ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಹೋಸ್ಟ್‌ ಮಾಡಲಾರರು, ಯಾಕೆಂದ್ರೆ, ಇಲ್ಲಿವೆ 5 ಕಾರಣಗಳು-televison news why kantara fame rishab shetty not host bigg boss kannada season 11 top 5 reasons ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಹೋಸ್ಟ್‌ ಮಾಡಲಾರರು, ಯಾಕೆಂದ್ರೆ, ಇಲ್ಲಿವೆ 5 ಕಾರಣಗಳು

ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಹೋಸ್ಟ್‌ ಮಾಡಲಾರರು, ಯಾಕೆಂದ್ರೆ, ಇಲ್ಲಿವೆ 5 ಕಾರಣಗಳು

Bigg Boss Kannada Season 11 Host: ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ಈ ಬಾರಿ ಕಿಚ್ಚ ಸುದೀಪ್‌ ಬದಲು ರಿಷಬ್‌ ಶೆಟ್ಟಿ ಹೋಸ್ಟ್‌ ಮಾಡಲಿದ್ದಾರೆ ಎಂದು ಗುಲ್ಲೆದ್ದಿದೆ. ಇಂತಹ ಆಫರ್‌ ಸಿಕ್ರೆ ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ಕೂಡ ನೋ ಎನ್ನಬಹುದು. ಅದಕ್ಕೆ ಈ ಮುಂದಿನ 5 ಕಾರಣಗಳು ನೀಡಬಹುದು.

ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ಕನ್ನಡ ಬಿಗ್‌ಬಾಸ್‌ ಸೀಸನ್‌ 11 ಹೋಸ್ಟಿಂಗ್‌ ಮಾಡಲಾರರು, ಯಾಕೆಂದ್ರೆ, ಇಲ್ಲಿವೆ 5 ಕಾರಣಗಳು
ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ಕನ್ನಡ ಬಿಗ್‌ಬಾಸ್‌ ಸೀಸನ್‌ 11 ಹೋಸ್ಟಿಂಗ್‌ ಮಾಡಲಾರರು, ಯಾಕೆಂದ್ರೆ, ಇಲ್ಲಿವೆ 5 ಕಾರಣಗಳು

ಬೆಂಗಳೂರು: ತಮಿಳು ಬಿಗ್‌ಬಾಸ್‌ ಸೀಸನ್‌ 8ರ ನಿರೂಪಣೆ ಜವಾಬ್ದಾರಿಗೆ ಕಮಲ್‌ ಹಾಸನ್‌ ಟಾಟಾ ಹೇಳಿದ್ದಾರೆ. ಅದೇ ಸಮಯದಲ್ಲಿ ಕನ್ನಡ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ (Bigg Boss Kannada Season 11 Host) ಕುರಿತೂ ವದಂತಿಗಳು ಆರಂಭವಾಗಿದ್ದವು. ಈ ಬಾರಿ ಬಿಗ್‌ಬಾಸ್‌ ಕನ್ನಡವನ್ನು ಕಿಚ್ಚ ಸುದೀಪ್‌ ಹೋಸ್ಟಿಂಗ್‌ ಮಾಡುವುದಿಲ್ಲ ಎಂದು ವರದಿಗಳು ತಿಳಿಸಿದ್ದವು. ಬಿಗ್‌ಬಾಸ್‌ಗೆ ಸಮಯ ನೀಡಿದ್ರೆ ಸುದೀಪ್‌ ನಟನೆಯ ಸಿನಿಮಾಗಳ ಶೂಟಿಂಗ್‌ ವಿಳಂಬವಾಗುತ್ತಿದೆ. ಸಿನಿಮಾ, ಕಿರುತೆರೆ ಎರಡನ್ನೂ ನಿಭಾಯಿಸುವುದು ಕಷ್ಟಕರ ಇತ್ಯಾದಿ ಕಾರಣಗಳಿಂದ ಸುದೀಪ್‌ ಬಿಗ್‌ಬಾಸ್‌ನಿಂದ ಹೊರಬರಲು ಯೋಜಿಸಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿದ್ದವು. ಈ ವದಂತಿ ನಿಜವೋ ಸುಳ್ಳೋ ಗೊತ್ತಾಗಿಲ್ಲ.

ಬಿಗ್‌ಬಾಸ್‌ ಎಂದರೆ ಸುದೀಪ್‌, ಅದಕ್ಕೆ ಪರ್ಯಾಯ ಪದವೇ ಇಲ್ಲ ಎನ್ನುವಷ್ಟು ಅದ್ಭುತವಾಗಿ ಕಿಚ್ಚ ಸುದೀಪ್‌ ಶೋ ನಡೆಸಿಕೊಡುತ್ತಾರೆ. ಸುದೀಪ್‌ ಬದಲು ಬೇರೆ ವ್ಯಕ್ತಿಯನ್ನು ಅಲ್ಲಿ ಕಲ್ಪಿಸಿಕೊಳ್ಳುವುದು ಕಷ್ಟಕರ ಎನ್ನುವಂತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಸುದೀಪ್‌ ಬದಲು ಯಾರು ಹೋಸ್ಟಿಂಗ್‌ ಮಾಡಬಹುದು? ಇಂತಹ ಸಂದರ್ಭದಲ್ಲಿ ಅಚ್ಚರಿಯೆಂಬಂತೆ ರಿಷಬ್‌ ಶೆಟ್ಟಿ ಹೆಸರು ಕೇಳಿಬರುತ್ತಿದೆ. ಆದರೆ, ರಿಷಬ್‌ ಶೆಟ್ಟಿ ಬಿಗ್‌ಬಾಸ್‌ ಕನ್ನಡ ಈ ವರ್ಷ ಹೋಸ್ಟಿಂಗ್‌ ಮಾಡಲು ಸಾಧ್ಯವೇ ಇಲ್ಲ. ಯಾಕೆಂದರೆ, ಅದಕ್ಕೆ ಐದು ಪ್ರಮುಖ ಕಾರಣಗಳನ್ನು ನೀಡಬಹುದು.

1) ಕಾಂತಾರ ಚಾಪ್ಟರ್‌ 1 ಸಿನಿಮಾ ನಿರ್ದೇಶನ

ಕಾಂತಾರ ಸಿನಿಮಾ ದೇಶ-ವಿದೇಶದಲ್ಲಿ ಪಡೆದ ಖ್ಯಾತಿಯು ನಿರ್ದೇಶಕ-ನಟ ರಿಷಬ್‌ ಶೆಟ್ಟಿ ಅವರ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಭೂತಾರಾಧನೆಯ ಸೊಗಡು, ದೈವಕೋಲದ ಅನುಭವ ಪ್ರೇಕ್ಷಕರಿಗೆ ಹೊಸ ಅನುಭೂತಿ ನೀಡಿತ್ತು. ಇದೀಗ ಚಾಪ್ಟರ್‌ 1ರಲ್ಲಿ ಪ್ರೇಕ್ಷಕರಿಗೆ ನೀಡುವ "ಅನುಭವದ" ಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಹೊಣೆಗಾರಿಕೆ ರಿಷಬ್‌ ಶೆಟ್ಟಿಗೆ ಇದೆ. "ನಮ್ಮ ಆಡಿಯನ್ಸ್‌ ನಮಗಿಂತ ಎರಡು ಮೂರು ವರ್ಷ ಮುಂದೆ ಇರುತ್ತಾರೆ. ಥಿಯೇಟರ್‌ನಲ್ಲಿ ಜನರಿಗೆ ಬಯಸಿದ ಎಕ್ಸ್‌ಪೀರಿಯೆನ್ಸ್‌ ದೊರಕುತ್ತಿಲ್ಲ. ಇದೇ ಕಾರಣಕ್ಕೆ ಬಹುತೇಕ ಸಿನಿಮಾಗಳು ಸೋಲುತ್ತಿವೆ" ಎಂದು ಇತ್ತೀಚೆಗೆ ರಿಷಬ್‌ ಶೆಟ್ಟಿ ಹೇಳಿದ್ದರು. ಕಾಂತಾರ ಸಿನಿಮಾದ ಮೊದಲ ಭಾಗ ಈಗಾಗಲೇ ಸಿನಿಮಾ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಿದೆ. ಇದೀಗ ಚಾಪ್ಟರ್‌ 1ರಲ್ಲಿ ಇಂತಹ ಅನುಭವವನ್ನು ಉಳಿಸಿಕೊಳ್ಳುವ ಮತ್ತು ಅದಕ್ಕಿಂತಲೂ ಹೆಚ್ಚು ಸರ್‌ಪ್ರೈಸ್‌ ಎಲಿಮೆಂಟ್‌ಗಳನ್ನು ಸೇರಿಸುವ ಜವಾಬ್ದಾರಿ ಇದೆ. ಇಂತಹ ಸಮಯದಲ್ಲಿ ಕಾಂತಾರದ ನಿರ್ದೇಶನದ ಕುರಿತು ಸಾಕಷ್ಟು ಗಮನ ನೀಡಬೇಕಿದೆ. ಹೀಗಾಗಿ, ಬಿಗ್‌ಬಾಸ್‌ ಕನ್ನಡವೆಂಬ 100 ಪ್ಲಸ್‌ ದಿನದ ರಿಯಾಲಿಟಿ ಶೋಗಾಗಿ ತನ್ನ ಮನಸ್ಸನ್ನು ಚಂಚಲಗೊಳಿಸಲು ರಿಷಬ್‌ ಶೆಟ್ರು ಬಯಸಲಾರರು.

2) ಕಾಂತಾರ ಸಿನಿಮಾದಲ್ಲಿ ನಟನೆ

ರಿಷಬ್‌ ಶೆಟ್ಟಿ ಕಾಂತಾರ ಸಿನಿಮಾದ ಲೀಡ್‌ ಆಕ್ಟರ್‌. ತುಳುನಾಡಿನ ದೈವದ ಮೂಲದ ಕಥೆಯನ್ನು ಹೊಂದಿರುವ ಈ ಸಿನಿಮಾದಲ್ಲಿ ಜನರಿಗೆ ಗೂಸ್‌ಬಂಪ್ಸ್‌ ನೀಡುವಂತೆ ರಿಷಬ್‌ ಶೆಟ್ಟಿ ನಟಿಸಲಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾಂತಾರ ಸಿನಿಮಾಕ್ಕಾಗಿ ತನ್ನ ದೇಹದಲ್ಲಿ ಮಾಡುವ ಬದಲಾವಣೆ, ತೂಕ ಹೆಚ್ಚಳ, ಗಡ್ಡ ವಿನ್ಯಾಸ ಇತ್ಯಾದಿಗಳು ಒಂದಿಷ್ಟು ರಹಸ್ಯವಾಗಿರಬೇಕಾಗುತ್ತದೆ. ಬಿಗ್‌ಬಾಸ್‌ನಲ್ಲಿ ಭಾಗವಹಿಸಿದರೆ ಕಾಂತಾರದ ರಹಸ್ಯಗಳು ಪ್ರೇಕ್ಷಕರಿಗೆ ಸೋರಿಕೆಯಾಗಬಹುದು. ಸಿನಿಮಾದ ನಿರ್ದೇಶನ ಮತ್ತು ನಟನೆಯ ಜವಾಬ್ದಾರಿ ಇರುವುದರಿಂದ ಬಿಗ್‌ಬಾಸ್‌ ಹೊಣೆಗಾರಿಕೆ ತೆಗೆದುಕೊಳ್ಳಲು ಇವರು ಖಂಡಿತಾ ಬಯಸಲಾರರು.

3) ಕಾಂತಾರ ಸಿನಿಮಾದ ಶೂಟಿಂಗ್‌ ಸ್ಥಳ

ಕನ್ನಡ ನಟ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾವಾದರೆ ಬೆಂಗಳೂರಿನ ಸೆಟ್‌ನಲ್ಲಿ ಶೂಟಿಂಗ್‌ ಆಗುತ್ತಿದೆ. ಆದರೆ, ಕಾಂತಾರ ಸೆಟ್‌ ಇರುವುದು ಕುಂದಾಪುರದಲ್ಲಿ. ಕುಂದಾಪುರದಿಂದ ಬೆಂಗಳೂರು ಅಥವಾ ಬಿಗ್‌ಬಾಸ್‌ ನಡೆಯುವ ಸ್ಥಳಕ್ಕೆ ನಿರಂತರವಾಗಿ ಹೋಗುತ್ತ ಬರುತ್ತ ಇರುವುದು ರಿಷಬ್‌ ಶೆಟ್ಟಿಗೆ ಕಷ್ಟವಾಗಬಹುದು. ಶೂಟಿಂಗ್‌ಗೆ ತೊಂದರೆಯಾಗದೆ ಇರಲಿ ಎಂದು ತನ್ನ ಮಕ್ಕಳನ್ನು ಬೆಂಗಳೂರಿನಿಂದ ಕುಂದಾಪುರ ಸ್ಕೂಲ್‌ಗೆ ಶಿಫ್ಟ್‌ ಮಾಡಿದ್ದಾರೆ. ಕಾಂತಾರ ಶೂಟಿಂಗ್‌ ನಡೆಯುವ ಸ್ಥಳ ಮತ್ತು ಬಿಗ್‌ಬಾಸ್‌ ಶೋ ನಡೆಯುವ ಸ್ಥಳದ ನಡುವೆ ಇರುವ ಅಂತರದ ಕಾರಣದಿಂದಲೂ ರಿಷಬ್‌ ಶೆಟ್ಟಿ ಬಿಗ್‌ಬಾಸ್‌ ಹೋಸ್ಟ್‌ ಮಾಡೋ ಸಾಧ್ಯತೆ ಇಲ್ಲ. ಇದರ ಬದಲು ಕುಂದಾಪುರಕ್ಕೆ ಬಿಗ್‌ಬಾಸ್‌ ಮನೆಯನ್ನು ಸ್ಥಳಾಂತರಿಸಿದ್ರೆ ಶೆಟ್ರು ಒಪ್ಪಬಹುದೇನೋ.

4) ಕಾಂತಾರ ಬಿಡುಗಡೆ ದಿನಾಂಕ

ಕಾಂತಾರ ಸಿನಿಮಾವನ್ನು ನಿಗದಿತ ದಿನಾಂಕಕ್ಕೆ ಬಿಡುಗಡೆ ಮಾಡುವ ಒತ್ತಡವೂ ರಿಷಬ್‌ ಶೆಟ್ಟಿ ಮೇಲಿದೆ. ಕಿರುತೆರೆ ಹೋಸ್ಟಿಂಗ್‌ ಮಾಡುವ ಅವಕಾಶ ದೊರಕಿದೆ ಎಂದು ಎರಡು ಜವಾಬ್ದಾರಿಯನ್ನು ಹೊತ್ತರೆ ಕಾಂತಾರ ಬಿಡುಗಡೆ ವಿಳಂಬವಾಗಬಹುದು. ಹೀಗಾಗಿ, ಈ ಕಾರಣದಿಂದಲೂ ರಿಷಬ್‌ ಶೆಟ್ಟಿ ಈ ಶೋ ಹೋಸ್ಟ್‌ ಮಾಡಲಾರರು.

5) ರಿಷಬ್‌ ಶೆಟ್ಟಿ ಒಳ್ಳೆಯ ನಿರೂಪಕರೇ?

ಎಲ್ಲಾ ಕಾರಣಗಳು ಕಾಂತಾರದ್ದೇ ಎಂದುಕೊಳ್ಳಬೇಡಿ. ಬೇರೊಂದು ಕಾರಣವೂ ಇದೆ. ಐದನೇ ಮತ್ತು ಪ್ರಮುಖ ಕಾರಣ ಬಿಗ್‌ಬಾಸ್‌ ಕನ್ನಡಕ್ಕೆ ರಿಷಬ್‌ ಶೆಟ್ಟಿ ಸೂಕ್ತ ನಿರೂಪಕರಾಗಬಹುದೇ? ಇವರು ಬಹುಮುಖ ಪ್ರತಿಭೆ ಎನ್ನುವುದರಲ್ಲಿ ಎರಡು ಮಾತಿಲ್ಲ. ತನ್ನದೇ ಶೈಲಿಯಲ್ಲಿ ಪ್ರೇಕ್ಷಕರನ್ನು ಮತ್ತು ದೊಡ್ಮನೆಯೊಳಗೆ ಇರುವ ಆಟಗಾರರನ್ನು ನಿಭಾಯಿಸಬಹುದು. ಕೋಪ ಬಂದ್ರೆ ಕುಂದಾಪ್ರ ಶೈಲಿಯಲ್ಲಿಯೇ ಪ್ರೇಕ್ಷಕರಿಗೆ ಬೈಗುಳ ನೀಡಬಹುದು. ಹೀಗಿದ್ದರೂ ಸುದೀಪ್‌ ಸ್ಥಾನದಲ್ಲಿ ಬಿಗ್‌ಬಾಸ್‌ ಆಗಿ ರಿಷಬ್‌ ಶೆಟ್ರನ್ನು ಕಲ್ಪಿಸಿಕೊಳ್ಳಲು ಪ್ರೇಕ್ಷಕರಿಗೆ ಕಷ್ಟವಾಗಬಹುದೇನೋ. ಏನಂತೀರಾ?