ಪೆಟ್ರೋಲ್‌ ತುಂಬಿಸಬೇಕಿಲ್ಲ, ಚಾರ್ಜ್‌ ಮಾಡುವ ಟೆನ್ಷನ್‌ ಇಲ್ಲ, ಬಜಾಜ್‌ ಎಲೆಕ್ಟ್ರಿಕ್‌ ಗ್ರಾಹಕರಲ್ಲಿ ಹೆಚ್ಚಾದ ಕಾತರ
ಕನ್ನಡ ಸುದ್ದಿ  /  ಜೀವನಶೈಲಿ  /  ಪೆಟ್ರೋಲ್‌ ತುಂಬಿಸಬೇಕಿಲ್ಲ, ಚಾರ್ಜ್‌ ಮಾಡುವ ಟೆನ್ಷನ್‌ ಇಲ್ಲ, ಬಜಾಜ್‌ ಎಲೆಕ್ಟ್ರಿಕ್‌ ಗ್ರಾಹಕರಲ್ಲಿ ಹೆಚ್ಚಾದ ಕಾತರ

ಪೆಟ್ರೋಲ್‌ ತುಂಬಿಸಬೇಕಿಲ್ಲ, ಚಾರ್ಜ್‌ ಮಾಡುವ ಟೆನ್ಷನ್‌ ಇಲ್ಲ, ಬಜಾಜ್‌ ಎಲೆಕ್ಟ್ರಿಕ್‌ ಗ್ರಾಹಕರಲ್ಲಿ ಹೆಚ್ಚಾದ ಕಾತರ

Bajaj E Scooter: ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಈಗಾಗಲೇ ಮಾರುಕಟ್ಟೆಗೆ ಬಂದಿದೆ. ಈ ರೆಟ್ರೊ ಶೈಲಿಯ ಸ್ಕೂಟಿ ಅನೇಕ ಅಭಿಮಾನಿಗಳನ್ನು ಹೊಂದಿದೆ. ಆದರೆ ಬಜಾಜ್ ಸ್ಕೂಟರ್‌ಗಳು ಈಗ ಮತ್ತೊಂದು ಆಯ್ಕೆಯೊಂದಿಗೆ ಆಗಮಿಸುತ್ತಿವೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್
ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

Bajaj E Scooter: ಬಜಾಜ್ ಕಂಪನಿಯು ಈಗಾಗಲೇ ತನ್ನ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ತಿಂಗಳು ಕಂಪನಿಯು ಹೊಸ ಬ್ಲೂ 3202 ಆವೃತ್ತಿಯನ್ನು ಪರಿಚಯಿಸಿದೆ. ಇದರಲ್ಲಿ ಅನೇಕ ಅಪ್‌ಡೇಟ್‌ಗಳನ್ನು ಸೇರಿಸಲಾಗಿದೆ. ಇದೇ ಕಾರಣಕ್ಕೆ ಇದು ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿದಾರರ ಗಮನ ಸೆಳೆದಿದೆ. ಬಜಾಜ್‌ ಕಂಪನಿಯು ಸ್ವಾಪ್‌ ಮಾಡಬಹುದಾದ ಅಥವಾ ಬದಲಾಯಿಸಬಹುದಾದ ಬ್ಯಾಟರಿ ಸ್ಕೂಟರ್‌ಗಳನ್ನು ಪರಿಚಯಿಸುವ ಸೂಚನೆ ಇದೆ. ಇಂತಹ ಸ್ಕೂಟರ್‌ಗಳಿಗಾಗಿ ವಾಹನ ಪ್ರಿಯರು ಕಾಯುತ್ತಿದ್ದಾರೆ.

ಕಂಪನಿಯು ಕಳೆದ ವರ್ಷ ಈ ಹೊಸ ಮಾದರಿಯ ಸ್ಕೂಟರ್‌ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ತಿಳಿಸಿತ್ತು. ಈ ರೀತಿಯ ಸ್ಕೂಟರ್‌ಗಳು ಬದಲಾಯಿಸಬಹುದಾದ ಅಥವಾ ತೆಗೆಯಬಹುದಾದ ಬ್ಯಾಟರಿಗಳನ್ನು ಹೊಂದಿರುತ್ತವೆ. ಚಾರ್ಜಿಂಗ್‌ ಸ್ಟೇಷನ್‌ಗಳಲ್ಲಿ ನೀವು ಬ್ಯಾಟರಿ ಬದಲಾಯಿಸಬಹುದು. ಅಂದರೆ, ಫುಲ್‌ ಚಾರ್ಜ್‌ ಆಗಿರುವ ಬ್ಯಾಟರಿಯನ್ನು ಹಾಕಿಕೊಂಡು, ಚಾರ್ಜ್‌ ಖಾಲಿಯಾದ ಬ್ಯಾಟರಿ ಬದಲಾಯಿಸಿಕೊಂಡು ಆರಾಮವಾಗಿ ಪ್ರಯಾಣಿಬಹುದು. ಬಜಾಜ್ ಇ-ಸ್ಕೂಟರ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್, ಈಥರ್‌ ಎನರ್ಜಿ, ಟಿವಿಎಸ್‌ ಐಕ್ಯೂಬ್‌ನಂತಹ ಸ್ಕೂಟರ್‌ಗಳ ಜತೆ ಸ್ಪರ್ಧೆ ನಡೆಸುತ್ತಿದೆ.

"ದೇಶದಲ್ಲಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಇದೇ ಸಮಯದಲ್ಲಿ ಬ್ಯಾಟರಿ ವಿನಿಯಮ ಕೇಂದ್ರಗಳಿಂದ ಬ್ಯಾಟರಿಗಳನ್ನು ವಿನಿಮಯ ಮಾಡಿಕೊಳ್ಳಬಹುದು" ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. "ಇದರಿಂದ ವಾಹನ ಸವಾರರಿಗೆ ಪ್ರಯಾಣ ಸುಲಭವಾಗಲಿದೆ. ಅಂದರೆ, ನಿಮ್ಮ ಸ್ಕೂಟರ್‌ನಲ್ಲಿರುವ ಬ್ಯಾಟರಿಯನ್ನು ಚಾರ್ಜಿಂಗ್‌ ಸ್ಟೇಷನ್‌ನಲ್ಲಿ ನೀಡಿ, ಅಲ್ಲಿಂದ ಫುಲ್‌ ಚಾರ್ಜ್‌ ಆಗಿರುವ ಬ್ಯಾಟರಿಯನ್ನು ನಿಮ್ಮ ಸ್ಕೂಟರ್‌ಗೆ ಜೋಡಿಸಿಕೊಂಡು ಪ್ರಯಾಣಿಸಬಹುದು. ಇದರಿಂದಾಗಿ ಮನೆಯಲ್ಲಿ ಚಾರ್ಜ್‌ ಮಾಡಬೇಕೆಂಬ ತೊಂದರೆ ಇಲ್ಲ. ಬ್ಯಾಟರಿ ಬದಲಾಯಿಸುವ ಮೂಲಕ ನಿರಂತರವಾಗಿ ಪ್ರಯಾಣ ಮುಂದುವರೆಸಬಹುದು. ಇದೇ ಸಮಯದಲ್ಲಿ ಮನೆಯಲ್ಲಿ ಬ್ಯಾಟರಿ ಚಾರ್ಜ್‌ ಮಾಡುವ ಆಯ್ಕೆಯೂ ಗ್ರಾಹಕರಿಗೆ ಇರಲಿದೆ. ದಾರಿ ಮಧ್ಯೆ ಚಾರ್ಜ್‌ ಮುಗಿದರೆ ಇಂತಹ ಚಾರ್ಜಿಂಗ್‌ ಸ್ಟೇಷನ್‌ಗಳಲ್ಲಿ ಬ್ಯಾಟರಿ ಬದಲಾಯಿಸಿಕೊಳ್ಳಬಹುದು. ಶೀಘ್ರದಲ್ಲಿ ಬಜಾಜ್‌ ಇಂತಹ ವ್ಯವಸ್ಥೆ ಪರಿಚಯಿಸಲಿದೆ.

ಬಜಾಜ್‌ ಎಲೆಕ್ಟ್ರಿಕ್‌ ಸ್ಕೂಟರ್‌ಗಳು

ಬಜಾಜ್ ಈಗಾಗಲೇ ಚೇತಕ್ ಬ್ಲೂ 3202 ಎಂಬ ಹೊಸ ಸ್ಕೂಟರ್‌ ಅನ್ನು ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಎಕ್ಸ್ ಶೋ ರೂಂ ಬೆಲೆ 1.15 ಲಕ್ಷ ರೂಪಾಯಿ ಇದೆ. ಬ್ಲೂ 3202 ಹೊಸದಾಗಿ ಮರುನಾಮಕರಣಗೊಂಡ ಅರ್ಬನ್ ರೂಪಾಂತರವಾಗಿದೆ. ಬ್ಯಾಟರಿ ಸಾಮರ್ಥ್ಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಆದರೆ ಇದು ಹೆಚ್ಚಿನ ರೇಂಜ್‌ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ವಿಶೇಷವೆಂದರೆ ಮೊದಲು 126 ಕಿಲೋಮೀಟರ್ ಇದ್ದ ಇದರ ವ್ಯಾಪ್ತಿ ಈಗ 137 ಕಿಲೋಮೀಟರ್ ಗೆ ಏರಿಕೆಯಾಗಿದೆ. ಈ ಹಿಂದಿನ ಸ್ಕೂಟರ್‌ಗೆ ಹೋಲಿಸಿದರೆ ಇದರ ದರ 8 ಸಾವಿರ ರೂಪಾಯಿಯಷ್ಟು ಕಡಿಮೆಯಾಗಿದೆ.

ಚೇತಕ್ ಬ್ಲೂ 3202 ಚಾರ್ಜಿಂಗ್ ವ್ಯವಸ್ಥೆ ಹೀಗಿದೆ. ಆಫ್-ಬೋರ್ಡ್ 650 ವ್ಯಾಟ್ ಚಾರ್ಜರ್‌ನೊಂದಿಗೆ ಸಂಪೂರ್ಣವಾಗಿ ಚಾರ್ಜ್ ಮಾಡಲು 5 ಗಂಟೆ 50 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಚೇತಕ್ ಬ್ಲೂ 3202 ವೈಶಿಷ್ಟ್ಯಗಳ ವಿಷಯದಲ್ಲಿ ಅರ್ಬನ್ ವರ್ಷನ್‌ ಸ್ಕೂಟರ್‌ ಅನ್ನು ಹೋಲುತ್ತದೆ. ಅಂದರೆ ಕೀಲೆಸ್ ಇಗ್ನಿಷನ್ ಮತ್ತು ಕಲರ್ ಎಲ್ಸಿಡಿ ಡಿಸ್‌ಪ್ಲೇ. ಸ್ಪೋರ್ಟ್ಸ್ ಮೋಡ್, 73 ಕಿಮೀ ವೇಗ, ಬ್ಲೂಟೂತ್ ಸಂಪರ್ಕ, ಹಿಲ್ ಹೋಲ್ಡ್, ರಿವರ್ಸ್ ಮೋಡ್ ಮುಂತಾದ ಫೀಚರ್‌ಗಳನ್ನು ಹೊಂದಿದೆ. ನೀಲಿ, ಬಿಳಿ, ಕಪ್ಪು ಮತ್ತು ಬೂದು ಎಂಬ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

ಕಂಪನಿಯು ಆಗಸ್ಟ್‌ನಲ್ಲಿ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಪೋರ್ಟ್‌ಫೋಲಿಯೊದಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿತು. ಕಂಪನಿಯು ಇದಕ್ಕೆ ಚೇತಕ್ 3201 ಎಂದು ಹೆಸರಿಸಿದೆ. ಇದು ಪೂರ್ಣ ಚಾರ್ಜ್‌ನಲ್ಲಿ 136 ಕಿಲೋಮೀಟರ್ ಓಡುತ್ತದೆ ಎಂದು ಕಂಪನಿ ಪ್ರತಿಪಾದಿಸಿದೆ. ಇದರ ಎಕ್ಸ್ ಶೋ ರೂಂ ಬೆಲೆ 1.30 ಲಕ್ಷ ರೂ. ಇದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಿಂದಲೂ ಇದನ್ನು ಖರೀದಿಸಬಹುದು.

ಬಜಾಜ್ ಚೇತಕ್ 3201 ವಿಶೇಷ ಆವೃತ್ತಿಯ ಸ್ಕೂಟರ್ ಅದರ ಟಾಪ್-ಸ್ಪೆಕ್ ಪ್ರೀಮಿಯಂ ವರ್ಷನ್‌ ಅನ್ನು ಆಧರಿಸಿದೆ. ಇದರಲ್ಲಿ ಸಾಕಷ್ಟು ಬದಲಾವಣೆಗಳನ್ನೂ ಮಾಡಲಾಗಿದೆ. ಇದು ಬ್ರೂಕ್ಲಿನ್ ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಇದು ನೀರಿನ ಪ್ರತಿರೋಧ ಫೀಚರ್‌ ಹೊಂದಿದೆ. ಇದು ಬ್ಲೂಟೂತ್ ಕನೆಕ್ಟಿವಿಟಿ, ಚೇತಕ್ ಅಪ್ಲಿಕೇಶನ್, ಕಲರ್ ಟಿಎಫ್‌ಟಿ ಡಿಸ್‌ಪ್ಲೇ, ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌, ಆಟೋ ಹಜಾರ್ಡ್ ಲೈಟ್ ಮುಂತಾದ ಫೀಚರ್‌ಗಳನ್ನು ಹೊಂದಿದೆ.

Whats_app_banner