ಕನ್ನಡ ಸುದ್ದಿ  /  ಕರ್ನಾಟಕ  /  Prajwal Revanna In Bangalore:ಕೊನೆಗೂ ನಡುರಾತ್ರಿ ಬೆಂಗಳೂರಿಗೆ ಬಂದಿಳಿದ ಪ್ರಜ್ವಲ್‌ ರೇವಣ್ಣ, ಸಿಐಡಿ ಕಚೇರಿಯಲ್ಲಿ ವಿಚಾರಣೆ

Prajwal Revanna In Bangalore:ಕೊನೆಗೂ ನಡುರಾತ್ರಿ ಬೆಂಗಳೂರಿಗೆ ಬಂದಿಳಿದ ಪ್ರಜ್ವಲ್‌ ರೇವಣ್ಣ, ಸಿಐಡಿ ಕಚೇರಿಯಲ್ಲಿ ವಿಚಾರಣೆ

Prajwal In Bangalore ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿ ತಲೆ ಮರೆಸಿಕೊಂಡಿದ್ದ ಸಂಸದ ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ ಮರಳಿದ್ದು ಅವರನ್ನುವಶಕ್ಕೆ ಪಡೆಯಲಾಗಿದೆ.

ಬೆಂಗಳೂರಿಗೆ ಬಂದಿಳಿದ ಪ್ರಜ್ವಲ್‌ ರೇವಣ್ಣ ಬಂಧನವಾಗಿದೆ.
ಬೆಂಗಳೂರಿಗೆ ಬಂದಿಳಿದ ಪ್ರಜ್ವಲ್‌ ರೇವಣ್ಣ ಬಂಧನವಾಗಿದೆ.

ಬೆಂಗಳೂರು: ಸತತ 34 ದಿನದಿಂದ ಜರ್ಮನಿ ದೇಶದಲ್ಲಿ ತಲೆ ಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರು ಕೊನೆಗೂ ಬೆಂಗಳೂರಿಗೆ ಬಂದಿಳಿದಿದ್ದು, ಅವರನ್ನು ಎಸ್‌ಐಟಿ ಬಂಧಿಸಿದೆ. ಹಾಸನದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಸಿಲುಕಿರುವ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಿಶೇಷ ತನಿಖಾ ತಂಡ ಬಲೆ ಬೀಸಿತ್ತು. ನಿರಂತರ ಪ್ರಯತ್ನ ನಂತರ ಗುರುವಾರ ಮಧ್ಯರಾತ್ರಿ ದೇಶಕ್ಕೆ ಮರಳಿದ ಪ್ರಜ್ವಲ್‌ ಅವರನ್ನು ನಿರೀಕ್ಷೆಯಂತೆಯೇ ಎಸ್‌ಐಟಿ ಪೊಲೀಸರು ಬೆಂಗಳೂರು ಪೊಲೀಸರು ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳ ಸಹಕಾರದಿಂದ ವಶಕ್ಕೆ ಪಡೆದರು. ಸತತ ಪ್ರಯಾಣದಿಂದ ಬಳಲಿದ್ದರೂ ಸಹಜವಾಗಿಯೇ ಬಂದ ಪ್ರಜ್ವಲ್‌ ಅವರನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ವಶಕ್ಕೆ ತೆಗೆದುಕೊಂಡರು.

ಟ್ರೆಂಡಿಂಗ್​ ಸುದ್ದಿ

ಜರ್ಮನಿ ಮೂನಿಚ್‌ ನಗರದಿಂದ ಲುಫ್ತಾನ್ಸ ಏರ್‌ಲೈನ್ಸ್‌ನಲ್ಲಿ ಎಲ್‌ಎಚ್‌764 ಸಂಖ್ಯೆಯ ವಿಮಾನ ರಾತ್ರಿ 12.45ರ ಹೊತ್ತಿಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಅರ್ಧ ಗಂಟೆಯವರೆಗೂ ಪರಿಶೀಲನೆ ಪ್ರಕ್ರಿಯೆ ಮುಗಿಸಿ ಟರ್ಮಿನಲ್‌2 ಗೇಟ್‌ ಮೂಲಕ ಆಗಮಿಸಿದರು. ಈ ವೇಳೆ ತಮ್ಮ ನಾಲ್ಕು ಲಗೇಟ್‌ ಬ್ಯಾಗ್‌ಗಳೊಂದಿಗೆ ಹೊರಕ್ಕೆ ಬಂದ ಪ್ರಜ್ವಲ್‌ ಅವರನ್ನು ವಿಮಾನ ನಿಲ್ದಾಣದ ಇಮಿಗ್ರೇಷನ್‌ ಅಧಿಕಾರಿಗಳು ಹಾಗೂ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಸಹಕಾರದಿಂದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ವಶಕ್ಕೆ ಪಡೆದರು.

ತಮ್ಮನ್ನು ಸುತ್ತುವರೆದು ಬಂಧನಕ್ಕೆ ಮುಂದಾದಾಗ ಯಾವುದೇ ಪ್ರತಿರೋಧ ತೋರದೆಯೇ ಪ್ರಜ್ವಲ್‌ ರೇವಣ್ಣ ಅವರೊಂದಿಗೆ ಹೊರಟರು. ಪೊಲೀಸ್‌ ವಾಹನದಲ್ಲಿ ಕುಳ್ಳಿರಿಸಿಕೊಂಡು ಹತ್ತಕ್ಕೂ ಹೆಚ್ಚು ಪೊಲೀಸ್‌ ವಾಹನಗಳ ಭದ್ರತೆಯಲ್ಲಿ ರಾತ್ರಿ 2 ರ ಹೊತ್ತಿಗೆ ಅವರನ್ನು ಕರೆ ದೊಯ್ಯಲಾಯಿತು.

ಅಲ್ಲಿಂದ ಅವರನ್ನು ಸಿಐಡಿ ಕಚೇರಿ ಕಾರ್ಲಟನ್‌ ಭವನಕ್ಕೆ ಕರೆದೊಯ್ಯಲಾಯಿತು. ಸಿಐಡಿ ಕಚೇರಿಯಲ್ಲೇ ಪ್ರಜ್ವಲ್‌ ರೇವಣ್ಣ ಅವರ ವಿಚಾರಣೆಯೂ ಶುರುವಾಯಿತು.

ಪ್ರಜ್ವಲ್‌ ರೇವಣ್ಣ ಮುನಿಚ್‌ ನಗರದಿಂದ ಹೊರಟಿರುವ ಮಾಹಿತಿ ಖಚಿತಪಡಿಸಿಕೊಂಡ ಪೊಲೀಸರು ಹೆಚ್ಚಿನ ಭದ್ರತೆಯನ್ನು ಹಾಕಿ ಕಾಯುತ್ತಿದ್ದರು. ವಿಮಾನ ನಿಲ್ದಾಣ, ಸಿಐಡಿ ಕಚೇರಿಗೆ ಭಾರೀ ಭದ್ರತೆ ಒದಗಿಸಿದ್ದರು. ವಿಮಾನ ಯಾವ ಮಾರ್ಗದಲ್ಲಿದೆ. ಎಲ್ಲಿ ಬರುತ್ತಿದೆ ಎನ್ನುವುದರ ಕ್ಷಣ ಕ್ಷಣದ ಮಾಹಿತಿಯನ್ನೂ ಪೊಲೀಸರು ತಂತ್ರಜ್ಞಾನದ ನೆರವಿನಿಂದ ಪಡೆಯುತ್ತಿದ್ದರು. ಪ್ರಜ್ವಲ್‌ ರೇವಣ್ಣ ಈಗಾಗಲೇ ಎರಡು ಬಾರಿ ವಿಮಾನ ಟಿಕೆಟ್‌ ಬುಕ್‌ ಮಾಡಿಸಿ ಕೊನೆಗೆ ರದ್ದುಪಡಿಸಿದ್ದರಿಂದ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು. ಅಲ್ಲದೇ ಇದು ಹೈ ಪ್ರೊಫೈಲ್‌ ಪ್ರಕರಣವೂ ಆಗಿರುವುದರಿಂದ ಕ್ಷಣ ಕ್ಷಣದಲ್ಲೂ ಅಲರ್ಟ್‌ ಆಗಿದ್ದುದು ಕಂಡು ಬಂದಿತು.

ಕರ್ನಾಟಕ ಮಾತ್ರವಲ್ಲದೇ ಭಾರತ, ಅಂತರಾಷ್ಟ್ರೀಯ ಮಟ್ಟದಲ್ಲೂ ಭಾರೀ ಸಂಚಲನ ಮೂಡಿಸಿರುವ ಪ್ರಕರಣದಲ್ಲಿ ಪ್ರಜ್ವಲ್‌ ಅವರನ್ನು ಬಂಧಿಸುವಂತೆ ಭಾರೀ ಒತ್ತಾಯ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಅವರ ತಂದೆ ಎಚ್‌.ಡಿ.ರೇವಣ್ಣ ಬಂಧನಕ್ಕೆ ಒಳಗಾಗಿ ಬಿಡುಗಡೆಯಾಗಿದ್ದಾರೆ. ವಕೀಲ ದೇವರಾಜಗೌಡ ಕೂಡ ಬಂಧನಕ್ಕೆ ಒಳಗಾಗಿ ಹಾಸನ ಜೈಲಿನಲ್ಲಿದ್ದಾರೆ. ಪೆನ್‌ ಡ್ರೈವ್‌ ಹಂಚಿಕೆ ಪ್ರಕರಣದಲ್ಲಿಯೇ ನವೀನ್‌ಗೌಡ ಸೇರಿದಂತೆ ಹಲವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಪೆನ್‌ಡ್ರೈವ್‌ ಹಂಚಿಕೆ ಪ್ರಕರಣ ಎದುರಿಸುತ್ತಿರುವ ಪ್ರಜ್ವಲ್‌ ಅವರ ಕಾರು ಚಾಲಕ ಕಾರ್ತಿಕ್‌ ಗೌಡ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದು, ಅವರು ವಿದೇಶದಲ್ಲಿರುವ ಮಾಹಿತಿಯಿದೆ. ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ವಿರುದ್ದ ಲುಕ್‌ ಔಟ್‌ ನೋಟೀಸ್‌ ಜಾರಿಗೊಳಿಸಿ ಆನಂತರ ಬ್ಲೂ ಕಾರ್ನರ್‌ ನೊಟೀಸ್‌ ಕೂಡ ಜಾರಿ ಮಾಡಲಾಗಿತ್ತು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024