Doctorate Conferred to Anant Nag: ಅನಂತನಾಗ್, ಶಂಕರನಾಗ್ ತಾಯಿ ಭುವನೇಶ್ವರಿಯ ಹೆಮ್ಮೆಯ ಪುತ್ರರು ಎಂದ ಸಚಿವ ಸಿ ಎನ್. ಅಶ್ವತ್ಥನಾರಾಯಣ
ಚಂದನವನದ ಹಿರಿಯ ನಟ ಅನಂತ್‌ನಾಗ್ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಶುಕ್ರವಾರ ಗೌರವ ಡಾಕ್ಟರೇಟ್ ಪದವಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಪ್ರದಾನ ಮಾಡಿದರು
ಬೆಂಗಳೂರು: ಚಂದನವನದ ಹಿರಿಯ ನಟ ಅನಂತ್‌ನಾಗ್ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಶುಕ್ರವಾರ ಗೌರವ ಡಾಕ್ಟರೇಟ್ ಪದವಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಪ್ರದಾನ ಮಾಡಿದರು.
ಪದವಿ ಪ್ರದಾನ ಮಾಡಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ , 'ಅನಂತನಾಗ್ ಅವರು ಚಿತ್ರರಂಗಕ್ಕೆ ಬಂದ ಸುವರ್ಣ ಮಹೋತ್ಸವದ ವರ್ಷದಲ್ಲಿ ಗೌರವ ಡಾಕ್ಟರೇಟ್ ನೀಡುವ ಮೂಲಕ ಬೆಂಗಳೂರು ಉತ್ತರ ವಿವಿ ತನ್ನನ್ನು ತಾನೇ ಗೌರವಿಸಿ ಕೊಂಡಿದೆ' ಎಂದು ಬಣ್ಣಿಸಿದರು.
ಅನಂತನಾಗ್ ಮತ್ತು ಶಂಕರನಾಗ್ ಸಹೋದರರು ತಾಯಿ ಭುವನೇಶ್ವರಿಯ ಹೆಮ್ಮೆಯ ಪುತ್ರರಾಗಿದ್ದಾರೆ. ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರ ಮೂಲಕ ರಾಜಕೀಯ ಬದಲಾವಣೆ ತರುವಲ್ಲಿ ಇವರಿಬ್ಬರೂ ವಹಿಸಿದ ಪಾತ್ರ ಸ್ಮರಣೀಯವಾಗಿದೆ ಎಂದರು.
ಅಧ್ಯಯನಶೀಲತೆ ಮತ್ತು ಚಿಂತನ ಶೀಲತೆಗಳನ್ಮು ರೂಢಿಸಿಕೊಂಡಿರುವ ಅನಂತನಾಗ್ ಅವರು ಸಾರ್ವಜನಿಕ ಜೀವನದಲ್ಲಿ ಕೂಡ ತಮ್ಮ ಛಾಪು ಮೂಡಿಸಿದ ಮೇರು ವ್ಯಕ್ತಿ ಆಗಿದ್ದಾರೆ ಎಂದು ಅವರು ನುಡಿದರು.
ಅನಂತನಾಗ್ ನೇರ ಮತ್ತು ನಿಷ್ಠುರ ನುಡಿಗೆ ಹೆಸರಾಗಿದ್ದಾರೆ. ನಾಗ್ ಸಹೋದರರು ಕನ್ನಡ ನಾಡಿನ ಅದ್ಬುತ ಜೋಡಿ ಆಗಿದ್ದರು. ಅನಂತ್ ಅವರು ತಮ್ಮ ವಿಶಿಷ್ಟ ವ್ಯಕ್ತಿತ್ವಕ್ಕೆ ಹೆಸರಾಗಿದ್ದಾರೆ ಎಂದು ಅವರು ವ್ಯಾಖ್ಯಾನಿಸಿದರು.
ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ನಟ ಅನಂತನಾಗ್, ಮಲ್ಲೇಶ್ವರಂ ಕ್ಷೇತ್ರದ ಅಭಿವೃದ್ಧಿಗೆ ಅಶ್ವತ್ಥ ನಾರಾಯಣ ಅವರು ದಣಿವರಿಯದೆ ಕೆಲಸ ಮಾಡುತ್ತಿರುವ ಅಪರೂಪದ ಜನ ಪ್ರತಿನಿಧಿ ಆಗಿದ್ದಾರೆ. ಅದರಲ್ಲೂ ತಮ್ಮ ಕ್ಷೇತ್ರದ ಹಿರಿಯ ನಾಗರಿಕರ ಹಿತಚಿಂತಕರಾಗಿದ್ದಾರೆ. ಇಂಥವರು ಎಷ್ಟು ಸಲ ಶಾಸಕರಾಗಿ ಆಯ್ಕೆಯಾದರೂ ಅದು ಖುಷಿಯ ಸಂಗತಿಯಾಗಿರುತ್ತದೆ ಎಂದು ಅವರು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಕುಲಪತಿ ಕೆಂಪರಾಜು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮುಂತಾದವರು ಇದ್ದರು.