Hassan Sex Scandal: ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣಗಳ ವರದಿ ಕೇಳಿದ ರಾಷ್ಟ್ರೀಯ ಮಹಿಳಾ ಆಯೋಗ
May 01, 2024 05:43 PM IST
ಹಾಸನ ಸಂಸದ ಪ್ರಜ್ವಲ್ ರೇವಣ್ಣ,
- ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಗಳ ಕುರಿತು ವರದಿ ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗವು ಕರ್ನಾಟಕ ಪೊಲೀಸರಿಗೆ ಸೂಚನೆ ನೀಡಿದೆ.
ಬೆಂಗಳೂರು:ಲೈಂಗಿಕ ಪ್ರಕರಣಗಳಲ್ಲಿ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ದ ದಾಖಲಾಗಿರುವ ಮೊಕದ್ದಮೆಗಳು ಸೇರಿದಂತೆ ಎಲ್ಲಾ ವಿವರಗಳನ್ನು ಮೂರು ದಿನಗಳ ಒಳಗೆ ಸಲ್ಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ( NWC) ಕಟ್ಟುನಿಟ್ಟಿನ ಸೂಚನೆಯನ್ನು ಕರ್ನಾಟಕಕ್ಕೆ ನೀಡಿದೆ. ಈ ಕುರಿತಾಗಿ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಪತ್ರ ಬರೆದಿರುವ ಆಯೋಗವು, ಪ್ರಕರಣದ ಸಂಪೂರ್ಣ ಮಾಹಿತಿ ಒಳಗೊಂಡ ವರದಿಯನ್ನು ಸಲ್ಲಿಸಬೇಕು. ಇದರಲ್ಲಿ ದಾಖಲಾಗಿರುವ ಪ್ರಕರಣ, ಸ್ಥಿತಿಗತಿ, ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳು ಸೇರಿದಂತೆ ಎಲ್ಲಾ ಅಂಶಗಳನ್ನು ಉಲ್ಲೇಖಿಸಬೇಕು ಎಂದು ಸೂಚಿಸಲಾಗಿದೆ.
ಇಡೀ ಘಟನೆ ಖಂಡನೀಯ. ಇದನ್ನು ಯಾರೂ ಒಪ್ಪಲು ಸಾಧ್ಯವೂ ಇಲ್ಲ. ಮಹಿಳಾ ಆಯೋಗವು ಇಂತಹ ಕೃತ್ಯಗಳನ್ನು ಬಲವಾಗಿ ಖಂಡಿಸಲಿದೆ. ಪೊಲೀಸ್ ಕ್ರಮಗಳ ಕುರಿತು ವರದಿ ನೀಡಿದರೆ ಆಯೋಗವು ತನ್ನ ಮುಂದಿನ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ತಿಳಿಸಲಾಗಿದೆ.
ಇಂತಹ ಘಟನೆಗಳು ಸಮಾಜ ತಲೆ ತಗ್ಗಿಸುವಂತೆ ಮಾಡಲಿದೆ. ಮಹಿಳೆಯರ ಮೇಲೆ ಗೌರವ ನೀಡುವ ಸಮಾಜದಲ್ಲಿ ಸುರಕ್ಷತೆಯೇ ಇಲ್ಲ ಎಂದರೆ ಅದು ಹಲವಾರು ಅಪಾಯಗಳಿಗೆ ದಾರಿ ಮಾಡಿಕೊಟ್ಟಂತೆ. ಮಹಿಳೆಯರಿಗೆ ಸಂಪೂರ್ಣ ರಕ್ಷಣೆಗೆ ನೀಡುವ ಜತೆಗೆ ಆರೋಪಿ ಸ್ಥಾನದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ದೇಶದಿಂದ ಪರಾರಿಯಾಗಿದ್ದರೂ ಅವರನ್ನು ಕೂಡಲೇ ಬಂಧಿಸಬೇಕು ಎಂದು ಮಹಿಳಾ ಆಯೋಗವು ಒತ್ತಾಯಿಸಿದೆ.
ಈಗಾಗಲೇ ಕರ್ನಾಟಕದಲ್ಲಿ ಮಹಿಳಾ ಆಯೋಗದ ಅಧ್ಯಕ್ಷರಾಗಿರುವ ಡಾ.ನಾಗಲಕ್ಷ್ಮಿ ಚೌಧರಿ ಅವರು ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯಗಳ ಆರೋಪಗಳು ಕೇಳಿ ಬಂದ ಕೂಡಲೇ ಕ್ರಮಕ್ಕೆ ಒತ್ತಾಯಿಸಿ ಪತ್ರಕ್ಕೆ ಬರೆದಿದ್ದರು. ರಾಷ್ಟ್ರೀಯ ಮಹಿಳಾ ಆಯೋಗ ಏನು ಮಾಡುತ್ತಿದೆ ಎನ್ನುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪತ್ರವನ್ನು ಬರೆಯಲಾಗಿದೆ ಎನ್ನಲಾಗುತ್ತಿದೆ.
ರಾಯಭಾರಿ ಸ್ಪಷ್ಟನೆ
ಇದೇ ಪ್ರಕರಣದಲ್ಲಿ ಭಾರತದಲ್ಲಿರುವ ಜರ್ಮನ್ ದೇಶದ ರಾಯಭಾರಿಯೂ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಜರ್ಮನಿಗೆ ಪರಾರಿಯಾಗಿದ್ದಾರೆ ಎನ್ನುವುದನ್ನು ಮಾಧ್ಯಮಗಳಲ್ಲ ಗಮನಿಸಿದ್ದೇನೆ. ಆ ಬಗ್ಗೆ ಅಧಿಕೃತವಾಗಿ ನಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಭಾರತದಲ್ಲಿನ ಜರ್ಮನ್ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ಜಾರ್ಜ್ ಎನ್ಜ್ವೀಲರ್ ಹೇಳಿಕೆ ನೀಡಿದ್ದಾರೆ.
ಈ ಘಟನೆಯ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೇನೆ, ಆದರೆ ಪ್ರಜ್ವಲ್ ರೇವಣ್ಣ ಜರ್ಮನಿಯಲ್ಲಿದ್ದಾರೆಯೇ ಎಂದು ನನಗೆ ಖಚಿತವಿಲ್ಲ. ಅಲ್ಲದೇ ಘಟನೆಗಳ ಕುರಿತಾಗಿಯೂ ಗಮನಿಸಿದ್ಧೇನೆಯೇ ಹೊರತು ನನಗೇನೂ ಮಾಹಿತಿಯಿಲ್ಲ ಎಂದು ಅವರು ಹೇಳಿದರು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy appeared in Hindustan Times Kannada website. To read more like this please logon to kannada.hindustantimes.com)