logo
ಕನ್ನಡ ಸುದ್ದಿ  /  ಕರ್ನಾಟಕ  /  Prajwal Revenna: 6 ದಿನ ಎಸ್‌ಐಟಿ ಕಸ್ಟಡಿಗೆ ಪ್ರಜ್ವಲ್‌ ರೇವಣ್ಣ, ಹಾಸನಕ್ಕೆ ಕರೆದೊಯ್ಯುವ ಸಾಧ್ಯತೆ

Prajwal Revenna: 6 ದಿನ ಎಸ್‌ಐಟಿ ಕಸ್ಟಡಿಗೆ ಪ್ರಜ್ವಲ್‌ ರೇವಣ್ಣ, ಹಾಸನಕ್ಕೆ ಕರೆದೊಯ್ಯುವ ಸಾಧ್ಯತೆ

Umesha Bhatta P H HT Kannada

May 31, 2024 05:49 PM IST

google News

ಎಸ್‌ಐಟಿ ತೆಕ್ಕೆಯಲ್ಲಿ ಪ್ರಜ್ವಲ್‌ ರೇವಣ್ಣ.

    • Hassan Scandal ಹಾಸನ ಪ್ರಕರಣದಲ್ಲಿ ಸಿಲುಕಿರುವ ಸಂಸದ ಪ್ರಜ್ವಲ್‌ ರೇವಣ್ಣ ಅವರು ಹೆಚ್ಚಿನ ವಿಚಾರಣೆಗೆ ಪೊಲೀಸರ ಸುಪರ್ದಿಯಲ್ಲಿಯೇ ಇರಲಿದ್ದಾರೆ.  ಬೆಂಗಳೂರು ನ್ಯಾಯಾಲಯವು( Bangalore Court) ಪ್ರಜ್ವಲ್‌ ಅವರನ್ನು ಎಸ್‌ ಐಟಿ ವಶಕ್ಕೆ ನೀಡಲು ಆದೇಶಿಸಿದೆ.
ಎಸ್‌ಐಟಿ ತೆಕ್ಕೆಯಲ್ಲಿ ಪ್ರಜ್ವಲ್‌ ರೇವಣ್ಣ.
ಎಸ್‌ಐಟಿ ತೆಕ್ಕೆಯಲ್ಲಿ ಪ್ರಜ್ವಲ್‌ ರೇವಣ್ಣ.

ಬೆಂಗಳೂರು: ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಹಾಗೂ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೋಕಸಭೆ ಚುನಾವಣೆ ಫಲಿತಾಂಶ ಬರುವವರೆಗೂ ಪೊಲೀಸ್‌ ವಿಶೇಷ ತನಿಖಾ ತಂಡದ ಸುಪರ್ದಿಯಲ್ಲಿಯೇ ಇರಬೇಕು. ಪ್ರಕರಣದಲ್ಲಿ ಸಿಲುಕಿ ವಿದೇಶಕ್ಕೆ ಪರಾರಿಯಾಗಿ ಬಂದು ಶರಣಾಗಿರುವ ಪ್ರಜ್ವಲ್‌ ರೇವಣ್ಣ ಜೂನ್‌ 6ರವರೆಗೆ ಎಸ್‌ಐಟಿ ಕಸ್ಟಡಿಯಲ್ಲಿಯೇ ಇರಲಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರನ್ನು ಬಂಧಿಸಿರುವ ಎಸ್‌ಐಟಿ ತಂಡ ಶುಕ್ರವಾರ ಅವರನ್ನು ಬೆಂಗಳೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಆರು ದಿನಗಳ ಕಾಲ ಪ್ರಜ್ವಲ್‌ ಅವರನ್ನು ಎಸ್‌ಐಟಿ ವಶಕ್ಕೆ ನೀಡಿ ಆದೇಶಿಸಿದರು.

ಗುರುವಾರ ರಾತ್ರಿ ಬಂಧನಕ್ಕೆ ಒಳಗಾಗಿದ್ದ ಪ್ರಜ್ವಲ್‌ ರೇವಣ್ಣ ಅವರನ್ನು ಎಸ್‌ ಐಟಿ ಅಧಿಕಾರಿಗಳ ತಂಡ ಭಾರೀ ಭದ್ರತೆಯೊಂದಿಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ದ ಮುಂದೆ ಹಾಜರಿಪಡಿಸಿತು. ಮಧ್ಯಾಹ್ನವೇ ಪ್ರಕರಣದ ವಿಚಾರಣೆ ಆರಂಭವಾಗಬೇಕಿತ್ತು. ಕೇಸಿನ ಡೈರಿ ಇಲ್ಲದೇ ಇದ್ದುದರಿಂದ ಎಸ್‌ಐಟಿ ಸಮಯ ಕೇಳಿತ್ತು. ಇದರಿಂದ ಮಧ್ಯಾಹ್ನ 3ಕ್ಕೆ ವಿಚಾರಣೆ ಮುಂದೂಡಲಾಗಿತ್ತು.

ಈ ವೇಳೆ ಸರ್ಕಾರಿ ಅಭಿಯೋಜಕ ಅಶೋಕ್‌ ನಾಯಕ್‌ ಅವರು ಪ್ರಜ್ವಲ್‌ ರೇವಣ್ಣ ಅವರ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಅಲ್ಲದೇ ಅತ್ಯಾಚಾರ ಪ್ರಕರಣಗಳು ಕೂಡ ದಾಖಲಾಗಿವೆ. ಗಂಭೀರ ಸ್ವರೂಪದ ಆರೋಪಗಳ ಪ್ರಕರಣವಾಗಿರುವುದರಿಂದ ಅವರನ್ನು ಹದಿನೈದು ದಿನಗಳ ಮಟ್ಟಿಗೆ ಎಸ್‌ಐಟಿ ವಶಕ್ಕೆ ನೀಡಬೇಕು ಎಂದು ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಜ್ವಲ್‌ ರೇವಣ್ಣ ಪರ ವಕೀಲ ಅರುಣ್‌, ಇಡೀ ಪ್ರಕರಣದಲ್ಲಿ ಹಲವಾರು ಅನುಮಾನಗಳಿಗೆ. ಇದು ನಾಲ್ಕು ವರ್ಷದ ಹಿಂದೆ ನಡೆದ ಪ್ರಕರಣ ಎಂದು ತಿಳಿಸಲಾಗಿದೆ. ಆದರೆ ಅತ್ಯಾಚಾರದ ಅವಧಿಯ ಉಲ್ಲೇಖವಿಲ್ಲ. ಬರೀ ಅತ್ಯಾಚಾರ ಪ್ರಕರಣ ಎಂದು ದಾಖಲಿಸಲಾಗಿದೆ. ಅಲ್ಲದೇ ವಿಡಿಯೋದಲ್ಲಿರುವ ಮುಖವನ್ನು ಆಧರಿಸಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ಅಲ್ಲದೇ ದೌರ್ಜನ್ಯ ಪ್ರಕರಣವನ್ನೇ ಅತ್ಯಾಚಾರ ಪ್ರಕರಣವಾಗಿ ಬದಲಾಯಿಸಲಾಗಿದೆ. ಈ ಪ್ರಕರಣದಲ್ಲಿ ನಮ್ಮ ಕಕ್ಷಿದಾರರಿಗೆ ಒಂದು ದಿನದ ಕಸ್ಟಡಿ ಕೊಟ್ಟರೆ ಸಾಕು ಎಂದು ವಾದಿಸಿದರು.

ಎರಡೂ ಕಡೆಯ ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶ ಶಿವಕುಮಾರ್‌ ಅವರು ಮಧ್ಯಾಹ್ನಕ್ಕೆ ತೀರ್ಪು ಕಾಯ್ದಿರಿಸಿದ್ದರು. ಪ್ರಜ್ವಲ್‌ ಅವರನ್ನು ಕಸ್ಟಡಿಗೆ ನೀಡುತ್ತಾರೋ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದಾ ಎನ್ನುವ ಕುತೂಹಲವಿತ್ತು. ಮತ್ತೆ ನ್ಯಾಯಾಲಯ ಸೇರಿದಾಗ ನ್ಯಾಯಾಧೀಶರು ಪ್ರಜ್ವಲ್‌ ರೇವಣ್ಣ ಅವರನ್ನು ಆರು ದಿನಗಳ ಮಟ್ಟಿಗೆ ಎಸ್‌ಐಟಿ ಕಸ್ಟಡಿಗೆ ನೀಡಲು ಸೂಚಿಸಿದರು.

ಅಲ್ಲಿಂದ ಬಿಗಿ ಭದ್ರತೆಯಲ್ಲಿಯೇ ಎಸ್‌ಐಟಿ ಕಚೇರಿಗೆ ಪ್ರಜ್ವಲ್‌ ರೇವಣ್ಣ ಅವರನ್ನು ಕರೆದೊಯ್ಯಲಾಯಿತು. ಅಲ್ಲಿಯೇ ಶುಕ್ರವಾರದಿಂದ ವಿಚಾರಣೆ ಮುಂದುವರಿಯಲಿದೆ. ಹಾಸನ, ಹೊಳೆ ನರಸೀಪುರ, ಬೆಂಗಳೂರಿನಲ್ಲಿ ನಡೆದ ವಿಡಿಯೋ ಚಿತ್ರೀಕರಣ,ಅತ್ಯಾಚಾರ ದೂರಿನ ಕುರಿತು ಸ್ಥಳ ಮಹಜರು ಕೂಡ ಮಾಡಲಾಗುತ್ತದೆ. ಇದಕ್ಕಾಗಿ ಎರಡು ದಿನಗಳ ಒಳಗೆ ಪ್ರಜ್ವಲ್‌ ಅವರನ್ನು ಸ್ಥಳಗಳಿಗೆ ಕರೆದೊಯ್ಯವ ಸಾಧ್ಯತೆಯಿದೆ.

ಇದರೊಟ್ಟಿಗೆ ಇಡೀ ಪ್ರಕರಣದ ಕುರಿತು ಮಾಹಿತಿಯನ್ನು ಸಂಗ್ರಹಿಸಲು ಎಸ್‌ಐಟಿ ಪ್ರಜ್ವಲ್‌ ಅವರಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ. ಆನಂತರ ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದು, ಅಗತ್ಯ ಬಿದ್ದರೆ ಕಸ್ಟಡಿಗೆ ಪಡೆಯಬಹುದು. ಇಲ್ಲದೇ ಇದ್ದರೆ ನ್ಯಾಯಾಂಗ ಬಂಧನವೋ ಅಥವಾ ಜಾಮೀನು ಸಿಗಲಿದೆಯೋ ಎನ್ನುವುದನ್ನು ಕಾದು ನೋಡಬೇಕಿದೆ.

ಜೂನ್‌ 6ರ ವರೆಗೂ ಪ್ರಜ್ವಲ್‌ ರೇವಣ್ಣ ಎಸ್‌ಐಟಿ ಕಸ್ಟಡಿಯಲ್ಲಿಯೇ ಇರಲಿದ್ದಾರೆ. ಇದರಿಂದ ಅವರು ಮತ ಎಣಿಕೆ ದಿನ ಹಾಸನದಲ್ಲಿ ಇರುವುದಿಲ್ಲ ಎನ್ನುವುದು ಖಚಿತವಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ