logo
ಕನ್ನಡ ಸುದ್ದಿ  /  ಕರ್ನಾಟಕ  /  Adiyogi Statue: ಆದಿ ಯೋಗಿ ಪ್ರತಿಮೆ ವಿರುದ್ಧ ಸಲ್ಲಿಸಿದ ದೂರು ವಜಾ, ಅರ್ಜಿದಾರರು ಶುದ್ಧಹಸ್ತದಿಂದ ಕೋರ್ಟ್‌ ಮೆಟ್ಟಿಲೇರಿಲ್ಲ ಎಂದ ಕೋರ್ಟ್‌

Adiyogi Statue: ಆದಿ ಯೋಗಿ ಪ್ರತಿಮೆ ವಿರುದ್ಧ ಸಲ್ಲಿಸಿದ ದೂರು ವಜಾ, ಅರ್ಜಿದಾರರು ಶುದ್ಧಹಸ್ತದಿಂದ ಕೋರ್ಟ್‌ ಮೆಟ್ಟಿಲೇರಿಲ್ಲ ಎಂದ ಕೋರ್ಟ್‌

Praveen Chandra B HT Kannada

Feb 10, 2023 11:08 AM IST

ಚಿಕ್ಕಬಳ್ಳಾಪುರದಲ್ಲಿ 112 ಅಡಿಯ ಆದಿಯೋಗಿ ಶಿವನ ಪ್ರತಿಮೆ, ನವಗ್ರಹ ದೇಗುಲ ನಿರ್ಮಾಣ ಕಾರ್ಯ

    • Karnataka HC dismisses PIL against statue: ಶುದ್ಧಹಸ್ತವಾಗಿ ಅರ್ಜಿದಾರರು ನ್ಯಾಯಾಲಯದ ಮುಂದೆ ಬರಬೇಕು. ಉದ್ದೇಶವಷ್ಟೇ ಅಲ್ಲದೇ ಮಾರ್ಗವೂ ಶುದ್ಧವಾಗಿರಬೇಕು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. 
ಚಿಕ್ಕಬಳ್ಳಾಪುರದಲ್ಲಿ 112 ಅಡಿಯ ಆದಿಯೋಗಿ ಶಿವನ ಪ್ರತಿಮೆ, ನವಗ್ರಹ ದೇಗುಲ ನಿರ್ಮಾಣ ಕಾರ್ಯ
ಚಿಕ್ಕಬಳ್ಳಾಪುರದಲ್ಲಿ 112 ಅಡಿಯ ಆದಿಯೋಗಿ ಶಿವನ ಪ್ರತಿಮೆ, ನವಗ್ರಹ ದೇಗುಲ ನಿರ್ಮಾಣ ಕಾರ್ಯ

ಬೆಂಗಳೂರು: ಚಿಕ್ಕಬಳ್ಳಾಪುರದ ನಂದಿಬೆಟ್ಟದ ಸಮೀಪ ಇತ್ತೀಚೆಗೆ ಉದ್ಘಾಟನೆಗೊಂಡ ಆದಿಯೋಗಿ ಪ್ರತಿಮೆ ಸ್ಥಾಪನೆ ವಿರುದ್ಧ ಸಲ್ಲಿಸಿದ ಪಿಐಎಲ್‌ ಅನ್ನು ಹೈಕೋರ್ಟ್‌ ನಿನ್ನೆ ವಜಾ ಮಾಡಿದೆ. "ಅರ್ಜಿದಾರರು ಶುದ್ಧಹಸ್ತದಿಂದ ಕೋರ್ಟ್‌ ಮೆಟ್ಟಿಲೇರಿಲ್ಲ. ತಮ್ಮ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳನ್ನು ಕೋರ್ಟ್‌ ಮುಂದೆ ಬಹಿರಂಗಪಡಿಸಿಲ್ಲ. ಶುದ್ಧಹಸ್ತರು ಕೋರ್ಟ್‌ ಬಂದರೆ ಅವರ ಅರ್ಜಿ ಪರಿಗಣಿಸಲಾಗುವುದುʼʼ ಎಂದು ತಿಳಿಸಿದ ನ್ಯಾಯಪೀಠವು ಚುಂಬಳ್ಳಿಯ ಎಸ್‌. ಕ್ಯಾತಪ್ಪ ಮತ್ತು ಇತರರು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ.

ಟ್ರೆಂಡಿಂಗ್​ ಸುದ್ದಿ

Tumkur News: ತುಮಕೂರು ಜಿಲ್ಲೆಯಲ್ಲಿ ಜಾಲಿ ಮುಳ್ಳಿನ ಮೇಲೆ ಕುಣಿಯುವ ದೇವರನ್ನು ರೇಗಿಸಿ ಚಾಟಿ ಏಟು ತಿನ್ನುವ ಮಜಾ !

Bagalkot News: ಚುನಾವಣೆಗೆ ಹೊರಟ ಸಿಬ್ಬಂದಿ ಮುಧೋಳದಲ್ಲಿ ಕುಸಿದು ಬಿದ್ದು ಸಾವು

Mysuru News: ಬಿಸಿಲಬೇಗೆ ನಾಗರಹೊಳೆಯಿಂದ ಹೊರ ಬಂದು ತೋಟದ ಮನೆಯಲ್ಲಿ ಗಡದ್ದಾಗಿ ಮಲಗಿದ ಹುಲಿರಾಯ

ಲೋಕಸಭಾ ಚುನಾವಣೆ ನಾಳೆ ಮತದಾನ, ಬೆಂಗಳೂರಲ್ಲಿ ಇಂದು ಸಂಚಾರ ದಟ್ಟಣೆ, ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗ ಸಲಹೆ ನೀಡಿದ ಪೊಲೀಸರು

ಇಶಾ ಫೌಂಡೇಶನ್‌ ಪರ ಹಿರಿಯ ವಕೀಲರಾದ ಉದಯ್‌ ಹೊಳ್ಳ ವಾದಿಸಿದರು. "ಅರ್ಜಿದಾರರು ತಮ್ಮ ವಿರುದ್ಧವಿರುವ ಪ್ರಕರಣಗಳನ್ನು ಕೋರ್ಟ್‌ ಮುಂದೆ ಬಹಿರಂಗಪಡಿಸಿಲ್ಲ. ಈ ಮೂಲಕ ಪಿಐಎಲ್‌ ನಿಯಮ ಉಲ್ಲಂಘಿಸಿದ್ದಾರೆʼʼ ಎಂದು ವಾದ ಮಂಡಿಸಿದರು.

ಅದಕ್ಕೆ ಅರ್ಜಿದಾರರ ಪರ ವಕೀಲರು "ವಿವಿಧ ಚಳವಳಿಗಳಲ್ಲಿ ಭಾಗವಹಿಸಿರುವ ಸಮಯದಲ್ಲಿ ದುರುದ್ದೇಶಪೂರ್ವಕವಾಗಿ ಅರ್ಜಿದಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ" ಎಂಬದು ಪ್ರತಿಕ್ರಿಯೆ ನೀಡಿದರು.

ಆದರೆ, ಇದಕ್ಕೆ ನ್ಯಾಯಪೀಠ ಸಮ್ಮತಿಸಲಿಲ್ಲ. ನ್ಯಾಯಮೂರ್ತಿ ಪಿ.ಬಿ. ವರ್ಲೆ ಮತ್ತು ನ್ಯಾ. ಅಶೋಕ್‌ ಎಸ್‌. ಕಿಣಗಿ ಅವರು "ಶುದ್ಧಹಸ್ತವಾಗಿ ಅರ್ಜಿದಾರರು ನ್ಯಾಯಾಲಯದ ಮುಂದೆ ಬರಬೇಕು. ಉದ್ದೇಶವಷ್ಟೇ ಅಲ್ಲದೇ ಮಾರ್ಗವೂ ಶುದ್ಧವಾಗಿರಬೇಕು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಪ್ರಕರಣಗಳಿಗೆ ಸಂಬಂಧಪಟ್ಟಪ ಪೂರಕ ದಾಖಲೆ ಸಲ್ಲಿಸಬೇಕಿತ್ತು. ಅರ್ಜಿದಾರರ ವಿರುದ್ಧ ವ್ಯಕ್ತಿ ವ್ಯಕ್ತಿಗಳ ನಡುವೆ ವೈಷಮ್ಯ ಪ್ರಕರಣ ದಾಖಲಾಗಿದೆ. ರೈತರ ಪ್ರತಿಭಟನೆ ಎಂಬ ಕಾರಣ ಕಾಣುತ್ತಿಲ್ಲʼʼ ಎಂದು ನ್ಯಾಯಪೀಠ ತಿಳಿಸಿದೆ.

ನೀವು ಯಾವ ಪ್ರಕರಣ ಹೊಂದಿದ್ದೀರಿ ಎಂದು ನ್ಯಾಯಾಲಯ ಪರಿಶೀಲಿಸುವುದಿಲ್ಲ. ಆದರೆ, ನ್ಯಾಯಾಲಯದ ಮುಂದೆ ಬಂದಾಗ ಯಾವ ದಾಖಲೆಯನ್ನೂ ಮುಚ್ಚಿಟ್ಟಿಲ್ಲ ಎಂಬ ಅಂಶವನ್ನು ಪರಿಗಣಿಸುತ್ತದೆ. ಸಾರ್ವಜನಿಕ ಹಿತಾಸಕ್ತಿಯ ವಿಚಾರ ಎತ್ತಿಕೊಂಡಾಗ ಅರ್ಜಿದಾರರು ಶುದ್ಧಹಸ್ತರಾಗಿರಬೇಕೆಂದು ಕೋರ್ಟ್‌ನ ಕನಿಷ್ಠ ಬಯಕೆ ಎಂಬ ಅಭಿಪ್ರಾಯವನ್ನು ಕೋರ್ಟ್‌ ವ್ಯಕ್ತಪಡಿಸಿದೆ.

ಇಶಾ ಫೌಂಡೇಶನ್‌ ಚಿಕ್ಕಬಳ್ಳಾಪುರದ ಯೋಗ ಕೇಂದ್ರ ಮತ್ತು ಆದಿ ಯೋಗಿ ಪ್ರತಿಮೆ ಮತ್ತು ಇತರೆ ವಿಷಯಗಳಿಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿ ಯಥಾಸ್ಥಿತಿ ಕಾಯ್ದುಗೊಳ್ಳುವಂತೆ ಇತ್ತೀಚೆಗೆ ಸೂಚಿಸಿತ್ತು.

ಚಿಕ್ಕಬಳ್ಳಾಪುರದ ಕ್ಯಾತಪ್ಪ ಎಸ್‌ ಮತ್ತು ಇತರೆ ಕೆಲವು ಗ್ರಾಮಸ್ಥರು ಪಿಐಎಲ್‌ ದಾಖಲಿಸಿದ್ದು, ಅದರಲ್ಲಿ ಅರಣ್ಯ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ನಿಯಮ ಉಲ್ಲಂಘಿಸಿ ಒದಗಿಸಲಾಗಿದೆ ಎಂಬ ಆರೋಪ ಮಾಡಲಾಗಿತ್ತು. ಆದರೆ ಬಳಿಕ ಹೈಕೋರ್ಟ್‌ ಆದಿಯೋಗಿ ಪ್ರತಿಮೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಿತ್ತು.

ನಂದಿ ಬೆಟ್ಟ, ನರಸಿಂಗ ದೇವರ ಬೆಟ್ಟಗಳ ಸಾಲುಗಳು ಈ ಭಾಗದ ಜಲ ಮೂಲಗಳಾಗಿದೆ. ಇಲ್ಲಿ ಔಷಧ ಸಸ್ಯಗಳು ದಟ್ಟವಾಗಿವೆ. ಸಾಲು ಬೆಟ್ಟಗಳ ಮಧ್ಯಭಾಗದಲ್ಲಿ ಇಶಾ ಪ್ರತಿಷ್ಠಾನಕ್ಕೆ ಅರಣ್ಯ ಸೇರಿ ನಾನಾ ಕಾಯಿದೆಗಳನ್ನು ಉಲ್ಲಂಘಿಸಿ ವಾಣಿಜ್ಯ ಉದೇಶಕ್ಕಾಗಿ ಸರಕಾರಿ ಭೂಮಿ ಮಂಜೂರು ಮಾಡಲಾಗಿದೆ. ಈ ಪ್ರದೇಶವನ್ನು ಗ್ರೀನ್‌ ಬೆಲ್ಟ್‌ ಎಂದು ಘೋಷಣೆ ಮಾಡಲಾಗಿದ್ದು, ವಾಣಿಜ್ಯ ಚಟುವಟಿಕೆಗೆ ಅವಕಾಶವಿಲ್ಲ. ಆದರೂ ಸಾರ್ವಜನಿಕ ಬಳಕೆ ಉದ್ದೇಶದ ಹೆಸರಿನಲ್ಲಿ ಸರಕಾರದ ಎ-ಖರಾಬು ಮತ್ತು ಬಿ-ಖರಾಬು ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವುದಕ್ಕಾಗಿ ಜಿಲ್ಲಾಡಳಿತ ಹಸ್ತಾಂತರ ಮಾಡಿದೆ.

ಇಶಾ ಪ್ರತಿಷ್ಠಾನ ಇಲ್ಲಿ ಕಾಮಗಾರಿ ಕೈಗೊಂಡಿದ್ದು, ನೈಸರ್ಗಿಕ ಸಂಪನ್ಮೂಲ ನಾಶವಾಗಲಿದೆ. ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳ ಬೆಂಬಲದಿಂದ ಸ್ಥಳೀಯ ನಿವಾಸಿಗಳ ವಿರೋಧದ ನಡುವೆಯೂ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣವಾಗಿದೆ. ಈ ಬಗ್ಗೆ ದೂರು ನೀಡಿದರೂ ದಾಖಲಿಸಿಕೊಂಡಿಲ್ಲ. ಈ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶ ನೀಡಬೇಕು ಎಂದು ಪಿಐಎಲ್‌ನಲ್ಲಿ ಕೋರಲಾಗಿತ್ತು.

    ಹಂಚಿಕೊಳ್ಳಲು ಲೇಖನಗಳು