The Kerala Story: ಡೈಲಾಗ್‌ಗಳಿಂದಲೇ ವಿವಾದ ಸೃಷ್ಟಿಸಿದ ದಿ ಕೇರಳ ಸ್ಟೋರಿ ಚಿತ್ರದ ನಟ, ಕನ್ನಡ ಹುಡುಗ ವಿಜಯ ಕೃಷ್ಣ ಸಂದರ್ಶನ
ಕನ್ನಡ ಸುದ್ದಿ  /  ಮನರಂಜನೆ  /  The Kerala Story: ಡೈಲಾಗ್‌ಗಳಿಂದಲೇ ವಿವಾದ ಸೃಷ್ಟಿಸಿದ ದಿ ಕೇರಳ ಸ್ಟೋರಿ ಚಿತ್ರದ ನಟ, ಕನ್ನಡ ಹುಡುಗ ವಿಜಯ ಕೃಷ್ಣ ಸಂದರ್ಶನ

The Kerala Story: ಡೈಲಾಗ್‌ಗಳಿಂದಲೇ ವಿವಾದ ಸೃಷ್ಟಿಸಿದ ದಿ ಕೇರಳ ಸ್ಟೋರಿ ಚಿತ್ರದ ನಟ, ಕನ್ನಡ ಹುಡುಗ ವಿಜಯ ಕೃಷ್ಣ ಸಂದರ್ಶನ

'ಆಕ್ಟ್ 1978' ನಾನು ನಟಿಸಿದ ಮೊದಲ ಸಿನಿಮಾ. ಅದರ ನಿರ್ದೇಶಕರು ಮಂಸೋರೆ. ಅವರು ನನಗೆ ಚಿತ್ರಕಲಾ ಪರಿಷತ್‌ನಲ್ಲಿ ಸೀನಿಯರ್ ಆಗಿದ್ದರು. ಅದೊಂದು ಸಣ್ಣ ಪಾತ್ರ. ನಂತರ ಕನ್ನಡತಿ ಧಾರಾವಾಹಿಯಲ್ಲಿ ಡಾಕ್ಟರ್ ದೇವ್ ಪಾತ್ರ. ಆ ಮೇಲೆ ಸಿದ್ಧಾಂತ್ ವೆಬ್ ಸಿರೀಸ್ ಕ್ಯಾಬರೆಯಲ್ಲಿ ಅಭಿನಯಿಸಿದೆ.

ನಟ ವಿಜಯ್‌ ಕೃಷ್ಣ
ನಟ ವಿಜಯ್‌ ಕೃಷ್ಣ

ಆ ನಟನ ಹೆಸರು ವಿಜಯ ಕೃಷ್ಣ. ಹುಟ್ಟಿ- ಬೆಳೆದದ್ದೆಲ್ಲ ಕರ್ನಾಟಕದ ಬೆಂಗಳೂರಿನಲ್ಲಿ. ತಂದೆ ಹಾಸನದ ಕೇರಳಾಪುರದವರಾದರೆ, ತಾಯಿ ಬೆಂಗಳೂರಿನವರು. ಓದಿದ್ದು ಕುಮಾರನ್ಸ್ ಚಿಲ್ಡ್ರನ್ ಹೋಮ್ ಶಾಲೆಯಲ್ಲಿ. ಸದ್ಯಕ್ಕೆ 'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಚಿತ್ರದ ಟ್ರೇಲರ್ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಮಾನವ ಸಾಗಣೆಯ ಮುಖ್ಯ ಕಥಾವಸ್ತು ಇರುವ ಈ ಸಿನಿಮಾ ಮೇ 5 ರಂದು ಬೆಳ್ಳಿ ತೆರೆ ಮೇಲೆ ಬರಲು ಸಿದ್ಧವಾಗುತ್ತಿದೆ.

'ದಿ ಕೇರಳ ಸ್ಟೋರಿ' ಚಿತ್ರವನ್ನು ಸುದಿಪ್ತೋ ಸೇನ್ ನಿರ್ದೇಶನ ಮಾಡಿದ್ದರೆ, ವಿಪುಲ್ ಅಮೃತ್ ಲಾಲ್ ಶಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಕಥಾವಸ್ತು ವಿಪರೀತ ಸದ್ದು ಮಾಡುತ್ತಿದೆ. ಚಿತ್ರದ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ವಿಜಯ್ ಕೃಷ್ಣ ಕನ್ನಡದ ಹುಡುಗ, 5́ʼ11" ಅಡಿ ಉದ್ದ ಇರುವ ಸ್ಪುರದ್ರೂಪಿ. ಅಂದ ಹಾಗೆ 'ದಿ ಕೇರಳ ಸ್ಟೋರಿ' ಸಿನಿಮಾ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಬಿಡುಗಡೆಗೆ ಒಂದು ವಾರಕ್ಕೆ ಮುನ್ನ ಆ ಚಿತ್ರದ ಪ್ರಮುಖ ಪಾತ್ರಧಾರಿ, ಕನ್ನಡಿಗ ವಿಜಯ್ ಕೃಷ್ಣ ಅವರ ಸಂದರ್ಶನವನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡದಿಂದ ಮಾಡಲಾಗಿದೆ. ಆ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರಶ್ನೆ: ಕೇರಳ ಸ್ಟೋರಿ ಸಿನಿಮಾದಲ್ಲಿ ನೀವು ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ಹೇಳಬಹುದಾ?

ವಿಜಯ್ ಕೃಷ್ಣ: ಈ ಚಿತ್ರದಲ್ಲಿ ನನ್ನದು ಪ್ರಮುಖ ಪಾತ್ರ ಇದೆ. ಆದರೆ ಅದರ ಬಗ್ಗೆ ನಾನು ಹೇಳುವಂತಿಲ್ಲ.ಇದು ನಿರ್ಮಾಣ ಸಂಸ್ಥೆ, ನಿರ್ದೇಶಕರಿಂದ ಇಡೀ ತಂಡಕ್ಕೆ ಇರುವ ಸೂಚನೆ. ಆದ್ದರಿಂದ ನಾವದನ್ನು ಅನುಸರಿಸಲೇ ಬೇಕು. ಚಿತ್ರ ಬಿಡುಗಡೆ ಆದ ನಂತರ ನೀವೇ ನನ್ನ ಪಾತ್ರದ ಬಗ್ಗೆ ಹೇಳಬೇಕು.

'ದಿ ಕೇರಳ ಸ್ಟೋರಿ' ಚಿತ್ರದಲ್ಲಿ ವಿಜಯ್‌ ಕೃಷ್ಣ
'ದಿ ಕೇರಳ ಸ್ಟೋರಿ' ಚಿತ್ರದಲ್ಲಿ ವಿಜಯ್‌ ಕೃಷ್ಣ

ಪ್ರಶ್ನೆ: ನಿಮ್ಮ ಮೂಲ ಹೆಸರು ಇದೇನಾ ಅಥವಾ ಸಿನಿಮಾಗೋಸ್ಕರ ಬದಲಾಯಿಸಿಕೊಂಡಿದ್ದೀರಾ? ಮತ್ತು ನೀವೀಗ ಎಲ್ಲಿದ್ದೀರಾ ಕರ್ನಾಟಕ ಅಥವಾ ಮುಂಬೈ?

ವಿ.ಕೃ: ನನ್ನ ತಂದೆ-ತಾಯಿ ಇಟ್ಟ ಹೆಸರೇ ವಿಜಯ್ ಕೃಷ್ಣ. ಅದನ್ನೇ ನಾನು ಎಲ್ಲ ಕಡೆ ಬಳಸುತ್ತಾ ಇದ್ದೀನಿ. ಇನ್ನು ನಾನೀಗ ಮುಂಬೈನಲ್ಲೇ ಇದ್ದೀನಿ.

ಪ್ರಶ್ನೆ: ನಿಮ್ಮ ಹಿನ್ನೆಲೆ ಬಗ್ಗೆ ಹೇಳ್ತೀರಾ? ನಟನೆ ತರಬೇತಿ ತೆಗೆದುಕೊಂಡಿದ್ದೀರಾ?

ವಿ.ಕೃ: ನಾನು 15 ವರ್ಷಗಳಿಂದ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗಲೂ ಸಮಯ ಸಿಕ್ಕಾಗಲೆಲ್ಲ ನಾಟಕಗಳಲ್ಲಿ ಅಭಿನಯಿಸುತ್ತಾ ಇರ್ತೀನಿ. ಇವೇ ನನ್ನ ಪಾಲಿಗೆ ತರಬೇತಿ. ಬೆಂಗಳೂರು, ಕೇರಳ , ಪಾಂಡಿಚೇರಿ , ಗೋವಾ , ಮುಂಬೈ, ಪಶ್ಚಿಮ ಬಂಗಾಳದಲ್ಲಿ ಕೆಲವು ಕಡೆ ಹೀಗೆ ನನಗೆ ರಂಗಭೂಮಿ ಮೇಲೆ ಪ್ರೀತಿ ಬಂದ ಮೇಲೆ, ಅಂದರೆ ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ನಟನೆ ಮಾಡಿಕೊಂಡು ಬಂದಿದ್ದೀನಿ.

ಪ್ರಶ್ನೆ: ನೀವು ನಟಿಸಿದ ಪ್ರಮುಖ ತಂಡಗಳ ಹೆಸರು ಹೇಳ್ತೀರಾ?

ವಿ.ಕೃ: ವೀಮೂವ್ ಅನ್ನೋ ಅದ್ಭುತ ತಂಡ ಇದೆ. ರಾಜಮಾರ್ಗ ಕಲಾ ಸಂಸ್ಕೃತಿ ಅವರ ಜತೆಗೆ ನನ್ನ ವೃತ್ತಿ ಜೀವನ ಶುರು ಮಾಡಿದ್ದು. ಇಂಡಿಯನ್ ಎನ್‌ಸೆಂಬಲ್ ಅಂತ ಇದೆ. ವಿಶುಯಲ್ ರೆಸ್ಪಿರೇಷನ್ ಅಂತ ಟೀಮ್ ಇದೆ. ಲೈಟ್ಸ್ ಆಫ್.. ಹೀಗೆ ಸುಮಾರು ತಂಡಗಳಿವೆ. ಈ ಎಲ್ಲ ತಂಡದಲ್ಲೂ ನಾನು ಕೆಲಸ ಮಾಡಿದ್ದೀನಿ.

ಪ್ರಶ್ನೆ: ನೀವು ಕೆಲಸ ಮಾಡಿದ ನಿರ್ದೇಶಕರ ಬಗ್ಗೆ ಹೇಳ್ತೀರಾ?

ವಿ.ಕೃ: ಸಿದ್ಧಾಂತ್ ಸುಂದರ್ ಅಂತ ಇದ್ದಾರೆ, ಅವರು ಕನ್ನಡ ಸಿನಿಮಾ ಮಾಡ್ತಾ ಇದ್ದಾರೆ. ಅವರು ಗಾಯಕರೂ ಹೌದು. ಲೈಟ್ಸ್ ಆಫ್ ಅನ್ನೋದು ಅವರು ನಡೆಸುತ್ತಿರುವ ತಂಡದ ಹೆಸರು. ಅವರ ಜತೆಗೆ ಕ್ಯಾಬರೆ ಅನ್ನೋ ವೆಬ್ ಸಿರೀಸ್ ಬಿಡುಗಡೆ ಆಯ್ತು. ಅದರ ನಿರ್ದೇಶಕರು ಅವರು. ಯೋಗೇಶ್ ಮಾಸ್ಟರ್, ಅಭಿಷೇಕ್ ಅಯ್ಯಂಗಾರ್ ಅವರ ಜತೆ ಕೆಲಸ ಮಾಡಿದ್ದೀನಿ. ಅವರೂ ಬಹಳ ಒಳ್ಳೆ ನಿರ್ದೇಶಕರು. ಇನ್ನು ಅಭಿಷೇಕ್ ಮಜುಂದಾರ್ ಅವರು ನಿರ್ದೇಶಕರ ತರಬೇತಿ ನಡೆಸುತ್ತಾ ಬಂದಿದ್ದಾರೆ. ಅದರಲ್ಲಿ ಭಾಗಿಯಾಗಿದ್ದೀನಿ. ಇನ್ನು ಪ್ರಮುಖವಾಗಿ ಹೇಳಬೇಕಾದ ಹೆಸರು ವಿಜಯ್ ಪದಕಿ. ಅವರು ಬೆಂಗಳೂರು ಲಿಟ್ಲ್ ಥಿಯೇಟರ್ ಅಂತ ನಡೆಸುತ್ತಾರೆ. ಬೆಂಗಳೂರಿನ ಅತ್ಯಂತ ಹಳೆಯ ರಂಗಸಂಸ್ಥೆಗಳಲ್ಲಿ ಇದೂ ಒಂದು. ಇತ್ತೀಚೆಗೆ ಪ್ರಕಾಶ್ ಬೆಳವಾಡಿ ಅವರ ನಾಟಕದಲ್ಲಿ ಅಭಿನಯಿಸಿದ್ದೆ. ಇನ್ವೆಸ್ಟಿಗೇಷನ್ ಅಂತ ನಾಟಕದ ಹೆಸರು. ಅದು ರಂಗಶಂಕರದಲ್ಲಿ ನಡೆಯಿತು. ಒಟ್ಟು ಇದುವರೆಗೆ ನೂರಕ್ಕೂ ಹೆಚ್ಚು ನಾಟಕ, 400-500 ಪ್ರದರ್ಶನಗಳಲ್ಲಿ ಭಾಗಿ ಆಗಿದ್ದೀನಿ.

ಬೆಂಗಳೂರು ಹುಡುಗ ವಿಜಯ್‌ ಕೃಷ್ಣ
ಬೆಂಗಳೂರು ಹುಡುಗ ವಿಜಯ್‌ ಕೃಷ್ಣ

ಪ್ರಶ್ನೆ: ನಿಮಗೆ ಎಷ್ಟು ಭಾಷೆ ಮಾತನಾಡುವುದಕ್ಕೆ ಬರುತ್ತೆ ಮತ್ತು ಇವೆಲ್ಲದರಲ್ಲೂ ನೀವೇ ಡಬ್ಬಿಂಗ್ ಮಾಡಬಲ್ಲಿರಾ?

ವಿ.ಕೃ: ನನಗೆ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಬರುತ್ತೆ. ಈ ಎಲ್ಲ ಭಾಷೆಗಳಲ್ಲೂ ನಾನೇ ಡಬ್ಬಿಂಗ್ ಮಾಡ್ತೀನಿ.

ಪ್ರಶ್ನೆ: ನೀವು ಈ ತನಕ ಮಾಡಿರುವ ಧಾರಾವಾಹಿ, ಸಿನಿಮಾ, ವೆಬ್ ಸಿರೀಸ್ ಹೆಸರುಗಳನ್ನು ಹೇಳ್ತೀರಾ?

ವಿ.ಕೃ: ನಾನು ನಟನೆ ಆರಂಭಿಸಿದ್ದು ಧಾರಾವಾಹಿಗಳ ಮೂಲಕ. ಅದಕ್ಕೆ ಮುಂಚೆ ಶಾರ್ಟ್ ಫಿಲಂಸ್ ಬಹಳ ಮಾಡಿದ್ದೀನಿ. ನಾನು ಮೊದಲಿಗೆ ಮಾಡಿದ್ದು ಆಕ್ಟ್ 1978 ಅನ್ನೋ ಸಿನಿಮಾ. ಅದರ ನಿರ್ದೇಶಕರು ಮಂಸೋರೆ. ಅವರು ನನಗೆ ಚಿತ್ರಕಲಾ ಪರಿಷತ್‌ನಲ್ಲಿ ಸೀನಿಯರ್ ಆಗಿದ್ದರು. ಅದೊಂದು ಸಣ್ಣ ಪಾತ್ರ. ನಂತರ ಕನ್ನಡತಿ ಧಾರಾವಾಹಿಯಲ್ಲಿ ಡಾಕ್ಟರ್ ದೇವ್ ಪಾತ್ರ. ಆ ಮೇಲೆ ಸಿದ್ಧಾಂತ್ ವೆಬ್ ಸಿರೀಸ್ ಕ್ಯಾಬರೆಯಲ್ಲಿ ಅಭಿನಯಿಸಿದೆ. ಅದೇ ಸಮಯದಲ್ಲೇ ಸಿನಿಮಾ, ಧಾರಾವಾಹಿ, ವೆಬ್ ಸಿರೀಸ್‌ಗಳಿಗೆ ಆಡಿಷನ್ ನೀಡ್ತಿದ್ದೆ. ಹಾಗೆ ಕೊಡುವಾಗಲೇ ನನಗೆ ಸಿಕ್ಕಿದ್ದು ಅವರೋಧ್ 2. ಅದರಲ್ಲಿ ನನ್ನದು ಇಮ್ತಿಯಾಜ್ ಅಂತ ಒಬ್ಬ ಮಿಲಿಟರಿ ಆಫೀಸರ್ ಪಾತ್ರ.

ಪ್ರಶ್ನೆ: ಆ ಪಾತ್ರದ ಅನುಭವ, ಸಿದ್ಧತೆ ಹೇಗಿತ್ತು?

ವಿ.ಕೃ: ಕ್ಯಾಬರೆ ವೆಬ್ ಸಿರೀಸ್ ಮುಗಿಸಿ 2-3 ತಿಂಗಳಾಗಿತ್ತು. ಆಗ 70 ಕೆಜಿ ತೂಕ ಇದ್ದ ನಾನು, ಆ ಪಾತ್ರಕ್ಕಾಗಿ 95 ಕೆಜಿ ಆಗಬೇಕಿತ್ತು. ದಿನಕ್ಕೆ ಎರಡು ಹೊತ್ತು ಜಿಮ್ ವರ್ಕೌಟ್, ಡಯೆಟ್, ಕಿಕ್ ಬಾಕ್ಸಿಂಗ್ ಟ್ರೇನಿಂಗ್… ಹೀಗೆ ನಾಲ್ಕೈದು ತಿಂಗಳ ಆ ಸಿದ್ಧತೆಯೇ ಅದ್ಭುತವಾದ ಅನುಭವ.

ಪ್ರಶ್ನೆ: ನೀವು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದು ಇದೆಯಾ?

ವಿ.ಕೃ: ಹೌದು, ಎಂಟಿಆರ್, ತನಿಷ್ಕ್, ಒನ್ ಕಾರ್ಡ್ ಹೀಗೆ ಸುಮಾರು ಜಾಹೀರಾತುಗಳನ್ನು ಮಾಡಿದ್ದೀನಿ.

ಪ್ರಶ್ನೆ: ವಾಪಸ್ ಕನ್ನಡದಲ್ಲಿ ಸಿನಿಮಾ, ಧಾರಾವಾಹಿ, ವೆಬ್ ಸಿರೀಸ್ ಅಂತೇನಾದರೂ ಅವಕಾಶ ಸಿಕ್ಕರೆ ಅಭಿನಯಿಸ್ತೀರಾ?

ವಿ.ಕೃ: ಖಂಡಿತವಾಗಿಯೂ ಅಭಿನಯಿಸ್ತೀನಿ. ನಾನು ನಟನಾಗಿ ಒಳ್ಳೆ ಪಾತ್ರ, ಕಥೆಗಾಗಿ ಎದುರು ನೋಡ್ತೀನಿ. ಅದು ಬಿಟ್ಟು ಸಿನಿಮಾ, ಧಾರಾವಾಹಿ ಅಥವಾ ವೆಬ್ ಸಿರೀಸ್ ಅಂತ ನೋಡಲ್ಲ. ಅವಕಾಶ ಅಂತ ಸಿಕ್ಕರೆ ಖಂಡಿತ ಮಾಡ್ತೀನಿ. ನಾನೀಗ 2-3 ಪ್ರಾಜೆಕ್ಟ್‌ಗಳ ಬಿಡುಗಡೆಗೋಸ್ಕರ ಕಾಯ್ತಿದ್ದೀನಿ. ಅದರಲ್ಲಿ ಕನ್ನಡದ ಸಿನಿಮಾ ಕೂಡ ಒಂದಿದೆ. ಅದು ಬಹಳ ಇಂಟರೆಸ್ಟಿಂಗ್ ಸಬ್ಜೆಕ್ಟ್. ಅದರ ಬಗ್ಗೆ ಕೂಡ ಮುಂದೆ ನಿಮ್ಮ ಜತೆ ಮಾಹಿತಿ ಹಂಚಿಕೊಳ್ತೀನಿ.

ಪ್ರಶ್ನೆ: ನಿಮ್ಮನ್ನು ಸಂಪರ್ಕಿಸಬೇಕು ಅಂದರೆ ಹೇಗೆ ಅನ್ನೋದು ತಿಳಿಸ್ತೀರಾ?

ವಿ.ಕೃ: ನನ್ನ ಇ- ಮೇಲ್ ಐಡಿ Itsvijaykrishna.official@gmail.com

- ಸಂದರ್ಶನ: ಶ್ರೀನಿವಾಸ ಮಠ

Whats_app_banner