logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ವಿಧಾನಸೌಧದ ಆವರಣದಲ್ಲಿ ನಾಡದೇವಿ ಭುವನೇಶ್ವರಿ ಅತಿ ದೊಡ್ಡ ಪ್ರತಿಮೆ ಸ್ಥಾಪನೆಗೆ ಕ್ಷಣಗಣನೆ; 25 ಅಡಿ ಎತ್ತರದ ಪ್ರತಿಮೆ ಆಗಮನ

ಬೆಂಗಳೂರು ವಿಧಾನಸೌಧದ ಆವರಣದಲ್ಲಿ ನಾಡದೇವಿ ಭುವನೇಶ್ವರಿ ಅತಿ ದೊಡ್ಡ ಪ್ರತಿಮೆ ಸ್ಥಾಪನೆಗೆ ಕ್ಷಣಗಣನೆ; 25 ಅಡಿ ಎತ್ತರದ ಪ್ರತಿಮೆ ಆಗಮನ

Umesha Bhatta P H HT Kannada

Dec 23, 2024 05:20 PM IST

google News

ಬೆಂಗಳೂರಿನ ವಿಧಾನಸೌಧದ ಎದುರು ತಾಯಿ ಭುವನೇಶ್ವರಿ ಪ್ರತಿಮೆಯನ್ನು ಅನಾವರಣಗೊಳಿಸಲು ಸಿದ್ದತೆಗಳು ನಡೆದಿವೆ.

    • ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಅತಿ ದೊಡ್ಡ ಭುವನೇಶ್ವರಿ ಪ್ರತಿಮೆಯನ್ನು ಸ್ಥಾಪಿಸಲು ಸಿದ್ದತೆಗಳು ನಡೆಯುತ್ತಿದ್ದು, ಸದ್ಯದಲ್ಲೇ ಕಾರ್ಯಕ್ರಮ ನಡೆಯಲಿದೆ.
    • ವರದಿ: ಎಚ್.ಮಾರುತಿ.ಬೆಂಗಳೂರು
ಬೆಂಗಳೂರಿನ ವಿಧಾನಸೌಧದ ಎದುರು ತಾಯಿ ಭುವನೇಶ್ವರಿ ಪ್ರತಿಮೆಯನ್ನು ಅನಾವರಣಗೊಳಿಸಲು ಸಿದ್ದತೆಗಳು ನಡೆದಿವೆ.
ಬೆಂಗಳೂರಿನ ವಿಧಾನಸೌಧದ ಎದುರು ತಾಯಿ ಭುವನೇಶ್ವರಿ ಪ್ರತಿಮೆಯನ್ನು ಅನಾವರಣಗೊಳಿಸಲು ಸಿದ್ದತೆಗಳು ನಡೆದಿವೆ.

ಬೆಂಗಳೂರು: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಾಡದೇವಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಲು ಸರ್ಕಾರ ತೀರ್ಮಾನಿಸಿತ್ತು. ಇದಕ್ಕಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸರಣಿ ಸಭೆಗಳು ನಡೆದಿದ್ದವು. ಅಂತಿಮವಾಗಿ ವಿಧಾನಸೌಧದ ಆವರಣದಲ್ಲಿಯೇ 25 ಅಡಿ ಎತ್ತರದ ಕನ್ನಡಾಂಬೆಯ ಕಂಚಿನ ಪ್ರತಿಮೆ ಸ್ಥಾಪನೆಯಾಗುತ್ತಿದೆ. ಭುವನೇಶ್ವರಿ ಪ್ರತಿಮೆಯನ್ನು ದೆಹಲಿಯ ಖ್ಯಾತ ಶಿಲ್ಪಿ ರಾಮ್ ಸುತಾರ್ ನಿರ್ಮಿಸಿದ್ದಾರೆ. ವಿಧಾನಸೌಧ ಮತ್ತು ವಿಕಾಸಸೌಧದ ಮಧ್ಯೆ ಇರುವ ಮಹಾತ್ಮಾ ಗಾಂಧಿ ಪ್ರತಿಮೆ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಕೆಂಪೇಗೌಡ ಪ್ರತಿಮೆಯನ್ನೂ ಸ್ಥಾಪಿಸಿದ್ದು ಇವರೇ.

ಪ್ರತಿಮೆ ನಿರ್ಮಾಣ ಏಕೆ

ಈ ಹಿಂದೆ ವಿಧಾನಸೌಧದ ಮುಂಭಾಗ, ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ಆವರಣ ಮಲ್ಲತ್ತಹಳ್ಳಿಯ ಕಲಾಗ್ರಾಮ ಅಥವಾ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಾಪಿಸುವ ಸಂಬಂಧ ಚರ್ಚೆಗಳು ನಡೆದಿದ್ದವು. ಅಂತಿಮವಾಗಿ ವಿಧಾನಸೌಧದ ಮುಂಭಾಗ ಅಂದರೆ ಕೆಂಗಲ್ ಹನುಮಂತಯ್ಯ ದ್ವಾರದ ಬಳಿ 25 ಅಡಿ ಎತ್ತರದ ಕನ್ನಡಾಂಬೆಯ ಕಂಚಿನ ಪ್ರತಿಮೆ ಸ್ಥಾಪನೆಯಾಗುತ್ತಿದೆ.

ಜನವರಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕನ್ನಡ ನಾಡು, ನುಡಿ ಸಂಸ್ಕೃತಿಯ ಸಂಕೇತವಾದ ತಾಯಿ ಭುವನೇಶ್ವರಿ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಕನ್ನಡ ನಾಡು ಏಕೀಕರಣಗೊಂಡು, ಕರ್ನಾಟಕ ಎಂಬ ಹೆಸರು ನಾಮಕರಣವಾಗಿ 50 ವರ್ಷ ಸಂದಿರುವ ಸಂದರ್ಭದಲ್ಲಿ ಕನ್ನಡದ ಪ್ರತೀಕದ ಗುರುತು ಸರ್ಕಾರದ ಆವರಣದಲ್ಲಿರಬೇಕೆಂಬ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಾಗಿತ್ತು.

ಪಾಸ್‌ ಇಲ್ಲದೇ ವೀಕ್ಷಿಸಬಹುದು

ಒಂದು ಸಂತಸದ ಸಂಗತಿಯೂ ಇದೆ. ಈ ಪ್ರತಿಮೆ ವಿಧಾನಸೌಧದ ಒಳಗೆ ನಿರ್ಮಾಣವಾದರೂ ಸಾರ್ವಜನಿಕರ ಪ್ರವೇಶಕ್ಕೆ ಪ್ರತ್ಯೇಕ ದ್ವಾರ ನಿರ್ಮಾಣ ಮಾಡಲಾಗುತ್ತಿದೆ. ಪ್ರವಾಸಿಗರು ನೇರವಾಗಿ ಯಾವುದೇ ಪಾಸ್ ಇಲ್ಲದೆ ನಾಡದೇವಿ ಭುವನೇಶ್ವರಿಯ ಪ್ರತಿಮೆಯನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಕೆಲವೇ ದಿನಗಳಲ್ಲಿ ಪ್ರತಿಮೆಯ ಅನಾವರಣಗೊಳ್ಳಲಿದೆ. ಅದಕ್ಕಾಗಿ ಪ್ರತಿಮೆ ಸ್ಥಾಪಿಸುವ ಸ್ಥಳದ ಸುತ್ತಮುತ್ತ ಕಾಮಗಾರಿ ನಡೆಯುತ್ತಿದೆ. ಪ್ರತಿಮೆಯ ಹಿಂದೆ ಬೃಹತ್ ಕರ್ನಾಟಕದ ಭೂಪಟ, ಉದ್ಯಾನವನ, ಕುಳಿತುಕೊಳ್ಳಲು ಸ್ಥಳಾವಕಾಶ ಮೊದಲಾದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ವಿಧಾನಸೌಧ ಮತ್ತು ವಿಕಾಸಸೌಧದ ನಡುವೆ ನಿರ್ಮಿಸಿರುವ ಮಹಾತ್ಮಗಾಂಧೀಜಿ ಅವರ ಪ್ರತಿಮೆ ಮಾದರಿಯಲ್ಲಿ ಭುವನೇಶ್ವರಿಯ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕೆಂದು ಸಲಹೆಗಳು ಕೇಳಿ ಬಂದಿದ್ದವು. ಈ ವರ್ಷದ ರಾಜ್ಯೋತ್ಸವ ಆಚರಿಸುವ ನ.1ರೊಳಗೆ ಪ್ರತಿಮೆ ಅನಾವರಣ ಮಾಡಬೇಕೆಂದು ನಿರ್ಧರಿಸಲಾಗಿತ್ತಾದರೂ ಪ್ರತಿಮೆ ನಿರ್ಮಾಣ ಅಪೂರ್ಣವಾಗಿದ್ದರಿಂದ ಸಾಧ್ಯವಾಗಿರಲಿಲ್ಲ. ಕೇವಲ ಪ್ರತಿಮೆ ನಿರ್ಮಾಣ ಮಾತ್ರ ಸಾಲದು, ಜೊತೆಗೆ ಕನ್ನಡ ನಾಡಿನ ಸಾಂಸ್ಕೃತಿಕ ವೈಭವ, ಗತಕಾಲದ ಹೆಮ್ಮೆಯ ವಿಷಯಗಳನ್ನು ಪ್ರತಿಬಿಂಬಿಸುವ ಚಿತ್ರಣ ಇರಬೇಕು ಎನ್ನುವುದು ಕನ್ನಡ ಹೋರಾಟಗಾರರು ಸಲಹೆ ನೀಡಿದ್ದರು.

ಸದ್ಯವೇ ಅನಾವರಣ

ಈ ಹಿಂದೆ ಸಚಿವ ಶಿವರಾಜ್ ತಂಗಡಗಿ ಅವರು ಅಧಿಕಾರಿಗಳು ಹಾಗೂ ಶಿಲ್ಪಿಗಳ ಜತೆ ಸರಣಿ ಸಭೆಗಳನ್ನು ನಡೆಸಿದ್ದರು. ಒಂದು ವರ್ಷದಲ್ಲಿ ಪ್ರತಿಮೆ ಕಾರ್ಯ ಪೂರ್ಣಗೊಂಡು ಮುಂದಿನ 2024ರ ನವೆಂಬರ್ 1ಕ್ಕೆ ಅನಾವರಣಗೊಳ್ಳಬೇಕು ಎಂಬ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಸಾಧ್ಯವಾಗಿರಲಿಲ್ಲ.

ಹಿರಿಯ ಕಲಾವಿದ ಕೆ.ಸೋಮಶೇಖರ್ ಸಿದ್ಧಪಡಿಸಿರುವ ನಾಡದೇವಿಯ ಚಿತ್ರವನ್ನು ಸರ್ಕಾರ ಅಧಿಕೃತಗೊಳಿಸಿತ್ತು. ಸೋಮಶೇಖರ್ ರಚಿಸಿರುವ ಕಲಾಕೃತಿಯಲ್ಲಿ ನಾಡದೇವತೆಯು ಕುಳಿತಿರುವ ಭಂಗಿಯಲ್ಲಿದೆ. ಭಾವಚಿತ್ರದ ಹಿನ್ನೆಲೆಯಲ್ಲಿ ರಾಜ್ಯದ ಭೂಪಟ, ಬಲಗೈಯಲ್ಲಿ ಅಭಯ ಮುದ್ರೆ ಮತ್ತು ಎಡಗೈಯಲ್ಲಿ ತಾಳೆಗರಿ ಇರುವಂತೆ ಚಿತ್ರಿಸಲಾಗಿದೆ. ದೇವಿಯ ಎಡ ಭುಜದ ಮೇಲೆ ಕನ್ನಡ ಧ್ವಜವಿದೆ.

ವರದಿ: ಎಚ್.ಮಾರುತಿ, ಬೆಂಗಳೂರು

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ