ಇನ್ಮೇಲೆ ಸೆಲೆಬ್ರಿಟಿ ಜಾತಕ ವಿಶ್ಲೇಷಣೆಯ ಸಹವಾಸಕ್ಕೆ ಹೋಗಲ್ಲ; ಜ್ಯೋತಿಷಿ ವೇಣುಸ್ವಾಮಿ ವಿರುದ್ಧ ದೂರು, ಚಿತ್ರರಂಗದಿಂದಲೂ ಎಚ್ಚರಿಕೆ
Aug 13, 2024 07:11 AM IST
ಇನ್ಮೇಲೆ ಸೆಲೆಬ್ರಿಟಿ ಜಾತಕ ವಿಶ್ಲೇಷಣೆಯ ಸಹವಾಸಕ್ಕೆ ಹೋಗಲ್ಲ!; ಜ್ಯೋತಿಷಿ ವೇಣುಸ್ವಾಮಿ ವಿರುದ್ಧ ದೂರು, ಚಿತ್ರರಂಗದಿಂದಲೂ ಎಚ್ಚರಿಕೆ
- ತೆಲುಗು ಚಿತ್ರರಂಗದಲ್ಲಿ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಫೇಮಸ್ ಆಗಿರುವ ವೇಣುಸ್ವಾಮಿ ವಿರುದ್ಧ ಹಲವು ದೂರುಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಸಿನಿಮಾ ಮತ್ತು ರಾಜಕಾರಣಿಗಳ ಜ್ಯೋತಿಷ್ಯ ಹೇಳುವುದಿಲ್ಲ ಎಂದಿದ್ದಾರೆ ವೇಣು ಸ್ವಾಮಿ. ಈ ಕುರಿತು ವಿಡಿಯೋ ಶೇರ್ ಮಾಡಿದ್ದಾರೆ.
Astrologer Venu Swamy: ಟಾಲಿವುಡ್‌ನಲ್ಲಿ ಸೆಲೆಬ್ರಿಟಿ ಜ್ಯೋತಿಷಿ ಎಂದು ಹೇಳಿಕೊಳ್ಳುವ ವೇಣುಸ್ವಾಮಿ ಹಲವು ಬಾರಿ ತಮ್ಮ ಹೇಳಿಕೆಗಳಿಂದಲೇ ವಿವಾದಕ್ಕೆ ಕಾರಣರಾಗಿದ್ದರು. ಜಾತಕದ ಹೆಸರಲ್ಲಿ ಸೆನ್ಸೇಷನಲ್ ಕಾಮೆಂಟ್ ಮಾಡುತ್ತಾ ಸದಾ ಸುದ್ದಿಯಲ್ಲಿರುವ ಈ ಜ್ಯೋತಿಷಿ, 2024ರ ಆಂಧ್ರಪ್ರದೇಶ ಚುನಾವಣೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ ಎಂದಿದ್ದರು. ಆದರೆ, ಆ ಚುನಾವಣೆಯಲ್ಲಿ ಪಕ್ಷ ಸೋಲನುಭವಿಸಿತ್ತು. ಇದರಿಂದಾಗಿ ವೇಣುಸ್ವಾಮಿ ಸಾಕಷ್ಟು ಟ್ರೋಲ್ ಮತ್ತು ಟೀಕೆಗೆ ಒಳಗಾದರು. ಇನ್ನು ಮುಂದೆ ಸೆಲೆಬ್ರಿಟಿಗಳ ಜಾತಕ ಹೇಳಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಇದೀಗ ನಾಗಚೈತನ್ಯ- ಶೋಭಿತಾ ಧೂಳಿಪಾಲ ಜಾತಕ ಹೇಳಿ, ಬಳಿಕ ಇನ್ನು ಮುಂದೆ ಸೆಲೆಬ್ರಿಟಿ ಜಾತಕ ಹೇಳಲ್ಲ ಎಂದು ಮತ್ತೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇತ್ತೀಚೆಗೆ ನಾಗ ಚೈತನ್ಯ ಮತ್ತು ನಾಯಕಿ ಶೋಭಿತಾ ಧೂಳಿಪಾಲ ನಿಶ್ಚಿತಾರ್ಥ ನೆರವೇರಿದೆ. ಈ ಜೋಡಿಯ ಭವಿಷ್ಯ ಹೇಗಿರಲಿದೆ ಎಂಬುದನ್ನು ವಿವರಿಸಿ, ಅದರ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಈ ಹಿಂದೆ ನಾಗ ಚೈತನ್ಯ ಮತ್ತು ಸಮಂತಾ ಜಾತಕ ಹೇಳಿದ್ದೆ ಎಂದ ವೇಣು ಸ್ವಾಮಿ, ಅದರ ಮುಂದುವರಿದ ಭಾಗವಾಗಿ ನಾಗ ಚೈತನ್ಯ ಹಾಗೂ ಶೋಭಿತಾ ನಿಶ್ಚಿತಾರ್ಥದ ಬಗ್ಗೆಯೂ ಮಾತನಾಡಿದ್ದರು. 2027ರ ವೇಳೆಗೆ ಈ ಜೋಡಿ ಬೇರೆ ಬೇರೆಯಾಗಲಿದೆ ಎಂದಿದ್ದರು. ವೇಣುಸ್ವಾಮಿಯ ಈ ಜ್ಯೋತಿಷ್ಯಕ್ಕೆ ಸಾಕಷ್ಟು ಟೀಕೆ ವ್ಯಕ್ತವಾದ ಬೆನ್ನಲ್ಲೇ, ಇನ್ನು ಮುಂದೆ ಸಿನಿಮಾ ಮತ್ತು ರಾಜಕಾರಣಿಗಳು ಭವಿಷ್ಯ ಹೇಳುವುದಿಲ್ಲ ಎಂದು ಹೊಸ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ ವೇಣುಸ್ವಾಮಿ.
ಜಾತಕ ಹೇಳದಿರಲು ನಿರ್ಧಾರ..
‘‘ಮೂರು ದಿನಗಳ ಹಿಂದೆ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ಜಾತಕವನ್ನು ವಿಶ್ಲೇಷಣೆ ಮಾಡಿದ್ದೆ. ಅದರ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ನಾಗ ಚೈತನ್ಯ ಮತ್ತು ಸಮಂತಾ ಜಾತಕವನ್ನು ಈ ಹಿಂದೆಯೇ ಹೇಳಿದ್ದೆ. ಅದು ನಿಜವಾಗಿದೆ. ಅದರ ಮುಂದುವರಿದ ಭಾಗವಾಗಿ ಈ ಜಾತಕವನ್ನು ಕೊಟ್ಟಿದೆ. ಆದರೆ ನಾನು ನನ್ನ ಮಾತನ್ನು ಉಳಿಸಿಕೊಳ್ಳುತ್ತೇನೆ. ನಾನು ಇನ್ನುಮುಂದೆ ಸೆಲೆಬ್ರಿಟಿಗಳ ಜಾತಕ ಮತ್ತು ರಾಜಕಾರಣಿಗಳ ಜಾತಕದ ಬಗ್ಗೆ ಮಾತನಾಡುವುದಿಲ್ಲ. ನಾನು ನನ್ನ ಮಾತಿನ ಮೇಲೆ ನಿಲ್ಲುತ್ತೇನೆ,’’ ಎಂದು ವೇಣುಸ್ವಾಮಿ ಹೊಸ ವಿಡಿಯೋದಲ್ಲಿ ಹೇಳಿದ್ದಾರೆ.
ಫಿಲಂ ಚೇಂಬರ್‌ನಿಂದ ಎಚ್ಚರಿಕೆ
ಈ ವಿಚಾರವಾಗಿ ತೆಲುಗು ಎಂಎ (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಅಧ್ಯಕ್ಷ ಮಂಚು ಅವರ ಜತೆಗೆ ವೇಣುಸ್ವಾಮಿ ಮಾತನಾಡಿದ್ದಾರೆ. ಇನ್ನು ಮುಂದೆ ಸೆಲೆಬ್ರಿಟಿಗಳು ಮತ್ತು ರಾಜಕೀಯ ಜಾತಕಗಳನ್ನು ನೀಡುವುದಿಲ್ಲ ಎಂದು ವೇಣುಸ್ವಾಮಿ ಬಹಿರಂಗಪಡಿಸಿದ್ದಾರೆ. "ನಮ್ಮ ಅಧ್ಯಕ್ಷ ವಿಷ್ಣು ಮಂಚು ಅವರ ಜತೆ ಮಾತನಾಡಿದ್ದೇನೆ. ಅವರಿಗೂ ಸ್ಪಷ್ಟನೆ ನೀಡಿದ್ದೇನೆ. ಇನ್ನು ಮುಂದೆ ಸೆಲೆಬ್ರಿಟಿಗಳ ಜಾತಕ, ರಾಜಕೀಯ ಜ್ಯೋತಿಷ್ಯ ಹೇಳುವುದಿಲ್ಲ. ಸೆಲೆಬ್ರಿಟಿಗಳ ವೈಯಕ್ತಿಕ ಜಾತಕವನ್ನು ವಿಶ್ಲೇಷಿಸುವುದಿಲ್ಲ" ಎಂದಿದ್ದಾರೆ.
ವೇಣುಸ್ವಾಮಿ ವಿರುದ್ಧ ದೂರು
ನಾಗ ಚೈತನ್ಯ - ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ಆಗಸ್ಟ್ 8 ರಂದು ನಡೆದಿತ್ತು. ಆದರೆ 2027ರಲ್ಲಿ ಈ ಇಬ್ಬರು ಬೇರೆಯಾಗುತ್ತಾರೆ ಎಂದು ವೇಣುಸ್ವಾಮಿ ಪ್ರತಿಕ್ರಿಯಿಸಿದ್ದರು. ಇದರಿಂದ ಸೆಲೆಬ್ರಿಟಿ ಜೋಡಿಯ ಜತೆಗೆ ಸೋಷಿಯಲ್ ಮೀಡಿಯಾ ಬಳಕೆದಾರರೂ ವೇಣು ಸ್ವಾಮಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ, ನಾಗಚೈತನ್ಯ- ಶೋಭಿತಾ ಬಗ್ಗೆ ಮಾತನಾಡಿದ ವೇಣುಸ್ವಾಮಿ ವಿರುದ್ಧ ಪೊಲೀಸರಿಗೂ ಹಲವು ದೂರು ಬಂದಿದೆಯಂತೆ. ಅಷ್ಟೇ ಅಲ್ಲದೆ ತೆಲುಗು ಫಿಲ್ಮ್ ಜರ್ನಲಿಸ್ಟ್ ಅಸೋಸಿಯೇಷನ್ ಮತ್ತು ತೆಲುಗು ಫಿಲ್ಮ್ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಸಹ ಒಟ್ಟಾಗಿ ವೇಣು ಸ್ವಾಮಿ ವಿರುದ್ಧ ದೂರು ನೀಡಿವೆ ಎನ್ನಲಾಗುತ್ತಿದೆ.
ನಾಗ ಚೈತನ್ಯ ಮತ್ತು ಸಮಂತಾ ಬೇರೆಯಾಗುತ್ತಾರೆ ಎಂದು ವೇಣುಸ್ವಾಮಿ ಅಂದು ಹೇಳಿದ್ದರು. ಇಬ್ಬರೂ ವಿಚ್ಛೇದನ ಪಡೆದ ನಂತರ ಅವರು ಜನಪ್ರಿಯತೆಯನ್ನು ಗಳಿಸಿದರು. ಆದರೆ, ರೆಬೆಲ್ ಸ್ಟಾರ್ ಪ್ರಭಾಸ್ ಗೆ ಚಿತ್ರರಂಗದಲ್ಲಿ ಸಂಕಷ್ಟ ಎದುರಾಗಲಿದೆ ಎಂದೂ ವೇಣುಸ್ವಾಮಿ ಹೇಳಿದ್ದಾರೆ. ಆದರೆ, ಅದರ ನಂತರ ಪ್ರಭಾಸ್ ಸಲಾರ್ ಮತ್ತು ಕಲ್ಕಿ ಚಿತ್ರಗಳ ಮೂಲಕ ದೊಡ್ಡ ಹಿಟ್ ಗಳಿಸಿದರು. ಇದು ವೇಣುಸ್ವಾಮಿಗೆ ತೀವ್ರ ಟ್ರೋಲಿಂಗ್‌ಗೆ ಕಾರಣವಾಗಿತ್ತು. 2024 ರ ಎಪಿ ಚುನಾವಣೆಯಲ್ಲಿ ವೈಸಿಪಿ ಗೆಲ್ಲುತ್ತದೆ ಎಂಬ ಅವರ ಭವಿಷ್ಯ ತಪ್ಪಾದ ನಂತರ ಅವರ ಮೇಲೆ ಟ್ರೋಲ್‌ಗಳು ತೀವ್ರಗೊಂಡಿವೆ. ಸೆಲೆಬ್ರಿಟಿ ಹಾಗೂ ರಾಜಕೀಯ ಜಾತಕ ಹೇಳುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ.