Kalki 2898 AD: ಕಲ್ಕಿ ಸಿನಿಮಾದಲ್ಲಿ ಶ್ರೀ ಕೃಷ್ಣನ ವೇಷಧಾರಿ ಯಾರು? ಅಭಿಮಾನಿಗಳ ಪತ್ತೆದಾರಿಕೆ ಸಕ್ಸಸ್‌, ಸತ್ಯ ಒಪ್ಪಿಕೊಂಡ ನಟ
ಕನ್ನಡ ಸುದ್ದಿ  /  ಮನರಂಜನೆ  /  Kalki 2898 Ad: ಕಲ್ಕಿ ಸಿನಿಮಾದಲ್ಲಿ ಶ್ರೀ ಕೃಷ್ಣನ ವೇಷಧಾರಿ ಯಾರು? ಅಭಿಮಾನಿಗಳ ಪತ್ತೆದಾರಿಕೆ ಸಕ್ಸಸ್‌, ಸತ್ಯ ಒಪ್ಪಿಕೊಂಡ ನಟ

Kalki 2898 AD: ಕಲ್ಕಿ ಸಿನಿಮಾದಲ್ಲಿ ಶ್ರೀ ಕೃಷ್ಣನ ವೇಷಧಾರಿ ಯಾರು? ಅಭಿಮಾನಿಗಳ ಪತ್ತೆದಾರಿಕೆ ಸಕ್ಸಸ್‌, ಸತ್ಯ ಒಪ್ಪಿಕೊಂಡ ನಟ

Who acted as krishna in kalki 2898 ad?: ಕಲ್ಕಿ 2898 ಎಡಿ ಸಿನಿಮಾದಲ್ಲಿ ಶ್ರೀ ಕೃಷ್ಣನ ವೇಷಧಾರಿ ಯಾರೆಂಬ ಪ್ರಶ್ನೆಗೆ ಉತ್ತರ ದೊರಕಿದೆ. ಕಲ್ಕಿ ಸಿನಿಮಾದಲ್ಲಿ ಶ್ರೀಕೃಷ್ಣನ ಮುಖವನ್ನು ಸ್ಪಷ್ಟವಾಗಿ ತೋರಿಸಲಾಗಿಲ್ಲ. ಸಿನಿ ಅಭಿಮಾನಿಗಳು ಈ ವೇಷಧಾರಿ ಯಾರೆಂದು ಕಂಡುಹಿಡಿದಿದ್ದಾರೆ.

ಕಲ್ಕಿ 2898 ಎಡಿ ಸಿನಿಮಾದಲ್ಲಿ ನಟಿಸಿದ ಕೃಷ್ಣಕುಮಾರ್‌
ಕಲ್ಕಿ 2898 ಎಡಿ ಸಿನಿಮಾದಲ್ಲಿ ನಟಿಸಿದ ಕೃಷ್ಣಕುಮಾರ್‌

ಬೆಂಗಳೂರು: ನಾಗ್‌ ಅಶ್ವಿನ್‌ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾದ ಕುರಿತು ಕುತೂಹಲಕಾರಿ ಅಂಶವೊಂದು ಬಹಿರಂಗವಾಗಿದೆ. ಈ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರ ಅಭಿನಯದಷ್ಟೇ ಅತಿಥಿ ಪಾತ್ರಗಳೂ ಗಮನಸೆಳೆದಿವೆ. ಬಹುತೇಕ ಅತಿಥಿ ಕಲಾವಿದರು ಯಾರೆಂದು ಎಲ್ಲರಿಗೂ ತಿಳಿದಿದೆ. ಆದರೆ, ಒಂದು ಪಾತ್ರಕ್ಕೆ ಜೀವ ತುಂಬಿದವರು ಯಾರೆಂದು ಗೊತ್ತೇ ಆಗಿರಲಿಲ್ಲ. ಸಿನಿಮಾದ ಆರಂಭದಲ್ಲಿ, ಕೊನೆಗೆ ಶ್ರೀಕೃಷ್ಣನ ಪಾತ್ರ ಗಮನ ಸೆಳೆಯುತ್ತದೆ. ಆದರೆ, ಕೃಷ್ಣನ ಮುಖವನ್ನು ಎಲ್ಲೂ ಸ್ಪಷ್ಟವಾಗಿ ತೋರಿಸಲಾಗಿರಲಿಲ್ಲ. ಕಣ್ಣು, ಮೂಗು, ಬಾಯಿ ತೋರಿಸದೆ ಕಪ್ಪು ಬಣ್ಣದ ಶೇಡ್‌ನಿಂದ ಶ್ರೀಕೃಷ್ಣನ ಪಾತ್ರ ರೂಪಿಸಲಾಗಿತ್ತು. ಇದೀಗ ಈ ಪಾತ್ರದಲ್ಲಿ ನಟಿಸಿದವರು ಯಾರೆಂದು ಅಭಿಮಾನಿಗಳು ಕಂಡುಹಿಡಿದಿದ್ದಾರೆ. 

ಕೃಷ್ಣನ ಪಾತ್ರದಲ್ಲಿ ಕೃಷ್ಣಕುಮಾರ್

ಕಲ್ಕಿ 2898 ಎಡಿ ಇತರ ಪಾತ್ರಗಳ ಮುಖವನ್ನು ಸ್ಪಷ್ಟವಾಗಿ ತೋರಿಸಲಾಗಿದ್ದರೂ, ಕೃಷ್ಣನ ಮುಖವನ್ನು ಎಲ್ಲೂ ಸಂಪೂರ್ಣವಾಗಿ ತೋರಿಸಲಾಗಿಲ್ಲ. ದೇಹ ಮತ್ತು ಕೂದಲನ್ನು ಹೊರತುಪಡಿಸಿ ಶ್ರೀಕೃಷ್ಣನ ಮುಖವನ್ನು ಎಲ್ಲೂ ತೋರಿಸಿರಲಿಲ್ಲ. ಈ ವಿಷಯದ ಕುರಿತು ಕುತೂಹಲಗೊಂಡ ಅಭಿಮಾನಿಗಳು ಕೃಷ್ಣನ ಪಾತ್ರದಾರಿ ಯಾರೆಂದು ಕಂಡುಹಿಡಿದಿದ್ದಾರೆ. ತಮಿಳು ನಟ ಕೃಷ್ಣಕುಮಾರ್ ಈ ಚಿತ್ರದಲ್ಲಿ ಕೃಷ್ಣನ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಡಿಕೋಡ್ ಮಾಡಿದ್ದಾರೆ. ಅಭಿಮಾನಿಗಳು ಈ ಕುರಿತು ಕೃಷ್ಣಕುಮಾರ್‌ ಅವರನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಶ್ನಿಸಿದ್ದಾರೆ. ಕೊನೆಗೂ ಕೃಷ್ಣಕುಮಾರ್‌ ಸತ್ಯ ಒಪ್ಪಿಕೊಂಡಿದ್ದಾರೆ. ನಾನೇ ಕೃಷ್ಣನ ಪಾತ್ರ ನಿರ್ವಹಿಸಿದ್ದೇನೆ ಎಂದು ದೃಢಪಡಿಸಿದ್ದಾರೆ.

"ಕಲ್ಕಿ 2898 ಎಡಿ ಸಿನಿಮಾದಲ್ಲಿ ಇಂತಹ ಮಹತ್ವಪೂರ್ಣ ಪಾತ್ರವನ್ನು ನೀಡಿದ್ದಕ್ಕೆ ಧನ್ಯವಾದಗಳು" ಎಂದು ಅವರು ಹೇಳಿದ್ದಾರೆ. ಶ್ರೀಕೃಷ್ಣ ಪಾತ್ರಕ್ಕೆ ಜೀವ ತುಂಬಲು ಸಹಾಯ ಮಾಡಿದ ಇನ್ನೊಬ್ಬ ನಟನೂ ಇದ್ದಾನೆ.

ಕೃಷ್ಣಕುಮಾರ್‌ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌
ಕೃಷ್ಣಕುಮಾರ್‌ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌

ಕೃಷ್ಣನ ಪಾತ್ರಕ್ಕೆ ಧ್ವನಿ ನೀಡಿದ ಅರ್ಜುನ್ ದಾಸ್

ಕೃಷ್ಣನ ಪಾತ್ರವನ್ನು ಯಾರು ನಿರ್ವಹಿಸಿದ್ದಾರೆಂದು ಆರಂಭದಲ್ಲಿ ತಿಳಿಯದೆ ಹೋದರೂ ಬಹುತೇಕರಿಗೆ ಕೃಷ್ಣನ ಧ್ವನಿ ಯಾರದ್ದು ಎಂದು ಗೊತ್ತಾಗಿತ್ತು. ಅಭಿಮಾನಿಯೊಬ್ಬರು ಅರ್ಜುನ್‌ ದಾಸ್‌ ಅವರನ್ನು ಟ್ಯಾಗ್‌ ಮಾಡಿ "ಹಾಯ್‌ ಅರ್ಜುನ್‌ ದಾಸ್‌, ಕಲ್ಕಿ ಸಿನಿಮಾದಲ್ಲಿ ನಿಮ್ಮ ಶ್ರೀಕೃಷ್ಣನ ಧ್ವನಿ ಅದ್ಭುತವಾಗಿತ್ತು. ಇದು ಸಿನಿಮಾದ ಅನುಭವನನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಇದನ್ನು ಮಾಡಿದ್ದಕ್ಕೆ ಧನ್ಯವಾದಗಳು. ನಿಮ್ಮನ್ನು ನೋಡಲು ಕಾಯುತ್ತಿದ್ದೇನೆ" ಎಂದು ಬರೆದಿದ್ದಾರೆ. ಅದಕ್ಕೆ ಅರ್ಜುನ್‌ ದಾಸ್‌ ಮಾರುತ್ತರ ನೀಡಿದ್ದಾರೆ. "ಇದರ ಕ್ರೆಡಿಟ್‌ ನನಗೆ ಸೇರಬೇಕಾಗಿಲ್ಲ. ನಾಗ್‌ ಅಶ್ವಿನ್‌ ಮತ್ತು ಸ್ವಪ್ನ ದತ್‌ ಅವರಿಗೆ ಸೇರಬೇಕು" ಎಂದು ಉತ್ತರಿಸಿದ್ದಾರೆ.

ಯಾರಿದು ಕೃಷ್ಣಕುಮಾರ್‌?

2010ರಲ್ಲಿ ತೆರೆಕಂಡ 'ಕಾದಲಗಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೃಷ್ಣಕುಮಾರ್ ಕಳೆದ ಕೆಲವು ಸಮಯದಿಂದ ಸಿನಿಮಾಗಳಿಂದ ದೂರ ಉಳಿದಿದ್ದರು. 2020ರಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದ ಆಂಥಾಲಜಿ ಚಿತ್ರ "ಪುಥಮ್ ಪುದು ಕಾಲೈ"ನೊಂದಿಗೆ ಚಿತ್ರರಂಗಕ್ಕೆ ಮರಳಿದ್ದರು. ಮೊದಲು ದಿ ಲಿಟಲ್ ಥಿಯೇಟರ್ ಗ್ರೂಪ್‌ನ ಕಲಾತ್ಮಕ ನಿರ್ದೇಶಕರಾಗಿ ಕೆಲಸ ಮಾಡಿದರು. ಅದೇ ವರ್ಷದ ನಂತರ, ಅವರು ಸೂರರೈ ಪೊಟ್ರು ಚಿತ್ರದಲ್ಲಿ ಸೂರ್ಯ ಅವರ ಸ್ನೇಹಿತ ಚೈತನ್ಯ ಅಲಿಯಾಸ್ ಚಾಯ್ ಪಾತ್ರಕ್ಕಾಗಿ ಖ್ಯಾತಿ ಪಡೆದರು. 2022ರಲ್ಲಿ ಅವರು ಧನುಷ್ ನಟನೆಯ ಮಾರನ್ ಚಿತ್ರದಲ್ಲಿ ನಟಿಸಿದರು. ಕಲ್ಕಿ ಸಿನಿಮಾ ಮೊದಲ ದಿನ 180 ಕೋಟಿ ರೂಪಾಯಿ ಗಳಿಸಿದೆ. 

Whats_app_banner