Viduthalai 2 Twitter Review: ವಿಡುದಲೈ 2 ಮೂಲಕ ಕ್ರಾಂತಿ ಕಥೆಗೆ ಮುನ್ನುಡಿ ಬರೆದ ವೆಟ್ರಿಮಾರನ್; ಹೇಗಿದೆ ಸಿನಿಮಾ, ಪ್ರೇಕ್ಷಕ ಏನಂದ?
Dec 20, 2024 10:29 AM IST
ವಿಡುದಲೈ 2 ಟ್ವಿಟ್ಟರ್ ವಿಮರ್ಶೆ
- Viduthalai Part 2 X Review: ಮೊದಲ ಭಾಗದಲ್ಲಿ ವಾಥಿಯಾರ್ (ವಿಜಯ್ ಸೇತುಪತಿ) ಬಂಧನದ ಮೂಲಕ ವಿಡುದಲೈ ಸಿನಿಮಾ ಮುಗಿದಿತ್ತು. ಇದೀಗ ಹೀಗೆ ಬಂಧನವಾದ ವಾಥಿಯಾರ್ ಯಾರು? ಅವನ ಹಿನ್ನೆಲೆ ಮತ್ತು ಹೋರಾಟ ಹೇಗಿತ್ತು ಎಂಬುದನ್ನು ಪಾರ್ಟ್ 2 ಚಿತ್ರದಲ್ಲಿ ಅಷ್ಟೇ ಬಿರುಸಾಗಿಯೇ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವೆಟ್ರಿಮಾರನ್. ಹೀಗಿದೆ ಈ ಸಿನಿಮಾದ ಪ್ರೇಕ್ಷಕರ ವಿಮರ್ಶೆ.
Viduthalai Part 2 Twitter Review: ತಮಿಳಿನ ಸೂಕ್ಷ್ಮ ಸಂವೇದಿ ನಿರ್ದೇಶಕ ವೆಟ್ರಿಮಾರನ್ ಇದೀಗ ವಿಡುದಲೈ ಪಾರ್ಟ್ 2 ಸಿನಿಮಾ ಮೂಲಕ ಚಿತ್ರಮಂದಿರಕ್ಕೆ ಆಗಮಿಸಿದ್ದಾರೆ. ಕಳೆದ ವರ್ಷ ಇದೇ ಚಿತ್ರದ ಮೊದಲ ಭಾಗ ಬಿಡುಗಡೆ ಆಗಿತ್ತು. ವೀಕ್ಷಕರಿಂದ ಹೆಚ್ಚು ಪ್ರಶಂಸೆ ಪಡೆದ ಇದೇ ಸಿನಿಮಾದ ಮುಂದುವರಿದ ಭಾಗ ಇಂದು (ಡಿ. 20) ಬಿಡುಗಡೆ ಆಗಿದೆ. ಮೊದಲ ಭಾಗದಲ್ಲಿ ಸೂರಿ ಕಥೆಯ ನಾಯಕನಾಗಿ ಇಡೀ ಸಿನಿಮಾವನ್ನು ಹೊತ್ತು ಸಾಗಿದ್ದರು. ಎರಡನೇ ಭಾಗದಲ್ಲಿ ಅದು ವಿಜಯ್ ಸೇತುಪತಿ ಹೆಗಲಿಗೆ ಜಾರಿದೆ. ಆ ಕಾರಣಕ್ಕೂ ಈ ಸಿನಿಮಾ ಹೆಚ್ಚು ನಿರೀಕ್ಷೆ ಹುಟ್ಟುಹಾಕಿತ್ತು. ಈಗ ಆ ಕೌತುಕ ತಣಿದಿದೆ. ಸಿನಿಮಾ ನೋಡಿದ ಪ್ರೇಕ್ಷಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾನೆ. ಹೀಗಿದೆ ವಿಡುದಲೈ ಪಾರ್ಟ್ 2 ಚಿತ್ರದ ಟ್ವಿಟ್ಟರ್ ವಿಮರ್ಶೆ.
ಖ್ಯಾತ ಬರಹಗಾರ ಜಯಮೋಹನ್ ಅವರ ಕಾದಂಬರಿ ಆಧರಿಸಿ ವಿಡುದಲೈ 2 ಸಿನಿಮಾ ಮೂಡಿಬಂದಿದೆ. ಎರಡನೇ ಭಾಗದಲ್ಲಿ, ಇಡೀ ಸಿನಿಮಾ ಸೇತುಪತಿಯ ಪಾತ್ರದ ಸುತ್ತ ಕೇಂದ್ರೀಕೃತವಾಗಿದೆ. ವೆಟ್ರಿಮಾರನ್ ಅವರ ಪಿರಿಯಾಡಿಕ್ ಆಕ್ಷನ್ ಡ್ರಾಮಾ ವಿಡುದಲೈ 2 ಸಿನಿಮಾದಲ್ಲಿ ವಿಜಯ್ ಸೇತುಪತಿಗೆ ಮಂಜು ವಾರಿಯರ್ ಜತೆಯಾಗಿದ್ದಾರೆ. ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದರೆ, ವೆಲ್ರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ವಾಥಿಯಾರ್ ಯಾರು?
ಮೊದಲ ಭಾಗದಲ್ಲಿ ವಾಥಿಯಾರ್ ಬಂಧನದ ಮೂಲಕ ಸಿನಿಮಾ ಮುಗಿದಿತ್ತು. ಇದೀಗ ಹೀಗೆ ಬಂಧನವಾದ ವಾಥಿಯಾರ್ ಯಾರು? ಅವನ ಹಿನ್ನೆಲೆ ಮತ್ತು ಹೋರಾಟ ಹೇಗಿತ್ತು ಎಂಬುದನ್ನು ಪಾರ್ಟ್ 2 ಚಿತ್ರದಲ್ಲಿ ಅಷ್ಟೇ ಬಿರುಸಾಗಿಯೇ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವೆಟ್ರಿಮಾರನ್. ಕೆಲ ದಶಕಗಳ ಹಿಂದಿನ ಕಥಾನಕವನ್ನು ಅಷ್ಟೇ ಗಟ್ಟಿ ಎಳೆಯ ಮೂಲಕ, ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಸಿನಿಮಾ ಯಶಸ್ವಿಯಾಗಿದೆ. ಭಾರತದಲ್ಲಿ ಈ ಸಿನಿಮಾ ಬಿಡುಗಡೆ ಆಗುವುದಕ್ಕೂ ಮುನ್ನ ವಿದೇಶದಲ್ಲಿ ಪ್ರೀಮಿಯರ್ ಆಗಿದೆ. ಅಲ್ಲಿನ ಕೆಲ ಪ್ರೇಕ್ಷಕರು ಸಿನಿಮಾ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಒಟಿಟಿಯಲ್ಲಿದೆ ಮೊದಲ ಭಾಗ
ಕಳೆದ ವರ್ಷ ತೆರೆಕಂಡಿದ್ದ ಇದೇ ವಿಡುದಲೈ ಸಿನಿಮಾವನ್ನು ಒಟಿಟಿಯಲ್ಲಿ ವೀಕ್ಷಣೆ ಮಾಡಿ, ಚಿತ್ರಮಂದಿರಕ್ಕೆ ಬರಬಹುದು. ವಿಡುದಲೈ ಚಿತ್ರ ಜೀ5 ಮತ್ತು ಒಟಿಟಿ ಪ್ಲೇ ಪ್ರೀಮಿಯಮ್‌ನಲ್ಲಿ ವೀಕ್ಷಿಸಬಹುದು. ಎರಡನೇ ಭಾಗದ ಸ್ಟ್ರೀಮಿಂಗ್ ಹಕ್ಕುಗಳನ್ನು ಸಹ ಜೀ 5 ಪಡೆದುಕೊಂಡಿದೆ. ಕಿಶೋರ್, ಕೆನ್ ಕರುಣಾಸ್, ಭವಾನಿ ಶ್ರೀ, ಗೌತಮ್ ವಾಸುದೇವ್ ಮೆನನ್, ರಾಜೀವ್ ಮೆನನ್, ಅನುರಾಗ್ ಕಶ್ಯಪ್, ಇಳವರಸು, ಬಾಲಾಜಿ ಶಕ್ತಿವೇಲ್ ಸೇರಿ ಇತರರು ಈ ಚಿತ್ರದ ಭಾಗವಾಗಿದ್ದಾರೆ.