ಎಲೆಕ್ಟ್ರಿಕ್, ಹೈಬ್ರಿಡ್ ವಾಹನಗಳು ಕರ್ನಾಟಕದಲ್ಲಿ ಇನ್ನಷ್ಟು ಅಗ್ಗ; ರಸ್ತೆ ತೆರಿಗೆ, ನೋಂದಣಿ ಶುಲ್ಕ ಇಳಿಕೆಗೆ ಮುಂದಾದ ರಾಜ್ಯ ಸರಕಾರ
Sep 26, 2024 11:19 AM IST
ಎಲೆಕ್ಟ್ರಿಕ್, ಹೈಬ್ರಿಡ್ ವಾಹನಗಳು ಕರ್ನಾಟಕದಲ್ಲಿ ಇನ್ನಷ್ಟು ಅಗ್ಗವಾಗಲಿದೆ. ಈ ವಾಹನಗಳಿಗೆ ರಸ್ತೆ ತೆರಿಗೆ, ನೋಂದಣಿ ಶುಲ್ಕ ಇಳಿಕೆಗೆ ರಾಜ್ಯ ಸರಕಾರ ಮುಂದಾಗಿದೆ.
- ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳಿಗೆ ಉತ್ತೇಜನ ನೀಡಲು ರಾಜ್ಯ ಸರಕಾರ ಕ್ರಮಕೈಗೊಳ್ಳುತ್ತಿದೆ. ಹೈಬ್ರಿಡ್ ವಾಹನಗಳ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕ ಕಡಿತಗೊಳಿಸಲು ಮತ್ತು ಎಲೆಕ್ಟ್ರಿಕ್ ವಾಹನ ತಯಾರಕರಿಗೆ ಉತ್ತೇಜಕಗಳನ್ನು ನೀಡುವ ಪ್ರಸ್ತಾಪವನ್ನು ರಾಜ್ಯ ಸರಕಾರ ಮಾಡಿದೆ.
ಬೆಂಗಳೂರು: ಕರ್ನಾಟಕದಲ್ಲಿ ಹೈಬ್ರಿಡ್ ಕಾರು ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ವಾಹನ ಕಂಪನಿಗಳಿಗೆ ತೆರಿಗೆ ಇಳಿಕೆ ಮಾಡಲು ಮತ್ತು ಇತರೆ ಹಣಕಾಸು ಉತ್ತೇಜಕಗಳನ್ನು ನೀಡಲು ರಾಜ್ಯ ಸರಕಾರ ಯೋಜಿಸಿದೆ. ವಿಶೇಷವಾಗಿ ಹೈಬ್ರಿಡ್ ಕಾರುಗಳ ತೆರಿಗೆ ಕಡಿತಕ್ಕೂ ಸರಕಾರ ಯೋಜಿಸಿದೆ. ಈ ಮೂಲಕ ರಾಜ್ಯದಲ್ಲಿ ಕ್ಲೀನ್ ಫ್ಯೂಯೆಲ್ ಟೆಕ್ನಾಲಜಿ ವಾಹನಗಳ ಮಾರಾಟ ಹೆಚ್ಚಿಸಲು ಉದ್ದೇಶಿಸಿದೆ. ಉತ್ತರ ಪ್ರದೇಶ ಸರಕಾರವು ಈ ವರ್ಷದ ಆರಂಭದಲ್ಲಿ ಹೈಬ್ರಿಡ್ ವಾಹನಗಳ ದರ ಕಡಿಮೆ ಮಾಡಲು ಕ್ರಮಕೈಗೊಂಡ ಬಳಿಕ ಇದೀಗ ಕರ್ನಾಟಕ ಸರಕಾರವು ಇದೇ ಮಾದರಿಯ ನೀತಿ ರೂಪಿಸುತ್ತಿದೆ.
ಕರ್ನಾಟಕ ಸರಕಾರವು ಸ್ವಚ್ಛ ಸಂಚಾರ ವಲಯಕ್ಕೆ ಉತ್ತೇಜನ ನೀಡಲು ಉದ್ದೇಶಿಸಿದೆ. ಇದಕ್ಕಾಗಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳಿಗೆ ಉತ್ತೇಜಕಗಳನ್ನು ನೀಡುವ ಕರಡು ಪ್ರಸ್ತಾಪ ಮಾಡಿದೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಸದ್ಯ ಭಾರತ ಸರಕಾರವು ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಉತ್ತೇಜಕಗಳನ್ನು ನೀಡುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಕುರಿತು ಮಾತ್ರ ಭಾರತ ಸರಕಾರ ಹೆಚ್ಚಿನ ಗಮನ ನೀಡುತ್ತಿದೆ. ಆದರೆ, ಕರ್ನಾಟಕ ಸರಕಾರವು ಹೈಬ್ರಿಡ್ ಕಾರುಗಳಿಗೂ ಉತ್ತೇಜನ ನೀಡಲು ಮುಂದಾಗಿದೆ. ಉತ್ತರ ಪ್ರದೇಶದ ಬಳಿಕ ಈ ರೀತಿ ಮಾಡುತ್ತಿರುವ ಎರಡನೇ ರಾಜ್ಯ ಕರ್ನಾಟಕವಾಗಲಿದೆ.
ಆಸಕ್ತಿದಾಯಕವೆಂದರೆ ಭಾರತದಲ್ಲಿ ಹೈಬ್ರಿಡ್ ಕಾರುಗಳನ್ನು ತಯಾರಿಸುವ ಟೊಯೊಟಾ ಮತ್ತು ಮಾರುತಿ ಸುಜುಕಿಯಂತಹ ಕಂಪನಿಗಳು ಈಗಾಗಲೇ ಹೈಬ್ರಿಡ್ ಕಾರುಗಳಿಗೆ ತೆರಿಗೆ ಕಡಿತ ನೀಡಬೇಕೆಂದು ವಿನಂತಿಸಿವೆ. ಪೂರ್ಣ ಪ್ರಮಾಣದಲ್ಲಿ ಪೆಟ್ರೋಲ್- ಡೀಸೆಲ್‌ನಲ್ಲಿ ಓಡುವ ವಾಹನಗಳಿಗಿಂತ ಹೈಬ್ರಿಡ್ ವಾಹನಗಳು ಪರಿಸರಕ್ಕೆ ಕಡಿಮೆ ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತವೆ ಎಂದು ಈ ಕಂಪನಿಗಲೂ ತಿಳಿಸಿವೆ. ಆದರೆ, ಈ ಬೇಡಿಕೆಗೆ ಟಾಟಾ ಮೋಟಾರ್ಸ್ ಮತ್ತು ಮಹೀಂದ್ರ ಕಂಪನಿಗಳು ವಿರೋಧ ವ್ಯಕ್ತಪಡಿಸಿವೆ. ಹೈಬ್ರಿಡ್ ವಾಹನಗಳಿಗೆ ಉತ್ತೇಜಕಗಳನ್ನು ನೀಡುವುದರಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ಕಾರ್ಯತಂತ್ರಕ್ಕೆ ತೊಂದರೆಯಾಗಲಿದೆ ಎಂದು ಈ ಕಂಪನಿಗಳು ತಗಾದೆ ತೆಗೆದಿವೆ.
ಹೈಬ್ರಿಡ್ ಕಾರು ಉತ್ತಮವೇ? ಈ ವಿಡಿಯೋ ನೋಡಿ
ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ಲಾಭ
ಕರ್ನಾಟಕವು ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭಾರತದಲ್ಲಿ ಅಗ್ರ ಮೂರನೇ ಸ್ಥಾನದಲ್ಲಿರುವ ರಾಜ್ಯವಾಗಿದೆ. 25 ಲಕ್ಷ ರೂಪಾಯಿಗಿಂತ ಕಡಿಮೆ ದರದ ಹೈಬ್ರಿಡ್ ವಾಹನಗಳ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕವನ್ನು ಕಡಿಮೆ ಮಾಡಲು ಕರ್ನಾಟಕ ಸರಕಾರ ಉದ್ದೇಶಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಹೈಬ್ರಿಡ್ ವಾಹನಗಳ ಮಾರಾಟ ಹೆಚ್ಚಿಸಲು ಉದ್ದೇಶಿಸಿದೆ. ಅಂದರೆ, ಹೈಬ್ರಿಡ್ ವಾಹನಗಳಿಗೆ ಇರುವ ತೆರಿಗೆಯನ್ನು ಈಗಿನ ಶೇಕಡ 18ರಿಂದ ಶೇಕಡ 13ಕ್ಕೆ ಇಳಿಕೆ ಮಾಡಲು ಉದ್ದೇಶಿಸಿದೆ. ಈ ಆಫರ್ ಸ್ಟ್ರಿಂಗ್ ಹೈಬ್ರಿಡ್ ಕಾರುಗಳಿಗೆ ಮಾತ್ರ ದೊರಕಲಿದೆ. ಮಿಲ್ಡ್ ಹೈಬ್ರಿಡ್ ಕಾರುಗಳಿಗೆ ದೊರಕದು. ಉತ್ತರ ಪ್ರದೇಶವೂ ಇದೇ ರೀತಿ ಮಾಡಿತ್ತು.
ಸದ್ಯ ಕರ್ನಾಟಕದಲ್ಲಿ ರಸ್ತೆ ಮತ್ತು ನೋಂದಣಿ ಶುಲ್ಕವು ಈ ಮುಂದಿನಂತೆ ಇದೆ. ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಶೇಕಡ 5 ಜಿಎಸ್‌ಟಿ ಇದೆ. ಹೈಬ್ರಿಡ್ ವಾಹನಗಳಿಗೆ ಶೇಕಡ 43 ಜಿಎಸ್‌ಟಿ ಇದೆ. ಹೈಬ್ರಿಡ್ ವಾಹನಗಳಿಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕ ನೀಡುವುದು ಮಾತ್ರವಲ್ಲದೆ ಕರ್ನಾಟಕ ಸರಕಾರವು ಹೈಬ್ರಿಡ್ ವಾಹನ ಕಂಪನಿಗಳ ಸ್ಥಿರ ಸ್ವತ್ತುಗಳ ಮೇಲಿನ ಹೂಡಿಕೆಗೆ ಹಣಕಾಸು ಉತ್ತೇಜಕಗಳನ್ನು ಶೇಕಡ 15ರಿಂದ ಶೇಕಡ 25ರವರೆಗೆ ನೀಡುವ ಪ್ರಸ್ತಾಪ ಮಾಡಿದೆ. ಅಂದರೆ, ಭೂಮಿ ಮತ್ತು ಯಂತ್ರಗಳ ಮೇಲೆ ಈ ಫೈನಾನ್ಸಿಯಲ್ ಇನ್ಸೆಂಟೀವ್‌ಗಳು ದೊರಕಲಿದೆ. ಹೊಸ ಫ್ಯಾಕ್ಟರಿಗಳಿಗೆ ಮಾತ್ರವಲ್ಲದೆ ಈಗಾಗಲೇ ಇರುವ ಫ್ಯಾಕ್ಟರಿಗಳಿಗೂ ಈ ಹಣಕಾಸು ಉತ್ತೇಜಕಗಳು ದೊರಕಲಿವೆ. ಕರಡು ಪ್ರಸ್ತಾಪದಲ್ಲಿ ಈ ಪ್ರಯೋಜನಗಳನ್ನು ಬ್ಯಾಟರಿ ಬಿಡಿಭಾಗಗಳು ಅಥವಾ ಇವಿ ಚಾರ್ಜಿಂಗ್ ಗಿಯರ್‌ಗಳಿಗೂ ನೀಡಲು ಉದ್ದೇಶಿಸಲಾಗಿದೆ.
ಎಲೆಕ್ಟ್ರಿಕ್ ವಾಹನಗಳು ಅಥವಾ ಎಲೆಕ್ಟ್ರಿಕ್ ವಾಹನ ಬಿಡಿಭಾಗ ತಯಾರಿಸಲು ಬಂಡವಾಳ ಹೂಡಿಕೆ ಮಾಡುವವರಿಗೆ ಶೇಕಡ 25ರಷ್ಟು ಇನ್ಸೆಂಟೀವ್‌ಗಳನ್ನು ನೀಡಲು ಕರ್ನಾಟಕ ಉದ್ದೇಶಿಸಿದೆ. ಹೂಡಿಕೆ ಗಾತ್ರ ಮತ್ತು ಉದ್ಯೋಗಿಗಳ ಸಂಖ್ಯೆಗೆ ತಕ್ಕಂತೆ ಈ ಇನ್ಸೆಂಟೀವ್ ದೊರಕಲಿದೆ.
ಕರ್ನಾಟಕದಲ್ಲಿ ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜನ ನೀಡುವ ಸಲುವಾಗಿ ಸರಕಾರವು ಈ ಕರಡು ಪ್ರಸ್ತಾಪ ಸಿದ್ಧ ಮಾಡಿದೆ. ಈ ಕರಡಿನಲ್ಲಿ ಎಲೆಕ್ಟ್ರಿಕ್ ವಾಹನಗಳು ಮತ್ತು ಕೆಲವು ಹೈಬೆಇಡ್ ಹಾಗೂ ಹೈಡ್ರೊಜನ್ ವಾಹನಗಳು ಎಂದು ಉಲ್ಲೇಖಿಸಿದೆ. ಈ ನೀತಿ ಅಂತಿಮಗೊಳಿಸಲು ಸರಕಾರ ಯಾವುದೇ ಡೆಡ್‌ಲೈನ್ ನಿಗದಿಪಡಿಸಿಲ್ಲ.