The Kerala Story: ದಿ ಕೇರಳ ಸ್ಟೋರಿ ಸಿನಿಮಾ ವಿವಾದ; ಸಿನಿಮಾ ಬ್ಯಾನ್ ಮಾಡಿದ ತಮಿಳುನಾಡು, ಪಶ್ಚಿಮ ಬಂಗಾಳಕ್ಕೆ ಸುಪ್ರೀಂಕೋರ್ಟ್ ನೋಟಿಸ್
May 13, 2023 06:28 AM IST
'ದಿ ಕೇರಳ ಸ್ಟೋರಿ' ಸಿನಿಮಾ ಬ್ಯಾನ್ ಮಾಡಿದ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳಕ್ಕೆ ಸುಪ್ರೀಂಕೋರ್ಟ್ ನೋಟಿಸ್
- ಸಿನಿಮಾವನ್ನು ನಿಷೇಧಿಸುವ ಅಗತ್ಯ ಏನಿದೆ? ಬೇರೆ ರಾಜ್ಯಗಳಲ್ಲಿ ಜನರು ಸಿನಿಮಾ ನೋಡುತ್ತಿದ್ದಾರೆ. ಅಲ್ಲೆಲ್ಲಾ ಏನೂ ಸಮಸ್ಯೆ ಉಂಟಾಗಿಲ್ಲ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ಟ್ರೇಲರ್ ರಿಲೀಸ್ ಆದಾಗಿನಿಂದ 'ದಿ ಕೇರಳ ಸ್ಟೋರಿ' ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ಸಿನಿಮಾ ಮೇ 5 ರಂದು ರಿಲೀಸ್ ಆಗಿದ್ದು ಬಹಳಷ್ಟು ಜನರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಜೊತೆಗೆ ಆಕ್ರೋಶ ಹೊರ ಹಾಕಿದ್ದಾರೆ. ಆದರೆ ಪಶ್ಚಿಮ ಬಂಗಾಳದಲ್ಲಿ ಮಾತ್ರ ಸರ್ಕಾರ ಸಿನಿಮಾವನ್ನು ಬ್ಯಾನ್ ಮಾಡಿದ್ದುಈ ಸಂಬಂಧ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.
ಪಶ್ಚಿಮ ಬಂಗಾಳ ಸರ್ಕಾರವು 'ದಿ ಕೇರಳ ಸ್ಟೋರಿ' ಸಿನಿಮಾವನ್ನು ಬ್ಯಾನ್ ಮಾಡಿದರೆ ತಮಿಳುನಾಡಿನಲ್ಲಿ ಜನರೇ ಸಿನಿಮಾವನ್ನು ನಿಷೇಧಿಸಿದ್ದಾರೆ. ಜನರು ಸಿನಿಮಾ ನೋಡಲು ಚಿತ್ರಮಂದಿರತ್ತ ಬರುತ್ತಿಲ್ಲ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಸ್ಟಾರ್ ಕಲಾವಿದರು ಇಲ್ಲ ಎಂಬ ಕಾರಣಕ್ಕೆ ಥಿಯೇಟರ್ ಮಾಲೀಕರು ಸಿನಿಮಾ ಪ್ರದರ್ಶನ ನಿಲ್ಲಿಸಿದ್ದಾರೆ ಎಂದು ತಮಿಳುನಾಡು ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಇನ್ನು ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಿದರೆ ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಪ. ಬಂಗಾಳ ಪರ ವಕೀಲರು ಕಾರಣ ನೀಡಿದ್ದರು. ಆದರೆ ಸಿನಿಮಾವನ್ನು ನಿಷೇಧಿಸುವ ಅಗತ್ಯ ಏನಿದೆ? ಬೇರೆ ರಾಜ್ಯಗಳಲ್ಲಿ ಜನರು ಸಿನಿಮಾ ನೋಡುತ್ತಿದ್ದಾರೆ. ಅಲ್ಲೆಲ್ಲಾ ಏನೂ ಸಮಸ್ಯೆ ಉಂಟಾಗಿಲ್ಲ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಹಾಗೂ ಪಿ.ಎಸ್. ನರಸಿಂಹ ಅವರಿದ್ದ ಪೀಠ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳಕ್ಕೆ ನೋಟಿಸ್ ಜಾರಿ ಮಾಡಿದೆ.
ಇಷ್ಟೆಲ್ಲಾ ವಿವಾದಗಳ ನಡುವೆ ಮಧ್ಯಪ್ರದೇಶ, ಹರಿಯಾಣ ಹಾಗೂ ಉತ್ತರ ಪ್ರದೇಶ ಸರ್ಕಾರ ದಿ ಕೇರಳ ಸ್ಟೋರಿ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಿವೆ. ನಿಧಾನ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ ಈಗ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಜನರು ಇಷ್ಟಪಟ್ಟು ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಸಿನಿಮಾ ಮೆಚ್ಚಿದ್ದಾರೆ. ಸಿನಿಮಾ ಬಹಳ ಚೆನ್ನಾಗಿದೆ ಎಲ್ಲಾ ಹೆಣ್ಣು ಮಕ್ಕಳು ಈ ಸಿನಿಮಾ ನೋಡಬೇಕು ಎಂಬ ಸಂದೇಶ ನೀಡುತ್ತಿದ್ದಾರೆ. ಸಿನಿಮಾ ಇದುವರೆಗೂ 80 ಕೋಟೀಗೂ ಹೆಚ್ಚು ಲಾಭ ಮಾಡಿದೆ. ಒಟ್ಟಾರೆ ವಿಶ್ವಾದ್ಯಂತ ಸುಮಾರು 40 ದೇಶಗಳಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆಗಿದೆ.
ಮತ್ತೊಂದೆಡೆ ಕೇರಳ ಸೇರಿದಂತೆ ಇನ್ನಿತರ ಕಡೆ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಸಿನಿಮಾವನ್ನು ಬ್ಯಾನ್ ಮಾಡುವಂತೆ ಒತ್ತಾಯ ಹೇರಿದ್ದವು. ಆದರೆ ಸುಪ್ರೀಂಕೋರ್ಟ್ ಮಾತ್ರ ಮಧ್ಯೆ ಪ್ರವೇಶಿಸಿ ಸಿನಿಮಾ ಏಕೆ ಬ್ಯಾನ್ ಮಾಡಬೇಕು ಎಂದು ಪ್ರಶ್ನಿಸುತ್ತಿದೆ. 'ದಿ ಕೇರಳ ಸ್ಟೋರಿ' ಚಿತ್ರವನ್ನು ಸನ್‌ಶೈನ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್, ವಿಪುಲ್ ಅಮೃತ್‌ಲಾಲ್ ಶಾ ಪ್ರೊಡಕ್ಷನ್ಸ್ ಬ್ಯಾನರ್ ಜೊತೆ ಸೇರಿ ನಿರ್ಮಿಸಿದ್ದು ಸುದಿಪ್ತೋ ಸೇನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಾಲಿನಿ ಪಾತ್ರದಲ್ಲಿ ಅದಾ ಶರ್ಮಾ ನಟಿಸಿದ್ದಾರೆ. ಜೊತೆಗೆ ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ದಿ ಇದ್ನಾನಿ, ಕನ್ನಡಿಗ ವಿಜಯ್ ಕೃಷ್ಣ, ಪ್ರಣಯ್ ಪಚೊರಿ, ಪ್ರಣವ್ ಮಿಶ್ರಾ ಹಾಗೂ ಇನ್ನಿತರರು ನಟಿಸಿದ್ದಾರೆ. ಮೇ 5 ರಂದು ಸಿನಿಮಾ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದೆ.