logo
ಕನ್ನಡ ಸುದ್ದಿ  /  ಮನರಂಜನೆ  /  ಒಂದೇ ವಾರದಲ್ಲಿ ಸಾವಿರ ಕೋಟಿ ಕ್ಲಬ್‍ ಸೇರಿ ಹೊಸ ದಾಖಲೆ ಬರೆದ ಪುಷ್ಪ 2; ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಅಲ್ಲು ಅರ್ಜುನ್ ಸಿನಿಮಾ

ಒಂದೇ ವಾರದಲ್ಲಿ ಸಾವಿರ ಕೋಟಿ ಕ್ಲಬ್‍ ಸೇರಿ ಹೊಸ ದಾಖಲೆ ಬರೆದ ಪುಷ್ಪ 2; ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಅಲ್ಲು ಅರ್ಜುನ್ ಸಿನಿಮಾ

Jayaraj HT Kannada

Dec 12, 2024 08:54 AM IST

google News

Pushpa 2 box office: ಒಂದೇ ವಾರದಲ್ಲಿ ಸಾವಿರ ಕೋಟಿ ಕ್ಲಬ್‍ ಸೇರಿ ಹೊಸ ದಾಖಲೆ ಬರೆದ ಪುಷ್ಪ 2

    • ಬಿಡುಗಡೆಗೂ ಮೊದಲೇ ‘ಪುಷ್ಪ 2’ ಚಿತ್ರವು ವಿತರಣೆ, ಡಿಜಿಟಿಲ್‍, ಸ್ಯಾಟಲೈಟ್‍ ಹಕ್ಕುಗಳಿಂದ 1000 ಕೋಟಿ ರೂ. ಗಳಿಸಿತ್ತು. ಇದೀಗ ಬಿಡುಗಡೆಯಾದ ಮೊದಲ ವಾರದಲ್ಲಿ ಸಾವಿರ ಕೋಟಿ ಕ್ಲಬ್‍ ಸೇರುವ ಮೂಲಕ, ಅಲ್ಲು ಅರ್ಜುನ್‌ ನಟನೆಯ ಸಿನಿಮಾ ಹೊಸ ದಾಖಲೆ ನಿರ್ಮಿಸಿದೆ. (ವರದಿ: ಚೇತನ್‌ ನಾಡಿಗೇರ್)
Pushpa 2 box office: ಒಂದೇ ವಾರದಲ್ಲಿ ಸಾವಿರ ಕೋಟಿ ಕ್ಲಬ್‍ ಸೇರಿ ಹೊಸ ದಾಖಲೆ ಬರೆದ ಪುಷ್ಪ 2
Pushpa 2 box office: ಒಂದೇ ವಾರದಲ್ಲಿ ಸಾವಿರ ಕೋಟಿ ಕ್ಲಬ್‍ ಸೇರಿ ಹೊಸ ದಾಖಲೆ ಬರೆದ ಪುಷ್ಪ 2

ಅಲ್ಲು ಅರ್ಜುನ್‍ ಅಭಿನಯದ ‘ಪುಷ್ಪ 2’ ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ದಾಖಲೆಯನ್ನು ಮಾಡಿದ್ದು, ಸದ್ಯದ ಮಟ್ಟಿಗೆ ಈ ದಾಖಲೆಯನ್ನು ಮುರಿಯುವುದು ಕಷ್ಟವೇ. ಚಿತ್ರವು ಬಿಡುಗಡೆಯಾದ ಮೊದಲ ವಾರದಲ್ಲಿ ಸಾವಿರ ಕೋಟಿ ಕ್ಲಬ್‍ ಸೇರುವ ಮೂಲಕ, ಅತೀ ಕಡಿಮೆ ಸಮಯದಲ್ಲಿ 1000 ಕೋಟಿ ರೂ. ಕ್ಲಬ್‍ ಸೇರಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

‘ಪುಷ್ಪ 2’ ಚಿತ್ರವು ಹಲವು ದಾಖಲೆಗಳನ್ನು ಮುರಿಯುತ್ತದೆ ಎಂದು ಮೊದಲೇ ಅಂದಾಜಿಸಲಾಗಿತ್ತು. ಏಕೆಂದರೆ, ಆ ಚಿತ್ರಕ್ಕಿದ್ದ ಕ್ರೇಜ್‍ ಅಂತಹದು. ಅದಕ್ಕೆ ಸರಿಯಾಗಿ, ಆರಂಭದಿಂದಲೂ ‘ಪುಷ್ಪ 2’ ಚಿತ್ರವು ಭಾರತೀಯ ಚಿತ್ರರಂಗದಲ್ಲಿದ್ದ ಹಿಂದಿನ ದಾಖಲೆಗಳನ್ನು ಹಿಂದಿಕ್ಕುತ್ತಾ ಬಂದಿದೆ. ಚಿತ್ರವು ಮೊದಲ ದಿನವೇ 294 ಕೋಟಿ ರೂ. ಗಳಿಕೆ ಮಾಡುವ ಮೂಲಕ, ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ‘ಪುಷ್ಪ 2’ ಚಿತ್ರದ ಭಾರತದ ಗಳಿಕೆ 175 ಕೋಟಿಯಷ್ಟಾದರೆ, ಹೊರದೇಶಗಳಿಂದ 119 ಕೋಟಿ ರೂ. ಗಳಿಕೆಯಾಗಿತ್ತು.

ಇದೀಗ ಬಾಕ್ಸ್ ಆಫೀಸ್‍ ಟ್ರಾಕರ್ ಸಚ್ನಿಕ್‍ ಡಾಟ್‍ಕಾಮ್‍ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಚಿತ್ರವು ಬುಧವಾರ ರಾತ್ರಿಯ ಹೊತ್ತಿಗೆ 1000 ಕೋಟಿ ಕ್ಲಬ್‍ ಸೇರಿದೆಯಂತೆ. ಈ ಪೈಕಿ 815 ಕೋಟಿ ರೂ. ಭಾರತದಿಂದ ಬಂದರೆ, 190 ಕೋಟಿ ರೂ. ಹೊರದೇಶಗಳಲ್ಲಿ ಗಳಿಕೆ ಆಗಿದೆಯಂತೆ. ಇದಕ್ಕೂ ಮೊದಲು ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಚಿತ್ರವು 10 ದಿನಗಳಲ್ಲಿ 1000 ಕೋಟಿ ರೂ. ಕ್ಲಬ್‍ ಸೇರಿತ್ತು. ಇನ್ನು, ಅವರದ್ದೇ 'RRR' ಚಿತ್ರವು 16 ದಿನಗಳಲ್ಲಿ ಈ ಕ್ಲಬ್‍ ಸೇರಿತ್ತು. ‘ಪುಷ್ಪ 2’ ಚಿತ್ರವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು, ಕೇವಲ ಒಂದು ವಾರದಲ್ಲಿ ಸಾವಿರ ಕೋಟಿ ರೂ. ಕ್ಲಬ್‍ ಸೇರಿರುವುದು ವಿಶೇಷ. ಅಷ್ಟೇ ಅಲ್ಲ, ಈ ಕ್ಲಬ್‍ನಲ್ಲಿರುವ ಎಂಟನೇ ಭಾರತೀಯ ಚಿತ್ರ ಮತ್ತು ನಾಲ್ಕನೇ ತೆಲುಗು ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದಕ್ಕೂ ಮೊದಲು ‘ಬಾಹುಬಲಿ 2’, 'RRR' ಮತ್ತು ‘ಕಲ್ಕಿ 2898 ಎಡಿ’ ಚಿತ್ರಗಳು 1000 ಕೋಟಿ ಕ್ಲಬ್‍ ಸೇರಿದ್ದವು.

ಬಿಡುಗಡೆಗೂ ಮುನ್ನವೇ 1000 ಕೋಟಿ ಬಾಚಿದ್ದ ಪುಷ್ಪ 2

ಇದು ಬಾಕ್ಸ್ ಆಫೀಸ್‍ ವಿಷಯವಾದರೆ, ಬಿಡುಗಡೆಗೂ ಮೊದಲೇ ‘ಪುಷ್ಪ 2’ ಚಿತ್ರವು ವಿತರಣೆ, ಡಿಜಿಟಿಲ್‍, ಸ್ಯಾಟಲೈಟ್‍ ಹಕ್ಕುಗಳಿಂದ 1000 ಕೋಟಿ ರೂ. ಗಳಿಸಿತ್ತು. ಈ ಪೈಕಿ ವಿತರಣೆ ಹಕ್ಕುಗಳಿಂದ ನಿರ್ಮಾಪಕರಿಗೆ 640 ಕೋಟಿ ರೂ. ಬಂದರೆ, ಬೇರೆ ಹಕ್ಕುಗಳಿಂದ 425 ಕೋಟಿ ರೂ. ಗಳಿಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಅವೆರಡೂ ಸೇರಿ ಚಿತ್ರ ಬಿಡುಗಡೆಗೂ ಮೊದಲೇ 1000 ಕೋಟಿ ರೂ. ಗಳಿಸಿತ್ತು ಎಂದು ಹೇಳಲಾಗುತ್ತಿದೆ.

ರಶ್ಮಿಕಾ ಮಂದಣ್ಣ ನಾಯಕಿ

‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಜಗಪತಿ ಬಾಬು, ತಾರಕ್‍ ಪೊನ್ನಪ್ಪ, ರಾವ್‍ ರಮೇಶ್‍, ಫಹಾದ್‍ ಫಾಸಿಲ್‍, ಸುನೀಲ್, ಅನುಸೂಯ ಭಾರದ್ವಾಜ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಸುಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ