Hassan Sex Scandal: ಪ್ರಜ್ವಲ್‌ ರೇವಣ್ಣ ಹಾಸನ ಚುನಾವಣಾ ಟಿಕೆಟ್‌ಗೆ ಸಂವಹನದ ಕೊರತೆಯೇ ಕಾರಣ ಎಂದ ಬಿಜೆಪಿ ನಾಯಕ
ಕನ್ನಡ ಸುದ್ದಿ  /  ಕರ್ನಾಟಕ  /  Hassan Sex Scandal: ಪ್ರಜ್ವಲ್‌ ರೇವಣ್ಣ ಹಾಸನ ಚುನಾವಣಾ ಟಿಕೆಟ್‌ಗೆ ಸಂವಹನದ ಕೊರತೆಯೇ ಕಾರಣ ಎಂದ ಬಿಜೆಪಿ ನಾಯಕ

Hassan Sex Scandal: ಪ್ರಜ್ವಲ್‌ ರೇವಣ್ಣ ಹಾಸನ ಚುನಾವಣಾ ಟಿಕೆಟ್‌ಗೆ ಸಂವಹನದ ಕೊರತೆಯೇ ಕಾರಣ ಎಂದ ಬಿಜೆಪಿ ನಾಯಕ

ಪ್ರಜ್ವಲ್‌ ರೇವಣ್ಣಗೆ ಮೈತ್ರಿ ಅಭ್ಯರ್ಥಿಯಾಗಿ ಟಿಕೆಟ್‌ ನೀಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದೆ. ಅವರಿಗೆ ಪತ್ರ ಸಿಕ್ಕಿಲ್ಲ. ಸಂವಹನ ಕೊರತೆಯಿಂದ ಹೀಗೆ ಆಗಿದೆ ಎಂದು ಹಾಸನದ ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿಕೆ ನೀಡಿದ್ದಾರೆ.

ಹಾಸನದ ಬಿಜೆಪಿ ಮುಖಂಡ ದೇವರಾಜೇಗೌಡ
ಹಾಸನದ ಬಿಜೆಪಿ ಮುಖಂಡ ದೇವರಾಜೇಗೌಡ

ಹಾಸನ: ಪ್ರಜ್ವಲ್ ರೇವಣ್ಣ ಅವರ ನೂರಾರು ಅಶ್ಲೀಲ ವಿಡಿಯೋಗಳ ಬಗ್ಗೆ ಗುಪ್ತಚರ ವರದಿ ಇದ್ದರೂ ಜೆಡಿಎಸ್ ರೇವಣ್ಣ ಅವರ ಉಮೇದುವಾರಿಕೆಯನ್ನು ಘೋಷಿಸಿದೆ ಎಂದು ಹೇಳಿರುವ ಹಾಸನದ ಬಿಜೆಪಿ ಮುಖಂಡ ದೇವರಾಜೇಗೌಡ, ಸಂವಹನದ ಕೊರತೆಯಿಂದಾಗಿ ಪ್ರಜ್ವಲ್ ರೇವಣ್ಣ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದರು ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷ ದೇವರಾಜೇಗೌಡ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪತ್ರ ಬರೆದು ಪ್ರಜ್ವಲ್ ರೇವಣ್ಣ ಅವರನ್ನು ಹಾಸನದಿಂದ ಕಣಕ್ಕಿಳಿಸದಂತೆ ಎಚ್ಚರಿಕೆ ನೀಡಿದ್ದರು. ಇದರ ನಡುವೆ ಈಗ ಪೆನ್‌ಡ್ರೈವ್‌ ವಿವಾದ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿರುವುದರಿಂದ ಈಗ ದೇವರಾಜೇಗೌಡ ಮತ್ತೆ ಹೇಳಿಕೆ ನೀಡಿದ್ದಾರೆ.

"ನಾನು ವೀಡಿಯೊದ ಬಗ್ಗೆ ನಮ್ಮ ಅಧ್ಯಕ್ಷರಿಗೆ ಪತ್ರ ಬರೆದು ಕಚೇರಿಗೆ ನೀಡಿದ್ದೇನೆ, ಆದರೆ ಅವರು ಹೇಳಿದಂತೆ, ಪತ್ರವು ಅವರನ್ನು ತಲುಪಲಿಲ್ಲ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ, ಆದರೆ ಅವರ ವಿರುದ್ಧ (ಪ್ರಜ್ವಲ್ ರೇವಣ್ಣ) ಲೈಂಗಿಕ ಕಿರುಕುಳದ ಗಂಭೀರ ಆರೋಪಗಳಿವೆ ಎಂದು ನಾನು ಪತ್ರದಲ್ಲಿ ಬರೆದು ಆಗಲೇ ತಿಳಿಸಿದ್ದೇನೆ ಎಂದು ದೇವರಾಜೇಗೌಡ ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ಕಾರ್ತಿಕ್ ನನ್ನ ಬಳಿ ಬಂದು ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಅವರು (ಕಾರ್ತಿಕ್) ತಮ್ಮ ಬಳಿ ಪ್ರಜ್ವಲ್ ರೇವಣ್ಣ ಹಲವಾರು ಅಶ್ಲೀಲ ವೀಡಿಯೊಗಳಿವೆ ಎಂದು ಹೇಳಿದರು. ಈ ವೀಡಿಯೊವನ್ನು ಯಾರಿಗಾದರೂ ನೀಡಿದ್ದೀರಾ ಎಂದು ನಾನು ಚಾಲಕನನ್ನು ಕೇಳಿದೆ. ಅಶ್ಲೀಲ ವೀಡಿಯೊಗಳನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ನೀಡಿದ್ದೇನೆ ಎಂದು ಕಾರ್ತಿಕ್ ಹೇಳಿದ್ದಾರೆ. ಈ ಪೆನ್ ಡ್ರೈವ್ ಭಾರೀ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಭಾವಿಸಿ, ನಾನು ಪಕ್ಷಕ್ಕೆ ಪತ್ರ ಬರೆದಿದ್ದೇನೆ. ಇದು ಸಂವಹನದಿಂದ ಆಗಿರುವ ಗೊಂದಲ. ಆದರೂ ಪ್ರಜ್ವಲ್‌ ಅವರಿಗೆ ಟಿಕೆಟ್ ಸಿಕ್ಕಿದೆ. ಅಲ್ಲದೆ, ಗುಪ್ತಚರ ವರದಿ ಇದ್ದರೂ ಜೆಡಿಎಸ್ ಅವರಿಗೆ ಟಿಕೆಟ್ ನೀಡಿದ್ದರಿಂದ ಅದು ಬಿಜೆಪಿಯ ತಪ್ಪಲ್ಲ ಎಂದು ದೇವರಾಜೇಗೌಡ ಪ್ರತಿಕ್ರಿಯಿಸಿದರು.

ಬಿಜೆಪಿ ಮುಖಂಡ ದೇವರಾಜೇಗೌಡ ಅವರು ಹಲವಾರು ವರ್ಷಗಳಿಂದ ಹಾಸನ ಹಾಗೂ ಹೊಳೆ ನರಸೀಪುರದಲ್ಲಿ ದೇವೇಗೌಡರ ಕುಟುಂಬದ ವಿರುದ್ದ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ವಕೀಲರು ಆಗಿರುವ ದೇವರಾಜೇಗೌಡ ಅವರು ಒಂದೆರಡು ವರ್ಷದಿಂದ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ದ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಈಗ ಅಶ್ಲೀಲ ವಿಡಿಯೋಗಳ ವಿಚಾರದಲ್ಲಿ ದೇವರಾಜೇಗೌಡ ಅವರು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಈ ಕಾರಣದಿಂದಲೇ ಹಾಸನ ಲೋಕಸಭೆ ಚುನಾವಣೆಗೆ ಪ್ರಜ್ವಲ್‌ಗೆ ಟಿಕೆಟ್‌ ನೀಡಿ ಬಿಜೆಪಿ ಕೂಡ ಅವರ ಪರವಾಗಿ ಪ್ರಚಾರ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ದೇವರಾಜೇಗೌಡ ಈ ಸ್ಪಷ್ಟನೆ ನೀಡಿದ್ದಾರೆ.

Whats_app_banner