿಮಾ ಆರಂಭದಲ್ಲಿಯೇ ಈ ಸಿನಿಮಾ ದಡ್ಡರಿಗೆ ಮಾತ್ರ ಎಂಬ ಬರಹದ ಮೂಲಕ ಕುತೂಹಲ ಕೆರಳಿಸಿದ್ದಾರೆ.
UI The Movie: ಒಂಭತ್ತು ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ UI ಚಿತ್ರ ಇಂದಿನಿಂದ (ಡಿಸೆಂಬರ್ 20) ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ 2000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಪೋಸ್ಟರ್, ಹಾಡು, ಟೀಸರ್ ಹಾಗೂ ವಾರ್ನರ್ ಮೂಲಕ ಈಗಾಗಲೇ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ನೋಡಲು ಉಪೇಂದ್ರ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅದರಂತೆ ಸಿನಿಮಾ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿಯೂ ಬಗೆಬಗೆ ಕ್ಲಿಪ್‌ಗಳು ಹರಿದಾಡುತ್ತಿದ್ದು, ಪ್ರೇಕ್ಷಕನ ತಲೆಗೆ ಮತ್ತೆ ಹುಳ ಬಿಟ್ಟಿದ್ದಾರೆ.
ಮೊದಲ ದೃಶ್ಯದಲ್ಲಿಯೇ ಅಚ್ಚರಿ..
ಉಪೇಂದ್ರ ನಿರ್ದೇಶನದ ಸಿನಿಮಾಗಳು ಎಂದರೆ ಅಲ್ಲಿ ಮಾತನಾಡಲು ನೂರೆಂಟು ವಿಚಾರಗಳು ಇರುತ್ತವೆ. ಸಿನಿಮಾ ನಿರೂಪಿಸುವ ಅವರ ಶೈಲಿಯಿಂದ ಹಿಡಿದು, ಪ್ರಸ್ತುತತೆಗೆ ಅದನ್ನು ಕನೆಕ್ಟ್ ಮಾಡುವ ಅವರ ವೈಖರಿ ಫ್ಯಾನ್ಸ್‌ಗೆ ವಿಶೇಷ ಎನಿಸುತ್ತದೆ. ಇದೀಗ ಇಂದು (ಡಿ. 20) ವಿಶ್ವದಾದ್ಯಂತ ಯುಐ ಸಿನಿಮಾ ಬಿಡುಗಡೆ ಆಗಿದೆ. ಚಿತ್ರ ಶುರುವಾಗುವುದಕ್ಕೂ ಮುನ್ನವೇ ಆಡಿಯೆನ್ಸ್ ತಲೆಗೆ ಹುಳ ಬಿಟ್ಟಿದ್ದಾರೆ. ಸಿನಿಮಾ ಆರಂಭದಲ್ಲಿಯೇ ಈ ಸಿನಿಮಾ ದಡ್ಡರಿಗೆ ಮಾತ್ರ ಎಂಬ ಬರಹದ ಮೂಲಕ ಕುತೂಹಲ ಕೆರಳಿಸಿದ್ದಾರೆ.
ಹೌದು, ಸಿನಿಮಾ ಶುರುವಾಗುವುದಕ್ಕೂ ಮೊದಲೇ, ಚಿತ್ರಮಂದಿರದ ಸ್ಕ್ರೀನ್ ಮೇಲೆ ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿ, ದಡ್ಡರಾಗಿದ್ದರೆ ಪೂರ್ತಿ ಸಿನಿಮಾ ನೋಡಿ" ಎಂಬ ಬರಹ ಕಾಣಿಸುತ್ತದೆ. ಅಲ್ಲಿಗೆ ಇದು ಟಿಪಿಕಲ್ ಉಪ್ಪಿ ಸಿನಿಮಾ ಅನ್ನೋದನ್ನ ಮತ್ತೆ ಪ್ರೂವ್ ಮಾಡಲು ಹೊರಟಿದ್ದಾರೆ ಉಪೇಂದ್ರ. ಇದರ ಜತೆಗೆ ಕ್ಯಾಮರಾ ಮೇಲೆ ನಿರ್ದೇಶಕನ ಟೋಪಿ ಇಟ್ಟು, ಆ ಟೋಪಿ ಮೇಲೆ ಮೆದುಳಿನ ಚಿತ್ರ ಇಟ್ಟು, ನಿರ್ದೇಶನ ಉಪೇಂದ್ರ ಎಂದೂ ವಿಭಿನ್ನವಾಗಿ ಹೇಳಿದ್ದಾರೆ.
ಇಬ್ಬರು ಛಾಯಾಗ್ರಾಹಕರು, ಮೂವರು ಸಂಕಲನಕಾರರು
‘UI’ ಚಿತ್ರಕ್ಕೆ ಇಬ್ಬರು ಛಾಯಾಗ್ರಾಹಕರು ಕೆಲಸ ಮಾಡಿದ್ದಾರಂತೆ. ಮೊದಲು ಈ ಚಿತ್ರಕ್ಕೆ ಶಿವಸೇನಾ ಛಾಯಾಗ್ರಾಹಕರು ಎಂದು ಹೇಳಲಾಗಿತ್ತು. ಕೊನೆಗೆ ಆ ಜಾಗಕ್ಕೆ ಉಪೇಂದ್ರರ ಖಾಯಂ ಛಾಯಾಗ್ರಾಹಕ ಎಂದು ಗುರುತಿಸಿಕೊಂಡಿರುವ ಎಚ್.ಸಿ. ವೇಣು ಬಂದಿದ್ದಾರೆ. ವೇಣು ಇದಕ್ಕೂ ಮೊದಲು ‘ಎ’, ‘ಉಪೇಂದ್ರ’, ‘ಎಚ್2ಓ’ ಮುಂತಾದ ಚಿತ್ರಗಳಿಗೂ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.
‘UI’ಗೆ ಮೂವರು ಸಂಕಲನಕಾರರು ಕೆಲಸ ಮಾಡಿರುವುದು ವಿಶೇಷ. ಮೊದಲು ‘ಕ್ರೇಜಿ ಮೈಂಡ್ಸ್’ ಶ್ರೀ ಸಂಕಲನಕಾರರಾಗಿದ್ದರು. ‘ಉಪ್ಪಿ 2’ ಚಿತ್ರಕ್ಕೆ ಸಂಕಲನಕಾರರಾಗಿ ಕೆಲಸ ಮಾಡಿದ್ದು ಅವರೇ. ಬೇರೆ ಕೆಲಸಗಳ ಒತ್ತಡವಿದ್ದ ಕಾರಣ, ಅವರು ಸ್ವಲ್ಪ ಕೆಲಸ ಮಾಡಿ ದೀಪು ಎಸ್. ಕುಮಾರ್‌ಗೆ ಜಾಗ ಬಿಟ್ಟುಕೊಟ್ಟಿದ್ದಾರೆ. ದೀಪು ಅವರು ಕಾರಣಾಂತರಗಳಿಂದ ಚಿತ್ರದಿಂದ ಹೊರನಡೆದಾಗ, ವಿಜಿ ಎನ್ನುವವರು ಸಂಕಲನವನ್ನು ಮುಗಿಸಿದ್ದಾರೆ.
ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಜಿ. ಮನೋಹರನ್ ಹಾಗೂ ಕೆ.ಪಿ. ಶ್ರೀಕಾಂತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣ ಹಾಗೂ ತುಳಸಿರಾಮ ನಾಯ್ಡು (ಲಹರಿ ವೇಲು), ಜಿ. ರಮೇಶ್, ಜಿ. ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಕೆ.ವಿ.ಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ.