ಸುಧಾಳಿಗೆ ಆಗುಂತಕನ ನಿಗೂಢ ಸೂಚನೆ, ಹಬ್ಬದ ನಡುವೆ ಮಂಕಾದ್ರು ಗೌತಮ್, ಅಪೇಕ್ಷಾಳಿಗೆ ಭೂಮಿಕಾಳ ಅಪ್ಪುಗೆ- ಅಮೃತಧಾರೆ ಧಾರಾವಾಹಿ
Nov 14, 2024 11:00 AM IST
ಸುಧಾಳಿಗೆ ಆಗುಂತಕನ ನಿಗೂಢ ಸೂಚನೆ, ಹಬ್ಬದ ನಡುವೆ ಮಂಕಾದ್ರು ಗೌತಮ್- ಅಮೃತಧಾರೆ ಧಾರಾವಾಹಿ
- ಅಮೃತಧಾರೆ ಧಾರಾವಾಹಿಯ ನವೆಂಬರ್ 14ರ ಸಂಚಿಕೆಯಲ್ಲಿ ಕೆಲವು ಘಟನೆಗಳು ನಡೆದಿವೆ. ಗೌತಮ್ ಹೇಳಿದಂತೆ ಭೂಮಿಕಾ ಅಪೇಕ್ಷಾಳನ್ನು ಭೇಟಿಯಾಗಿ ಸಾರಿ ಕೇಳಿ ಅಪ್ಪುಗೆ ನೀಡಿದ್ದಾಳೆ. ಹಬ್ಬದ ಸಂಭ್ರಮದ ನಡುವೆ ಗೌತಮ್‌ಗೆ ತಂಗಿ ಮತ್ತು ಅಮ್ಮನ ನೆನಪಾಗಿದೆ. ಸುಧಾಳಿಗೆ ಪಟಾಕಿ ಸದ್ದಿನ ನಡುವೆ ಆಗುಂತಕನ ಕರೆ ಬಂದಿದೆ.
ಅಮೃತಧಾರೆ ಧಾರಾವಾಹಿಯ ನವೆಂಬರ್ 14ರ ಸಂಚಿಕೆ: ಶಕುಂತಲಾದೇವಿ ಮತ್ತು ರಮಾಕಾಂತ್ ಮಾತನಾಡುತ್ತಿದ್ದಾರೆ. ಅಕ್ಕ ತಂಗಿ ನಡುವೆ ಬೆಂಕಿ ಹಚ್ಚಿ ಮಜಾ ನೋಡುವ ಕಾರ್ಯದಲ್ಲಿದ್ದಾರೆ. ಎಲ್ಲರ ಮುಂದೆ ಕಪಾಳಮೋಕ್ಷ ಮಾಡಿರುವ ಭೂಮಿಕಾ ವಿರುದ್ಧ ಅಪೇಕ್ಷಾ ಕೋಪದಲ್ಲಿದ್ದಾಳೆ. ಇವರಿಬ್ಬರ ನಡುವೆ ಬಿರುಕು ಶುರುವಾಗಿದೆ. ಇದಕ್ಕೆ ಇನ್ನಷ್ಟು ತುಪ್ಪ ಹಾಕಬೇಕು ಎಂದು ರಮಾಕಾಂತ್ ಹೇಳುತ್ತಾರೆ. ಶಕುಂತಲಾದೇವಿ ಕೂಡ ಇದೇ ರೀತಿ ಮಾತನಾಡುತ್ತಿದ್ದಾರೆ. ಇನ್ನೊಂದೆಡೆ ಅಪೇಕ್ಷಾ ಬೇಸರದಲ್ಲಿ ಕುಳಿತಿದ್ದಾಳೆ. ಆಕೆಯ ಮನಸ್ಸಲ್ಲಿ ಭೂಮಿಕಾ ಪೆಟ್ಟು ನೀಡಿದ ಘಟನೆ ನೆನಪಿಗೆ ಬರುತ್ತದೆ. ಇದೇ ಸಮಯದಲ್ಲಿ ರಮಕಾಂತ್ ಹೇಳಿರುವ "ಹೋರಾಟದ ಗುಣ ಬಿಡಬೇಡ" ಎನ್ನುವುದೂ ನೆನಪಾಗುತ್ತದೆ. ಆಗ ಅಲ್ಲಿಗೆ ಭೂಮಿಕಾ ಬರುತ್ತಾರೆ. ಅಪ್ಪಿ ಎಂದು ಕರೆಯುತ್ತಾರೆ. ಎಂದಿನಂತೆ ಕೋಪ ಪ್ರದರ್ಶಿಸುತ್ತಾಳೆ. "ಐ ಆಮ್ ಸಾರಿ ಅಪ್ಪಿ, ನಾನು ಆ ರೀತಿ ಮಾತನಾಡಬಾರದಿತ್ತು. ಹೊಡೆಯಬಾರದಿತ್ತು. ನಿನ್ನಷ್ಟೇ ನೋವು ನನಗೂ ಇದೆ. ಅಪ್ಪ ಅಂದರೆ ನನಗೆ ಎಷ್ಟು ಇಷ್ಟ ಅಂತ ನಿನಗೆ ಗೊತ್ತಲ್ವ. ನೀನು ಅವರ ಬಗ್ಗೆ ಆ ರೀತಿ ಮಾತನಾಡಿದಾಗ ಕೋಪ ಬಂತು. ಕೋಪ ತಡೆಯಲಾರದೆ ಹೊಡೆದೆ" ಎಂದು ಭೂಮಿಕಾ ಹೇಳಿದರೂ ಅಪೇಕ್ಷಾ ಕೋಪದಲ್ಲಿ ಅಹಂನಲ್ಲಿ ನಿಂತಿರುತ್ತಾಳೆ.
"ಅಪ್ಪಿ ಅವರು ನಮಗಾಗಿ ಎಷ್ಟೆಲ್ಲ ಕಷ್ಟಪಟ್ಟಿದ್ದಾರೆ" ಎಂದು ಭೂಮಿಕಾ ಹೇಳಿದಾಗ "ಪ್ಲೀಸ್, ನೀನು ಮತ್ತೆ ನಿನ್ನ ಭಾಷಣ ಶುರು ಮಾಡಬೇಡ" ಎಂದು ಅಪೇಕ್ಷಾ ಹೇಳುತ್ತಾಳೆ. "ನಾನು ಏನಾದರೂ ಹೇಟ್ ಮಾಡ್ತಿನಿ ಅಂದ್ರೆ ಅದು ನೀನು ಮಾಡುವ ಭಾಷಣ" ಎಂದು ಹೇಳುತ್ತಾಳೆ. ದೂರದಿಂದ ನಿಂತು ನೋಡುತ್ತಾ ಶಕುಂತಲಾದೇವಿ ಮತ್ತು ಸಹೋದರ ಮಜಾ ತೆಗೆದುಕೊಳ್ಳುತ್ತಾರೆ. ಹೀಗಿದ್ದರೂ, ಭೂಮಿಕಾ ಹೇಳಬೇಕಾದ ಮಾತುಗಳನ್ನು ಹೇಳುತ್ತಾರೆ. "ಒಂದು ಕ್ಷಣ ಅಪ್ಪ ಅಮ್ಮನ ಸ್ಥಾನದಲ್ಲಿ ನಿಂತು ಯೋಚಿಸು " ಎಂದು ಬುದ್ದಿವಾದ ಹೇಳುತ್ತಾರೆ. "ನನಗೆ ನನ್ನವರು ಯಾರು, ನನ್ನವರು ಯಾರಲ್ಲ ಎಂಬ ಜ್ಞಾನೋದಯ ಆಗಿದೆ" ಎಂದು ಅಪೇಕ್ಷಾ ತನ್ನ ಎಂದಿನ ವೈಖರಿಯ ಮಾತುಗಳನ್ನು ಮುಂದುವರೆಸುತ್ತದೆ. "ಈಗ ನಿನಗೆ ಒಳ್ಳೆಯ ಸ್ಥಾನ ಸಿಕ್ಕಿರಬಹುದು. ಶ್ರೀಮಂತಿಕೆ, ಎಲ್ಲವೂ ದೊರಕಿರಬಹುದು. ಪ್ರಪಂಚದಲ್ಲಿ ಹಣ ಕೊಟ್ಟರೆ ಏನೂ ಬೇಕಾದರೂ ದೊರಕುತ್ತದೆ. ಹೆತ್ತವರ ಪ್ರೀತಿಬಿಟ್ಟು" ಎಂದು ಭೂಮಿಕಾ ತನ್ನ ತಂಗಿಗೆ ಮನವರಿಕೆ ಮಾಡಲು ಯತ್ನಿಸುತ್ತಾಳೆ. "ಅಪ್ಪ ನಮ್ಮನ್ನು ಪ್ರೀತಿಯಿಂದ, ಖುಷಿಯಿಂದ ಬೆಳೆಸಿದ್ದಾರೆ. ಹಣ ಇಲ್ಲದೆ ಇದ್ದರೂ ನಾವು ಸಂತೋಷವಾಗಿದ್ದೇವು" ಎಂದೆಲ್ಲ ಹೇಳಿದಾಗ "ಎಲ್ಲವೂ ಚೆನ್ನಾಗಿತ್ತು, ಅದು ನಿನಗೆ ಮಾತ್ರ, ನನಗಲ್ಲ" ಎಂದು ಹೇಳುತ್ತಾಳೆ. ಒಟ್ಟಾರೆ, ಇವಳು ಸದ್ಯ ಸರಿಯಾಗುವ ಲಕ್ಷಣಗಳು ಇಲ್ಲ. "ಅವರು ಮಾಡಿದ್ದು ಸಾಲದು ಎಂದು ಈಗ ನೀನೂ ನನ್ನ ಮೇಲೆ ಕೈ ಮಾಡಿದೆಯಲ್ಲ" ಎಂದು ಅಪೇಕ್ಷಾ ಹೇಳಿದಾಗ ಭೂಮಿಕಾ ಸಾರಿ ಎನ್ನುತ್ತ ಅಪೇಕ್ಷಾಳನ್ನು ಅಪ್ಪಿಕೊಳ್ಳುತ್ತಾಳೆ. ಇದನ್ನು ನೋಡಿ ಶಕುಂತಲಾ ಟೀಮ್‌ಗೆ ಕಸಿವಿಸಿಯಾಗುತ್ತದೆ. ಇವರು ಸರಿಯಾಗಿ ಬಿಟ್ಟರೆ ಗತಿಯೇನು ಎನ್ನುವುದು ಅವರ ಯೋಚನೆ.
ಇನ್ನೊಂದೆಡೆ ಶಕುಂತಲಾ ಕುದಿಯುತ್ತಿದ್ದಾಳೆ. "ನಿನ್ನ ಪ್ಲಾನ್ ಎಲ್ಲಾ ಹೊಗೆ ಹಾಕ್ತು" ಎಂದು ರಮಾಕಾಂತ್ ಹೇಳುತ್ತಾರೆ. "ಇನ್ನೂ ಸಮಯ ಇದೆ. ಅವಳ ತಲೆಗೆ ಕಸ ಹಾಕ್ತಾ ಇರೋಣ" ಎಂದು ಶಕುಂತಲಾದೇವಿ ಹೇಳುತ್ತಾರೆ.
ಸುಧಾ ಹೊಸ ಸೀರೆ ಉಟ್ಟಿದ್ದಾಳೆ. ಅಪರ್ಣಾ "ವಾಹ್ ಹೊಸ ಸೀರೆ" ಎಂದು ಕೇಳಿದಾಗ "ಯಾರೋ ನನ್ನ ಅಣ್ಣನಂತವರು ಕೊಡಿಸಿದ್ದು" ಎಂದು ಹೇಳುತ್ತಾಳೆ. "ಗುರುತುಪರಿಚಯ ಇಲ್ಲದ ಹತ್ತಿರದ ಸಂಬಂಧಿ ಅವರು. ದೇವರಂತಹ ಮನುಷ್ಯ. ಉಡುಗೊರೆ ಅಂತ ಒಂದಿಷ್ಟು ಡ್ರೆಸ್, ಹಣ್ಣು, ಹಣ ಎಲ್ಲಾ ನೀಡಿದ್ದಾರೆ" ಎಂದು ಹೇಳುತ್ತಾಳೆ. ಅವರು ಹೇಗೆ ಪರಿಚಯ ಎಂದು ಕೇಳಿದಾಗ "ಅವತ್ತು ಅವರು ಕಾರಲ್ಲಿ..." ಎಂದು ಉಪಕಾರ ಮಾಡಿದ ವಿವರ ನೀಡುತ್ತಾಳೆ. "ಅಂಥವರು ಕೆಲವೇ ಕೆಲವು ಜನರ ಇರುತ್ತಾರೆ, ನಮ್ಮ ಗೌತಮ್ ತರಹ" ಎಂದು ಅಪರ್ಣಾ ಹೇಳುತ್ತಾಳೆ. ಅಪರ್ಣಾ ಹೋದ ಬಳಿಕ ಸುಧಾಳಿಗೆ ಬೇಸರವಾಗುತ್ತದೆ. "ನನ್ನನ್ನು ಕ್ಷಮಿಸಿ ಅಕ್ಕಾ, ನಾನು ಇಲ್ಲಿ ಮುಖವಾಡ ಹಾಕಿಕೊಂಡು ಬದುಕುವವಳು. ನಾನು ಕೈಗೊಂಬೆಯಾಗಿದ್ದೇನೆ. ಇದು ಸರಿಯಾ ತಪ್ಪಾ ಗೊತ್ತಿಲ್ಲ" ಎಂದುಕೊಳ್ಳುತ್ತಾಳೆ.
ಗೌತಮ್ ಮನೆಯಲ್ಲಿ ದೀಪಾವಳಿ ಹಬ್ಬ ನಡೆಯುತ್ತಿದೆ. ಪೂಜೆ ಬಳಿಕ ಎಲ್ಲರೂ ಕೈಮುಗಿಯುತ್ತಿದ್ದಾರೆ. ಆನಂದ್ ಮನೆಯಲ್ಲೂ ಹಬ್ಬ ನಡೆಯುತ್ತಿದೆ. ಅಲ್ಲಿ ಸುಧಾಳೂ ಇದ್ದಾಳೆ. ಆನಂದ್ ಮಗಳು ಭಕ್ತಿಗೀತೆ ಹಾಡುತ್ತಿದ್ದಾಳೆ. ಪೂಜೆಯ ಬಳಿಕ ಪಟಾಕಿ ಹೊಡೆಯುತ್ತಾರೆ. ಈ ಸಮಯದಲ್ಲಿ ಸುಧಾ ಭಯಪಡುತ್ತಾಳೆ. ಕಿವಿಗೆ ಕೈ ಇಟ್ಟುಕೊಂಡಿದ್ದಾಳೆ. ಹಳೆಯ ನೆನಪುಗಳೇನೋ ಕಾಡುವಂತೆ ಇದೆ. ಒಟ್ಟಾರೆ ತುಳಸಿ ಹಬ್ಬದಂದು ಅಮೃತಧಾರೆ ಧಾರಾವಾಹಿಯಲ್ಲಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಗೌತಮ್ ಮನೆಯಲ್ಲೂ ಎಲ್ಲರೂ ಪಟಾಕಿ ಹೊಡೆಯುತ್ತಿದ್ದಾರೆ. ಗೌತಮ್ ಮನದಲ್ಲಿ ಏನೋ ಚಿಂತೆ ಕಾಡುತ್ತದೆ. ಆಗ ಅಲ್ಲಿಗೆ ಭೂಮಿಕಾ ಬರುತ್ತಾರೆ. "ಎಲ್ಲರೂ ಆಚೆ ಪಟಾಕಿ ಹೊಡೆಯುವಾಗ ಇಲ್ಲಿ ಏನು ಮಾಡುತ್ತೀರಿ" ಎಂದು ಭೂಮಿಕಾ ಕೇಳುತ್ತಾರೆ. "ಅಮ್ಮ ಮತ್ತು ತಂಗಿ ನೆನಪಾಗುತ್ತಾರೆ. ಈಗ ಅವರು ಇಲ್ಲದೆ ಹಬ್ಬ ಮಾಡಲು ಮನಸ್ಸು ಆಗುತ್ತಿಲ್ಲ. ದೀಪಾವಳಿ ಎಂದರೆ ನನಗೆ ಅಮ್ಮ ನೆನಪಾಗುತ್ತಾರೆ. ಅವರು ಹಾಕುತ್ತಿದ್ದ ರಂಗೋಲಿ, ಹಣತೆ, ಬೆಳಕು ಎಲ್ಲವೂ ನೆನಪಾಗುತ್ತದೆ. ಎಲ್ಲರೂ ನಾವು ದೀಪಾವಳಿ ಎಷ್ಟು ಚೆನ್ನಾಗಿ ಆಚರಿಸ್ತಾ ಇದ್ದೇವೆ. ಎಲ್ಲವೂ ನೆನಪಾಗುತ್ತಿದೆ" ಎಂದು ಗೌತಮ್ ಭಾವುಕರಾಗುತ್ತಾರೆ. ಇನ್ನೊಂದೆಡೆ ಆನಂದ್ ಮನೆಯಲ್ಲಿ ಸುಧಾ ಪಟಾಕಿಯಿಂದ ತುಸು ದೂರ ಇರುತ್ತಾರೆ. ಆಗ ಅವರಿಗೆ ಕರೆ ಬರುತ್ತದೆ. "ನಿನ್ನನ್ನು ಕಳುಹಿಸಿದ್ದು ಹಬ್ಬ ಮಾಡಿ ಜಾಲಿ ಮಾಡೋದಕ್ಕ. ಹೇಳಿದ ಕೆಲಸ ಆದಷ್ಟು ಬೇಗ ಮಾಡಿ ಮುಗಿಸು. ನೀನು ಆದಷ್ಟು ಬೇಗ ಆ ಮನೆಗೆ ಶಿಫ್ಟ್ ಆಗಬೇಕು" ಎಂದು ಆ ಕಡೆಯಿಂದ ಯಾರೋ ಹೇಳುತ್ತಾರೆ. ಬಿಗ್‌ಬಾಸ್ ಆಜ್ಞೆಯಂತೆ ಸುಧಾ ತಲೆ ಅಲ್ಲಾಡಿಸುತ್ತಾರೆ. ಸೀರಿಯಲ್ ಮುಂದುವರೆಯುತ್ತದೆ.