logo
ಕನ್ನಡ ಸುದ್ದಿ  /  ಮನರಂಜನೆ  /  Kannada Serials: ಗೀತಾ, ಕಥೆಯೊಂದು ಶುರುವಾಗಿದೆ ಸೀರಿಯಲ್‌ಗಳಿಗೆ ಶೀಘ್ರ ಶುಭಂ; ಚುಕ್ಕಿತಾರೆ, ಲಕ್ಷ್ಮಿ ಟಿಫಿನ್ ರೂಮ್‌ ಧಾರಾವಾಹಿಗೆ ಸ್ವಾಗತ

Kannada Serials: ಗೀತಾ, ಕಥೆಯೊಂದು ಶುರುವಾಗಿದೆ ಸೀರಿಯಲ್‌ಗಳಿಗೆ ಶೀಘ್ರ ಶುಭಂ; ಚುಕ್ಕಿತಾರೆ, ಲಕ್ಷ್ಮಿ ಟಿಫಿನ್ ರೂಮ್‌ ಧಾರಾವಾಹಿಗೆ ಸ್ವಾಗತ

Praveen Chandra B HT Kannada

Mar 06, 2024 11:00 AM IST

google News

ಮುಕ್ತಾಯದ ಹಂತದಲ್ಲಿ ಕಥೆಯೊಂದು ಶುರುವಾಗಿದೆ, ಗೀತಾ ಸೀರಿಯಲ್‌

    • Kannada TV Serials: ಸ್ಟಾರ್‌ ಸುವರ್ಣ ವಾಹಿನಿಯ ಕಥೆಯೊಂದು ಶುರುವಾಗಿದೆ ಧಾರಾವಾಹಿ, ಕಲರ್ಸ್‌ ಕನ್ನಡದ ಗೀತಾ ಸೀರಿಯಲ್‌ ಶೀಘ್ರದಲ್ಲಿ ಮುಕ್ತಾಯ ಕಾಣಲಿದೆ. ಇವುಗಳ ಜಾಗಕ್ಕೆ ಚುಕ್ಕಿತಾರೆ, ಲಕ್ಷ್ಮಿ ಟಿಫಿನ್ ರೂಮ್‌ ಸೀರಿಯಲ್‌ಗಳು ಆಗಮಿಸಲಿವೆ.
ಮುಕ್ತಾಯದ ಹಂತದಲ್ಲಿ ಕಥೆಯೊಂದು ಶುರುವಾಗಿದೆ, ಗೀತಾ ಸೀರಿಯಲ್‌
ಮುಕ್ತಾಯದ ಹಂತದಲ್ಲಿ ಕಥೆಯೊಂದು ಶುರುವಾಗಿದೆ, ಗೀತಾ ಸೀರಿಯಲ್‌

ಕನ್ನಡ ಕಿರುತೆರೆ ವಾಹಿನಿಗಳಲ್ಲಿ ಸೀರಿಯಲ್‌ಗೆ ಆರಂಭವೆಂಬ ಕೀಲಿಕೈಗೊಟ್ಟರೆ ಸಾಕು. ಅದು ರೈಲಿನಂತೆ ಸಾಗುತ್ತಲೇ ಇರುತ್ತದೆ. ಒಳ್ಳೆಯ ಟಿಆರ್‌ಪಿ ಇದ್ದರೆ ಕಥೆ ಮುಗಿದರೂ ಉಪಕಥೆ ಆರಂಭಿಸಿ ಧಾರಾವಾಹಿ ಬೆಳೆಸಬಹುದು. ಟಿಆರ್‌ಪಿ ಚೆನ್ನಾಗಿಲ್ಲದಿದ್ದರೆ ಸೀರಿಯಲ್‌ನ ಕಥೆ ನೂರು ಎಪಿಸೋಡ್‌ನಷ್ಟು ಬಾಕಿ ಇದ್ದರೂ ಒಂದೈದು ಕಂತಿನಲ್ಲಿ ಕಥೆ ಮುಗಿಸಬಹುದು. ಹಲವು ವರ್ಷಗಳ ಕಾಲ ಒಂದೇ ಸೀರಿಯಲ್‌ ಪ್ರಸಾರವಾಗುತ್ತ ಇರುತ್ತದೆ. ಆದರೆ, ಈಗ ಸೀರಿಯಲ್‌ಗಳ ವಿಷಯದಲ್ಲಿ ವಾಹಿನಿಗಳು, ನಿರ್ದೇಶಕರು ಹೆಚ್ಚು ಗಂಭೀರವಾಗುತ್ತಿದೆ. ಈ ಒಟಿಟಿ ಕಾಲದಲ್ಲಿ ಒಳ್ಳೊಳ್ಳೆಯ ಕಥೆಗಳ ಸೀರಿಯಲ್‌ಗಳಿಗೆ ಆದ್ಯತೆ ನೀಡಲಾಗುತ್ತದೆ. ವಿವಿಧ ವಾಹಿನಿಗಳ ನಡುವೆ ಪೈಪೋಟಿ ಇರುವುದರಿಂದ ಒಂದಕ್ಕಿಂತ ಒಂದು ಉತ್ತಮವಾಗಿರುವಂತಹ ಸೀರಿಯಲ್‌ಗಳನ್ನು ಪರಿಚಯಿಸಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಕನ್ನಡದಲ್ಲಿ ಹಲವು ಸೀರಿಯಲ್‌ಗಳು ಪ್ರಸಾರವಾಗುತ್ತಿವೆ. ಮುಂದಿನ ದಿನಗಳಲ್ಲಿ ಹೊಸ ಸೀರಿಯಲ್‌ಗಳು ಆಗಮಿಸಲು ಸಿದ್ಧವಾಗುತ್ತಿವೆ. ಚುಕ್ಕಿತಾರೆ ಸೀರಿಯಲ್‌ ಸದ್ಯದಲ್ಲಿ ಆರಂಭವಾಗಲಿದೆ. ಲಕ್ಷ್ಮಿ ಟಿಫಿನ್ ರೂಮ್‌ ಸೀರಿಯಲ್‌ ಆರಂಭವಾಗಿದೆ. ಉದಯ ಟಿವಿಯಲ್ಲಿ ಸೂರ್ಯವಂಶ ಸೀರಿಯಲ್‌ ಆರಂಭವಾಗುತ್ತಿದೆ.

ಮುಗಿಯುತ್ತಿದೆ ಕಥೆಯೊಂದು ಶುರುವಾಗಿದೆ

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರದವರೆಗೆ 'ಕಥೆಯೊಂದು ಶುರುವಾಗಿದೆ' ಧಾರಾವಾಹಿ ಪ್ರಸಾರವಾಗುತ್ತಿದೆ. ಈ ಸೀರಿಯಲ್‌ ಈಗ ಮುಕ್ತಾಯದ ಹಂತದಲ್ಲಿದೆ. 2022ರ ನವೆಂಬರ್‌ ತಿಂಗಳಲ್ಲಿ ಈ ಸೀರಿಯಲ್‌ ಆರಂಭವಾಗಿದೆ. ಮೂರು ಪ್ರೇಮಕಥೆ ಇರುವ ಈ ಸೀರಿಯಲ್‌ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿತ್ತು. ಕಥೆಯೊಂದು ಶುರುವಾಗಿದೆ ಕಥೆಯು ಸದ್ಯದಲ್ಲಿಯೇ ಮುಕ್ತಾಯ ಕಾಣಲಿದೆ. ಮಾರ್ಚ್‌ ನಾಲ್ಕರಿಂದ ಲಕ್ಷ್ಮಿ ಟಿಫಿನ್‌ ರೂಂ ಸೀರಿಯಲ್‌ ಆರಂಭವಾಗಿದೆ.

ಗೀತಾ ಬದಲು ಚುಕ್ಕಿತಾರೆ

ಕಲರ್ಸ್‌ ಕನ್ನಡದ ಗೀತಾ ಸೀರಿಯಲ್‌ ಕೂಡ ಮುಕ್ತಾಯದ ಹಂತದಲ್ಲಿದೆ. ಗೀತಾ ಸೀರಿಯಲ್‌ ಸ್ಲಾಟ್‌ನಲ್ಲಿ ಮುಂದಿನ ದಿನಗಳಲ್ಲಿ ಚುಕ್ಕಿತಾರೆ ಸೀರಿಯಲ್‌ ಪ್ರಸಾರವಾಗಲಿದೆ. ಗಾಯಕ ನವೀನ್‌ ಸಜ್ಜು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚುಕ್ಕಿತಾರೆ ಸೀರಿಯಲ್‌ನ ಪ್ರಮೋ ಸಾಕಷ್ಟು ಕುತೂಹಲ ಮೂಡಿಸಿದೆ. ತಂದೆ ಮಗಳ ಬಾಂಧವ್ಯದ ಕಥೆಯನ್ನು ಹೊಂದಿರುವ ಚುಕ್ಕಿತಾರೆ ಸೀರಿಯಲ್‌ನಲ್ಲಿ ಮಹಿತಾ ಎಂಬ ಪುಟ್ಟ ಹುಡುಗಿ ಇದ್ದಾಳೆ. ನನ್ನಮ್ಮ ಸೂಪರ್‌ಸ್ಟಾರ್‌ನಲ್ಲಿ ಎಲ್ಲರ ಗಮನ ಸೆಳೆದಿರುವ ಮಹಿಮಾ ಈ ಸೀರಿಯಲ್‌ನಲ್ಲಿ ನವೀನ್‌ ಸಜ್ಜುಗೆ ಮಗಳಾಗಿ ಪ್ರೇಕ್ಷಕರ ಹೃದಯ ಗೆಲ್ಲುವ ನಿರೀಕ್ಷೆಯಿದೆ. ಇದೇ ಸೀರಿಯಲ್‌ನಲ್ಲಿ ದಿವ್ಯಶ್ರೀ ನಾಯಕಿಯಾಗಲಿದ್ದಾರೆ. ನಾಗಪಂಚಮಿ, ದೇವತೆ, ಲಕ್ಷ್ಮಿ ನಿವಾಸ ಮುಂತಾದ ಸೀರಿಯಲ್‌ನಲ್ಲಿ ದಿವ್ಯಶ್ರೀ ನಟಿಸಿದ್ದರು.

ಇದೇ ರೀತಿ ಹಿಟ್ಲರ್‌ ಕಲ್ಯಾಣ ಸೀರಿಯಲ್‌ ಕೂಡ ಮುಕ್ತಾಯದ ಹಂತದಲ್ಲಿದೆ ಎಂದು ವರದಿಗಳು ತಿಳಿಸಿವೆ. ಒಟ್ಟಾರೆ ಈ ಯುಗಾದಿ ಹಬ್ಬದ ವೇಳೆಗೆ ಹಳೆಬೇರು ಹೊಸಚಿಗುರಿನಂತೆ ಹಳೆ ಸೀರಿಯಲ್‌ಗಳಿಗೆ ಟಾಟಾ ಹೇಳುತ್ತ ಹೊಸ ಸೀರಿಯಲ್‌ಗಳನ್ನು ಸ್ವಾಗತಿಸುವ ಸಮಯಬಂದಿದೆ. ಕಿರುತೆರೆ ವಾಹಿನಿಗಳು ಟಿಆರ್‌ಪಿಗಾಗಿ ಒಳ್ಳೆಯ ಸೀರಿಯಲ್‌ಗಳನ್ನು ಪರಿಚಯಿಸಲು ಪ್ರಯತ್ನಿಸುತ್ತಿವೆ. ಜೀ ಕನ್ನಡದ ಹೊಸ ಸೀರಿಯಲ್‌ ಲಕ್ಷ್ಮಿ ನಿವಾಸ ಸದ್ಯ ಟಿಆರ್‌ಪಿಯಲ್ಲಿ ಟಾಪ್‌ ಸ್ಥಾನ ಪಡೆದಿದೆ. ಪುಟ್ಟಕ್ಕನ ಮಕ್ಕಳು ಎರಡನೇ ಸ್ಥಾನದಲ್ಲಿದೆ. ಶ್ರೀರಸ್ತು ಶುಭಮಸ್ತು, ಸೀತಾ ರಾಮ, ಅಮೃತಧಾರೆ , ಸತ್ಯ, ರಾಮಾಚಾರಿ, ಲಕ್ಷ್ಮೀ ಬಾರಮ್ಮ, ಭಾಗ್ಯಲಕ್ಷ್ಮೀ ಸೀರಿಯಲ್‌ಗಳೂ ಟಿಆರ್‌ಪಿಯಲ್ಲಿ ಉತ್ತಮವಾಗಿಯೇ ಇವೆ. ಇದೀಗ ಆರಂಭವಾಗಲಿರುವ ಹೊಸ ಸೀರಿಯಲ್‌ಗಳು ಈ ಅತ್ಯಧಿಕ ಟಿಆರ್‌ಪಿ ಇರುವ ಸೀರಿಯಲ್‌ಗಳಿಗೆ ಪೈಪೋಟಿ ನೀಡುವುದೇ ಕಾದು ನೋಡಬೇಕಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ