ಕನ್ನಡ ಸುದ್ದಿ  /  ಕರ್ನಾಟಕ  /  ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಇದುವರೆಗೆ ಯಾವ ದಿನ ಏನಾಯಿತು, ಇಲ್ಲಿದೆ ಪೂರ್ಣ ವಿವರ

ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಇದುವರೆಗೆ ಯಾವ ದಿನ ಏನಾಯಿತು, ಇಲ್ಲಿದೆ ಪೂರ್ಣ ವಿವರ

ಹಾಸನ ಲೈಂಗಿಕ ಹಗರಣ ಕೇಸ್ ತನಿಖೆ ನಡೆಸುತ್ತಿರುವ ಕರ್ನಾಟಕ ಎಸ್‌ಐಟಿ ತಂಡ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದೆ. ಇದರೊಂದಿಗೆ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಅವರ ಅಜ್ಞಾತವಾಸ ಕೊನೆಗೊಂಡಿದೆ. ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಇದುವರೆಗೆ ಯಾವ ದಿನ ಏನಾಯಿತು, ಇಲ್ಲಿದೆ ಪೂರ್ಣ ವಿವರ.

ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಇದುವರೆಗೆ ಯಾವ ದಿನ ಏನಾಯಿತು ಎಂಬುದರ ವಿವರ ವರದಿ ಇಲ್ಲಿದೆ.
ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಇದುವರೆಗೆ ಯಾವ ದಿನ ಏನಾಯಿತು ಎಂಬುದರ ವಿವರ ವರದಿ ಇಲ್ಲಿದೆ.

ಬೆಂಗಳೂರು: ಹಾಸನ ಲೈಂಗಿಕ ಹಗರಣ (Hassan Sex Scandal) ಮುನ್ನೆಲೆಗೆ ಬಂದ ಬೆನ್ನಿಗೆ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇಂದು (ಮೇ 31) ನಸುಕಿನ 12.50ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಜರ್ಮನಿಯಿಂದ ಬಂದ ಅವರನ್ನು ಕರ್ನಾಟಕ ಎಸ್ಐಟಿ ತಂಡ ಕೂಡಲೇ ವಶಕ್ಕೆ ತೆಗೆದುಕೊಂಡು ಬಂಧನ ದಾಖಲಿಸಿದೆ. ಬಳಿಕ ವಿಚಾರಣೆಗೆ ಎಂದು ಸಿಐಡಿ ಕಚೇರಿಗೆ ಕರೆದೊಯ್ದಿದೆ.

ಟ್ರೆಂಡಿಂಗ್​ ಸುದ್ದಿ

ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ. ಹಾಗೆ, ಪ್ರಜ್ವಲ್ ರೇವಣ್ಣ ಅವರ 34 ದಿನಗಳ ಅಜ್ಞಾತವಾಸ ಕೊನೆಗೊಂಡಿದೆ. ಈ ಅವಧಿಯಲ್ಲಿ ಅನೇಕ ವಿದ್ಯಮಾನಗಳಾಗಿ ಹೋಗಿವೆ. ಅವುಗಳ ಕಿರು ಅವಲೋಕನಕ್ಕೆ ಈ ಹೊತ್ತು ಒಂದು ನಿಮಿತ್ತ.

ಪ್ರಜ್ವಲ್ ರೇವಣ್ಣ ಕೇಸ್ ಸಾಗಿ ಬಂದ ಹಾದಿ; ಯಾವಾಗ ಏನಾಯಿತು ಇಲ್ಲಿದೆ ಟೈಮ್‌ಲೈನ್‌

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 26ಕ್ಕೆ ಇತ್ತು. ಹಾಸನ ಲೋಕಸಭಾ ಕ್ಷೇತ್ರದ ಮತದಾನವೂ ಇದೇ ಹಂತದಲ್ಲಿತ್ತು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಕಾರಣ ಹಾಸನ ಕ್ಷೇತ್ರದಲ್ಲಿ ಹಾಲಿ ಸಂಸದ ಜೆಡಿಎಸ್‌ನ ಪ್ರಜ್ವಲ್ ರೇವಣ್ಣ ಅವರನ್ನೇ ಮತ್ತೆ ಕಣಕ್ಕೆ ಇಳಿಸಲಾಗಿದೆ. ಇದಕ್ಕೆ ವ್ಯಾಪಕ ವಿರೋಧ ಇತ್ತಾದರೂ, ಕೊನೆಯ ಕ್ಷಣದಲ್ಲಿ ಪ್ರಜ್ವಲ್ ಹೆಸರನ್ನೆ ಅಭ್ಯರ್ಥಿಯಾಗಿ ಜೆಡಿಎಸ್ ಖಾಯಂ ಮಾಡಿತ್ತು.

ಪ್ರಚಾರ ಶುರುವಾಗುತ್ತಿದ್ದಂತೆ, ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಒಮ್ಮೆ ಗಮನಸೆಳೆದಿದ್ದ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ವಿಚಾರ ಮುನ್ನೆಲೆಗೆ ಬಂತು. ನಂತರದ ಬೆಳವಣಿಗೆ ಪ್ರಜ್ವಲ್ ರೇವಣ್ಣ, ಎಚ್ ಡಿ ರೇವಣ್ಣ ಸೇರಿ ಜೆಡಿಎಸ್, ಬಿಜೆಪಿ ಮೈತ್ರಿಗೂ ಕಬ್ಬಿಣದ ಕಡಲೆಯಾಗಿಬಿಟ್ಟಿತು. ಇಲ್ಲಿದೆ ಆಯ್ದ ವಿದ್ಯಮಾನಗಳ ವಿವರ.

ಏಪ್ರಿಲ್ 19- 21 - ಈ ಅವಧಿಯಲ್ಲಿ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್‌ಡ್ರೈವ್ ಸುದ್ದಿ ಹರಿದಾಡಿತ್ತು.

ಏಪ್ರಿಲ್ 22 - ಪೆನ್‌ಡ್ರೈವ್‌ನಲ್ಲಿದ್ದ ಕೆಲವು ಅಶ್ಲೀಲ ಫೋಟೋಸ್, ವಿಡಿಯೋಗಳು ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ತಲುಪಿದವು.

ಏಪ್ರಿಲ್ 23 - ನವೀನ್ ಗೌಡ ಹಾಗೂ ಇತರರು ಏ.21ರಂದು ಸಂಜೆ 6.30ಕ್ಕೆ ಪ್ರಜ್ವಲ್ ರೇವಣ್ಣ ಅವರದ್ದು ಎಂದೆನ್ನುತ್ತ ಅಶ್ಲೀಲ ಭಾವಚಿತ್ರ ಮತ್ತು ವಿಡಿಯೋ ಒಳಗೊಂಡ ಸಿಡಿ ಹಾಗೂ ಪೆನ್‌ ಡ್ರೈವ್‌ಗಳನ್ನು ಹಾಸನದಲ್ಲಿ ಮನೆಮನೆಗೆ ತೆರಳಿ ಹಂಚಿದ್ದಾರೆ ಎಂದು ಆರೋಪಿಸಿ ಪ್ರಜ್ವಲ್ ರೇವಣ್ಣ ಅವರ ಚುನಾವಣಾ ಏಜೆಂಟ್ ಆಗಿದ್ದ ಪೂರ್ಣಚಂದ್ರ ಎಂಬುವವರು ಏಪ್ರಿಲ್‌ 23 ರಂದು ಹಾಸನದ ಸಿಇಎನ್ ಠಾಣೆಗೆ ದೂರು ನೀಡಿದ್ದರು. ವಿವರ ಓದಿಗೆ - ಪ್ರಜ್ವಲ್ ರೇವಣ್ಣ ಟಿಕೆಟ್ ಬುಕ್, ಧ್ವನಿ ಪರೀಕ್ಷೆ ನಡೆಸಲು ಎಸ್‌ಐಟಿ ಸಜ್ಜು, ಇನ್ನೂ 5 ವಿದ್ಯಮಾನಗಳ ವಿವರ

ಏಪ್ರಿಲ್ 24 - ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಈ ವಿಚಾರವಾಗಿ ರಾಜ್ಯ ಮಹಿಳಾ ಆಯೋಗಕ್ಕೆ ಪತ್ರಬರೆಯಿತು. ಹಾಸನದಲ್ಲಿ ಅಶ್ಲೀಲ ವಿಡಿಯೋಗಳು ಹರಿದಾಡುತ್ತಿವೆ. ಅದರಲ್ಲಿರುವ ಮಹಿಳೆಯರಿಗೆ, ಯುವತಿಯರಿಗೆ ಬದುಕು ಕಷ್ಟವಾಗಿದೆ. ಈ ಕುರಿತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿತ್ತು.

ಏಪ್ರಿಲ್ 25 - ರಾಜ್ಯ ಮಹಿಳಾ ಆಯೋಗವು ಈ ದೂರು ಪತ್ರ ಮತ್ತು ಲಭ್ಯ ಅಶ್ಲೀಲ ಫೋಟೋ, ವಿಡಿಯೋಗಳನ್ನು ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಜಿಪಿ ಅಲೋಕ್ ಮೋಹನ್ ಅವರಿಗೆ ಪತ್ರ ಬರೆದು, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಈ ವಿದ್ಯಮಾನದ ತನಿಖೆ ನಡೆಸಬೇಕು ಎಂದು ಶಿಫಾರಸು ಮಾಡಿತು.

ಏಪ್ರಿಲ್ 26 - ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯಿತು. ಹಾಸನ ಕ್ಷೇತ್ರದ ಮತದಾನವೂ ಇದೇ ದಿನ ನಡೆಯಿತು. ಪ್ರಜ್ವಲ್ ರೇವಣ್ಣ ಅವರು ಹೊಳೆನರಸೀಪುರದ ಹರದನಹಳ್ಳಿಯಲ್ಲಿ ಮತದಾನ ಮಾಡಿದರು. ಬಳಿಕ ಕೆ.ಆರ್.ನಗರದಲ್ಲಿ ಸಂಬಂಧಿಯೊಬ್ಬರ ಸಾವಿಗೆ ಹೋಗಿ ಸಂತಾಪ ಸೂಚಿಸಿದ್ದರು. ತಡರಾತ್ರಿ ಬೆಂಗಳೂರು ವಿಮಾನ ನಿಲ್ಧಾಣಕ್ಕೆ ತೆರಳಿ ವಿದೇಶಕ್ಕೆ ಹೋಗಿದ್ದರು.

ಏಪ್ರಿಲ್‌ 27 - ಮಹಿಳಾ ಆಯೋಗ ಬರೆದ ಶಿಫಾರಸು ಪತ್ರ ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಜೆ ವಿಶೇಷ ತನಿಖಾ ತಂಡ (ಎಸ್‌ಐಟಿ ) ರಚಿಸಿದರು. ಇದೇ ವೇಳೆ, ಈ ಹಗರಣದಲ್ಲಿ ಪ್ರಜ್ವಲ್ ರೇವಣ್ಣ ಭಾಗಿಯಾಗಿರುವ ವಿಚಾರ ಪ್ರಸ್ತಾಪಿಸಿದರು.

ಏಪ್ರಿಲ್ 28 - ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಯಿತು. ಈ ಕೇಸ್‌ನಲ್ಲಿ ಎಚ್‌ ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪ ಹೊರಿಸಲಾಗಿತ್ತು. ಈ ನಡುವೆ, ಎಸ್‌ಐಟಿ ಕೂಡ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಿಸಿತು.

ಏಪ್ರಿಲ್ 29 - ಹಾಸನದ ಅಶ್ಲೀಲ ವಿಡಿಯೋ ಕೇಸ್ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣ ಅವರಿಗೆ ನೋಟಿಸ್ ಜಾರಿಗೊಳಿಸಿದ ಎಸ್‌ಐಟಿ.

ಏಪ್ರಿಲ್ 30 - ಹಾಸನ ಲೈಂಗಿಕ ಹಗರಣ ಕೇಸ್‌ನ ಆರೋಪಿಯನ್ನು ಬಂಧಿಸುವಂತೆ ರಾಜ್ಯ ಮಹಿಳಾ ಆಯೋಗವು ಕರ್ನಾಟಕ ಡಿಜಿಪಿಯನ್ನು ಆಗ್ರಹಿಸಿತು. ಈ ನಡುವೆ, ರಾಜಕೀಯ ಒತ್ತಡ ಹೆಚ್ಚಾದ ಕಾರಣ ಜೆಡಿಎಸ್ ಪಕ್ಷದ ಕೋರ್ ಕಮಿಟಿ ಸಭೆ ನಡೆಯಿತು. ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿರುವುದಾಗಿ ಘೋಷಣೆ ಮಾಡಿತು. ವಿವರ ಓದಿಗೆ - ಜೆಡಿಎಸ್‌ನಿಂದ ಪ್ರಜ್ವಲ್ ರೇವಣ್ಣ ಅಮಾನತು, ಅಶ್ಲೀಲ ವಿಡಿಯೋ ಹಗರಣ ನಾಚಿಕೆಗೇಡಿನ ಸಂಗತಿ ಎಂದ ಹೆಚ್‌ಡಿ ಕುಮಾರಸ್ವಾಮಿ

ಮೇ 1 - ಸತ್ಯ ಬಹಿರಂಗವಾಗಲಿದೆ, ಸತ್ಯಕ್ಕೆ ಜಯವಾಗಲಿದೆ ಎಂದು ಎಕ್ಸ್‌ ಖಾತೆಯಲ್ಲಿ ಟ್ವೀಟ್ ಮಾಡಿದ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗಲು 7 ದಿನಗಳ ಸಮಯ ಕೋರಿದರು.

ಮೇ 2- ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಪಡಿಸಲು ಪ್ರಧಾನಮಂತ್ರಿಗೆ ಪತ್ರಬರೆದಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೇ 3 - ಜೆಡಿಎಸ್‌ನ ಕಾರ್ಯಕರ್ತೆಯೊಬ್ಬರು ಪ್ರಜ್ವಲ್ ವಿರುದ್ಧ ಅತ್ಯಾಚಾರದ ಕೇಸ್ ದಾಖಲಿಸಿದರು. ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿರುವುದಾಗಿಯೂ ದೂರಿನಲ್ಲಿ ತಿಳಿಸಿದರು. ಹಾಗೆ ಪ್ರಜ್ವಲ್ ವಿರುದ್ಧ ಎರಡನೆ ಎಫ್‌ಐಆರ್ ದಾಖಲಾಯಿತು.

ಮೇ 4 - ಅಶ್ಲೀಲ ವಿಡಿಯೋದಲ್ಲಿದ್ದ ಸಂತ್ರಸ್ತೆ ಮನೆಗೆಲಸದ ಮಹಿಳೆ ನಾಪತ್ತೆಯಾಗಿರುವುದಾಗಿ ಹೆಚ್ ಡಿ ರೇವಣ್ಣ ಮತ್ತು ಅವರ ಆಪ್ತನ ವಿರುದ್ಧ ಮಹಿಳೆಯ ಮಗ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು ಶೋಧ ನಡೆಸಿ ಮಹಿಳೆಯನ್ನು ಬಚಾವ್ ಮಾಡಿದ್ದರು. ಬೆಂಗಳೂರಿನ ಪದ್ಮನಾಭ ನಗರದಲ್ಲಿ ರಾತ್ರಿ ಹೆಚ್ ಡಿ ರೇವಣ್ಣ ಅವರನ್ನು ಬಂಧಿಸಿದರು.

ಮೇ 5 - ಕರ್ನಾಟಕ ರಾಜ್ಯಪಾಲರನ್ನು ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ನಿಯೋಗ, ಪ್ರಜ್ವಲ್ ರೇವಣ್ಣ ಕೇಸ್ ಅನ್ನು ಸಿಬಿಐಗೆ ವಹಿಸುವುದಕ್ಕೆ ಆಗ್ರಹಿಸಿದರು.

ಮೇ 6 - ಹಾಸನ ಲೈಂಗಿಕ ಹಗರಣದ ಸಂತ್ರಸ್ತೆಯರ ಅನುಕೂಲಕ್ಕಾಗಿ ಸಹಾಯವಾಣಿ ಶುರು ಮಾಡಿದ ಎಸ್‌ಐಟಿ

ಮೇ 7- ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೊಟೀಸ್ ಜಾರಿ

ಮೇ 13 - ಪ್ರಜ್ವಲ್ ರೇವಣ್ಣ ಅವರ ತಂದೆ ಎಚ್ ಡಿ ರೇವಣ್ಣ ಅವರು 8 ದಿನಗಳ ಸೆರೆವಾಸದ ಬಳಿಕ ಜಾಮೀನು ಪಡೆದು ಬಿಡುಗಡೆ. ಸ್ವದೇಶಕ್ಕೆ ವಾಪಸ್ ಬಂದು ತನಿಖೆ ಎದುರಿಸುವಂತೆ ಪ್ರಜ್ವಲ್ ರೇವಣ್ಣಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಹಿರಂಗ ಮನವಿ.

ಮೇ 15 ಜರ್ಮನಿಯಿಂದ ಬೆಂಗಳೂರಿಗೆ ವಿಮಾನ ಟಿಕೆಟ್ ಬುಕ್ ಮಾಡಿ ರದ್ದುಗೊಳಿಸಿದ ಪ್ರಜ್ವಲ್ ರೇವಣ್ಣ. ಇನ್ನೊಂದೆಡೆ, 100ಕ್ಕೂ ಹೆಚ್ಚು ಸಾಹಿತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿದರು.

ಮೇ 18 - ಪ್ರಜ್ವಲ್ ರೇವಣ್ಣ ಕೇಸ್‌ಗೆ ಸಂಬಂಧಿಸಿ ಮೊದಲ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು, ಕಾನೂನು ಕ್ರಮಕ್ಕೆ ತಕರಾರು ಇಲ್ಲ ಎಂದು ಹೇಳಿದರು. ಇದರ ಹಿಂದೆ ಹಲವರ ಕೈವಾಡ ಇದೆ ಎಂದೂ ಹೇಳಿದ್ದರು.

ಮೇ 22: ಪ್ರಜ್ವಲ್ ಪಾಸ್‌ಪಾರ್ಟ್ ರದ್ದುಗೊಳಿಸುವಂತೆ 2ನೇ ಬಾರಿಗೆ ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೊದಲ ಪತ್ರಕ್ಕೆ ಉತ್ತರ ಬಂದಿಲ್ಲ ಎಂದು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಕರ್ನಾಟಕದ ಪತ್ರ ಮೇ 21ಕ್ಕೆ ಬಂದಿರುವಂಥದ್ದು ಎಂದು ಸ್ಪಷ್ಟಪಡಿಸಿದರು.

ಮೇ 23: ರಾಜತಾಂತ್ರಿಕ ವೀಸಾ ರದ್ದುಗೊಳಿಸುವ ವಿಚಾರಕ್ಕೆ ಸಂಬಂಧಿಸಿ ವಿದೇಶಾಂಗ ಸಚಿವಾಲಯದಿಂದ ಪ್ರಜ್ವಲ್‌ಗೆ ಶೋಕಾಸ್ ನೋಟೀಸ್ ಜಾರಿಗೊಳಿಸಿತು. ಇದೇ ದಿನ, ಕುಟುಂಬದಿಂದ ಹೊರಹಾಕುವುದಾಗಿ ಎಚ್ಚರಿಕೆಯನ್ನು ನೀಡಿ ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರಜ್ವಲ್ ರೇವಣ್ಣಗೆ ಬಹಿರಂಗ ಪತ್ರಬರೆದರು.

ಮೇ 27: ವಿದೇಶದಲ್ಲಿದ್ದುಕೊಂಡೇ ವಿಡಿಯೋ ಹೇಳಿಕೆ ನೀಡಿದ ಪ್ರಜ್ವಲ್ ರೇವಣ್ಣ, ಮೇ 31ಕ್ಕೆ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದರು. ವಿವರ ಓದಿಗೆ - ಪ್ರಜ್ವಲ್ ರೇವಣ್ಣ ಕೇಸ್; ಹಾಸನ ಸಂಸದನ ವಿಡಿಯೋ ಹೇಳಿಕೆ ಬಿಡುಗಡೆ, ಸರ್ಕಾರದ ಮತ್ತು ರಾಜಕೀಯ ನಾಯಕರ ಪ್ರತಿಕ್ರಿಯೆ ಹೀಗಿತ್ತು

ಮೇ 30-31 ಮಧ್ಯರಾತ್ರಿ ಜರ್ಮನಿಯಿಂದ ಕೆಐಎ ಏರ್‌ಪೋರ್ಟ್‌ಗೆ ಬಂದಿಳಿದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದ ಎಸ್‌ಐಟಿ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

ಟಿ20 ವರ್ಲ್ಡ್‌ಕಪ್ 2024