ಶಾರ್ಟ್ ಇದ್ದೀನಿ ಅನ್ನೋ ಕಾರಣಕ್ಕೆ ಸೀರಿಯಲ್‌ಗಳಿಂದ ರಿಜೆಕ್ಟ್ ಮಾಡಿದವರೇ ಹೆಚ್ಚು; ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಅಮೋಘ್ ಆದಿತ್ಯ ಸಂದರ್ಶನ
Nov 13, 2024 08:35 AM IST
ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಅಮೋಘ್ ಆದಿತ್ಯ ಸಂದರ್ಶನ
- Amogh Aaditya Interview: ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆದ ನಟ ಅಮೋಘ್ ಆದಿತ್ಯ ಬಗ್ಗೆ ನಿಮಗೆಷ್ಟು ಗೊತ್ತು? ಕೆರಿಯರ್ ಆರಂಭದಿಂದ ಹಿಡಿದು ಈವರೆಗೆ ಸವೆಸಿದ ಹಾದಿಯ ಬಗ್ಗೆ HT ಕನ್ನಡದ ಜತೆಗೆ ಅವರೇ ಮಾತನಾಡಿದ್ದಾರೆ. ಇಲ್ಲಿದೆ ವಿಶೇಷ ಸಂದರ್ಶನ.
Shravani Subramanya Serial Amogh Adithya Interview: ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ ನಟ ಅಮೋಘ್ ಆದಿತ್ಯ. ಟಿಪಿಕಲ್ ಮಿಡಲ್ ಕ್ಲಾಸ್‌ನಿಂದ ಬಂದ ಈ ಹುಡುಗ ಈಗ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ತಮ್ಮದೇ ಆದ ಅಪಾರ ಮಹಿಳಾ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ. ಆದರೆ, ಈ ಹಂತಕ್ಕೆ ಬರುವುದಕ್ಕೂ ಮುನ್ನ, ಸಾಕಷ್ಟು ಏಳುಬೀಳುಗಳ ಜತೆಗೆ ಅವಮಾನಗಳನ್ನೂ ಎದುರಿಸಿದ್ದಾರೆ. ಈಗ ಇದೇ ಸುಬ್ರಮಣ್ಯ ಅಲಿಯಾಸ್ ಅಮೋಘ್ ಆದಿತ್ಯ HT ಕನ್ನಡದ ಜತೆಗೆ ಮಾತನಾಡಿದ್ದಾರೆ. ಒಂದಷ್ಟು ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಮತ್ತೊಂದಿಷ್ಟು ಕನಸುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
- ಸೀರಿಯಲ್ ಜರ್ನಿ ಶುರುವಾಗಿದ್ದು ಹೇಗೆ..
- ನಾನು ಡಿಗ್ರಿ ಮಾಡುವಾಗ, ಒಂದು ಸಿನಿಮಾ ಅದು ಕಾರಣಾಂತರಗಳಿಂದ ಸಿನಿಮಾ ಆಗಲಿಲ್ಲ. ಅದಾದ ಬಳಿಕ ರಾಮಾರ್ಜುನ ಅಂತ ಇನ್ನೊಂದು ಸಿನಿಮಾ ಮಾಡಿದೆ. ಜತೆ ಜತೆಗೆ ರಂಗಭೂಮಿಯ ಕೆಲಸ ಮಾಡುತ್ತ, ಸಿನಿಮಾದ ಡೈರೆಕ್ಷನ್ ಟೀಮ್‌ನಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡಿದೆ. ಶಾಂತಂ ಪಾಪಂ ಸೀರಿಯಲ್‌ನಿಂದ ನನ್ನ ನಟನೆ ಆರಂಭವಾಯ್ತು. ಒಂದೇ ದಿನದ ಪಾತ್ರ ಮಾಡುತ್ತಿದ್ದೆ. ಅದಾದ ಮೇಲೆ ಹೂಮಳೆ ಸೀರಿಯಲ್‌ನಲ್ಲಿ ನಟಿಸಲು ಶುರುಮಾಡಿದೆ. ದೊರೆಸಾನಿ, ಸತ್ಯ, ಗೀತಾದಲ್ಲಿ ಸೈಕೋಪಾತ್ ವಿಲನ್ ಆಗಿ, ಅಂತರಪಟದಲ್ಲೂ ವಿಲನ್, ಲಕ್ಷ್ಮೀ ಟಿಫನ್ ರೂಂ ಸೀರಿಯಲ್‌ನಲ್ಲೂ ನಟಿಸಿದೆ. ಇವೆಲ್ಲ ಮಾಡುವಾಗಲೇ ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಅವಕಾಶ ಸಿಕ್ಕಿತು"
- ನಿಮ್ಮದು ಯಾವ ಊರು, ಓದಿದ್ದೇನು?
- ನಾನು ಹುಟ್ಟಿದ್ದು ಕುಂದಾಪುರದಲ್ಲಿ. ಬೆಳೆದಿದ್ದು ಬೆಂಗಳೂರಲ್ಲಿ. ಬಿಕಾಂ ಮುಗಿಸಿ ಐದು ವರ್ಷ ಆಯ್ತು. ಬೆಂಗಳೂರಿನ ಜಯನಗರದ ವಿಜಯ ಕಾಲೇಜಿನಲ್ಲಿ ಓದಿದ್ದೇನೆ. ತಂದೆ ಕ್ಯಾಬ್ ಡ್ರೈವರ್. ಕಲಾವಿದರಿಗೆ ಫಿಕ್ಸ್ ಆದಾಯ ಇಲ್ಲ. ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಒಂದು ದಿನ ಮಾಡಿದರೆ ಅದೇ ಹೆಚ್ಚು. ತಿಂಗಳಲ್ಲಿ ಎರಡರಿಂದ ಮೂರು ದಿನ ಅಷ್ಟೇ ಮಾಡ್ತಿದ್ದೆ. ಮೂರು ಸೀರಿಯಲ್ ಸೇರಿಸಿ ಅಬ್ಬಬ್ಬಾ ಅಂದ್ರೆ ಎರಡರಿಂದ ಮೂರು ದಿನ ಮಾತ್ರ ಶೂಟಿಂಗ್ ಇರುತ್ತಿತ್ತು. ಅಪ್ಪನ ಸಂಪಾದನೆ ಮೇಲೆಯೇ ಮನೆ ನಡೆಯುತ್ತಿತ್ತು. ನನಗೆ ಬಂದ ಸಣ್ಣ ಪುಟ್ಟ ಸಂಬಳವನ್ನು ಮನೆಗೆ ಕೊಟ್ಟು ಬಿಡ್ತಿದ್ದೆ. ನನಗೆ ಬೇಕಾದ ಬಟ್ಟೆಯನ್ನು ಸ್ನೇಹಿತರು ಕೊಡಿಸ್ತಿದ್ರು. ಬೇರೆ ಏನೂ ಖರ್ಚು ಇರ್ತಿರಲಿಲ್ಲ.
- ನಟನೆಗೆ ಮನೆಯವರ ಬೆಂಬಲ ಹೇಗಿತ್ತು?
- ಈ ನಟನೆ ಅದೂ ಇದು ನಮಗೆ ಆಗಲ್ಲ. ದುಡ್ಡಿದ್ದವರಷ್ಟೇ ಇದೆಲ್ಲವನ್ನು ಮಾಡಬಹುದು. ನಮಗೇನಕ್ಕೆ? ಎಂದು ಮನೆಯಲ್ಲಿ ಕೇಳುತ್ತಿದ್ದರು. ನನಗೆ ನನ್ನ ತಂಗಿ ಮತ್ತು ಸ್ನೇಹಿತರೇ ಸಪೋರ್ಟ್ ಮಾಡುತ್ತಿದ್ದರು. ಆಡಿಷನ್‌ಗೆ ಕರೆದುಕೊಂಡು ಹೋಗುವುದರಿಂದ ಹಿಡಿದು, ಬಟ್ಟೆ ಕೊಡಿಸಿದ್ದೆಲ್ಲ ನನ್ನ ಸ್ನೇಹಿತರೇ. ನಿಧಾನಕ್ಕೆ ನಟನೆಯಿಂದ ಬಂದ ದುಡ್ಡನ್ನು ಮನೆಗೆ ಕೊಡ್ತಿದ್ದಂತೆ, ಮನೆಯವರಿಗೂ ನಂಬಿಕೆ ಬಂತು. ಅದಾದ ಮೇಲೆ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಶುರುವಾದ ಮೇಲೆ ಹಣಕಾಸಿನ ವಿಚಾರದಲ್ಲಿ ಚೂರು ಬದಲಾವಣೆ ಕಂಡಿತು.
- ಬಣ್ಣದ ಲೋಕದಲ್ಲಿ ಬೇಸರ ತರಿಸಿದ ಘಟನೆಗಳು ಇವೆಯೇ?
- ಒಂದು ಸೀರಿಯಲ್‌ಗೆ ಲುಕ್ ಟೆಸ್ಟ್ ಕೊಟ್ಟಿದ್ದೆ. ಎಲ್ಲವೂ ಓಕೆ ಆಗಿತ್ತು. ಆದರೆ, ರಿಜೆಕ್ಟ್ ಮಾಡಿದ್ರು. ಆ ಅವಕಾಶ ಮಿಸ್ ಆಗಿದ್ದಕ್ಕೆ ಆ ವಾಹಿನಿ ಕೊಟ್ಟ ಕಾರಣ ಬೇಸರ ತರಿಸಿತ್ತು. ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಇಲ್ಲ ಎಂಬ ಕಾರಣಕ್ಕೆ ನನಗೆ ಚಾನ್ಸ್ ಸಿಕ್ಕಿರಲಿಲ್ಲ. ಆಡಿಷನ್ ಕರೆದಾಗ ನಟನೆ ನೋಡಬೇಕು. ಅದು ಸರಿಯಿಲ್ಲ ಅಂದರೆ, ರಿಜೆಕ್ಟ್ ಮಾಡಲಿ. ಆದ್ರೆ, ಇಂಥ ಕಾರಣಗಳನ್ನು ನೀಡಬಾರದು. ಅದಾದ ಮೇಲೆ ಸಪೋರ್ಟಿಂಗ್ ರೋಲ್‌ಗೆ ಅಂತ ಇನ್ನೊಂದು ಸೀರಿಯಲ್‌ಗೆ ಹೋಗಿದ್ದೆ. ಅಲ್ಲಿಯೂ ಎಲ್ಲವೂ ಓಕೆ ಆಗಿತ್ತು. ನನ್ನನ್ನು ಬೇಡ ಎನ್ನಲು ಅವರಿಗೆ ಕಾರಣಗಳೇ ಇರಲಿಲ್ಲ. ಕೊನೆಗೆ ನಿಮ್ಮ ಬಾಡಿಯಲ್ಲಿ ಏನೋ ಡಿಫೆಕ್ಟ್ ಇದೆ ಎಂದು ಹೇಳಿ ಕಳಿಸಿದ್ರು. ಏನೂ ಕೇಳೆದೇ, ನಾನು ಹೇಗಿದ್ದೇನೋ ಹಾಗೆಯೇ ಒಪ್ಪಿಕೊಂಡಿದ್ದು ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಮಾತ್ರ.
- ಈ ಇಂಡಸ್ಟ್ರಿಯಲ್ಲಿ ಅಂದುಕೊಂಡಿದ್ದನ್ನು ಸಾಧಿಸ್ತಿನಿ ಅಂತ ಒಂದು ಸಣ್ಣ ಹೋಪ್ ಇತ್ತಾ?
- ಆರಂಭದಲ್ಲಿ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಶುರುವಾದಾಗ ಹೀರೋ ಚೇಂಜ್ ಮಾಡಿ ಎಂಬ ಕಾಮೆಂಟ್ ಬರ್ತಿದ್ವು. ಈಗ ಸುಬ್ಬುನೇ ಬೇಕು ಅಂತಿದ್ದಾರೆ. ಜನ ಆ ಪಾತ್ರವನ್ನು ಅಷ್ಟು ಇಷ್ಟಪಡ್ತಿದ್ದಾರೆ. ಪ್ರೀತಿ ಮಾಡ್ತಾರೆ. ಆ ಫೇಮ್‌ನ ಅನುಭವಿಸಬೇಕು ಅನ್ನೋ ಆಸೆ ನನಗೂ ಇತ್ತು. ನಾವು ನಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತ ಹೋದರೆ, ನಮಗೂ ಒಂದೊಳ್ಳೆ ಟೈಮ್ ಬಂದೇ ಬರುತ್ತೆ ಅನ್ನೋದು ನನ್ನ ಭಾವನೆ ಆಗಿತ್ತು. ಅದು ಈಗ ಈಡೇರಿದೆ. ಮಹಿಳಾ ಅಭಿಮಾನಿಗಳು ಹೆಚ್ಚಾಗಿದ್ದಾರೆ. ತುಂಬ ಖುಷಿಯಾಗುತ್ತೆ. ಹುಡುಗೀರು ಯಾವಾಗಲೂ ಹ್ಯಾಂಡ್‌ಸಮ್ ಇರೋ ಹುಡುಗ್ರನ್ನ ಇಷ್ಟಪಡ್ತಾರೆ. ಈ ನಾರ್ಮಲ್ ಹುಡುಗನ ಪಾತ್ರಕ್ಕೆ ಈ ಮಟ್ಟದ ರೆಸ್ಪಾನ್ಸ್ ಸಿಗುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ.
- ನಿಮ್ಮ ಲೈಫ್‌ಸ್ಟೈಲ್, ವರ್ಕೌಟ್ ಹೇಗಿರುತ್ತೆ? ಊಟದ ವಿಚಾರದಲ್ಲಿ ನೀವೆಷ್ಟು ಕಟ್ಟುನಿಟ್ಟು?
- ಕಣ್ಣುಮುಚ್ಚಿಕೊಂಡು ಎಲ್ಲವನ್ನೂ ತಿಂತಿನಿ. ವರ್ಕೌಟ್ ಅಂತ ಬಂದರೆ, ಸೀರಿಯಲ್‌ನಲ್ಲಿ ನಮ್ಮ ಮನೆಯ ಪೋರ್ಷನ್ ಶೂಟಿಂಗ್ ಮಾಡುವಾಗ ನನಗೆ ಟೈಮ್ ಸಿಗಲ್ಲ. ಬೆಳಗ್ಗೆಯಿಂದ ರಾತ್ರಿಯವರೆಗೂ ಶೂಟಿಂಗ್ ಇರುತ್ತೆ. ಹೀರೋಯಿನ್ ಮನೆಯ ಶೂಟಿಂಗ್ ಸಮಯದಲ್ಲಿ ಮಾತ್ರ ನನಗೆ ಸಮಯ ಸಿಗುತ್ತೆ. ವಾರದಲ್ಲಿ ಮೂರು ದಿನ ಶೂಟಿಂಗ್ ಇರುತ್ತೆ. ರಜೆ ಸಿಕ್ಕಿದಾಗೆಲ್ಲ ವರ್ಕೌಟ್ ಮಾಡ್ತಿನಿ. ಜಂಕ್ ಫುಡ್ ತಿನ್ನಲ್ಲ. ಮಾಮೂಲಿ ಮನೆಯೂಟ. ಸೆಟ್‌ನಲ್ಲಿ ಭವಾನಿ ಪ್ರಕಾಶ್ ಮೇಡಂ ಮತ್ತು ಬಾಲರಾಜ್ ಸರ್ ಊಟ ತಂದಿರ್ತಾರೆ. ಭವಾನಿ ಅವ್ರು ನಮಗೆ ಅಂತಾನೇ ಎಕ್ಸ್ಟ್ರಾ ಊಟ ತಂದಿರ್ತಾರೆ. ಎಲ್ಲೂ ಊಟಕ್ಕೆ ತೊಂದರೆ ಇಲ್ಲ.
- ನಟನೆಗೆ ರಂಗಭೂಮಿ ಹಿನ್ನೆಲೆ ಇದೆಯಾ? ಸಿನಿಮಾ ಸೆಳೆತ ಇದೆಯಾ?
- ಮೊದಲಿಂದಲೀ ಸಿನಿಮಾನೇ ಅಲ್ಟಿಮೇಟ್ ಅಂತ ಅಂದುಕೊಂಡಿದ್ದೇನೆ. ನಮ್ಮದೇ ಆದ ಒಂದು ಟೀಮ್ ಇದೆ. ಆ ಟೈಮ್‌ನಲ್ಲಿ ಇಬ್ಬರು ನಿರ್ದೇಶಕರಿದ್ದಾರೆ. ಬರಹಗಾರರಿದ್ದಾರೆ, ಡಿಒಪಿಗಳಿದ್ದಾರೆ. ಪ್ರೊಡ್ಯೂಸರ್‌ಗಳನ್ನೂ ಹುಡುಕುತ್ತಿದ್ದಾರೆ. ಹಾಗಾಗಿ ಸಿನಿಮಾ ಕಡೆಗೆ ಹೆಚ್ಚು ಗಮನ ಹರಿಸಿದ್ದೇನೆ. ನಟನೆ ವಿಚಾರದಲ್ಲಿ ಕಾಲೇಜು ಓದುವಾಗ, ರಂಗಭೂಮಿಯಲ್ಲಿ ಕೆಲಸ ಮಾಡಿದ್ದೆ. ದೃಶ್ಯ, ಸರ್ವಂ ತಂಡದ ಜತೆಗೆ ನಟನೆ ಕಲಿತೆ. ಅಲ್ಲಿಂದ ಶಾಂತಂ ಪಾಪಂ ಸೀರಿಯಲ್‌ನಲ್ಲಿ ಅವಕಾಶ ಸಿಕ್ಕಿತು. ಜೀರೋದಿಂದಲೇ ಶುರು ಮಾಡಬೇಕು ಅನ್ನೋ ಕಾರಣಕ್ಕೆ ನಟನೆಯ ಎಲ್ಲವನ್ನೂ ತಿಳಿದುಕೊಂಡು, ನಟನೆಗೆ ಬಂದೆ.
- ಬಾಡಿ ಶೇಮಿಂಗ್ ಅನುಭವ ಆಗಿದೆಯಾ?
- ಒಂದು ಸಿರೀಯಲ್ ತಂಡ ನನ್ನನ್ನು ಎಲ್ಲದರಲ್ಲಿ ಪಾಸ್ ಮಾಡಿ, ಕೊನೆಗೆ ರಿಜೆಕ್ಟ್ ಮಾಡಿದ್ದೇ ನಾನು ಶಾರ್ಟ್ ಇದ್ದೀನಿ ಅನ್ನೋ ಕಾರಣಕ್ಕೆ. ಶಾರ್ಟ್ ಇದ್ದೀರಿ, ಈ ರೋಲ್‌ಗೆ ನೀವು ಸೂಟ್ ಆಗಲ್ಲ ಎಂದವರೇ ಹೆಚ್ಚಿದ್ದಾರೆ. ಲುಕ್ ಟೆಸ್ಟ್‌ಗೆ ಹೋದಾಗ, ಅಲ್ಲಿ ನನಗೆ ಮಾತಾಡೋಕೆ ಚಾನ್ಸ್ ಇರಲ್ಲ. ಆದರೆ ಬೇರೆ ಕಡೆ ಆಡಿಷನ್‌ಗೆ ಹೋದಾಗ ನಾನು ಸ್ವಲ್ಪ ಶಾರ್ಟ್ ಇದ್ದೀನಿ ಅಂತ ನಾನೇ ಹೇಳಿಕೊಂಡು ಬಿಡ್ತಿನಿ. ಸತ್ಯ ಸೀರಿಯಲ್‌ನಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ ಮೇಲೆ ನನಗೆ ಕಾನ್ಫಿಡೆನ್ಸ್ ಬಂತು. ಈಗ ಶ್ರಾವಣಿ ಸುಬ್ರಮಣ್ಯ ಮೂಲಕ ಅಂದುಕೊಂಡಿದ್ದು ಈಡೇರಿದೆ.