ಸೀತಾ ರಾಮ ಧಾರಾವಾಹಿ ಡೈಲಾಗ್ ರೈಟರ್ ಚೈತ್ರಿಕಾ ಹೆಗಡೆ ಸಂದರ್ಶನ; ಮುದ್ದು ಕಣ್ಮಣಿ ಸಿಹಿ ಬಗ್ಗೆ ಹೇಳಿದ್ದೇನು ನೋಡಿ
Dec 03, 2024 08:59 AM IST
ಸೀತಾರಾಮ ಧಾರಾವಾಹಿ ಡೈಲಾಗ್ ರೈಟರ್ ಚೈತ್ರಿಕಾ ಹೆಗಡೆ ಸಂದರ್ಶನ
- ಸೀತಾ ರಾಮ ಧಾರಾವಾಹಿಯ ಡೈಲಾಗ್ ರೈಟರ್ ಚೈತ್ರಿಕಾ ಹೆಗಡೆ ಅವರ ಮಾತಿನಲ್ಲಿ ತೆರೆಹಿಂದಿನ ಶ್ರಮದ ಬಗ್ಗೆ ಒಂದಷ್ಟು ವಿಷಯ ಇಲ್ಲಿದೆ. ಡೈಲಾಗ್ ರೈಟರ್ ಪಾಡೇನು, ಕಥೆ ಬೋರಾಯ್ತು ಎಂದು ಹೇಳುವ ಜನ ಅರ್ಥಮಾಡಿಕೊಳ್ಳಬೇಕಾದ ಸಾಕಷ್ಟು ಅಂಶಗಳನ್ನು ಹಿಂದುಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ಅವರು ಹಂಚಿಕೊಂಡಿದ್ದಾರೆ ಓದಿ.
Seetha Rama Serial Writer Chaitrika Hegade: ನಾವು ಪ್ರತಿನಿತ್ಯ ತೆರೆಯ ಮೇಲೆ ಸಾಕಷ್ಟು ಜನರನ್ನು ನೋಡುತ್ತೇವೆ. ತಾರಾಗಣದ ಪರಿಚಯ ಎಲ್ಲರಿಗೂ ಇರುತ್ತದೆ. ಆದರೆ ಒಂದು ಧಾರಾವಾಹಿ ಸುಂದರವಾಗಬೇಕು ಎಂದರೆ ಅದರ ಹಿಂದೆ ಹತ್ತಾರು ಜನರ ಪರಿಶ್ರಮ ಇರುತ್ತದೆ. ತೆರೆಯ ಮೇಲೆ ಎಷ್ಟು ಜನ ಕಾಣಿಸಿಕೊಳ್ಳುತ್ತಾರೋ ಅದರ ಮೂರುಪಟ್ಟು ಜನ ತೆರೆಹಿಂದೆ ಶ್ರಮಿಸಿರುತ್ತಾರೆ. ಪಾತ್ರಗಳ ಜೀವಾಳವಾದ ಸಂಭಾಷಣೆಯನ್ನು ಬರೆಯುವ ಚೈತ್ರಿಕಾ ಹೆಗಡೆ ತೆರೆಯ ಹಿಂದಿನ ಸಾಕಷ್ಟು ವಿಚಾರಗಳನ್ನು ನಮ್ಮೊಂದಿಗೆ ತೆರೆದಿಟ್ಟಿದ್ದಾರೆ.
- ಎಷ್ಟು ವರ್ಷಗಳಿಂದ ಸೀರಿಯಲ್ ಸ್ಕ್ರಿಪ್ಟಿಂಗ್ ಮಾಡುತ್ತಿದ್ದೀರಿ?
2016ನೇ ಇಸವಿಯಿಂದ ನಾನು ಸೀರಿಯಲ್‌ಗಳಿಗೆ ಡೈಲಾಗ್ ರೈಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ಮೊದಲು ಉದಯ ವಾಹಿನಿಯಲ್ಲಿ ನಾನು ಕೆಲಸ ಆರಂಭಿಸಿದೆ. ಸರಯೂ ಧಾರಾವಾಹಿ ಡೈಲಾಗ್ ರೈಟರ್ ಆಗಿದ್ದೆ. ಅದಾದ ನಂತರ ಜೋ ಜೋ ಲಾಲಿ, ಕಸ್ತೂರಿ ನಿವಾಸ, ರಂಗನಾಯಕಿ, ಗೀತಾ, ಕಮಲಿ, ಪುಣ್ಯವತಿ, ಮಾನಸ ಸರೋವರ, ಸೀತಾ ರಾಮ, ಗಂಗೆ ಗೌರಿ, ಅಂತರಪಟ ಈ ಎಲ್ಲಾ ಧಾರಾವಾಹಿಗಳಿಗೆ ಡೈಲಾಗ್ ರೈಟರ್ ಆಗಿದ್ದೇನೆ.
- ನಿಮಗೆ ಯಾರ ಸಂಭಾಷಣೆ ಬರೆಯಲು ಇಷ್ಟವಾಗುತ್ತದೆ
ಸದ್ಯ ಸೀತಾರಾಮ ಧಾರಾವಾಹಿ ಬರೆಯುತ್ತಿರುವದರಿಂದ ಉದಾಹರಣೆಗೆ ಪ್ರಿಯಾ ಕ್ಯಾರೆಕ್ಟರ್ ಸಂಭಾಷಣೆ ಬರೆಯಲು ಇಷ್ಟ. ಅವಳು ಈಗಿನ ಸಮಾಜದ ಒಂದು ಸೀದಾ, ಸಾದಾ ಹುಡುಗಿ ಪಟ ಪಟ ಎಂದು ಮಾತಾಡಿಕೊಂಡಿರುವ ಈ ರೀತಿ ವ್ಯಕ್ತಿತ್ವಗಳನ್ನು ಚಿತ್ರಿಸುವುದು ತುಂಬಾ ಸುಲಭ. ಟಾಕಿಂಗ್ ಟಾಮ್ ಕ್ಯಾರೆಕ್ಟರ್ ಪ್ರಿಯಾ ಟ್ರೆಂಡಿಗೆ ತಕ್ಕ ಮಾತುಗಳನ್ನಾಡುತ್ತಾಳೆ. ಗಂಭೀರತೆ ಬೇಡ ಸರಳ ಮತ್ತು ಸುಂದರವಾಗಿ ನ್ಯಾಚುರಲ್ ಆಗಿ ಬರೆಯಹುದು. ಈ ರೀತಿ ಪಾತ್ರಗಳ ಸಂಭಾಷಣೆ ಬರೆಯುವುದು ನನಗೆ ತುಂಬಾ ಇಷ್ಟ.
- ನಿಜ ಜೀವನದ ಘಟನೆಗಳಿಂದ ನೀವು ಸ್ಪೂರ್ತಿ ಪಡೆದು ಬರೆದ ಸಂಭಾಷಣೆಗಳಿದೆಯೇ?
ನಿಜ ಜೀವನದ ಘಟನೆ ಎಲ್ಲೂ ಇಲ್ಲ. ಆದರೆ ನಾವು ಮಾತನಾಡುವ ಸಂದರ್ಭದಲ್ಲಿ ಬಳಕೆ ಮಾಡಿದ ವಾಕ್ಯಗಳನ್ನು ನಾನು ಹೆಚ್ಚಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ. ಎಷ್ಟೋ ಮಾತುಗಳು ನಾನು ಇನ್ನೊಬ್ಬರ ಬಾಯಿಂದ ಬಂದಿರುವುದನ್ನು ಕೇಳಿರುತ್ತೇನೆ. ಅಂತಹ ಉತ್ತಮ ಮಾತುಗಳಿದ್ದರೆ ಅದನ್ನು ನಾನು ಯಾವುದಾದರೂ ಪಾತ್ರದ ಮೂಲಕ ಹೇಳಿಸಬೇಕು ಎಂದು ಬಯಸುತ್ತೇನೆ. ಈ ರೀತಿ ಈ ಹಿಂದೆ ಕೆಲವೊಮ್ಮೆ ಆಗಿದೆ. ಆದರೆ ಚಿತ್ರಕಥೆ ನಾನು ಇನ್ನೂ ಬರೆದಿಲ್ಲ ಎಂದಿದ್ದಾರೆ. ಚಿತ್ರಕಥೆಯನ್ನೇ ನಾನು ಬರೆದಿದ್ದರೆ ಸಾಕಷ್ಟು ವಿಷಯಗಳನ್ನು ಸೇರಸಬಹುದಿತ್ತೇನೋ, ಆದರೆ ನಾನಿನ್ನೂ ಚಿತ್ರಕಥೆ ಬರೆದಿಲ್ಲ.
- ಸಂದರ್ಭಕ್ಕೆ ತಕ್ಕಂತೆ ದೃಷ್ಯಗಳಾ? ದೃಷ್ಯಕ್ಕೆ ತಕ್ಕಂತೆ ಸಂಭಾಷಣೆಯಾ?
ದೃಶ್ಯಕ್ಕೆ ತಕ್ಕನಾದ ಸಂಭಾಷಣೆ ಕಟ್ಟಬೇಕಾಗುತ್ತದೆ. ಆದರೆ ಆ ಸೀನ್ ಏನು ಎಂಬುದನ್ನೂ ನಾವೇ ಕಟ್ಟಿಕೊಡಬೇಕಾಗುತ್ತದೆ. ಈಗ ಒಂದು ಅಡುಗೆ ಮನೆಯ ದೃಶ್ಯ ಇದೆ ಎಂದಾದರೆ ನಾಯಕಿ ಈಗ ಏನು ಮಾಡಲು ಹೊರಟಿದ್ದಾಳೆ ಎಂದು ಬರೆಯಬೇಕು. ನೇರವಾಗಿ ಡೈಲಾಗ್ ಹೇಳಿಸಲು ಆರಂಭಿಸಿದರೆ ಅದು ಸಹಜ ಎಂದು ವೀಕ್ಷಕರಿಗೆ ಅನಿಸಲಾರದು ಆ ಕಾರಣಕ್ಕಾಗಿ. ಈಗ ಉದಾ: ಅಡುಗೆ ಮಾಡುವ ಸೀನ್ ಇದೆ ಎಂದರೆ ಆ ಸೀನ್ ಹೇಗೆ ಆರಂಭವಾಗುತ್ತದೆ ಎನ್ನುವುದನ್ನು ಸಂದರ್ಭಕ್ಕೆ ತಕ್ಕಂತೆ ಬರೆದು ಮುಂದಿನ ಸಂಭಾಷಣೆ ಬರೆಯಬೇಕು. ಉದ್ದೇಶವನ್ನು ನಾವು ಹೇಳಿಸಬೇಕಾಗಿರುತ್ತದೆ. ಕೀ ಡೈಲಾಗ್ಸ್‌ನನ್ನು ಬೆಳೆಸಿಕೊಂಡು ಹೋಗಬೇಕು.
- ನೀವು ಒಂದು ಧಾರಾವಾಹಿಯಲ್ಲಿ ಎಷ್ಟು ಪಾತ್ರಗಳಿಗೆ ಸಂಭಾಷಣೆ ಬರೆಯುತ್ತೀರಿ?
ಧಾರಾವಾಹಿಯ ಪ್ರತಿಯೊಂದು ಪಾತ್ರಕ್ಕೂ ನಾವೇ ಸಂಭಾಷಣೆ ಬರೆಯಬೇಕು. ಒಂದು ಚಿಕ್ಕ ನರೇಷನ್ ಮೊದಲಿಗೆ ಬರೆಯಬೇಕು. ನಮ್ಮ ಧಾರಾವಾಹಿಯ ಮುಖ್ಯ ಪಾತ್ರವಾ? ಅಥವಾ ಪೋಷಕ ಪಾತ್ರವಾ ಎಂಬುದರ ಮೇಲೆ ಸಮಯದ ಮಿತಿಯನ್ನು ತಲೆಯಲ್ಲಿ ಇಟ್ಟುಕೊಂಡು ನಾವು ಡೈಲಾಗ್ ಬರೆಯಬೇಕಾಗುತ್ತದೆ. ಯಾವ ಪಾತ್ರ ಮುಖ್ಯ? ಇದಕ್ಕೆಷ್ಟು ಸಮಯ ನೀಡಬೇಕು? ಎಂದೆಲ್ಲ ನೋಡಿಕೊಳ್ಳಬೇಕು. ಧಾರಾವಾಹಿಯ ಮುಖ್ಯ ಪಾತ್ರಕ್ಕೂ ಆ ಘಟನೆಯ ಮುಖ್ಯ ಪಾತ್ರಕ್ಕೂ ವ್ಯತ್ಯಾಸ ಇರುತ್ತದೆ. ಆದರೆ ಎಲ್ಲ ಪಾತ್ರಗಳ ಸಂಭಾಷಣೆಯನ್ನು ಬರೆಯುವವರೂ ಒಬ್ಬರೇ ಆಗಿರುತ್ತಾರೆ. ನಾವು ಕಳಿಸಿದ ಸೀನ್ ಪೇಪರ್ ನಿರ್ದೇಶಕರಿಗೆ ಸ್ಪಷ್ಟವಾದ ಚಿತ್ರಣವನ್ನು ಕಟ್ಟಿಕೊಡುವಂತಿರಬೇಕು.
- ಸಿಹಿ ಪಾತ್ರದ ಕುರಿತು ನಿಮಗೇನಿದೆ ಅನಿಸಿಕೆ
ಸೀತಾರಾಮ ಧಾರಾವಾಹಿಯ ಜೀವಾಳ ಸಿಹಿ. ಆಕೆಯ ದೃಷ್ಟಿಯಲ್ಲೆ ಈ ಪಾತ್ರ ಬೆಳೆಯೋದು. ತುಂಬಾ ಕನಸಿಟ್ಟು ಕಟ್ಟಿರುವ ಪಾತ್ರ ಇದು. ಎಲ್ಲರೂ ಪ್ರಶ್ನೆ ಮಾಡುತ್ತಾರೆ ಅಷ್ಟು ಚಿಕ್ಕ ಮಗುವಿನ ಬಾಯಲ್ಲಿ ಯಾಕಷ್ಟು ಪ್ರಬುದ್ಧ ಮಾತುಗಳನ್ನು ಆಡಿಸುತ್ತೀರಾ ಎಂದು. ಆದರೆ ಇದು ಸಿಹಿಯನ್ನೇ ಮುಖ್ಯವಾಗಿ ಇಟ್ಟುಕೊಂಡು ಮಾಡಿರುವ ಧಾರಾವಾಹಿ. ಸೀತಾ, ರಾಮರ ಪಾತ್ರದ ಮೇಲೆ ಕಥೆ ಮಾಡಿ ಎಂದು ಸಹ ಆಗಾಗ ಕಾಮೆಂಟ್‌ಗಳು ಬರುತ್ತವೆ. ಆದರೆ ಸಿಹಿಯನ್ನು ಹೊರತಾಗಿ ಕಥೆ ಮಾಡಲು ಸಾಧ್ಯವಿಲ್ಲ. ಏನೇ ಕಥೆ ಮಾಡಿದರೂ ಅದರ ಜೀವಾಳ ಸಿಹಿಯೇ ಆಗಿರುತ್ತಾಳೆ.
- ಸಿಹಿ ಬಗ್ಗೆ ಒಂದಷ್ಟು ವಿಚಾರ
ನಾವು ಏನು ಅಂದುಕೊಂಡು ಬರೆದಿರುತ್ತೇವೋ, ಅದನ್ನು ಅಷ್ಟೇ ಸುಂದರವಾಗಿ ಅದೇ ಭಾವನೆಯಲ್ಲಿ ಡೈಲಾಗ್ ಡಿಲವರಿ ಮಾಡುವ ಹುಡುಗಿ ಅವಳು. ಡೈರೆಕ್ಟರ್ ಹಾಗೂ ಸೆಟ್‌ನವರ ಶ್ರಮ ಕೂಡ ಇದರಲ್ಲಿ ಇರುತ್ತದೆ. ಸೀತಾ ರಾಮ ಧಾರಾವಾಹಿಗೆ ಸಿಕ್ಕ ವರ ಸಿಹಿ ಎಂದೇ ಹೇಳಬಹುದು. ಅಷ್ಟು ಚಂದವಾಗಿ ಕ್ಯಾರೆಕ್ಟರ್ ನಿಭಾಯಿಸುತ್ತಾಳೆ. ಕನ್ನಡ ನಾಡಿನವಳಲ್ಲ ಆದರೂ ಅಷ್ಟು ಸ್ಪಷ್ಟವಾಗಿ ಮಾತಾಡುತ್ತಾಳೆ. ಸಿಹಿ ಬಗ್ಗೆ ಮತ್ತು ಸಿಹಿ ಪಾತ್ರ ಮಾಡುತ್ತಿರುವ ರಿತು ಸಿಂಗ್ ಇಬ್ಬರ ಮೇಲೂ ನನಗೆ ತುಂಬಾ ಖುಷಿ ಇದೆ. ತುಂಬಾ ಮುದ್ದಾದ ಹೆಣ್ಣುಮಗಳು ಅವಳು.
- ಜನರು ಸಿಹಿ ಯಾವ ರೀತಿ ಮಾತುಗಳನ್ನಾಡಿದಾಗ ಹೆಚ್ಚು ಇಷ್ಟಪಡುತ್ತಾರೆ
ಕೆಲವರು ಅಷ್ಟು ಪುಟ್ಟ ಮಗುವಿನ ಬಾಯಲ್ಲಿ ಯಾಕೆ ಆರೀತಿ ಮಾತಾಡಿಸುತ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ. ಚಿಕ್ಕ ಮಗುವೊಂದನ್ನು ಮಾತಾಡಿಸಿ ನೋಡಿ ಈಗಿನ ಕಾಲದಲ್ಲಿ ಮಕ್ಕಳು ಯಾವ ರೀತಿ ಮಾತಾಡುತ್ತಾರೆ ಎಂದು. ನಮಗೇ ಆಶ್ಚರ್ಯ ಆಗುತ್ತದೆ. ಆ ಕಾರಣದಿಂದ ಸಿಹಿ ಆಡುತ್ತಿರುವ ಮಾತು ಅತಿಶಯೋಕ್ತಿ ಏನೂ ಅಲ್ಲ. ಆದರೂ ಸಿಹಿ ಮುಗ್ಧವಾಗಿದ್ದಾಗ ಮತ್ತು ಅವಳ ಬುದ್ದಿವಂತಿಕೆಯನ್ನು ಜನ ಇಷ್ಟಪಡುತ್ತಾರೆ. ಅವಳ ಕ್ಯೂಟ್ ಕ್ಯೂಟ್ ಮಾತು ಅದರಲ್ಲೂ ಒಂದು ಉದಾಹರಣೆಯೆಂದರೆ ಅಶೋಕ್ ಅಂಕಲ್ ಎಂದು ಅವಳಿಗೆ ಹೇಳಲು ಬರೋದಿಲ್ಲ. ಅಕೋಶ್ ಅಂಕಲ್ ಎಂದು ಹೇಳುವಾಗ ಜನ ಕಾಮೆಂಟ್ ಮಾಡಿ ಖುಷಿಯಿಂದ ನಗುತ್ತಾರೆ ಅವಳು ಮುಗ್ಧವಾಗಿ ಮಾತಾಡುತ್ತಾಳೆ ಅದನ್ನು ಜನ ತುಂಬಾ ಇಷ್ಟಪಡುತ್ತಾರೆ. ಇನ್ನು ಭಾರ್ಗವಿ ಮಾಡಿದ ತಪ್ಪನ್ನು ತನ್ನ ಜಾಣತನದಿಂದ ಪತ್ತೆಹಚ್ಚುವುದನ್ನೂ ಜನ ತುಂಬಾ ಇಷ್ಟಪಡುತ್ತಾರೆ.
- ಈ ಕ್ಷೇತ್ರದ ಅನುಭವದ ಬಗ್ಗೊಂದಷ್ಟು ಮಾತು
ಈ ಧಾರಾವಾಹಿ ನಾನು ಬರೆಯುತ್ತಿರುವ ಹನ್ನೊಂದನೇ ಧಾರಾವಾಹಿ. ಇದು ತುಂಬಾ ಸಮಯ ಬೇಡುವ ಕೆಲಸ. ಇದಕ್ಕೆ ಸಮಯದ ಮಿತಿ ಹಾಕಿಕೊಳ್ಳಲು ಸಾಧ್ಯವಿಲ್ಲ. ಒಂಬತ್ತರಿಂದ ಆರು ಹೀಗೆ ಒಂಭತ್ತು ಗಂಟೆಗಳ ಕೆಲಸ ಎಂದು ನಿಗದಿ ಮಾಡಿಕೊಳ್ಳುವುದು ಕಷ್ಟ. ನಮ್ಮ ಕೆಲಸ ಶುರುವಾಗುವುದು ರಾತ್ರಿ. ಚಿತ್ರಕಥೆ ಅವರು ಕೊಟ್ಟ ನಂತರ ಬೆಳಿಗ್ಗೆ ಶೂಟಿಂಗ್‌ಗೆ ಹೋಗಿ ಡೈಲಾಗ್ ಕೇಳುತ್ತಾರೆ. ಆಗ ನಾವು ರೆಡಿ ಮಾಡಿರಬೇಕು. ಹೀಗೆ ಒಂದು ರೀತಿ ಸಮಯದ ಮಿತಿ ಇಲ್ಲದ ಕೆಲಸ ಎಂದೇ ಹೇಳುತ್ತೇನೆ. ಶೂಟ್ ಬ್ರೇಕ್ ಸಿಕ್ಕರೆ ತುಂಬಾ ಆರಾಮಾಗಿ ಇರಬಹುದು. ಆ ಸಮಯದಲ್ಲಿ
ನಮ್ಮ ತಿರುಗಾಟ ಸುತ್ತಾಟ, ನಮ್ಮ ಆಸಕ್ತಿಗೂ ಸಮಯಕೊಡಬಹುದು. ಜಗತ್ತಿನಲ್ಲಿ ಏನು ನಡಿಯುತ್ತಿದೆ ಎಂದು ಅರಿತುಕೊಳ್ಳಬೇಕಾಗುತ್ತದೆ. ಸಾಹಿತ್ಯಕ್ಕೂ ಸಂಭಾಷಣೆಗೂ ಸಂಬಂಧ ಇದೆ. ಓದುವುದು ಕೂಡ ಮುಖ್ಯವಾಗಿರುತ್ತದೆ.
- ಜನರಿಗೆ ಒಬ್ಬ ಬರಹಗಾರ್ತಿಯಾಗಿ ಏನು ಹೇಳಲು ಬಯಸುವಿರಿ?
ಕೆಲವರು ಧಾರಾವಾಹಿಗಳಿಗೆ ಸದಾಕಾಲ ಬೈಯ್ಯುತ್ತಾರೆ. ಒಂದು ಧಾರಾವಾಹಿಯಲ್ಲಿ 50 ರಿಂದ 100 ಜನ ಕೆಲಸ ಮಾಡುತ್ತಾ ಇರುತ್ತಾರೆ. ಅದು ಅವರ ದಿನದ ಅಗತ್ಯತೆ. ಎಷ್ಟೋ ಜನರ ಹೊಟ್ಟೆಪಾಡು ಎಂಬ ವಿಷಯವನ್ನು ಬೈಯ್ಯುವವರು ಗಮನಿಸಿರುವುದಿಲ್ಲ. ಸಿನಿಮಾಗಳಲ್ಲಿ ಕ್ರೌರ್ಯ ಇರುತ್ತದೆ, ಕೆಟ್ಟತನ ಬಿಂಬಿಸುವ ಸೀನ್‌ಗಳೂ ಇರುತ್ತದೆ ಆದರೆ ಅದು ಮೂರು ತಾಸುಗಳಲ್ಲಿ ಮುಗಿದು ಹೋಗುತ್ತದೆ. ಧಾರಾವಾಹಿ ಹಾಗಾಗುವುದಿಲ್ಲ. ಒಳ್ಳೆಯದು ಹಾಗೂ ಕೆಟ್ಟದ್ದೂ ಎರಡನ್ನೂ ಹಲವು ದಿನಗಳ ಕಾಲ ತೋರಿಸುವುದರಿಂದ ಜನರಿಗೆ ಧಾರಾವಾಹಿಗಳಿಗೆ ಹೆಚ್ಚು ಪರಿಣಾಮ ಬೀರಬಹುದು. ಇದರಲ್ಲೂ ಕೆಲವು ನೀತಿ ಪಾಠಗಳು ಇರುತ್ತದೆ ಇದನ್ನೂ ಜನರು ಗ್ರಹಿಸುತ್ತಾರೆ. ಒಳ್ಳೆಯದು ಹಾಗೂ ಕೆಟ್ಟದ್ದು ಎಲ್ಲವನ್ನೂ ಜನರು ಗ್ರಹಿಸುತ್ತಾರೆ. ಪಾತ್ರಗಳು ಡೈಲಾಗ್ ಇದರಲೆಲ್ಲ ಏರುಪೇರು ಆಗುತ್ತದೆ. ಒಮ್ಮೊಮ್ಮೆ ಕೆಲವರಿಗೆ ಅನಿವಾರ್ಯತೆ ಸೃಷ್ಟಿಯಾಗಿ ಶೂಟಿಂಗ್‌ಗೆ ಬರಲು ಸಾದ್ಯವಾಗುವುದಿಲ್ಲ. ತೆರೆ ಹಿಂದಿನವರಿರಬಹುದು ಅಥವಾ ತೆರೆಯಮೇಲೆ ಕಾಣಿಸಿಕೊಳ್ಳುವವರಾಗಿರಬಹುದು. ಯಾರಿರಲಿ ಇರದಿರಲಿ “ಶೋ ಮಸ್ಟ್ ಗೋ ಆನ್” ಧಾರಾವಾಹಿ ನಡೆಯಲೇಬೇಕು. ಆಗ ಜನರಿಗೆ ಬೇಸರ ಆಗುತ್ತದೆ. ಸವಾಲುಗಳು ಎದುರಾಗುತ್ತದೆ. ಕಥೆಯನ್ನು ಮುಂದೆ ತೆಗೆದುಕೊಂಡು ಹೋಗಲೇಬೇಕು. ಕಥೆಗೆ ತೇಪೆ ಹಚ್ಚಲೇಬೇಕು ಎನ್ನುವ ಸಂದರ್ಭ ಇರುತ್ತದೆ. ಇದ್ಯಾವುದೂ ಜನರಿಗೆ ಅರ್ಥ ಆಗುವುದಿಲ್ಲ. ಸರಿದೂಗಿಸಿಕೊಂಡು ಹೋಗಲೇಬೇಕಾಗುತ್ತದೆ. ಇದು ಮೇಲ್ನೋಟಕ್ಕೆ ಯಾರಿಗೂ ಅರ್ಥ ಆಗುವ ವಿಷಯವೂ ಅಲ್ಲ.