ಬಿಬಿಎಂಪಿ ವ್ಯಾಪ್ತಿಯಲ್ಲಿ ಬೈಲಾ ಉಲ್ಲಘಿಸಿರುವ ನಿರ್ಮಾಣ ಹಂತದ 200 ಕಟ್ಟಡಗಳು ಪತ್ತೆ; ಶೀಘ್ರ ತೆರವು, ಪಾಲಿಕೆ ಭರವಸೆ
Nov 06, 2024 07:56 PM IST
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೈಲಾ ಉಲ್ಲಘಿಸಿರುವ ನಿರ್ಮಾಣ ಹಂತದ 200 ಕಟ್ಟಡಗಳು ಪತ್ತೆ
- BBMP: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೈಲಾ ಉಲ್ಲಘಿಸಿರುವ ನಿರ್ಮಾಣ ಹಂತದ 200 ಕಟ್ಟಡಗಳು ಪತ್ತೆಯಾಗಿವೆ. ಶೀಘ್ರವೇ ಅವುಗಳ ತೆರವು ಮಾಡಲಾಗುವುದು ಎಂದು ಪಾಲಿಕೆ ಭರವಸೆ ನೀಡಿದೆ. (ವರದಿ-ಎಚ್ ಮಾರುತಿ)
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸುಮಾರು 200 ಕಟ್ಟಡಗಳು ನಿಯಮಗಳನ್ನು ಉಲ್ಲಂಘಿಸಿದ್ದು, ಅವುಗಳನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು ಎಂದು ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಕಿರಿಯ ಹಾಗೂ ಸಹಾಯಕ ಇಂಜಿನಿಯರ್ಗಳು ಸೇರಿದಂತೆ ಹೊರಗುತ್ತಿಗೆ ಆಧಾರದಲ್ಲಿ 70 ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಅಕ್ರಮ ಕಟ್ಟಡಗಳ ಸಮೀಕ್ಷೆ ಮಾಡಲಾಗುತ್ತಿದೆ.
ಕಂದಾಯ ಅಧಿಕಾರಿಗಳು ಸೇರಿದಂತೆ ಇಂಜಿನಿಯರ್ಗಳ ತಂಡ ಪಾಲಿಕೆಯ ಎಲ್ಲಾ 8 ವಲಯಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದೆ. ಮಹದೇವಪುರದಲ್ಲಿ 65 ಹಾಗೂ ಪಶ್ಚಿಮ ವಲಯದಲ್ಲಿ 27 ಕಟ್ಟಡಗಳು ಅಕ್ರಮವಾಗಿ ನಿರ್ಮಾಣವಾಗುತ್ತಿವೆ ಎಂಬ ವರದಿ ಲಭ್ಯವಾಗಿದೆ.ಶೀಘ್ರ ಉಳಿದ ವಲಯಗಳ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಎಲ್ಲ ವಲಯದ ಮಾಹಿತಿ ಲಭ್ಯವಾಗುತ್ತಿದ್ದು, ಅಂದಾಜು 200 ಕಟ್ಟಡಗಳು ನಿಯಮ ಉಲ್ಲಂಘಿಸಿವೆ ಎಂದು ಅಂದಾಜು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ 9 ಕಾರ್ಮಿಕರು ಮೃತಪಟ್ಟಿದ್ದರು
ಇತ್ತೀಚೆಗೆ ಬೆಂಗಳೂರಿನ ಬಾಬುಸಾ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದು ಬಿದ್ದು 9 ಕಾರ್ಮಿಕರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 29ರಿಂದ ಅಕ್ರಮ ಕಟ್ಟಡಗಳ ಸಮೀಕ್ಷೆಯನ್ನು ಪಾಲಿಕೆ ಆರಂಭಿಸಿತ್ತು. ನಿಯಮಗಳನ್ನು ಉಲ್ಲಂಘಿಸಿರುವ ಅಕ್ರಮ ಕಟ್ಟಡಗಳನ್ನು ಗುರುತಿಸಲು ಕಂದಾಯ ಇಲಾಖೆ ಮೊಬೈಲ್ ಆ್ಯವೊಂದನ್ನು ಸಿದ್ದಪಡಿಸಿದೆ. ಆರಂಭದಲ್ಲಿ ಈ ಆ್ಯಪ್ ಅನ್ನು ಆಸ್ತಿ ತೆರಿಗೆ ಸಂಗ್ರಹಕ್ಕೆ ಮಾತ್ರ ಬಳಸಲಾಗುತ್ತಿತ್ತು. ಇದೀಗ 2 ಉದ್ದೇಶಗಳಿಗೂ ಬಳಸಲಾಗುತ್ತಿದೆ.
ಇದೇ ಆ್ಯಪ್ ಬಳಸಿ ಬಿಬಿಎಂಪಿ ಕಟ್ಟಡಗಳ ನಕ್ಷೆ, ಮೂಲ ನಕ್ಷೆಯನ್ನು ಬದಲಾಯಿಸಿ ಉಲ್ಲಂಘಿಸಿರುವುದನ್ನು ಪತ್ತೆ ಹಚ್ಚುತ್ತಿದೆ. ಬಿಡಿಎ ಲೇಔಟ್ಗಳಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗಿದ್ದರೆ ಅಲ್ಲಿನ ನಿವಾಸಿಗಳೇ ಸ್ವಯಂಪ್ರೇರಣೆಯಿಂದ ದೂರು ನೀಡುತ್ತಿದ್ದಾರೆ. ಕಟ್ಟಡದ ಭಾವಚಿತ್ರ ಅಪ್ ಲೋಡ್ ಮಾಡುತ್ತಿದ್ದಂತೆ ಆಪ್ ಆಸ್ತಿಯ ವಿವಿರಗಳನ್ನು ಕ್ಷಣ ಮಾತ್ರದಲ್ಲಿ ಒದಗಿಸುತ್ತದೆ. ಇದರಿಂದ ಹಾಲಿ ನಿರ್ಮಾಣ ಮಾಡುತ್ತಿರುವುದು, ಮಂಜೂರಾದ ನಕ್ಷೆ, ಬೈಲಾ ಮತ್ತಿತರ ವಿವರಗಳನ್ನು ಒದಗಿಸುತ್ತದೆ.
ನಿಯಮ ಉಲ್ಲಂಘಿಸಿದ ಕಟ್ಟಡಗಳ ಪತ್ತೆ
70 ಇಂಜಿನಿಯರ್ಗಳ ತಂಡ ಆ್ಯಪ್ ಬಳಸಿ ಅಕ್ರಮ ಕಟ್ಟಡಗಳನ್ನು ಪತ್ತೆ ಹಚ್ಚುತ್ತಿದೆ. ಯಾವ ಪ್ರಮಾಣದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಆ್ಯಪ್ ಅನ್ನು ಉನ್ನತೀಕರಿಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಣ್ಣ ಪ್ರಮಾಣದಲ್ಲಿ ಉಲ್ಲಂಘನೆ ಮಾಡಿದ್ದರೆ ಬಿ ಖಾತಾ ನೀಡಿ ಮಾನ್ಯತೆ ನೀಡಲಾಗುತ್ತದೆ. ಉದಾಹರಣೆಗೆ ಒಂದು ವೇಳೆ ಮಂಜೂರಾದ ನಕ್ಷೆಗಿಂತಲೂ ಒಂದು ಮಹಡಿ ಹೆಚ್ಚಿಗೆ ಕಟ್ಟಿದ್ದರೆ ಎ ಖಾತಾ ನೀಡಲಾಗುತ್ತದೆ. ಅದನ್ನೂ ಮೀರಿ ಪೆಂಟ್ ಹೌಸ್ ನಿರ್ಮಿಸಿದ್ದರೆ ಬಿ ಖಾತಾ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಕಟ್ಟಡಗಳ ಜತೆಗೆ ಕುಸಿಯುವ ಹಂತದಲಿರುವ ನೂರಾರು ಕಟ್ಟಡಗಳು ಬೆಂಗಳೂರಿನಲ್ಲಿವೆ. ಅಂತಹ ಒಂದೆರಡು ಕಟ್ಟಡಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಪಾಲಿಕೆ ಕೇವಲ ಆರಂಭ ಶೂರತ್ವ ತೋರಿಸದೆ ನಿರ್ದಾಕ್ಷಿಣ್ಯವಾಗಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು. ಆಗ ಮಾತ್ರ ಸುರಕ್ಷಿತ ಬೆಂಗಳೂರು ನಿರ್ಮಾಣ ಸಾಧ್ಯ ಎಂದು ಹೇಳಬಹುದಾಗಿದೆ.