Mandya Sahitya Sammelana: ಹಂಪಿ ಕನ್ನಡ ವಿವಿಗೆ ಶಾಶ್ವತ ಅನುದಾನ ಕೊಡಿ, ಜನಪದ, ಮಹಿಳಾ ವಿವಿ ಮರೆಯಬೇಡಿ; ಸರ್ಕಾರಕ್ಕೆ ಚಾಟಿ ಬೀಸಿದ ಗೊರುಚ
ಕನ್ನಡ ಸುದ್ದಿ  /  ಕರ್ನಾಟಕ  /  Mandya Sahitya Sammelana: ಹಂಪಿ ಕನ್ನಡ ವಿವಿಗೆ ಶಾಶ್ವತ ಅನುದಾನ ಕೊಡಿ, ಜನಪದ, ಮಹಿಳಾ ವಿವಿ ಮರೆಯಬೇಡಿ; ಸರ್ಕಾರಕ್ಕೆ ಚಾಟಿ ಬೀಸಿದ ಗೊರುಚ

Mandya Sahitya Sammelana: ಹಂಪಿ ಕನ್ನಡ ವಿವಿಗೆ ಶಾಶ್ವತ ಅನುದಾನ ಕೊಡಿ, ಜನಪದ, ಮಹಿಳಾ ವಿವಿ ಮರೆಯಬೇಡಿ; ಸರ್ಕಾರಕ್ಕೆ ಚಾಟಿ ಬೀಸಿದ ಗೊರುಚ

Mandya Sahitya Sammelana: ಸಂಕಷ್ಟದಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾನಿಲಯ, ಹಾವೇರಿ ಜನಪದ ವಿಶ್ವವಿದ್ಯಾನಿಲಯಕ್ಕೆ ಸರ್ಕಾರ ಅನುದಾನ ಒದಗಿಸಬೇಕು. ಮಹಿಳಾ ವಿಶ್ವವಿದ್ಯಾನಿಲಯ, ಸಂಗೀತ ವಿಶ್ವವಿದ್ಯಾನಿಲಯಗಳನ್ನು ಮರೆಯಬಾರದು ಎಂದು ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೊರುಚ ಸಲಹೆ ನೀಡಿದ್ದಾರೆ.

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಮ್ಮೇಳನಾಧ್ಯಕ್ಷ ಗೊರುಚ ಉಭಯ ಕುಶಲೋಪರಿ.
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಮ್ಮೇಳನಾಧ್ಯಕ್ಷ ಗೊರುಚ ಉಭಯ ಕುಶಲೋಪರಿ.

ಮಂಡ್ಯ: ಕನ್ನಡ ಭಾಷೆಯ ಉನ್ನತೀಕರಣಕ್ಕೆಂದೇ ಕರ್ನಾಟಕದಲ್ಲಿ ರೂಪಿಸಿದ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸಿಬ್ಬಂದಿಗೆ ವೇತನ ನೀಡಲು ಅನುದಾನವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಹೀನಾಯ ಸ್ಥಿತಿಗೆ ಯಾವುದೇ ಸರ್ಕಾರಿ ವಿಶ್ವವಿದ್ಯಾನಿಲಯ ಹೋಗಬಾರದು, ಹಾವೇರಿ ಜಿಲ್ಲೆಯಲ್ಲಿ ಸ್ಥಾಪಿಸಿರುವ ಜನಪದ ವಿಶ್ವವಿದ್ಯಾನಿಲಯ ಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ವಿಜಯಪುರದಲ್ಲಿ ನಡೆಯುತ್ತಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಮೈಸೂರಿನ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ನೃತ್ಯ ವಿಶ್ವವಿದ್ಯಾನಿಲಯಗಳನ್ನೂ ಕನ್ನಡ ನಾಡಿನ ಅಮೂಲ್ಯ ಸಂಸ್ಕೃತಿ ಕೇಂದ್ರಗಳೆಂದು ಭಾವಿಸಿ ಅನುದಾನವನ್ನು ಒದಗಿಸಿ. ವಿಶೇಷ ಸಂದರ್ಭದಲ್ಲಿ ಸ್ಥಾಪಿಸಿರುವ ಇಂತಹ ವಿಶ್ವವಿದ್ಯಾನಿಲಯಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ. ಇದು ಮಂಡ್ಯದಲ್ಲಿ ಶುಕ್ರವಾರ ಆರಂಭಗೊಂಡ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಗೊ.ರು.ಚನ್ನಬಸಪ್ಪ ಅವರು ಸರ್ಕಾರಕ್ಕೆ ಬೀಸಿದ ಮಾತಿನ ಚಾಟಿ.

ಇತ್ತೀಚಿನ ದಿನಗಳಲ್ಲಿ ಕನ್ನಡ ವಿಶ್ವವಿದ್ಯಾನಿಲಯ ಎದುರಿಸುತ್ತಿರುವ ಸಂಕಷ್ಟಗಳು ಹೆಚ್ಚು ನೆಮ್ಮದಿ ಕೆಡಿಸಿದೆ. ಅನುದಾನದ ಕೊರತೆಯಿಂದ ಅದರ ಸ್ಥಿತಿ ಹೀನಾಯ ನೆಲೆಗೆ ಬಂದು ವಿಶ್ವವಿದ್ಯಾನಿಲಯ ಸಿಬ್ಬಂದಿಗೆ ವೇತನ ಕೊಡಲೂ ಆಗುತ್ತಿಲ್ಲ. ವಿದ್ಯುತ್‌ ಬಿಲ್‌, ನೀರಿನ ಬಿಲ್‌ ಪಾವತಿಸಲು ಆಗದ ಸ್ಥಿತಿ ನಿರ್ಮಾಣವಾಗಿದೆ ಎಂಬುದು ನಿಜಕ್ಕೂ ಕಂಗೆಡಿಸುವಂತಹದ್ದು. ಯಾವುದೇ ಸರ್ಕಾರಕ್ಕೆ ಇದು ಶೋಭೆ ತರುವುದಲ್ಲ. ಏಕೆಂದರೆ 33 ವರ್ಷಗಳ ಹಿಂದೆ ಆರಂಭವಾದ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಘನೋದ್ದೇಶಗಳಿವೆ. ಅದಕ್ಕೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಕನ್ನಡ ನಾಡಿನ ಇತಿಹಾಸವನ್ನು ರಕ್ಷಿಸಿ ಮುಂದಿನ ಪೀಳಿಗೆಗಳಿಗೆ ದಾಟಿಸುವ ಪ್ರಮುಖ ಜವಾಬ್ದಾರಿಯಿದೆ. ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕೊಟ್ಟು ಅವರಿಂದ ಶುಲ್ಕ ಸಂಗ್ರಹಿಸಿ ಅನುಕೂಲ ಮಾಡಿಕೊಳ್ಳುವ ಇತರೆ ವಿಶ್ವವಿದ್ಯಾನಿಲಯಗಳಿಗಿಂತ ನಮ್ಮ ಕನ್ನಡ ವಿಶ್ವವಿದ್ಯಾನಿಲಯದ ಸ್ವರೂಪ ಭಿನ್ನವಾಗಿದೆ ಎಂಬುದು ಗೊರುಚ ಅಭಿಮತ.

ಇದನ್ನು ಸರ್ಕಾರ ಒಂದು ಲಾಭದಾಯಕ ಶಿಕ್ಷಣ ಸಂಸ್ಥೆತಂತೆ ನೋಡಬಾರದು. ಕನ್ನಡ ವಿಶ್ವವಿದ್ಯಾನಿಲಯಸದ ಉದ್ದೇಶಗಳನ್ನು ಕಾಪಾಡುವ, ಪೋಷಿಸುವ ಮತ್ತು ಅಲ್ಲಿ ನಿರಾತಂಕವಾಗಿ ಸಂಶೋಧನೆ ನಡೆಸುವಂತೆನೋಡಿಕೊಳ್ಳುವ ನೈತಿಕ ಜವಾಬ್ದಾರಿ ಕರ್ನಾಟಕ ಸರ್ಕಾರಕ್ಕೆ ಇರಬೇಕು ಎನ್ನುವುದು ಅವರ ಸಲಹೆ

ಇದೇ ಮಾತುಗಳು ಜಾನಪದಕ್ಕೆ ಮೀಸಲಾದ ಮತ್ತು ವಿಶ್ವದಲ್ಲೇ ಮೊದಲೆನಿಸಿರುವ ನಮ್ಮ ಜಾನಪದ ವಿಶ್ವವಿದ್ಯಾನಿಲಯಕ್ಕೂ ಅನ್ವಯಿಸುತ್ತದೆ. ಗ್ರಾಮೀಣರು ಮತ್ತು ಗುಡ್ಡಗಾಡಿನ ಜನರ ಬದುಕಿಗೆ ನೇರವಾಗು ಸಂಬಂಧವಿರುವ ಜಾನಪದ ವಿಶ್ವವಿದ್ಯಾನಿ೮ಲಯದ ಸ್ಥಿತಿಯೂ ಚಿಂತಾಜನಕವಾಗಿದೆ. ಆದ್ದರಿಂದ ಹೆಚ್ಚಿನ ಶಾಶ್ವತ ಅನುದಾನ ಮತ್ತು ಅದು ಸಕಾಲಕ್ಕೆ ಒದಗುವುದು ಎರಡೂ ಮುಖ್ಯ, ನಮ್ಮ ಶಾಸಕರೆಲ್ಲರೂ ಈ ಕುರಿತು ದನಿ ಎತ್ತಬೇಕು. ಇದನ್ನು ಕನ್ನಡ ಸಾಹಿತ್ಯ ಸಮ್ಮಳನದ ಈ ವೇದಿಕೆಯಿಂದ ಸಕಲ ಕನ್ನಡಿಗರೆಲ್ಲರ ಪರವಾಗಿ ಮನವಿ ಮಾಡುವುದಾಗಿ ಹೇಳಿದರು.

ಈ ಎರಡೂ ವಿಶ್ವವಿದ್ಯಾನಿಲಯದಂತೆಯೇ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಮೈಸೂರಿನಲ್ಲಿರುವ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ನೃತ್ಯ ವಿಶ್ವವಿದ್ಯಾನಿಲಯ ಇವೆಲ್ಲವೂ ಕನ್ನಡ ನಾಡಿನ ಅಮೂಲೃ ಸಂಸ್ಕೃತಿ ಕೇಂದ್ರಗಳು ಎಂದು ಪರಿಭಾವಿಸಬೇಕು ಎಂದು ಗೊರುಚ ಸಲಹೆ ನೀಡಿದರು.

Whats_app_banner