ದೀಪಾವಳಿ ಎಫೆಕ್ಟ್: ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಕುಸಿತ; ಉದ್ಯಾನ ನಗರಿಗೆ ಪ್ರಾಣವಾಯು ಅಪಾಯಕಾರಿ!
ಕಳೆದ ಕೆಲವು ದಿನಗಳಿಂದ ಬೆಂಗಳೂರು ನಗರದಲ್ಲಿ ರಾತ್ರಿ ವೇಳೆ ಮಂಜು ಮುಸುಕಿದ ವಾತಾವರಣವಿದೆ. ಹೀಗಾಗಿ ಗಾಳಿಯಲ್ಲಿ ಸೇರುವ ಧೂಳು ಮತ್ತು ಕಣಗಳ ಚಲನೆ ನಿಧಾನವಾಗಿರುತ್ತದೆ. ಇದೇ ಸಂದರ್ಭದಲ್ಲಿ ಪಟಾಕಿಯ ಹೊಗೆ, ಧೂಳು ಸೇರಿ ವಾತಾವರಣ ಸೇರಿ ವಾಯು ಗುಣಮಟ್ಟ ಮತ್ತಷ್ಟು ಕುಸಿದಿದೆ. ವರದಿ: (ಎಚ್.ಮಾರುತಿ)
ದೀಪಾವಳಿ ಹಬ್ಬದ ನಂತರ ಉದ್ಯಾನ ನಗರಿ ಎಂದೇ ಹೆಸರಾದ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಗರಿಷ್ಠ ಪ್ರಮಾಣ ತಲುಪಿತ್ತು. ಗಾಳಿಯ ಕಳಪೆ ಗುಣಮಟ್ಟದಿಂದ ವಯೋವೃದ್ದರು ಮತ್ತು ಮಕ್ಕಳು ಉಸಿರಾಟದ ತೊಂದರೆ ಅನುಭವಿಸಿದ್ದಾರೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇಡೀ ಬೆಂಗಳೂರಿನಲ್ಲಿ ಹೆಬ್ಬಾಳ ಪ್ರದೇಶದಲ್ಲಿ ವಾಯು ಗುಣಮಟ್ಟ ಅತ್ಯಂತ ಕಳಪೆಯಾಗಿತ್ತು. ಅದರಲ್ಲೂ ಹೆಬ್ಬಾಳದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕವು 263 ಎಕ್ಯೂಐ ತಲುಪಿತ್ತು. ಅತ್ಯಂತ ಕೆಟ್ಟ ಪ್ರಮಾಣದಲ್ಲಿ ಗಾಳಿಯು ಹೆಬ್ಬಾಳ ಸುತ್ತಮುತ್ತ ಕಂಡು ಬಂದಿತ್ತು. ಸುತ್ತಮತ್ತಲ ಬಡಾವಣೆಗಳಲ್ಲಿ ಅಪಾರ ಪ್ರಮಾಣದಲ್ಲಿ ಪಟಾಕಿ ಸಿಡಿಸುತ್ತಿರುವುದು ಮತ್ತು ವಿಮಾನ ನಿಲ್ದಾಣ ರಸ್ತೆಯಲ್ಲಿ ಟ್ರಾಫಿಕ್ ಹೆಚ್ಚಾಗಿರುವುದು ವಾಯು ಗುಣಮಟ್ಟ ಕಳಪೆಯಾಗಲು ಕಾರಣ ಎನ್ನಲಾಗಿದೆ.
ಹೆಬ್ಬಾಳದಲ್ಲಿ ನವೆಂಬರ್ 1ರಂದು ಎಕ್ಯೂಐ 263ರಷ್ಟಿದ್ದರೆ ನ.2ರಂದು 227ಕ್ಕೆ ಕುಸಿದಿತ್ತು. ನ.3ರಂದು ಎಂದಿನಂತೆ 67ಕ್ಕೆ ಸ್ಥಿತಿಗೆ ಮರಳಿತ್ತು. ಮೂರು ದಿನಗ ಸರಾಸರಿ 185 ರಷ್ಟಿತ್ತು. ದೀಪಾವಳಿ ದಿನಗಳಿಗೂ ಮುಂಚಿನ ದಿನಗಳಿಗೆ ಹೋಲಿಸಿದರೆ ಎಕ್ಯೂಐ ಶೇ.146ರಷ್ಟು ಹೆಚ್ಚಳವಾಗಿತ್ತು. ಇದು ಬೆಂಗಳೂರಿನ ಅತಿ ಹೆಚ್ಚು ಎಕ್ಯೂಐ ದಾಖಲಾದ ಪ್ರದೇಶ ಎಂಬ ಕುಖ್ಯಾತಿಗೆ ಭಾಜನವಾಗಿದೆ.
ಹೊರವಲಯದ ಜಿಗಣಿಯಲ್ಲೂ ವಾಯು ಗುಣಮಟ್ಟ ಕಳಪೆಯಾಗಿತ್ತು. ಇಲ್ಲಿ ದೀಪಾವಳಿ ಮರುದಿನ ಎಕ್ಯೂಐ 123ರಷ್ಟಿತ್ತು. ದೀಪಾವಳಿಯ ಮೂರು ದಿನಗಳ ಸರಾಸರಿ ಎಕ್ಯೂಐ 136 ರಷ್ಟಿದ್ದು, ಇಲ್ಲಿಯೂ ಎಕ್ಯೂಐ ಶೇ.147ರಷ್ಟು ಹೆಚ್ಚಳವಾಗಿದೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ವಾಯು ಮಾಲಿನ್ಯದ ಜತೆಗೆ ಶಬ್ಧ ಮಾಲಿನ್ಯದ ಪ್ರಮಾಣವೂ ಹೆಚ್ಚಳವಾಗಿತ್ತು. ಇದು 81.3ರಿಂದ 73.1ಕ್ಕೆ ಹೆಚ್ಚಳವಾಗಿತ್ತು.
ವಾಯು ಗುಣಮಟ್ಟಕ್ಕೆ ಹೋಲಿಸಿದರೆ ಶಬ್ಧ ಮಾಲಿನ್ಯದಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿಲ್ಲ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ತಿಳಿಸಿದೆ. ನಗರದ 11 ಪ್ರದೇಶಗಳಲ್ಲಿ ಅಳವಡಿಸಿರುವ ವಾಯು ಗುಣಮಟ್ಟ ಮಾಪನ ಕೇಂದ್ರಗಳಿಂದ ಸಂಗ್ರಹಿಸಿರುವ ಮಾಹಿತಿ ಪ್ರಕಾರ ಅ.24ರಂದು ನಗರದ ಸರಾಸರಿ ವಾಯು ಗುಣಮಟ್ಟ ಎಕ್ಯೂಐ 78ರಷ್ಟಿದ್ದು ಸಮಾಧಾನಕರವಾಗಿತ್ತು.ಅ.31ರ ದೀಪಾವಳಿ ಹಬ್ಬದ ದಿನ ಪಟಾಕಿ ಸಿಡಿತದಿಂದಾಗಿ ಎಕ್ಯೂಐ- 153ಕ್ಕೆ ತಲುಪಿತ್ತು. ಎಕ್ಯೂಐ 101 ರಿಂದ 200 ಇದ್ದಲ್ಲಿ ಶ್ವಾಸಕೋಶ, ಹೃದಯ ಮತ್ತು ಅಸ್ತಮಾ ಆರೋಗ್ಯ ಸಮಸ್ಯೆಗಳಿದ್ದವರಿಗೆ ಉಸಿರಾಟಕ್ಕೆ ಸಮಸ್ಯೆಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರು ನಗರದಲ್ಲಿ ರಾತ್ರಿ ವೇಳೆ ಮಂಜು ಮುಸುಕಿದ ವಾತಾವರಣ ಮತ್ತು ಚಳಿಯ ಅನುಭವವಾಗುತ್ತಿದೆ. ಹೀಗಾಗಿ ಗಾಳಿಯಲ್ಲಿ ಸೇರುವ ಧೂಳು ಮತ್ತು ಕಣಗಳ ಚಲನೆ ನಿಧಾನವಾಗಿರುತ್ತದೆ. ಇದೇ ಸಂದರ್ಭದಲ್ಲಿ ಪಟಾಕಿಯ ಹೊಗೆ, ಧೂಳು ಸೇರಿ ವಾತಾವರಣವನ್ನು ಸೇರಿ ವಾಯು ಗುಣಮಟ್ಟ ಮತ್ತಷ್ಟು ಕುಸಿದಿದೆ. ಡಿ.31ರಂದು ಹಬ್ಬದ ದಿನವಾಗಿದ್ದು, ಬೆಂಗಳೂರಿನಿಂದ ಹೊರಹೋಗುವ ವಾಹನಗಳ ಸಂಚಾರ ಹೆಚ್ಚಾಗಿಯೇ ಇತ್ತು. ಇದೂ ಸಹ ವಾಯು ಗುಣಮಟ್ಟ ಕೆಡಲು ಕಾರಣವಾಗಿದೆ.
ವಾಯು ಗುಣಮಟ್ಟ ಪ್ರಮಾಣ ಎಷ್ಟಿತ್ತು ಎಂದು ನೋಡವುದಾದರೆ ಹೆಬ್ಬಾಳದಲ್ಲಿ ಅ.24ರಂದು 75 ಮತ್ತು ಅ.31ರಂದು 263; ಜಿಗಣಿಯಲ್ಲಿ ಅ.24ರಂದು 55 ಮತ್ತು ಅ.31 ರಂದು 203; ಸಿಲ್ಕ್ ಬೋರ್ಡ್‌ನಲ್ಲಿ ಅ.24ರಂದು 141 ಮತ್ತು ಅ.31ರಂದು 171; ಕಸ್ತೂರಿ ನಗರದಲ್ಲಿ ಅ.24ರಂದು 67 ಮತ್ತು ಅ.31ರಂದು 154; ಜಯನಗರದಲ್ಲಿ ಅ.24ರಂದು 74 ಮತ್ತು ಅ.31ರಂದು 136; ನಿಮ್ಹಾನ್ಸ್‌ನಲ್ಲಿ ಅ.24ರಂದು 48 ಮತ್ತು ಅ.31ರಂದು 121; ಆರ್‌ಆರ್ ನಗರದಲ್ಲಿ ಅ.24ರಂದು 92 ಮತ್ತು ಅ.31ರಂದು 131 ರಷ್ಟಿತ್ತು.
ಎಕ್ಯೂಐ ಅಂದರೆ ಏನು?
ಎಕ್ಯೂಐ 0ಯಿಂದ 50ರಷ್ಟಿದ್ದರೆ ಉತ್ತಮ; 51ರಿಂದ 100 ರಷ್ಟಿದ್ದರೆ ಸಮಾಧಾನಕರ; 101ರಿಂದ 200 ರಷ್ಟಿದ್ದರೆ ಸಾಧಾರಣ; 201ರಿಂದ 300ರಷ್ಟಿದ್ದರೆ ಕಳಪೆ ಮತ್ತು 401ರಿಂದ 450ರಷ್ಟಿದ್ದರೆ ತೀವ್ರ ಕಳಪೆ ಹಾಗೂ 450ಕ್ಕಿಂತ ಹೆಚ್ಚಾದರೆ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.