Prajwal Revanna: ಜರ್ಮನಿಯಿಂದ ಹೊರಡಲು ಅಣಿಯಾದ ಪ್ರಜ್ವಲ್ ರೇವಣ್ಣ, ಮಧ್ಯರಾತ್ರಿ ಬೆಂಗಳೂರಿಗೆ ಆಗಮನ ನಿರೀಕ್ಷೆ
May 30, 2024 07:17 PM IST
ಭಾರತಕ್ಕೆ ಮರಳಲು ಅಣಿಯಾಗಿರುವ ಪ್ರಜ್ವಲ್ ರೇವಣ್ಣ
Hassan Scandal ಹಾಸನದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿರುವ ಸಂಸದ ಪ್ರಜ್ವಲ್ ರೇವಣ್ಣ( Prajwal Revanna) ಅವರು ಭಾರತಕ್ಕೆ ವಾಪಾಸಾಗುವುದು ಖಚಿತವಾಗಿದೆ.
ಬೆಂಗಳೂರು: ಹಾಸನದಲ್ಲಿ ಕಳೆದ ತಿಂಗಳು ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ನಡುವೆಯೇ ವಿದೇಶಕ್ಕೆ ಪರಾರಿಯಾಗಿದ್ದ ಸಂಸದ ಪ್ರಜ್ವಲ್ ರೇವಣ್ಣ ಗುರುವಾರ ಮಧ್ಯರಾತ್ರಿಯೇ ಬೆಂಗಳೂರಿಗೆ ಬರುವುದು ಖಚಿತವಾಗಿದೆ.ಜರ್ಮನಿಯ ಮೂನಿಚ್( Munich) ನಗರದಿಂದ ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ರೇವಣ್ಣ ಆಗಮಿಸುವ ಮಾಹಿತಿಯಿದ್ದು, ಪೊಲೀಸರು ಅಲರ್ಟ್ ಆಗಿದ್ದಾರೆ. ಎರಡು ದಿನದ ಹಿಂದೆಯೇ ವಿಡಿಯೋ ಬಿಡುಗಡೆ ಮಾಡಿ ತಿಳಿಸಿದಂತೆ ಗುರುವಾರ ಸಂಜೆ ಮೂನಿಚ್ ನಗರದಿಂದ ಪ್ರಜ್ವಲ್ ರೇವಣ್ಣ ಹೊರಡುವರು. ಇದಕ್ಕಾಗಿ ಈಗಾಗಲೇ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಮುನಿಚ್‌ನಿಂದ ಬೆಂಗಳೂರಿಗೆ ಸುಮಾರು 9 ಗಂಟೆ ಪ್ರಯಾಣಿಸಬೇಕಾಗಿದ್ದು ರಾತ್ರಿ 1 ಗಂಟೆ ಹೊತ್ತಿಗೆ ಆಗಮಿಸಬಹುದು ಎನ್ನಲಾಗುತ್ತಿದೆ.
ಪ್ರಜ್ವಲ್ ರೇವಣ್ಣ ಅವರ ವಿಚಾರಣೆಗೆ ಈಗಾಗಲೇ ವಿಶೇಷ ತನಿಖಾ ತಂಡ ನೊಟೀಸ್ ಕೂಡ ಜಾರಿ ಮಾಡಿದೆ. ಅಲ್ಲದೇ ಲುಕ್ ಔಟ್ ನೊಟೀಸ್. ಬ್ಲೂಕಾರ್ನರ್ ನೊಟೀಸ್ ಕೂಡ ಜಾರಿಗೊಳಿಸಲಾಗಿದೆ. ಆದರೂ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಸಮಯ ಕೇಳಿ ಭಾರತಕ್ಕೆ ಮರಳಿರಲಿಲ್ಲ. ಮತ ಎಣಿಕೆ ಮುಗಿದಮೇಲೆಯೇ ಬರಬಹುದು ಎನ್ನುವ ನಿರೀಕ್ಷೆಗಳಿದ್ದವು. ಜೂನ್ 4ರ ಲೋಕಸಭೆ ಚುನಾವಣೆ ಮತ ಎಣಿಕೆ ಫಲಿತಾಂಶ ನೋಡಿಕೊಂಡೇ ಭಾರತಕ್ಕೆ ಹಿಂದುರಿಗಬಹುದು ಎನ್ನಲಾಗುತ್ತಿತ್ತು.
ಇದರ ನಡುವೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಪ್ರಜ್ವಲ್ ಅವರ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದುಪಡಿಸಲು ಕೂಡ ಆಗ್ರಹಿಸಿದ್ದರು. ಈ ಕುರಿತು ವಿಚಾರಣೆಯೂ ಶುರುವಾಗಿದ್ದು, ಪಾಸ್‌ಪೋರ್ಟ್ ರದ್ದಾಗಬಹುದು ಎನ್ನುವ ಚರ್ಚೆಗಳು ನಡೆದಿವೆ. ಮತ್ತೊಂದು ಕಡೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರೂ ಕೂಡ ಪ್ರಜ್ವಲ್ ಶರಣಾಗುವಂತೆ ಸೂಚಿಸಿದ್ದರು.
ಇದರ ನಡುವೆಯೇ ವಿಡಿಯೋ ಬಿಡುಗಡೆ ಮಾಡಿ ನನ್ನ ವಿರುದ್ದ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ. ರಾಜಕೀಯ ಪಿತೂರಿಯೂ ಇದರ ಹಿಂದೆ ಎಂದು ಆರೋಪಿಸಿ ವಿಡಿಯೋ ಬಿಡುಗಡೆ ಮಾಡಿದ್ದ ಪ್ರಜ್ವಲ್ ರೇವಣ್ಣ ಮೇ 31ಕ್ಕೆ ಆಗಮಿಸಿ ಎಸ್‌ಐಟಿ ವಿಚಾರಣೆ ಎದುರಿಸುವುದಾಗಿ ಹೇಳಿಕೆ ನೀಡಿದ್ದರು. ಅದರಂತೆಯೇ ಅವರು ಬೆಂಗಳೂರಿಗೆ ಆಗಮಿಸುವುದು ಖಚಿತ ಎನ್ನುವುದನ್ನು ಉನ್ನತ ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಈಗಾಗಲೇ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಬೀಡು ಬಿಟ್ಟಿರುವ ವಿಶೇಷ ತನಿಖಾ ತಂಡದ ಪೊಲೀಸರು, ಗುಪ್ತಚರ ವಿಭಾಗದ ಪೊಲೀಸರು ಹಾಗೂ ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರಜ್ವಲ್ ಅವರು ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ವಶಕ್ಕೆ ಪಡೆಯಲು ಸಜ್ಜಾಗಿದ್ದಾರೆ.
ಎಸ್‌ಐಟಿಯ ಹತ್ತಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿಗಳಿಗೆ ವಶಕ್ಕೆ ಪಡೆಯಲು ಬೇಕಾದ ಸಿದ್ದತೆ ಮಾಡಿಕೊಳ್ಳುವಂತೆ ಹಿರಿಯ ಅಧಿಕಾರಿಗಳೂ ಸೂಚಿಸಿದ್ದಾರೆ. ಆನಂತರ ಪ್ರಜ್ವಲ್ ಅವರನ್ನು ಎಸ್‌ಐಟಿ ತಂಡ ಶುಕ್ರವಾರ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)