ಕಲ್ಕಿ 2898 ಎಡಿ ಮುಂದಿನ ಅಧ್ಯಾಯದಲ್ಲಿ ಪ್ರಭಾಸ್ ಪಾತ್ರಕ್ಕೆ ಮರಣ, ಹಿಂದಿ ಚಿತ್ರರಂಗದವರು ದಕ್ಷಿಣ ಭಾರತೀಯರಿಂದ ಕಲಿಯಬೇಕು- ನಿತೀಶ್
Jul 08, 2024 09:19 AM IST
ಕಲ್ಕಿ 2898 ಎಡಿ ಮುಂದಿನ ಅಧ್ಯಾಯದಲ್ಲಿ ಪ್ರಭಾಸ್ ಪಾತ್ರ ಭೈರವನಿಗೆ ಮರಣ
- ಟಿವಿ ಧಾರಾವಾಹಿ ಮಹಾಭಾರತದಲ್ಲಿ ಕೃಷ್ಣನಾಗಿ ನಟಿಸಿದ್ದ ನಿತೀಶ್ ಭಾರದ್ವಾಜ್ ಅವರು ಕಲ್ಕಿ 2898 ಎಡಿ ಸಿನಿಮಾದ ಮುಂದಿನ ಅಧ್ಯಾಯ ಹೇಗಿರಬಹುದು ಎಂದು ಅಂದಾಜಿಸಿದ್ದಾರೆ. ಕೃಷ್ಣನ ಪಾತ್ರಧಾರಿಯ ಮುಖವನ್ನು ಮರೆಮಾಚು ಅಗತ್ಯವಿರಲಿಲ್ಲ ಎಂದೂ ಅವರು ಹೇಳಿದ್ದಾರೆ.
ಬೆಂಗಳೂರು: ಬಿಆರ್ ಚೋಪ್ರಾ ಅವರ ಟಿವಿ ಧಾರಾವಾಹಿ ಮಹಾಭಾರತ್ (1988) ನಲ್ಲಿ ಶ್ರೀಕೃಷ್ಣನ ಪಾತ್ರವನ್ನು ನಿರ್ವಹಿಸಿದ ನಟ ನಿತೀಶ್ ಭಾರದ್ವಾಜ್ ಅವರು ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ "ನಿರ್ದೇಶಕರು ಮಹಾಭಾರತದ ಪಾತ್ರಗಳನ್ನು ಮತ್ತು ಕಲ್ಕಿಯ ಭವಿಷ್ಯದ ಜನ್ಮವನ್ನು ಬುದ್ಧಿವಂತಿಕೆಯಿಂದ ಬಳಸಿದ್ದಾರೆ" ಎಂದು ಶ್ಲಾಘಿಸಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದಿ ಚಲನಚಿತ್ರ ನಿರ್ಮಾಪಕರು "ದಕ್ಷಿಣದಿಂದ ಕಲಿಯಬೇಕು" ಎಂದು ಅವರು ಹೇಳಿದ್ದಾರೆ.
ಹಿಂದಿ ಚಿತ್ರರಂಗ ದಕ್ಷಿಣದಿಂದ ಕಲಿಯಬೇಕು
“(ನಾಗ್ ಅಶ್ವಿನ್) ಮಹಾಭಾರತದ ಪಾತ್ರಗಳನ್ನು ಮತ್ತು ಮಹಾವಿಷ್ಣುವಿನ ಕೊನೆಯ ಅವತಾರ ಕಲ್ಕಿಯ ಭವಿಷ್ಯದ ಜನ್ಮವನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡಿದ್ದಾರೆ. ಹಿಂದಿ ಚಲನಚಿತ್ರ ನಿರ್ಮಾಪಕರು ದಕ್ಷಿಣದಿಂದ ಕಲಿಯಬೇಕು. ಯಾಕೆಂದರೆ, ನಮ್ಮ ಧರ್ಮಗ್ರಂಥಗಳು, ಮಹಾಕಾವ್ಯಗಳನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ಇಂತಹ ಕೃತಿಗಳಿಂದ ಸ್ಪೂರ್ತಿ ಹೊಂದಿದ್ದಾರೆ. ಖಂಡಿತಾ, ನಿರ್ದೇಶಕರು ಕಲ್ಕಿ ಸಿನಿಮಾಕ್ಕಾಗಿ ಮ್ಯಾಡ್ ಮ್ಯಾಕ್ಸ್ ಮುಂತಾದ ಸಿನಿಮಾಗಳಿಂದ ನಿರ್ದಿಷ್ಟ ದೃಶ್ಯಗಳ ಸ್ಫೂರ್ತಿಯನ್ನು ಪಡೆದಿರುವಂತೆ ಇದೆ. ಆದರೆ, ಕಲ್ಕಿ ಸಿನಿಮಾದಲ್ಲಿ ಇದನ್ನು ವಿಭಿನ್ನವಾಗಿ ತೋರಿಸಿದ್ದಾರೆ. ಸೆಟ್‌ಗಳು, ನಿರ್ಮಾಣ ವಿನ್ಯಾಸಕ್ಕೆ ಕಥೆಗಿಂತ ಕಡಿಮೆ ಪ್ರಾಮುಖ್ಯತೆ ನೀಡಲಾಗಿದೆ" ಎಂದು ನಟ ನಿತೀಶ್ ಭಾರದ್ವಾಜ್ ಅಭಿಪ್ರಾಯಪಟ್ಟಿದ್ದಾರೆ.
ಕಲ್ಕಿ ಮುಂದಿನ ಅಧ್ಯಾಯ ಹೇಗಿರಬಹುದು?
ಇದೇ ಸಂದರ್ಭದಲ್ಲಿ ನಟ ನಿತೀಶ್ ಭಾರದ್ವಾಜ್ ಅವರು ಕಲ್ಕಿ 2898 ಎಡಿ ಸಿನಿಮಾದ ಮುಂದಿನ ಅಧ್ಯಾಯ ಹೇಗಿರಬಹುದು ಎಂದು ಊಹಿಸಿದ್ದಾರೆ. "ಪ್ರಭಾಸ್ ಅಂದ್ರೆ ಕರ್ಣನ ಪಾತ್ರವು ಮುಂದಿನ ಅಧ್ಯಾಯದಲ್ಲಿ ಮರಣ ಹೊಂದಬಹುದು. "ಅಶ್ವತ್ಥಾಮ (ಅಮಿತಾಭ್ ಬಚ್ಚನ್) ಮತ್ತು ಕೃಷ್ಣನು ಕರ್ಣನಿಗೆ ವಿಮೋಚನೆಯ ಮಾರ್ಗವನ್ನು ತೋರಿಸಬಹುದು. ವಿಲನ್ ಜತೆಗೆ ಗೆಲುವು ಸಾಧಿಸಲ್ಪಟ್ಟರೂ ಕರ್ಣನಿಗೆ ಮರಣ ಇರಬಹುದು" ಎಂದು ಅಂದಾಜಿಸಿದ್ದಾರೆ.
ಕೃಷ್ಣನ ಕುರಿತು ನಾಗ್ ಹೇಳಿದ್ದೇನು?
ಇತ್ತೀಚೆಗೆ ಪಿಂಕ್‌ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ನಾಗ್ ಅಶ್ವಿನ್ ಅವರು ಕೃಷ್ಣನ ಪಾತ್ರದ ಕುರಿತು ಹೇಳಿದ್ದಾರೆ. "ಕೃಷ್ಣ ನಿರಾಕರ. ಅವನನ್ನು ಸಿಲೂಯೆಟ್ ರೀತಿಯಲ್ಲಿ ಚಿತ್ರೀಕರಿಸುವುದು ನಮ್ಮ ಕಲ್ಪನೆಯಾಗಿತ್ತು. ಇಲ್ಲವಾದರೆ ಆತ ಕೇವಲ ವ್ಯಕ್ತಿ ಅಥವಾ ನಟನಾಗುತ್ತಾನೆ. ನಿಗೂಢ ರೂಪದಂತೆ ಆತನನ್ನು ಯಾವಾಗಲೂ ಕಪ್ಪು ಚರ್ಮ ಮತ್ತು ಸಿಲೂಯೆಟ್‌ನಂತೆ ಇರಿಸುವ ಕಲ್ಪನೆಯಾಗಿತ್ತು" ಎಂದು ಅವರು ಹೇಳಿದ್ದಾರೆ.
ಮಹಾಭಾರತ್ ಧಾರಾವಾಹಿ ಬಗ್ಗೆ
ಮಹಾಭಾರತವನ್ನು ಬಿಆರ್ ಚೋಪ್ರಾ ನಿರ್ಮಿಸಿದ್ದಾರೆ. ಅವರ ಮಗ ರವಿ ಚೋಪ್ರಾ ನಿರ್ದೇಶಿಸಿದ್ದಾರೆ. ಮಹಾಭಾರತ ಮಹಾಕಾವ್ಯವನ್ನು ಆಧರಿಸಿದ ಧಾರಾವಾಹಿ. ಇದು 94 ಸಂಚಿಕೆಗಳನ್ನು ಹೊಂದಿತ್ತು. 1988 ರಿಂದ 1990 ರವರೆಗೆ ದೂರದರ್ಶನದಲ್ಲಿ ಮೊದಲ ಬಾರಿಗೆ ಪ್ರಸಾರವಾಯಿತು. ಈ ಧಾರವಾಹಿಯಲ್ಲಿ ಗಿರಿಜಾ ಶಂಕರ್, ಗೂಫಿ ಪೈಂಟಲ್, ಗಜೇಂದ್ರ ಚೌಹಾನ್, ಪಂಕಜ್ ಧೀರ್, ಮುಖೇಶ್ ಖನ್ನಾ, ಮತ್ತು ರೂಪಾ ಗಂಗೂಲಿ ಮುಂತಾದವರು ನಟಿಸಿದ್ದಾರೆ.
ಕಲ್ಕಿ 2898 ಎಡಿ ಸಿನಿಮಾದ ಕುರಿತು
ನಾಗ್ ಅಶ್ವಿನ್ ಅವರ ಮಹತ್ವಾಕಾಂಕ್ಷೆಯ 3D ಸಿನಿಮಾ. ಕಲ್ಕಿ 2898 ಎಡಿಯು ಭಾರತದ ಅತ್ಯಂತ ದುಬಾರಿ ಸಿನಿಮಾ ಎನ್ನಲಾಗಿದೆ. ಇದನ್ನು ಸುಮಾರು 600 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ. ಈ ಪೌರಾಣಿಕ ಮತ್ತು ವೈಜ್ಞಾನಿಕ ಸಾಹಸ ಸಿನಿಮಾವು ಜಾಗತಿಕವಾಗಿ ಜೂನ್ 27 ರಂದು ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬಿಡುಗಡೆಯಾಗಿದೆ. ವೈಜಯಂತಿ ಮೂವೀಸ್ ನಿರ್ಮಿಸಿದ, ಕಲ್ಕಿ 2898 ಎಡಿ ನಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಪ್ರಭಾಸ್, ದಿಶಾ ಪಟಾನಿ, ಶಾಶ್ವತ ಚಟರ್ಜಿ ಮತ್ತು ಶೋಭನಾ ಇತರರು ನಟಿಸಿದ್ದಾರೆ.