Bangalore Real Estate: ಭಾರತದಲ್ಲೇ ರಿಯಲ್ ಎಸ್ಟೇಟ್ ದರದಲ್ಲಿ ಬೆಂಗಳೂರು ಮುಂಚೂಣಿ, ಟಾಪ್ 5 ನಲ್ಲಿ 3 ಪ್ರದೇಶಗಳಿಗೆ ಸ್ಥಾನ
Aug 27, 2024 02:05 PM IST
ಬೆಂಗಳೂರಿನ ಮೂರು ಪ್ರದೇಶಗಳು ಭಾರತದ ಟಾಪ್ ರಿಯಲ್ ಎಸ್ಟೇಟ್ ತಾಣ ಎನ್ನಿಸಿವೆ.
- Bangalore Business ಬೆಂಗಳೂರಿನ ಮೂರು ಪ್ರದೇಶಗಳು ಭಾರತದ ಅತಿ ಹೆಚ್ಚು ಭೂ ದರ ಹೊಂದಿರುವ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಬೆಂಗಳೂರು: ರಿಯಲ್ ಎಸ್ಟೇಟ್ ದರದಲ್ಲಿ ಬೆಂಗಳೂರೇ ಭಾರತದಲ್ಲಿ ಮುಂಚೂಣಿಯಲ್ಲಿರುವ ನಗರ. ಬೆಂಗಳೂರಿನ ಎರಡು ಪ್ರದೇಶಗಳಲ್ಲಿನ ಭೂಮಿ ದರಗಳು ದೇಶದಲ್ಲಿಯೇ ಟಾಪ್ 5 ಸ್ಥಾನ ಪಡೆದಿವೆ. ಹೈದ್ರಾಬಾದ್, ದೆಹಲಿ ಹಾಗೂ ಮುಂಬೈಗಿಂತ ಬೆಂಗಳೂರಿನಲ್ಲಿಯೇ ಭೂಮಿಗೆ ಭಾರೀ ಬೇಡಿಕೆ. ಕಳೆದ ನಾಲ್ಕು ವರ್ಷಗಳಲ್ಲಿ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಭೂಮಿ ದರ ಗಣನೀಯ ಏರಿಕೆ ಕಂಡು ರಿಯಲ್ ಎಸ್ಟೇಟ್ ವಲಯವೂ ಬೂಮ್‌ನಲ್ಲಿದೆ. ರಿಯಲ್ ಎಸ್ಟೇಟ್ ಹಾಗೂ ಕಟ್ಟಡ ನಿರ್ಮಾಣ ವಹಿವಾಟಿನ ಮೇಲೆ ನಿಗಾ ಇರಿಸುವ ಅನರಾಕ್ ಸಂಸ್ಥೆ ಭಾರತದ ವಿವಿಧ ದೇಶಗಳಲ್ಲಿನ ಭೂ ವಹಿವಾಟು ವಲಯ ಬದಲಾವಣೆಗಳನ್ನು ಗಮನಿಸುತ್ತಾ ಬರುತ್ತಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿನ ಗಣನೀಯ ಬದಲಾವಣೆಗಳನ್ನು ದಾಖಲಿಸುತ್ತಾ ಬರುವ ಅನರಾಕ್ ಈ ಆರ್ಥಿಕ ವರ್ಷದ ಮೂರು ತಿಂಗಳ ವಹಿವಾಟಿನ ವಿಶ್ಲೇಷಣೆ ಮಾಡಿದ್ದು. ಇದರಲ್ಲಿ ಬೆಂಗಳೂರಿನ ಪ್ರದೇಶಗಳೇ ಸ್ಥಾನ ಪಡೆದಿರುವುದು ವಿಶೇಷ.
ಬೆಂಗಳೂರಿನ ಬಾಗಲೂರು ಪ್ರದೇಶ ಇಡೀ ದೇಶದಲ್ಲಿಯೇ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಮುಂಚೂಣಿಯಲ್ಲಿದೆ. ಇದನ್ನು ಬಿಟ್ಟರೆ ಬೆಂಗಳೂರಿನ ವೈಟ್‌ಫೀಲ್ಡ್ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ ಎಂದು ಅನರಾಕ್ ಹೇಳಿದೆ.
ಬೆಂಗಳೂರಿನ ಬಾಗಲೂರಿನಲ್ಲಿ ವಸತಿ ಬೆಲೆಗಳು 2020 ರಿಂದ ಶೇಕಡಾ 90 ರಷ್ಟು ಏರಿಕೆಯಾಗಿದ್ದರೆ, ದೆಹಲಿ-ಎನ್ಸಿಆರ್ನ ದ್ವಾರಕಾ ಎಕ್ಸ್ಪ್ರೆಸ್ವೇ ಶೇಕಡಾ 79 ರಷ್ಟು ಸರಾಸರಿ ಏರಿಕೆಯೊಂದಿಗೆ 4 ನೇ ಸ್ಥಾನದಲ್ಲಿದೆ ಎಂದು ಅನರಾಕ್ ತಿಳಿಸಿದೆ.
ರಿಯಲ್ ಎಸ್ಟೇಟ್ ಸಲಹೆಗಾರ ಸಂಸ್ಥೆ ಅನರಾಕ್ ಕಳೆದ ಐದು ವರ್ಷಗಳಲ್ಲಿ ಕಂಡುಬರುವ ಗರಿಷ್ಠ ಹೊಸ ಪೂರೈಕೆಯ ಆಧಾರದ ಮೇಲೆ 7 ಪ್ರಮುಖ ನಗರಗಳ ಅಗ್ರ 3 ಸೂಕ್ಷ್ಮ ಮಾರುಕಟ್ಟೆಗಳಲ್ಲಿನ ಬೆಲೆ ಬದಲಾವಣೆಗಳನ್ನು ವಿಶ್ಲೇಷಿಸಿದೆ.
ಅಂಕಿಅಂಶಗಳ ಪ್ರಕಾರ, ಬೆಂಗಳೂರಿನ ಬೆಂಗಳೂರಿನಲ್ಲಿ 2019 ರ ಅಂತ್ಯದಿಂದ ಈ ವರ್ಷದ ಜೂನ್ ನಡುವೆ ಶೇ. 90 ರಷ್ಟು ಬೆಲೆ ಏರಿಕೆಯಾಗಿದೆ. ಬಾಗಲೂರಿನಲ್ಲಿ ಸರಾಸರಿ ವಸತಿ ಬೆಲೆಗಳು 2019 ರಲ್ಲಿ ಚದರ ಅಡಿಗೆ 4,300 ರೂ.ಗಳಿಂದ 2024 ಆಗಸ್ಟ್ ಲ್ಲಿ ಪ್ರತಿ ಚದರ ಅಡಿಗೆ 8,151 ರೂ.ಗೆ ಏರಿದೆ" ಎಂದು ಅನರಾಕ್ ಅಧ್ಯಕ್ಷ ಅನುಜ್ ಪುರಿ ಹೇಳುತ್ತಾರೆ.
ಹೈದರಾಬಾದ್ ನ ಕೋಕಾಪೇಟ್ ಶೇ. 89 ರಷ್ಟು ಬೆಲೆ ಏರಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಇಲ್ಲಿನ ಬೆಲೆಗಳು 2019 ರಲ್ಲಿ ಪ್ರತಿ ಚದರ ಅಡಿಗೆ 4,750 ರೂ.ಗಳಿಂದ 2024 ರ ಹೊತ್ತಿಗೆ ಪ್ರತಿ ಚದರ ಅಡಿಗೆ 9,000 ರೂ.ಗೆ ಏರಿದೆ.
ಬೆಂಗಳೂರಿನ ವೈಟ್‌ಫೀಲ್ಡ್ ಮೂರನೇ ಸ್ಥಾನದಲ್ಲಿದ್ದು, ಈ ಅವಧಿಯಲ್ಲಿ ವಸತಿ ಬೆಲೆಗಳಲ್ಲಿ ಶೇ, 80 ರಷ್ಟು ಏರಿಕೆಯಾಗಿದೆ. ಇಲ್ಲಿ ಸರಾಸರಿ ಬೆಲೆಗಳು 2019 ರಲ್ಲಿ ಪ್ರತಿ ಚದರ ಅಡಿಗೆ 4,765 ರೂ.ಗಳಿಂದ 2024 ರ ಎಚ್ 1 ರಲ್ಲಿ ಪ್ರತಿ ಚದರ ಅಡಿಗೆ 8,600 ರೂ.ಗೆ ಏರಿದೆ.
ಎನ್ಸಿಆರ್ ನ ದ್ವಾರಕಾ ಎಕ್ಸ್ ಪ್ರೆಸ್ ವೇ ಶೇ. 79 ರಷ್ಟು ಬೆಲೆ ಏರಿಕೆಯೊಂದಿಗೆ 4 ನೇ ಸ್ಥಾನದಲ್ಲಿದೆ. ಸರಾಸರಿ ಬೆಲೆಗಳು 2019 ರಲ್ಲಿ ಪ್ರತಿ ಚದರ ಅಡಿಗೆ 5,359 ರೂ.ಗಳಿಂದ ಎಚ್ 1 2024 ರಲ್ಲಿ ಪ್ರತಿ ಚದರ ಅಡಿಗೆ 9,600 ರೂ.ಗೆ ಏರಿದೆ.
ಬೆಂಗಳೂರಿನ ಸರ್ಜಾಪುರ ರಸ್ತೆ ಶೇ.58ರಷ್ಟು ಬೆಲೆ ಏರಿಕೆಯೊಂದಿಗೆ 5ನೇ ಸ್ಥಾನದಲ್ಲಿದೆ. ಇಲ್ಲಿ ಸರಾಸರಿ ಬೆಲೆಗಳು 2019 ರಲ್ಲಿ ಪ್ರತಿ ಚದರ ಅಡಿಗೆ 5,870 ರೂ.ಗಳಿಂದ 2024 ರಲ್ಲಿ ಪ್ರತಿ ಚದರ ಅಡಿಗೆ 9,300 ರೂ.ಗೆ ಏರಿದೆ.
ಹೈದರಾಬಾದ್ ನ ಬಾಚುಪಲ್ಲಿ 6 ನೇ ಸ್ಥಾನದಲ್ಲಿದ್ದು, ಸರಾಸರಿ ಬೆಲೆಗಳು ಶೇಕಡಾ 57 ರಷ್ಟು ಏರಿಕೆಯಾಗಿ ಪ್ರತಿ ಚದರ ಅಡಿಗೆ 3,690 ರೂ.ಗಳಿಂದ 5,800 ರೂ.ಗೆ ತಲುಪಿದೆ. ಹೈದರಾಬಾದ್ ನ ತೆಲ್ಲಾಪುರ್ ಸರಾಸರಿ ಬೆಲೆಯಲ್ಲಿ ಶೇಕಡಾ 53 ರಷ್ಟು ಏರಿಕೆಯೊಂದಿಗೆ 7 ನೇ ಸ್ಥಾನದಲ್ಲಿದೆ, ಪ್ರತಿ ಚದರ ಅಡಿಗೆ 4,819 ರೂ.ಗಳಿಂದ 7,350 ರೂ.ಗೆ ತಲುಪಿದೆ. ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಪನ್ವೇಲ್ ಶೇಕಡಾ 50 ರಷ್ಟು ಬೆಲೆ ಏರಿಕೆಯೊಂದಿಗೆ 8 ನೇ ಸ್ಥಾನದಲ್ಲಿದೆ, ಪ್ರತಿ ಚದರ ಅಡಿಗೆ 5,520 ರೂ.ಗಳಿಂದ 8,300 ರೂ.ಗೆ ಏರಿದೆ. ದೆಹಲಿ-ಎನ್ಸಿಆರ್ ನ ನ್ಯೂ ಗುರುಗ್ರಾಮ್ 9 ನೇ ಸ್ಥಾನದಲ್ಲಿದೆ. ಸರಾಸರಿ ಬೆಲೆಗಳು ಪ್ರತಿ ಚದರ ಅಡಿಗೆ 6,100 ರೂ.ಗಳಿಂದ 9,000 ರೂ.ಗೆ ಶೇಕಡಾ 48 ರಷ್ಟು ಏರಿಕೆಯಾಗಿದೆ.
ಎಂಎಂಆರ್ ನ ಡೊಂಬಿವಲಿ 10ನೇ ಸ್ಥಾನದಲ್ಲಿದೆ. ದರಗಳು 2019 ರ ಅಂತ್ಯದಲ್ಲಿ ಪ್ರತಿ ಚದರ ಅಡಿಗೆ 6,625 ರೂ.ಗಳಿಂದ ಶೇಕಡಾ 40 ರಷ್ಟು ಏರಿಕೆಯಾಗಿ 9,300 ರೂ.ಗೆ ತಲುಪಿದೆ.
ಬೆಂಗಳೂರು ವಸತಿ ಮಾರುಕಟ್ಟೆಯ ಬಗ್ಗೆ ಪ್ರತಿಕ್ರಿಯಿಸಿದ ರಿಯಲ್ ಎಸ್ಟೇಟ್ ನಿರ್ಮಾಣ ಮತ್ತು ಅಭಿವೃದ್ಧಿ ಸಂಸ್ಥೆ ಬಿಸಿಡಿ ಗ್ರೂಪ್ ಸಿಎಂಡಿ ಅಂಗದ್ ಬೇಡಿ, "ಉತ್ತರ ಬೆಂಗಳೂರು, ವೈಟ್ ಫೀಲ್ಡ್ ಮತ್ತು ಸರ್ಜಾಪುರ ರಸ್ತೆಯಲ್ಲಿ ವಸತಿ ರಿಯಲ್ ಎಸ್ಟೇಟ್ ನಲ್ಲಿ ಗಣನೀಯ ಬೆಲೆ ಏರಿಕೆಗೆ ಈ ಮೈಕ್ರೋಮಾರ್ಕೆಟ್ ಗಳಲ್ಲಿನ ತ್ವರಿತ ಮೂಲಸೌಕರ್ಯ ಅಭಿವೃದ್ಧಿ ಕಾರಣವಾಗಿದೆ ಎನ್ನುತ್ತಾರೆ.
ಬೆಂಗಳೂರಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೌಲಭ್ಯಗಳು ಮತ್ತು ಐಟಿ ದೈತ್ಯ ಸಂಸ್ಥೆಗಳ ಉಪಸ್ಥಿತಿ, ಹೆಚ್ಚುತ್ತಿರುವ ವಾಣಿಜ್ಯ ಚಟುವಟಿಕೆ ಮತ್ತು ವಿರಾಮ ಮತ್ತು ಮನರಂಜನಾ ಹಾಟ್ ಸ್ಪಾಟ್‌ಗಳು ಈ ಸ್ಥಳಗಳಲ್ಲಿ ವಸತಿ ಮತ್ತು ಬಾಡಿಗೆ ಆಸ್ತಿಗಳಿಗೆ ಬೇಡಿಕೆಯನ್ನು ಹೆಚ್ಚಿಸಿವೆ ಎನ್ನುವುದು ಬೇಡಿ ಅವರು ನೀಡುವ ಕಾರಣ.