ಶೂಟಿಂಗ್ ವೇಳೆ ಗಲಾಟೆ; ಬೆಂಗಳೂರಲ್ಲಿ ನಿರ್ದೇಶಕರ ಮೇಲೆ ಗುಂಡು ಹಾರಿಸಲು ಯತ್ನಿಸಿದ ಕಿರುತೆರೆ ನಟ ತಾಂಡವರಾಂ ಬಂಧನ
ಕಿರುತೆರೆ ಇಂಡಸ್ಟ್ರಿಯಲ್ಲಿ ಹೆಸರು ಮಾಡಿರುವ ತಾಂಡವರಾಂ ಅವರು ನಿರ್ದೇಶಕರ ಮೇಲೆ ಶೂಟಿಂಗ್ ವೇಳೆಯೇ ಗುಂಡು ಹಾರಿಸಿ ಬಂಧನಕ್ಕೆ ಒಳಗಾಗಿದ್ದಾರೆ. ಕಾರಣವಾದರೂ ಎನ್ನುವ ಮಾಹಿತಿ ಇಲ್ಲಿದೆವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಸಿನಿಮಾ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಿದ್ದ ಕಾರಣಕ್ಕೆ ಕೋಪಗೊಂಡು ನಿರ್ದೇಶಕರ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಕಿರುತೆರೆ ನಟ ತಾಂಡವರಾಂ ಎಂಬುವರನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಣಕಾಸಿನ ವಿಚಾರ ಮಾತನಾಡುತ್ತಿದ್ದ ವೇಳೆ ಮಾತಿಗೆ ಮಾತು ಬೆಳೆದಿದೆ. ಆ ಸಂದರ್ಭದಲ್ಲಿ ತಾಂಡವರಾಂ ತಾವು ತಂದಿದ್ದ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಭರತ್ ಮೇಲೆ ಗುಂಡು ಹಾರಿಸಿದ್ದಾರೆ. ಆದರೆ ಯಾವುದೇ ಅನಾಹುತ ಆಗಿಲ್ಲ.
ಘಟನೆ ಏನು?
ತಾಂಡವರಾಂ ಜೋಡಿ ಹಕ್ಕಿ, ಭೂಮಿಗೆ ಬಂದ ಭಗವಂತ ಧಾರವಾಹಿಯಲ್ಲಿ ನಟಿಸಿದ್ದಾರೆ. ಮೂಲತಃ ಹಾಸನದ ತಾಂಡವರಾಂ ಹಾಗೂ ಚಲನಚಿತ್ರ ನಿರ್ದೇಶಕ ಭರತ್ ನವುಂದ ಪರಸ್ಪರ ಸ್ನೇಹಿತರಾಗಿದ್ದು, ದೇವನಾಂಪ್ರಿಯ ಎಂಬ ಚಲನಚಿತ್ರ ನಿರ್ದೇಶಿಸುವ ಸಂಬಂಧ ಮಾತುಕತೆ ನಡೆಸಿದ್ದರು.
ಆ ಸಂದರ್ಭದಲ್ಲಿ ನಿರ್ಮಾಪಕರು ಸಿಗದೇ ಇದುದ್ದರಿಂದ ತಾಂಡವರಾಂ ಅವರೇ ಹಂತ-ಹಂತವಾಗಿ ನಿರ್ದೇಶಕ ಭರತ್ ಅವರಿಗೆ ಒಟ್ಟು 6 ಲಕ್ಷ ರೂ. ಹಣವನ್ನು ನೀಡಿದ್ದರು. ಆದರೆ ಚಿತ್ರ ನಿರ್ದೇಶನ ಪ್ರಾರಂಭವಾಗಿ ಎರಡು ವರ್ಷ ಕಳೆದರೂ ಭರತ್ ಚಿತ್ರ ನಿರ್ದೇಶನವನ್ನು ಪೂರ್ಣಗೊಳಿಸಿರಲಿಲ್ಲ. ಆದ್ದರಿಂದ ತಾವು ನೀಡಿರುವ ಹಣವನ್ನು ಹಿಂದಿರುಗಿಸುವಂತೆ ತಾಂಡವರಾಂ ಕೇಳಿದ್ದಾರೆ.
ಈ ಬಗ್ಗೆ ಬಸವೇಶ್ವರ ಬಡಾವಣೆಯಲ್ಲಿರುವ ನಿರ್ಮಾಪಕರ ಕಚೇರಿಯಲ್ಲಿ ನಿನ್ನೆ ಸಂಜೆ ಸಭೆ ಸೇರಿದ್ದರು. ಆಗ ಮಾತಿಗೆ ಮಾತು ಬೆಳೆದು ತಾಂಡವರಾಂ ಗುಂಡು ಹಾರಿಸಿದ್ದಾರೆ.
ಅದೃಷ್ಟವಶಾತ್ ಆ ಗುಂಡು ಕಚೇರಿ ಕೊಠಡಿಯ ಮೇಲ್ಛಾವಣಿಗೆ ತಗುಲಿದ್ದರಿಂದ ಭರತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತನ್ನ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ತಾಂಡವರಾಂ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಭರತ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಕಿರುತೆರೆ ನಟ ತಾಂಡವರಾಂ ಅವರನ್ನು ಬಂಧಿಸಿದ್ದಾರೆ.
ನಕಲಿ ಇಎಸ್ಐ ಕಾರ್ಡ್ ಸೃಷ್ಟಿಸ ವಂಚಿಸುತ್ತಿದ್ದ ನಾಲ್ವರ ಗ್ಯಾಂಗ್ ಅರೆಸ್ಟ್
ನಕಲಿ ಕಂಪನಿಗಳನ್ನು ಹುಟ್ಟು ಹಾಕಿ ಇ ಪೆಹಚಾನ್ (ಇಎಸ್ಐ) ಕಾರ್ಡ್ ಗಳನ್ನು ಮಾಡಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕಾಶ್ ನಗರದ ನಿವಾಸಿ ಶ್ರೀಧರ್, ರಮೇಶ್, ಶಿವಲಿಂಗ ಮತ್ತು ಚಂದ್ರಕುಮಾರ್ ಬಂಧಿಸಲ್ಪಟ್ಟ ಆರೋಪಿಗಳು.
ಆರೋಪಿಗಳಿಂದ 5 ಮೊಬೈಲ್, 4,59,500 ನಗದು, ನಕಲಿ ಕಂಪನಿಗಳ ಸೀಲ್, ವಿವಿಧ ಆಸ್ಪತ್ರೆಗಳ ವೈದ್ಯರ ಸೀಲ್, 4 ಲ್ಯಾಪ್ ಟಾಪ್ ಮತ್ತು ಇಎಸ್ಐ ಅಪಾರ ಪ್ರಮಾಣದ ಕಾರ್ಡ್ ಳನ್ನು ವಶಕ್ಕೆ ಪಡೆಯಲಾಗಿದೆ.
ಇವರು ನಕಲಿ ಕಂಪನಿಗಳನ್ನು ಸೃಷ್ಟಿಸಿ ಆ ಕಂಪನಿಗಳ ಮೂಲಕ ಫಲಾನುಭವಿಗಳಲ್ಲದ 869 ಮಂದಿಗೆ ಇಎಸ್ಐ ಕಾರ್ಡ್ ಮಾಡಿಸಿ ಇಎಸ್ಐ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸರ್ಕಾರಕ್ಕೆ ಕೊಟ್ಯಾಂತರ ರೂ. ನಷ್ಟ ಉಂಟು ಮಾಡಿದ್ದರು.
ಬಂಧಿತರ ಪೈಕಿ ಶ್ರೀಧರ್ ಇಎಸ್ಐ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ. ರಮೇಶ್ ಅದೇ ಆಸ್ಪತ್ರೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ. ರಮೇಶ್ ತನ್ನ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಮತ್ತು ಕುಟುಂಬದ ಸದಸ್ಯರಿಗೆ ಇಎಸ್ಐ ಕಾರ್ಡ್ ಮಾಡಿಸಿಕೊಟ್ಟಿದ್ದ. ಇವರು ತಮ್ಮ ತಂಡಕ್ಕೆ ಗ್ಯಾಸ್ ಏಜೆನ್ಸಿಯೊಂದರ ಉದ್ಯೋಗಿ ಶ್ವೇತಾ ಮತ್ತು ಮತ್ತೊಂದು ಖಾಸಗಿ ಕಚೇರಿಯ ಕಂಪ್ಯೂಟರ್ ಶಶಿಕಲಾ ಅವರನ್ನು ಸೇರಿಸಿಕೊಡು ದಂಧೆ ಪ್ರಾರಂಭಿಸಿದ್ದರು.
ಆರೋಪಿಗಳು ಆರು ನಕಲಿ ಕಂಪನಿ ಹುಟ್ಟು ಹಾಕಿದ್ದರು. ಈ ಕಂಪನಿಗಳ ಕಾರ್ಮಿಕರು ಎಂದು ನಕಲಿ ಗುರುತಿನ ಚೀಟಿ ಮತ್ತು ಇತರೆ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಅವರಿಂದ 20 ಸಾವಿರ ರೂ. ಪಡೆದು ಇಎಸ್ಐ ಕಾರ್ಡ್ ನೀಡುತ್ತಿದ್ದರು. ನಂತರ ಅವರಿಂದ ಪ್ರತಿ ತಿಂಗಳು 500 ರೂಪಾಯಿ ಪಡೆದು ಸರ್ಕಾರಕ್ಕೆ 280 ರೂಪಾಯಿ ಪಾವತಿಸಿ 220 ರೂ.ಗಳನ್ನು ತಾವೇ ಇಟ್ಟುಕೊಳ್ಳುತ್ತಿದ್ದರು.
ಆರೋಪಿಗಳಿಂದ 5 ಮೊಬೈಲ್, 4,59,000 ನಗದು, ನಕಲಿ ಕಂಪನಿಗಳ ಸೀಲ್, ವಿವಿಧ ಆಸ್ಪತ್ರೆಗಳ ವೈದ್ಯರ ಸೀಲ್, 4 ಲ್ಯಾಪ್ ಟಾಪ್ ಮತ್ತು ಇಎಸ್ಐ ಅಪಾರ ಪ್ರಮಾಣದ ಕಾರ್ಡ್ ಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಕಳ್ಳರ ಬಂಧನ; 41ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಾಹನಗಳ ವಶ
ಕಳವು ಮಾಡಿದ್ದ ವಾಹನಗಳನ್ನೇ ಬಳಸಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾರಣ್ಯಾಪುರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಿಂದ ರೂ. 41.36 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, 2 ಕಾರು ಹಾಗೂ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ದೀಪಕ್ ಅಲಿಯಾಸ್ ದೀಪು ಮತ್ತು ಪವನ್ ಅಲಿಯಾಸ್ ಕಾಟ ಬಂಧಿತ ಆರೋಪಿಗಳು. ದೀಪಕ್ ವಿರುದ್ಧ 37 ಪ್ರಕರಣಗಳು ದಾಖಲಾಗಿದ್ದರೆ ಪವನ್ ವಿರುದ್ಧ 13 ಪ್ರಕರಣಗಳು ದಾಖಲಾಗಿವೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ವಿರುದ್ಧ 29 ಪ್ರಕರಣಗಳು ದಾಖಲಾಗಿವೆ.
ಈ ಇಬ್ಬರೂ ಹಳೆಯ ಆರೋಪಿಗಳಾಗಿದ್ದು, ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಮತ್ತೇ ಕಳ್ಳತನಕ್ಕೆ ಇಳಿದಿದ್ದರು. ಎಚ್ಎಂಟಿ ಲೇಔಟ್ ನಿವಾಸಿಯೊಬ್ಬರು ತೀರ್ಥಯಾತ್ರೆ ನಿಮಿತ್ತ ಗುಜರಾತ್ ಗೆ ಹೋಗಿದ್ದಾಗ ಇವರಿಬ್ಬರು ಮನೆಯ ಬೀಗ ಮುರಿದು ಒಳನುಗ್ಗಿ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ, 7 ಕೆಜಿ ಬೆಳ್ಳಿ ವಸ್ತುಗಳು ಹಾಗೂ ಕಾರನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಕನಕಪುರ ರಸ್ತೆಯ ಹಾರೋಹಳ್ಳಿ ಬಸ್ ನಿಲ್ದಾಣದ ಹತ್ತಿರ ಇಬ್ಬರನ್ನು ಕಾರು ಸಮೇತ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಮನೆಗಳ್ಳತನ ಹಾಗೂ ವಾಹನ ಕಳವು ಮಾಡಿರುವುದಾಗಿ ತಿಳಿಸಿದ್ದಾರೆ. ಯಲಹಂಕ ನ್ಯೂಟೌನ್ ಕೆಂಪನಹಳ್ಳಿಯ ಪೀಕಾಕ್ ಗಾರ್ಡನ್ ಬಳಿ ಇರುವ ಖಾಲಿ ಜಾಗದಲ್ಲಿ ಕಾರನ್ನು ನಿಲ್ಲಿಸಿರುವುದಾಗಿ ತಿಳಿಸಿದ್ದು, ಅಲ್ಲಿಂದ ಕಾರು ಹಾಗೂ ಅದರಲ್ಲಿದ್ದ 12 ಗ್ರಾಂ ಚಿನ್ನಾಭರಣ ಮತ್ತು 3 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹೊಸಕೋಟೆಯಲ್ಲಿ ವಾಸವಿರುವ ತಮ್ಮ ಸ್ನೇಹಿತನಿಗೆ ನೀಡಿದ್ದ 39 ಗ್ರಾಂ ಆಭರಣ ಹಾಗೂ ಸೋಲದೇವನಹಳ್ಳಿ ವ್ಯಾಪ್ತಿಯ ಖಾಲಿ ಜಾಗದಲ್ಲಿ ಕಳವು ಮಾಡಿ ನಿಲ್ಲಿಸಿದ್ದ 6 ದ್ವಿಚಕ್ರ ವಾಹನ ಹಾಗೂ ವಿದ್ಯಾರಣ್ಯಾಪುರದ ದೊಡ್ಡಗೌಡನ ಪಾಳ್ಯದಲ್ಲಿರುವ ಮಹಾಲಕ್ಷ್ಮಿ ಬ್ಯಾಂಕರ್ಸ್ ಅಂಗಡಿಯಲ್ಲಿ ಮಾರಾಟ ಮಾಡಿದ್ದ 64 ಗ್ರಾಂ ಆಭರಣವನ್ನು ವಶಕ್ಕೆ ಪಡೆಯಲಾಗಿದೆ. ಹೊಸಕೋಟೆಯ ಟ್ರೂ ಗೋಲ್ಡ್ ಕಂಪನಿಗೆ ಮಾರಾಟ ಮಾಡಿದ್ದ 42 ಗ್ರಾಂ ಆಭರಣ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಮಾರಾಟ ಮಾಡಿದ್ದ 129 ಗ್ರಾಂ ಆಭರಣ, ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಆರು ದ್ವಿಚಕ್ರ ವಾಹನ, ದೊಡ್ಡಗೌಡನ ಪಾಳ್ಯದಲ್ಲಿರುವ ಮಹಾಲಕ್ಷ್ಮಿ ಬ್ಯಾಂಕರ್ಸ್ ಅಂಗಡಿಯಲ್ಲಿ ಮಾರಾಟ ಮಾಡಿದ್ದ 44 ಗ್ರಾಂ ಚಿನ್ನಾಭರಣ, ಹೊಸಕೋಟೆಯ ಸ್ನೇಹಿತನಿಗೆ ನೀಡಿದ್ದ 39 ಗ್ರಾಂ ಆಭರಣವನ್ನು ವಶಕ್ಕೆ ಪಡೆದಿದ್ದಾರೆ.
ಇವರಿಬ್ಬರ ಬಂಧನದಿಂದ 7 ಮನೆಗಳ್ಳತನ ಪ್ರಕರಣಗಳು ಹಾಗೂ 6 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
(ವರದಿ: ಎಚ್. ಮಾರುತಿ, ಬೆಂಗಳೂರು)