ಬೆಂಗಳೂರು ಕ್ರೈಮ್: ಇಬ್ಬರ ಬಂಧನ, 1.37 ಕೋಟಿ ರೂ ಮೌಲ್ಯದ ಮಾದಕವಸ್ತು ಜಪ್ತಿ; ಲ್ಯಾಪ್‌ಟಾಪ್-ಚಿನ್ನಾಭರಣ ಕಳ್ಳರು ಅರೆಸ್ಟ್
ಬೆಂಗಳೂರು ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, 1.37 ಕೋಟಿ ರೂ ಮೌಲ್ಯದ ಮಾದಕವಸ್ತು ಜಪ್ತಿ ಮಾಡಲಾಗಿದೆ. ಇದೇ ವೇಳೆ, ಪ್ರತ್ಯೇಕ ಪ್ರಕರಣದಲ್ಲಿ ಲ್ಯಾಪ್‌ಟಾಪ್ ಹಾಗೂ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಕೂಡಾ ಅರೆಸ್ಟ್ ಆಗಿದ್ದಾರೆ. (ವರದಿ: ಎಚ್. ಮಾರುತಿ)
ಬೆಂಗಳೂರು: ವಿಲ್ಸನ್ ಗಾರ್ಡನ್ 10ನೇ ಅಡ್ಡ ರಸ್ತೆಯಲ್ಲಿರುವ ಹೊಂಬೇಗೌಡ ಆಟದ ಮೈದಾನದಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ. ಈತನಿಂದ 110 ಗ್ರಾಂ ನಿಷೇಧಿತ ಎಂಡಿಎಂಎ ಕ್ರಿಸ್ಟಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈತನನ್ನು ವಿಚಾರಣೆಗೊಳಪಡಿಸಿದಾಗ ತನ್ನ ಜತೆ ಮತ್ತೊಬ್ಬ ಆರೋಪಿಯೂ ಇದೇ ದಂಧೆಯಲ್ಲಿ ತೊಡಗಿರುವ ವಿಷಯವನ್ನು ಬಾಯಿ ಬಿಟ್ಟಿದ್ದಾನೆ. ಮತ್ತೊಬ್ಬ ಆರೋಪಿಯನ್ನು ಗಣೇಶ ದೇವಸ್ಥಾನದ ಬಳಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈತನಿಂದಲೂ 407 ಗ್ರಾಂ ಕೊಕೇನ್, 865 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಅನ್ನು ವಶಕ್ಕೆ ಪಡೆಯಲಾಗಿದೆ.
ಇವರಿಬ್ಬರಿಂದಲೂ ವಶಪಡಿಸಿಕೊಂಡ ಮಾದಕ ವಸ್ತುಗಳ ಮೌಲ್ಯ 1.37 ಕೋಟಿ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಲ್ಯಾಪ್‌ಟಾಪ್ ಕಳ್ಳನ ಬಂಧನ
ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಜಿಗಳಲ್ಲಿ ಲ್ಯಾಪ್ ಟಾಪ್‌ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ 10 ಲಕ್ಷ ರೂಪಾಯಿ ಬೆಲೆ ಬಾಳುವ 16 ಲ್ಯಾಪ್‌ಟಾಪ್, 4 ಮೊಬೈಲ್ ಮತ್ತು ಒಂದು ಐ ಪ್ಯಾಡ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ತಿಂಗಳು ಬೆಳ್ಳಂದೂರಿನ ಪಿಜಿಯೊಂದರಲ್ಲಿ ವಾಸವಾಗಿದ್ದ ದೂರುದಾರರು ತಮ್ಮ ಕೊಠಡಿಯಲ್ಲಿ ಮಲಗಿದ್ದಾಗ ಮೂರು ಲ್ಯಾಪ್ ಟಾಪ್ ಮತ್ತು ಐ ಪ್ಯಾಡ್ ಕಳವಾಗಿದೆ ಎಂದು ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬೆಳಗ್ಗಿನ ಜಾವ ಅನುಮಾನಾಸ್ಪಾದವಾಗಿ ತಿರುಗುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ. ಈತ ಬೆಳ್ಳಂದೂರು, ಕೆ ಆರ್ ಪುರ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳ ಪಿಜಿಗಳಲ್ಲಿ ಕಳವು ಮಾಡುತ್ತಿದ್ದ ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.
ಮನೆಗಳ್ಳರ ಬಂಧನ; 21 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ
ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಮನೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೀಣ್ಯ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಿಂದ 21 ಲಕ್ಷ ರೂ ಮೌಲ್ಯದ 325 ಗ್ರಾಂ ಚಿನ್ನಾಭರಣ, 2 ಕೆಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ಟೋಬರ್ 29ರಂದು ಇದೇ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯೊಬ್ಬರು ಮನೆಯ ಬಾಗಿಲನ್ನು ಒಡೆದು ಕಳ್ಳತನ ಮಾಡಲಾಗಿದೆ ಎಂದು ದೂರು ಸಲ್ಲಿಸಿದ್ದರು. ಪರಿಶೀಲನೆ ಮಾಡಿದಾಗ ಒಂದೇ ಕಟ್ಟಡದ ನೆಲಮಹಡಿ ಮತ್ತು ಮೊದಲ ಅಂತಸ್ತಿನಲ್ಲಿರುವ ಮನೆಗಳಲ್ಲಿ ಕಳ್ಳತನ ನಡೆದಿರುವುದು ಪತ್ತೆಯಾಗಿತ್ತು.
ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು ಮಾಗಡಿ ಮುಖ್ಯ ರಸ್ತೆಯ ಸೀಗೇಹಳ್ಳಿ ಗೇಟ್ ಬಳಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ವಿಚಾರಣೆ ನಡೆಸಿದಾಗ ಎರಡು ಮನೆಗಳಲ್ಲಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿರುತ್ತಾರೆ. ಒಂದು ಪ್ರಕರಣದಲ್ಲಿ 240 ಗ್ರಾಂ ಚಿನ್ನಾಭರಣ, 1 ಕೆಜಿ 700 ಗ್ರಾಂ ಬೆಳ್ಳಿ ವಸ್ತುಗಳು ಒಂದು ಲ್ಯಾಪ್‌ಟಾಪ್, ಮತ್ತೊಂದು ಪ್ರಕರಣದಲ್ಲಿ 85 ಗ್ರಾಂ ಚಿನ್ನಾಭರಣ ಮತ್ತು100 ಗ್ರಾಂ ಬೆಳ್ಳಿಯ ವಸ್ತುಗಳು ಪತ್ತೆಯಾಗಿವೆ. ಇದರಲ್ಲಿ 7 ಗ್ರಾಂ ಚಿನ್ನದ ಸರವನ್ನು ಚನ್ನಪಟ್ಟಣದ ಮಣಪ್ಪುರಂ ಗೋಲ್ಡ್, ಕಮಲಾನಗರದ ಗೌತಮ್ ಬ್ಯಾಂಕರ್ಸ್‌ನಲ್ಲಿ ಅಡವಿಟ್ಟಿದ್ದ 64 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಕೊಳ್ಳಲಾಗಿದೆ. ಉಳಿದ ವಸ್ತುಗಳನ್ನು ಓರ್ವ ಆರೋಪಿಯ ಮನೆಯಲ್ಲಿ ಬಚ್ಚಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಪತ್ನಿಯನ್ನ ಕೊಲೆ ಮಾಡಿ ಮೃತದೇಹ ಸಂಪ್ನಲ್ಲಿ ಹಾಕಿದ ಪತಿ; ಮೈಸೂರಿನ ಆಲನಹಳ್ಳಿ ಬಡಾವಣೆಯಲ್ಲಿ ಘಟನೆ