The Kerala Story: ಹೆಂಡತಿಗಾಗಿ ದುಃಖಿಸಿದ ಶಿವ ಹೇಗೆ ದೇವರಾಗುತ್ತಾನೆ; ವಿವಾದದ ಬೆಂಕಿ ಹಚ್ಚಿದ ದಿ ಕೇರಳ ಸ್ಟೋರಿ ಸಿನಿಮಾ; ಬ್ಯಾನ್‌ಗೆ ಆಗ್ರಹ
ಶಾಲಿನಿ ಎಂಬ ಯುವತಿಯನ್ನು ಹೆತ್ತವರು ಹಾಸ್ಟೆಲ್ ಸೇರಿಸುತ್ತಾರೆ. ಅಲ್ಲಿ ಆ ಯುವತಿಗೆ ಮುಸ್ಲಿಂ ಯುವತಿಯ ಪರಿಚಯವಾಗುತ್ತದೆ. ನಿಮ್ಮ ಮೆಚ್ಚಿನ ದೇವರು ಯಾರು ಎಂದು ಮುಸ್ಲಿಂ ಯವತಿ ಕೇಳಿದಾಗ ಶಿವಭಕ್ತೆಯಾದ ಶಾಲಿನಿ, ಶಿವನ ಹೆಸರು ಹೇಳುತ್ತಾಳೆ. ''ಸಾವನ್ನಪ್ಪಿದ ಪತ್ನಿಗಾಗಿ ಸಾಮಾನ್ಯ ಮನುಷ್ಯನಂತೆ ಅಳುವ ಶಿವ ಹೇಗೆ ದೇವರಾಗುತ್ತಾನೆ?'' ಎಂದು ಮುಸ್ಲಿಂ ಯುವತಿ ಕೇಳುತ್ತಾಳೆ.
ಸಿನಿಮಾ ಟೈಟಲ್‌ಗಳು, ಡೈಲಾಗ್, ಕಥೆಗಳು ವಿವಾದಕ್ಕೀಡಾಗುವ ಸನ್ನಿವೇಶಗಳು ಇಂದು ನಿನ್ನೆಯದಲ್ಲ. ಇತ್ತೀಚೆಗೆ ಬಾಲಿವುಡ್‌ನ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಸಿನಿಮಾ ವಿವಾದಕ್ಕೆ ಒಳಗಾಗಿತ್ತು. ಇದೇ ವಿಚಾರವಾಗಿ ಸಾಕಷ್ಟು ಪರ ವಿರೋಧ ಚರ್ಚೆ ಕೂಡಾ ನಡೆದಿತ್ತು. ಇದೀಗ ದಿ ಕೇರಳ ಸ್ಟೋರಿ ಕೂಡಾ ಇದೇ ಸಾಲಿಗೆ ಬಂದು ನಿಂತಿದೆ.
'ದಿ ಕೇರಳ ಸ್ಟೋರಿ' ಚಿತ್ರತಂಡ ಬುಧವಾರ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಒಂದು ದಿನದಲ್ಲಿ 5.4 ಮಿಲಿಯನ್ ಮಂದಿ ಈ ಟ್ರೇಲರ್ ವೀಕ್ಷಿಸಿದ್ದಾರೆ. ಟ್ರೇಲರ್‌ನಲ್ಲಿರುವ ಅಂಶಗಳು ಕೆಲವರನ್ನು ಕೆರಳಿಸಿದೆ. ಈ ಸಿನಿಮಾವನ್ನು ಬ್ಯಾನ್ ಮಾಡಲೇಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಇದು ಬಹುತೇಕ ಕೇರಳ ಹಿನ್ನೆಲೆಯಲ್ಲಿ ತೆಗೆದ ಸಿನಿಮಾವಾಗಿದ್ದು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಸೇರುವ ಶಾಲಿನಿ ಉನ್ನಿಕೃಷ್ಣನ್ ಎಂಬ ಹಿಂದೂ ಯವತಿಯೊಂದಿಗೆ ಅದೇ ಹಾಸ್ಟೆಲ್‌ನ ಮುಸ್ಲಿಂ ಯುವತಿ ಆಡುವ ಮಾತಿನ ಡೈಲಾಗ್‌ಗಳು ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಇದು ನೈಜ ಘಟನೆಗಳ ಆಧಾರಿತ ಸಿನಿಮಾ ಎಂದು ಚಿತ್ರತಂಡ ಟ್ರೇಲರ್ ಆರಂಭದಲ್ಲಿ ಹೇಳಿದೆ. ಶಾಲಿನಿ ಎಂಬ ಯುವತಿಯನ್ನು ಹೆತ್ತವರು ಹಾಸ್ಟೆಲ್ ಸೇರಿಸುತ್ತಾರೆ. ಅಲ್ಲಿ ಆ ಯುವತಿಗೆ ಮುಸ್ಲಿಂ ಯುವತಿಯ ಪರಿಚಯವಾಗುತ್ತದೆ. ನಿಮ್ಮ ಮೆಚ್ಚಿನ ದೇವರು ಯಾರು ಎಂದು ಮುಸ್ಲಿಂ ಯವತಿ ಕೇಳಿದಾಗ ಶಿವಭಕ್ತೆಯಾದ ಶಾಲಿನಿ, ಶಿವನ ಹೆಸರು ಹೇಳುತ್ತಾಳೆ. ''ಸಾವನ್ನಪ್ಪಿದ ಪತ್ನಿಗಾಗಿ ಸಾಮಾನ್ಯ ಮನುಷ್ಯನಂತೆ ಅಳುವ ಶಿವ ಹೇಗೆ ದೇವರಾಗುತ್ತಾನೆ?'' ಎಂದು ಮುಸ್ಲಿಂ ಯುವತಿ ಕೇಳುತ್ತಾಳೆ. ಹಾಗೇ ಶಾಲಿನಿಗೆ ಮಾಲ್‌ವೊಂದರಲ್ಲಿ ಅವಮಾನವಾದಾಗ ಅದೇ ಮುಸ್ಲಿಂ ಯುವತಿ, ''ಹಿಜಾಬ್ ಧರಿಸಿದ ಯಾವುದೇ ಮಹಿಳೆಯನ್ನು ಯಾರೂ ಅತ್ಯಾಚಾರ ಮಾಡಲಾಗುವುದಿಲ್ಲ, ಯಾರೂ ರೇಗಿಸುವುದೂ ಇಲ್ಲ, ಏಕೆಂದರೆ ಅಲ್ಲಾಹ್ ಅವರನ್ನು ಯಾವಾಗಲೂ ರಕ್ಷಿಸುತ್ತಾರೆ'' ಎಂಬ ಮಾತುಗಳನ್ನು ಆಡಿ, ಶಾಲಿನಿ ಮುಸ್ಲಿಂ ಧರ್ಮಕ್ಕೆ ಸೇರುವಂತೆ ಪ್ರೇರೇಪಿಸುತ್ತಾಳೆ. ಮುಸ್ಲಿಂ ಯುವತಿಯ ಪಾತ್ರದ ಈ ಡೈಲಾಗ್‌ಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಯುವತಿಯನ್ನು ಪರಿಚಯ ಮಾಡಿಕೊಂಡು ಸಾಧ್ಯವಾದರೆ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಎಂದು ಭಯೋತ್ಪಾದನೆ ಸಂಘಟನೆಯ ಮುಖ್ಯಸ್ಥರು ಯುವಕರ ತಲೆಗೆ ತುಂಬುವ ಡೈಲಾಗ್‌ಗಳು ಕೂಡಾ ಟ್ರೇಲರ್‌ನಲ್ಲಿವೆ. ಮತ್ತೊಂದೆಡೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವ ಹಿಂದೂ ಯುವತಿ ಶಾಲಿನಿ ಮುಸ್ಲಿಂ ಧರ್ಮದ ಯುವಕನನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ನಂತರ ಉಗ್ರ ಸಂಘಟನೆ ಸೇರುತ್ತಾಳೆ. ಟ್ರೇಲರ್‌ನಲ್ಲಿರುವ ಈ ಅಂಶಗಳು ಈಗ ಭಾರೀ ವಿವಾದ ಸೃಷ್ಟಿಸಿದೆ.
ಈ ಚಿತ್ರದ ಮೂಲಕ ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆ? ಈ ಸಿನಿಮಾದಿಂದ ಕೇರಳ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ಇಂತಹ ಸಿನಿಮಾಗಳು ಬಿಡುಗಡೆ ಆದರೆ ದೇಶಕ್ಕೆ ಕೂಡಾ ಬಹಳ ಸಮಸ್ಯೆ ಇದೆ. ಆದ್ದರಿಂದ ಇಂತಹ ಚಿತ್ರಗಳನ್ನು ಬ್ಯಾನ್ ಮಾಡಬೇಕೆಂದು ಕೆಲವು ರಾಜಕೀಯ ಮುಖಂಡರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಪತ್ರ ಬರೆದಿದ್ದಾರೆ.
'ದಿ ಕೇರಳ ಸ್ಟೋರಿ' ಚಿತ್ರವನ್ನು ಸನ್‌ಶೈನ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್, ವಿಪುಲ್ ಅಮೃತ್‌ಲಾಲ್ ಶಾ ಪ್ರೊಡಕ್ಷನ್ಸ್ ಬ್ಯಾನರ್ ಜೊತೆ ಸೇರಿ ನಿರ್ಮಿಸಿದ್ದು ಸುದಿಪ್ತೋ ಸೇನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಾಲಿನಿ ಪಾತ್ರದಲ್ಲಿ ಅದಾ ಶರ್ಮಾ ನಟಿಸಿದ್ದಾರೆ. ಜೊತೆಗೆ ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ದಿ ಇದ್ನಾನಿ, ವಿಜಯ್ ಕೃಷ್ಣ, ಪ್ರಣಯ್ ಪಚೊರಿ, ಪ್ರಣವ್ ಮಿಶ್ರಾ ಹಾಗೂ ಇನ್ನಿತರರು ನಟಿಸಿದ್ದಾರೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ತಯಾರಾಗಿರುವ ಸಿನಿಮಾ ಮೇ 5 ರಂದು ತೆರೆ ಕಾಣುತ್ತಿದೆ.