ಧರ್ಮಸ್ಥಳ: ಚಾಲಕರ ಗುತ್ತಿಗೆ ಅವಧಿ ಮುಗಿದ ಹಿನ್ನೆಲೆ ಹಾಜರಾಗದ ಚಾಲಕರು, ಕೆಎಸ್‌ಆರ್‌ಟಿಸಿ ಬಸ್ ಸೇವೆಯಲ್ಲಿ ವ್ಯತ್ಯಯ ಪ್ರಯಾಣಿಕರ ಪರದಾಟ
KSRTC Strike: ಧರ್ಮಸ್ಥಳದ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಚಾಲಕರ ಗುತ್ತಿಗೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಚಾಲಕರು ಕೆಲಸಕ್ಕೆ ಹಾಜರಾಗಿಲ್ಲ. ಸೋಮವಾರದಿಂದಲೇ ಚಾಲಕರು ಗೈರಾಗಿರುವ ಕಾರಣ ಕೆಎಸ್‌ಆರ್‌ಟಿಸಿ ಬಸ್ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರ ಪರದಾಟ ಕಂಡುಬಂತು. ಈ ಕುರಿತ ವರದಿ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
KSRTC Strike: ಕೆಎಸ್ಆರ್ಟಿಸಿ ಧರ್ಮಸ್ಥಳ ಡಿಪೋದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸ್ ಚಾಲಕರ ಗುತ್ತಿಗೆ ಅವಧಿ ಮುಗಿದಿದ್ದು, ಅವರು ಸೋಮವಾರದಿಂದ ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಕಂಡು ಬಂದಿದೆ. ಡಿಸೆಂಬರ್ 31ರ ಕೆಎಸ್‌ಆರ್‌ಟಿಸಿ ಮುಷ್ಕರಕ್ಕೆ ಮೊದಲೇ ಧರ್ಮಸ್ಥಳ ಸುತ್ತಮುತ್ತಲಿನ ಪ್ರಯಾಣಿಕರಿಗೆ ಈ ಸಮಸ್ಯೆಯ ಸಂಕಷ್ಟ ತಟ್ಟಿದೆ.
ಧರ್ಮಸ್ಥಳ ಡಿಪೋದ ಸಮಸ್ಯೆ ಏನು
ಧರ್ಮಸ್ಥಳ ಡಿಪೋದಲ್ಲಿ 128 ಬಸ್ ಗಳಿದ್ದು, 121 ಅನುಸೂಚಿ, 136 ಚಾಲಕ ಕಂ ನಿರ್ವಾಹಕ, 75 ಚಾಲಕ ಹಾಗೂ 29 ನಿರ್ವಾಹಕರು ಕಾರ್ಯನಿರ್ವಹಿಸುತ್ತಿದ್ದಾರೆ.ಗುತ್ತಿಗೆ ಆಧಾರದ 72 ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದು ಪ್ರಸ್ತುತ ಇವರು ಸೇವೆಗೆ ಲಭ್ಯರಾಗದ ಕಾರಣದಿಂದ ಸಮಸ್ಯೆಗಳು ಉದ್ಭವಿಸಿವೆ.
ಪೂಜ್ಯಾಯ ಮತ್ತು ಪನ್ನಗ ಗುತ್ತಿಗೆ ಸಂಸ್ಥೆ ಅಡಿ ಕಾರ್ಯ ನಿರ್ವಹಿಸುತ್ತಿರುವ ಈ ಚಾಲಕರ ಗುತ್ತಿಗೆ ಅವಧಿ ಮುಗಿದಿದ್ದು ನವೀಕರಣ ಪ್ರಕ್ರಿಯೆ ನಡೆಯಬೇಕಿದೆ. ಇದಕ್ಕೆ ಇನ್ನೂ ನಾಲ್ಕು ದಿನ ಬೇಕಾಗುವ ಸಾಧ್ಯತೆ ಇರುವ ಕಾರಣ ಸಮಸ್ಯೆ ಅಷ್ಟು ದಿನ ಮುಂದುವರಿಯಲಿದೆ.
ಸ್ಥಳೀಯ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗದಂತೆ ಬಸ್ ಓಡಾಟ ವ್ಯವಸ್ಥೆ ಮಾಡಲಾಗಿದ್ದು, ದೂರದ ಊರುಗಳ ಕೆಲವು ಟ್ರಿಪ್ ಗಳನ್ನು ಕಡಿತಗೊಳಿಸುವ ಅನಿವಾರ್ಯತೆ ಉಂಟಾಗಿದೆ.ಇತರ ಡಿಪೋಗಳಿಂದ ಬರುವ ಬಸ್ ಗಳಲ್ಲಿ ದೂರದ ಊರಿನ ಪ್ರಯಾಣಿಕರಿಗೆ ಪ್ರಯಾಣಕ್ಕೆ ಅನುಕೂಲ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ಜಾರಿಯಲ್ಲಿವೆ ಎಂದು ಧರ್ಮಸ್ಥಳ ಡಿಪೋದ ಅಧಿಕಾರಿಗಳು ತಿಳಿಸಿದ್ದಾರೆ.
ಕೆಎಸ್ಆರ್‌ಟಿಸಿ ವಿರುದ್ಧ ಗುತ್ತಿಗೆ ಆಧಾರದ ಚಾಲಕರ ಆಕ್ರೋಶ
ಗುತ್ತಿಗೆ ಅವಧಿ ಮುಗಿದಿರುವ ಚಾಲಕರು ತಾವು ಕಾರ್ಯನಿರ್ವಹಿಸುವ ಗುತ್ತಿಗೆ ಸಂಸ್ಥೆಗೆ ಈಗಾಗಲೇ 25000 ರೂ. ಠೇವಣಿ ಇರಿಸಿದ್ದಾರೆ. ಈಗ ಸಂಸ್ಥೆ 10,000 ರೂ ಹೆಚ್ಚುವರಿ ಠೇವಣಿಯನ್ನು ಕೇಳುತ್ತಿದ್ದು ಈ ಬಗ್ಗೆ ಚಾಲಕರಿಂದ ಆಕ್ರೋಶ ವ್ಯಕ್ತವಾಗಿದೆ. ಸರಕಾರ ನೀಡುತ್ತಿರುವ ಸಂಬಳದಲ್ಲಿ ಗುತ್ತಿಗೆ ಸಂಸ್ಥೆ ಸಾಕಷ್ಟು ಕಡಿತ ಮಾಡುತ್ತಿದ್ದು ನಿಗದಿಪಡಿಸಿದ ಮೊತ್ತವನ್ನು ಒದಗಿಸುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಧರ್ಮಸ್ಥಳ,ಉಜಿರೆ, ಬೆಳ್ತಂಗಡಿ ಭಾಗದ ಪ್ರಯಾಣಿಕರ ಸಂಕಷ್ಟ
ಧರ್ಮಸ್ಥಳ,ಉಜಿರೆ, ಬೆಳ್ತಂಗಡಿ ಮೊದಲಾದ ಕಡೆಯಿಂದ ಬೇರೆ ಬೇರೆ ಊರುಗಳಿಗೆ ತೆರಳುವ ಮಂದಿ ಬಸ್ ವ್ಯತ್ಯಯದಿಂದ ಸಂಕಷ್ಟ ಅನುಭವಿಸಿದರು. ಸೋಮವಾರವಾದ ಕಾರಣ ಹೆಚ್ಚಿನ ಜನಸಂದಣಿಯು ಕಂಡುಬಂದಿತು. ಈ ಸಮಸ್ಯೆ ಇನ್ನೂ ಕೆಲವು ದಿನ ಮುಂದುವರಿಯಲಿರುವ ಕಾರಣ ಬೇರೆ ಬೇರೆ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಪರದಾಟ ನಡೆಸುವ ಸಾಧ್ಯತೆ ಇದೆ.
ಡಿಸೆಂಬರ್ 31 ರಿಂದ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ
ವಿವಿಧ ಬೇಡಿಕೆ ಆಗ್ರಹಿಸಿ ಕರ್ನಾಟಕದ ನಾಲ್ಕು ರಸ್ತೆ ಸಾರಿಗೆ ನಿಗಮಗಳ (ಆರ್‌ಟಿಸಿ) ನೌಕರರು ಡಿಸೆಂಬರ್ 31 ರಂದು ಬೆಳಿಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಆರು ನೌಕರರ ಸಂಘಗಳನ್ನು ಒಳಗೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿಯು ಕೈಗಾರಿಕಾ ವಿವಾದ ಕಾಯ್ದೆ ಪ್ರಕಾರ ಮುಷ್ಕರದ ನೋಟಿಸ್ ಅನ್ನು ಡಿಸೆಂಬರ್ 9 ರಂದೇ ನೋಟಿಸ್ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಷ್ಕರದ ನೋಟಿಸ್‌ನಲ್ಲಿ ವೇತನ ಹೆಚ್ಚಳ ಮತ್ತು ಬಾಕಿ ಪಾವತಿ ಸೇರಿ ಇತರೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಈ ಮುಷ್ಕರ ನಡೆಸುವುದಾಗಿ ನೌಕರರು ಹೇಳಿಕೊಂಡಿದ್ದಾರೆ. ನೋಟಿಸ್‌ನಲ್ಲಿ 13 ಬೇಡಿಕೆಗಳ ಪಟ್ಟಿ ಇದೆ. ಅವುಗಳನ್ನು ಈಡೇರಿಸವುಲ್ಲಿ ಸರ್ಕಾರ ವಿಫಲವಾದ ಕಾರಣ ಅನಿವಾರ್ಯವಾಗಿ ಮುಷ್ಕರಕ್ಕೆ ಕರೆ ನೀಡಿರುವುದಾಗಿ ಸಮಿತಿ ಸ್ಪಷ್ಟಪಡಿಸಿದೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)