ಬೆಂಗಳೂರು ಆಟೋ ರಿಕ್ಷಾ ಪ್ರಯಾಣ ದರ ಏರಿಕೆ ಸಾಧ್ಯತೆ? ಓಲಾ, ರ್‍ಯಾಪಿಡೋ, ಉಬರ್ ಮೇಲೂ ಬೀರುತ್ತಾ ಪರಿಣಾಮ?
Dec 20, 2024 05:56 PM IST
ಬೆಂಗಳೂರು ಆಟೋ ರಿಕ್ಷಾ ಪ್ರಯಾಣ ದರ ಏರಿಕೆ ಸಾಧ್ಯತೆ? ಓಲಾ, ರ್‍ಯಾಪಿಡೋ, ಉಬರ್ ಮೇಲೂ ಬೀರುತ್ತಾ ಪರಿಣಾಮ?
- ಬೆಂಗಳೂರು ಆಟೋ ರಿಕ್ಷಾ ಪ್ರಯಾಣ ದರ ಏರಿಕೆಯಾಗುವ ಸಂಭವ ಹೆಚ್ಚಿದೆ. ಹೀಗಾಗಿ ಇದು ಓಲಾ, ರ್‍ಯಾಪಿಡೋ, ಉಬರ್ ಪ್ರಯಾಣದ ಬೆಲೆ ಏರಿಕೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಬೆಂಗಳೂರು: ನಗರದಲ್ಲಿ ಆಟೋ ರಿಕ್ಷಾ ಪ್ರಯಾಣ ದರ (Bengaluru auto rickshaw) ಶೀಘ್ರದಲ್ಲೇ ಏರಿಕೆ ಕಾಣಬಹುದು ಎಂದು ವರದಿಯಾಗಿದೆ. ಹಣದುಬ್ಬರಕ್ಕೆ ತಕ್ಕಂತೆ ದರ ಏರಿಕೆಗೆ ನಗರದಲ್ಲಿ ಆಟೋ ಚಾಲಕರ ಸಂಘಗಳು ಒತ್ತಾಯಿಸುತ್ತಿವೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (RTA) ಸಹ ಡಿಸೆಂಬರ್ 23ರಂದು ನಗರದಲ್ಲಿ ಆಟೋ ಯೂನಿಯನ್‌ಗಳ ಜತೆ ಸಭೆ ನಡೆಸಲಿದೆ. ಆಟೋ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವ ದರ ಏರಿಕೆ ಪರಿಷ್ಕರಣೆ ಕುರಿತು ಚರ್ಚೆ ನಡೆಯಲಿದೆ.
ಆಟೋ ಚಾಲಕರ ಬೇಡಿಕೆಗಳ ಪ್ರಕಾರ, ಪ್ರತಿ ಕಿಮೀಗೆ 15 ರೂ.ಯಿಂದ 20 ರೂಪಾಯಿಗೆ ಏರಿಸಬೇಕು. ಮೊದಲ ಎರಡು ಕಿಲೋಮೀಟರ್ಗೆ ಕನಿಷ್ಠ ದರ 30 ರೂಪಾಯಿಯಿಂದ 40 ರೂಪಾಯಿ ವರೆಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿರುವುದಾಗಿ ಮನಿ ಕಂಟ್ರೋಲ್ (MoneyControl) ವರದಿ ಮಾಡಿದೆ. ಕೊನೆಯದಾಗಿ ದರ ಪರಿಷ್ಕರಣೆ ನಡೆದಿದ್ದು ಡಿಸೆಂಬರ್ 2021ರಲ್ಲಿ. ಕಳೆದ ಒಂದು ದಶಕದಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಕೇವಲ 2 ಬಾರಿ (2013 ಮತ್ತು 2021) ಪರಿಷ್ಕರಿಸಲಾಗಿದೆ.
ಎಲ್‌ಪಿಜಿ ಬೆಲೆ ಲೀಟರ್ಗೆ 61.49 ರೂ
ಸದ್ಯಕ್ಕೆ ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಬೆಲೆ ಲೀಟರ್ಗೆ 61.49 ರೂ ಆಗಿದೆ ಎಂದು ಮಾಧ್ಯಮ ವರದಿ ಉಲ್ಲೇಖಿಸಿದೆ. ಎಲ್‌ಪಿಜಿ ಬೆಲೆ ಏರಿಕೆ, ನಿರ್ವಹಣಾ ವೆಚ್ಚ ಮತ್ತು ದೈನಂದಿನ ವೆಚ್ಚಗಳು ಪ್ರಸ್ತುತ ದರಗಳನ್ನು ಅಸಮರ್ಥನೀಯವಾಗಿಸಿದೆ ಎಂದು ಚಾಲಕರು ವಾದಿಸಿದ್ದಾರೆ. ಪ್ರತಿ ವರ್ಷ ಆಟೋ ದರಗಳ ಪರಿಷ್ಕರಣೆ ನಡೆದರೆ ಚಾಲಕರಿಗೆ ನೆರವಾಗಲಿದೆ. ಪ್ರಯಾಣ ದರ ಏರಿಕೆ ಜಾರಿಗೊಳಿಸಿದರೆ ಚಾಲಕರು, ಪ್ರಯಾಣಿಕರಿಗೂ ಪ್ರಯೋಜನವಾಗಲಿದೆ. ನ್ಯಾಯಯುತ ದರ ನೀಡುವುದರ ಜೊತೆಗೆ ಪ್ರಯಾಣಿಕರಿಗೆ ಆಟೋಗಳು ಹೆಚ್ಚು ಲಭ್ಯವಾಗುತ್ತವೆ ಎಂದಿದ್ದಾರೆ.
ದರ ಏರಿಸಿದರೆ ಸಾರ್ವಜನಿಕ ಸಾರಿಗೆ ಬಳಕೆ ಉತ್ತೇಜಿಸುವುದರ ಜೊತೆಗೆ ಬೆಂಗಳೂರಿನ ಸಂಚಾರವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ. ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಬೇಡಿಕೆಗಳಿಗೆ ಮನ್ನಣೆ ನೀಡುವುದಾಗಿ ಭರವಸೆ ನೀಡಿದ್ದಾರೆ. 'ಸಭೆಯಲ್ಲಿ ಚಾಲಕರ ಮನವಿಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇವೆ' ಎಂದರು. ರಾತ್ರಿಯ ಸವಾರಿಗಳಿಗೆ (ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ) 50% ಹೆಚ್ಚುವರಿ ಶುಲ್ಕದ ಸಾಧ್ಯತೆ ಇದೆ.
ಓಲಾ, ರ್ಯಾಪಿಡೋ ಮತ್ತು ಉಬರ್ ಮೇಲೆ ಪರಿಣಾಮ?
ಆಟೋ ಪ್ರಯಾಣ ದರ ಏರಿಕೆ ಉಬರ್, ಓಲಾ ಮತ್ತು ರ್ಯಾಪಿಡೋ ದರ ಏರಿಕೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಹೈಕೋರ್ಟ್ ನಂತರ ಅವರಿಗೆ ಆಟೋಗಳನ್ನು ಓಡಿಸಲು ಅನುಮತಿ ನೀಡಿತು. ಅಕ್ಟೋಬರ್ 2022ರ ತನಕ ಆಟೋ ಅಗ್ರಿಗೇಟರ್‌ಗಳು ಕನಿಷ್ಠ ದರವಾಗಿ 100 ರೂಪಾಯಿಗಿಂತ ಹೆಚ್ಚು ಶುಲ್ಕ ವಿಧಿಸುತ್ತಿದ್ದರು. ಇದು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಲು ಕಾರಣವಾಗಿತ್ತು. ಮೊದಲ ಎರಡು ಕಿಮೀಗೆ 30 ರಿಂದ 40ಕ್ಕೆ ಏರಿಸಲು ಹೈಕೋರ್ಟ್ ಅನುಮತಿ ನೀಡಬೇಕಾಗುತ್ತದೆ.