logo
ಕನ್ನಡ ಸುದ್ದಿ  /  ಕರ್ನಾಟಕ  /  Arecanut Garland: ಸನ್ಮಾನದ ಘನತೆ ಹೆಚ್ಚಿಸುವ ಕೆಂಪಡಕೆ ಹಾರ; ಮಲೆನಾಡಲ್ಲಿ ಈ ಅಡಕೆ ಹಾರವೇ ಸ್ಪೆಷಲ್‌

Arecanut Garland: ಸನ್ಮಾನದ ಘನತೆ ಹೆಚ್ಚಿಸುವ ಕೆಂಪಡಕೆ ಹಾರ; ಮಲೆನಾಡಲ್ಲಿ ಈ ಅಡಕೆ ಹಾರವೇ ಸ್ಪೆಷಲ್‌

Umesh Kumar S HT Kannada

Apr 28, 2023 07:15 AM IST

ಮಲೆನಾಡಿನ ಸ್ಪೆಷಲ್‌ ಕೆಂಪಡಕೆ ಹಾರ

    • Arecanut Garland: ಸನ್ಮಾನ ಎಂದರೆ ಗಂಧದ ಹಾರ ಹಾಕುವ ಟ್ರೆಂಡ್‌ ಇದ್ದ ಕಾಲ ಒಂದಿತ್ತು. ಕಾಲಾನುಕ್ರಮದಲ್ಲಿ ಅದು ಬದಲಾಯಿತು. ಏಲಕ್ಕಿ ಹಾರ, ಹೂವಿನ ಹಾರ ಇತ್ಯಾದಿಗಳ ಬಳಕೆ ಹೆಚ್ಚಾಯಿತು. ಈ ನಡುವೆ ಸನ್ಮಾನದ ಘನತೆ ಹೆಚ್ಚಿಸುವಂತೆ ಮುನ್ನೆಲೆಗೆ ಬಂದುದು ಕೆಂಪಡಕೆ ಹಾರ!
ಮಲೆನಾಡಿನ ಸ್ಪೆಷಲ್‌ ಕೆಂಪಡಕೆ ಹಾರ
ಮಲೆನಾಡಿನ ಸ್ಪೆಷಲ್‌ ಕೆಂಪಡಕೆ ಹಾರ

ಮಲೆನಾಡು ಎಂದರೆ ಅನೇಕರಿಗೆ ಕೆಂಪಡಕೆ ನೆನಪಾಗಿಬಿಡುತ್ತೆ. ಈಗ ಚುನಾವಣೆ ಸಂದರ್ಭ ಬೇರೆ. ರಾಜಕೀಯ ನಾಯಕರ ಸನ್ಮಾನ ನಡೆದಾಗ ಅವರಿಗೆ ಹಾಕುವ ಹಾರ ಗಮನಸೆಳೆಯುವುದು ಸಾಮಾನ್ಯ. ಇತ್ತೀಚಿಗೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿದಾಗ ಅವರಿಗೆ ಹಾಕಿದ ಹಾರ ದೇಶದ ಗಮನಸೆಳೆಯಿತು. ಅದು ರುದ್ರಾಕ್ಷಿ ಮಾಲೆ ಎಂಬ ಸಂದೇಹಕ್ಕೂ ಒಳಗಾಯಿತು. ವಾಸ್ತವದಲ್ಲಿ ಅದು ಕೆಂಪಡಕೆ ಹಾರ (Arecanut Garland).

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದ ಎರಡನೇ ಹಂತದ ಮತದಾನ, 4 ಸಚಿವರ ಮಕ್ಕಳಿಗೆ ಸತ್ವ ಪರೀಕ್ಷೆ

108 ಆಂಬುಲೆನ್ಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಒಂದು ದಿನ ಮುಂದೂಡಿಕೆ; ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಸಚಿವರು

Hassan Scandal: ಪ್ರಜ್ವಲ್‌ ರೇವಣ್ಣ ವಿಡಿಯೋ ವೈರಲ್‌ಗೆ ಸಿಎಂ, ಡಿಸಿಎಂ ಕಾರಣ: ವಕೀಲ ದೇವರಾಜೇಗೌಡ ಸ್ಪೋಟಕ ಮಾಹಿತಿ

Drought fund: ಮುಂಗಾರು 2023 ಬರ ಪರಿಹಾರ ವಿತರಣೆಗೆ ಕ್ಷಣಗಣನೆ, ಹಣ ಬಂದಿದೆಯೇ ಎಂದು ಹೀಗೆ ಪರೀಕ್ಷಿಸಿ

ಶಿವಮೊಗ್ಗದ ಕಿಶನ್‌ ಹ್ಯಾಂಡಿಕ್ರಾಫ್ಟ್ಸ್‌ನ ಸುಭಾಷ್‌ ಬಿ.ಆರ್.‌ ಅವರು ಈ ಕುರಿತು ಹಿಂದುಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಮಾತಿಗೆ ಸಿಕ್ಕರು. ಪ್ರಿಯಾಂಕಾ ಗಾಂಧಿ ಅವರ ಕತ್ತಿನಲ್ಲಿದ್ದ ಹಾರ ನೋಡಿ, ಇದು ಕೆಂಪಡಕೆ ಹಾರ ಸರ್‌ ಎಂದು ಮಾತಿಗಾರಂಭಿಸಿದರು. 2019ರಲ್ಲಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಶಿವಮೊಗ್ಗಕ್ಕೆ ಬಂದಿದ್ರು ಪ್ರಧಾನಿ ನರೇಂದ್ರ ಮೋದಿ. ಅವರಿಗೆ ಹಾಕಿದ ಅಡಕೆ ಹಾರ ನಾವೇ ಮಾಡಿಕೊಟ್ಟದ್ದು. ಆಗ ಅವರು ಅಡಕೆ ಮಾಲೆ ಬಗ್ಗೆ ಆಕರ್ಷಿತರಾಗಿ ಅದರ ವಿವರ ಎಲ್ಲ ಕೇಳಿದ್ದರು. ಅದೆಲ್ಲ ಮಾಧ್ಯಮಗಳಲ್ಲಿ ವರದಿಯೂ ಆಗಿತ್ತು ಎಂಬ ಪೀಠಿಕೆಯೊಂದಿಗೆ ಅಡಕೆ ಹಾರದ ವಿವರಣೆ ನೀಡಲು ಶುರುಮಾಡಿದರು.

ಮೂರೆಳೆಯ ಹಾರ ಇದು. ಆರ್ಡರ್‌ ಕೊಟ್ಟು ಮಾಡಿಸಿದ್ದಾರೆ ಅಂತ ಅನ್ಸುತ್ತೆ. ಬೆಳ್ಳಿಯ ಮಣಿಯಂತೆ ಗೋಚರಿಸುವುದನ್ನು ರೇಷ್ಮೆ ಬಾಲ್‌ (ಸಿಲ್ಕ್‌ ಬಾಲ್‌) ಅಂತ ಹೇಳ್ತಾರೆ. ಕೆಂಪಡಕೆ ಹಾರದ ಟ್ರೆಂಡ್‌ ಶುರುವಾಗಿ ಒಂದು ದಶಕ ಆಯಿತು. ಈಗ ಚುನಾವಣೆ ಸಮಯ. ಸನ್ಮಾನ ಸಮಾರಂಭಗಳು ಕಡಿಮೆ. ಕೆಂಪಡಕೆ ಹಾರಕ್ಕೂ ಬೇಡಿಕೆ ಅಷ್ಟಕ್ಕಷ್ಟೆ ಎಂದು ಒಂದು ನಿಟ್ಟುಸಿರು ಬಿಟ್ಟರು.

ನಾವು ಮೂಲತಃ ಗುಡಿಗಾರರು. ಗಂಧದ ಹಾರ ಮಾಡಿಕೊಡ್ತಾ ಇದ್ದೆವು. ಶ್ರೀಗಂಧ ಪೂರೈಕೆ ಕಡಿಮೆ ಆದ ನಂತರ ಮರದ ಹಾರ ಬಂತು. ಹೀಗೆ 10 ವರ್ಷ ಹಿಂದೆ ಕೆಂಪಡಕೆ ಹಾರ ಶುರುವಾಯಿತು. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಾರ ಮಾಡಿಕೊಡುತ್ತೇವೆ. ಹೀಗಾಗಿ ದರವೂ ವ್ಯತ್ಯಾಸವಾಗುತ್ತದೆ.

ಒಂದೆಳೆಯ ಮೂರಡಿ ಉದ್ದದ ಹಾರವಾದರೆ ಸಾಮಾನ್ಯವಾಗಿ 385 ರೂಪಾಯಿ ಗರಿಷ್ಠ ಮಾರಾಟ ದರ ಇರುತ್ತದೆ. ಎರಡು ಎಳೆಯ ಇಷ್ಟೇ ಉದ್ದದ ಹಾರಕ್ಕೆ 585 ರೂಪಾಯಿ. ಅದಾಗ್ಯೂ, ಚೌಕಾಸಿ ನಡೆದರೆ ಒಂದು ಐವತ್ತು ರೂಪಾಯಿ ಕಡಿಮೆ ಆಗಿಯೇ ಆಗುತ್ತದೆ. ಇದರಲ್ಲಿ ಕೆಂಪಡಕೆ ಬದಲು ಚಿಕಣಿ ಅಡಕೆ ಬಳಸಿದರೆ ಅದರ ದರ ಹೆಚ್ಚು. ನಾಲ್ಕೈದು ಸಾವಿರ ರೂಪಾಯಿ ಮೌಲ್ಯದ ಹಾರವನ್ನೂ ಮಾಡಿಕೊಟ್ಟದ್ದು ಇದೆ.

ಒಂದು ಕೆಂಪಡಕೆ ಹಾರ ಎಂದರೆ ಸಾಮಾನ್ಯವಾಗಿ ಮೂರು ಸ್ಟೆಪ್‌ ಇರುತ್ತೆ. ಕೆಳಗೆ ಒಂದೋ ಎರಡೋ ಕುಚ್ಚು ಇಟ್ಟಿರುತ್ತಾರೆ. 70 ರಿಂದ 80 ಕೆಂಪಡಕೆ ಒಂದು ಸಾಮಾನ್ಯ ಮೂರು ಅಡಿ ಉದ್ದದ ಎರಡೆಳೆಯ ಹಾರಕ್ಕೆ ಬಳಕೆಯಾಗುತ್ತದೆ. ಈ ಹಾರ ಮಾಡುವುದು ಸುಲಭವಲ್ಲ. ಹಸಿ ಅಡಕೆಯಲ್ಲಿ ಹಾರ ಮಾಡುವುದು ಕಷ್ಟ. ಫಂಗಸ್‌ ಬಂದು ಬಹಳ ದಿನ ಉಳಿಯಲ್ಲ. ಕೆಂಪಡಕೆ ಅಥವಾ ಬೇಯಿಸಿದ ಅಡಕೆ ಆದರೆ ಕೆಲವು ಕಾಲ ಬಾಳ್ವಿಕೆ ಬರುತ್ತದೆ. ಪ್ರತಿಯೊಂದು ಅಡಕೆಗೆ ತೂತು ಕೊರೆದು ದಾರ ಪೋಣಿಸಿ ಮಾಲೆ ಮಾಡಬೇಕಾಗುತ್ತದೆ. ಹೀಗೆ ತೂತು ಕೊರೆಯುವಾಗ ಅಡಕೆ ತುಂಡಾದರೆ ನಷ್ಟ. ಅಡಕೆಯ ಗುಣಮಟ್ಟದ ಮೇಲೆ ಮತ್ತು ಮಾಲೆ ಮಾಡುವವರ ಕೌಶಲದ ಮೇಲೆ ಇದು ಅವಲಂಬಿತವಾಗಿದೆ. ಮೊದಲೆಲ್ಲ ಬೇಡಿಕೆ ಇದೆ ಎಂದು ತುಂಬಾ ಹಾರ ರೆಡಿ ಮಾಡಿ ಇಟ್ಟುಕೊಳ್ಳುತ್ತಿದ್ದೆವು. ಆದರೆ ಈಗ ಆರ್ಡರ್‌ ಇದ್ದರಷ್ಟೆ ಅಡಕೆ ಹಾರ ತಯಾರು ಮಾಡ್ತೇವೆ ಎಂದು ವಿವರಿಸಿದರು ಸುಭಾಷ್‌ ಬಿ.ಆರ್‌.

    ಹಂಚಿಕೊಳ್ಳಲು ಲೇಖನಗಳು