ದರ್ಶನ್ ಜಾಮೀನು ಅರ್ಜಿ ವಿಚಾರಣೆ; ರೋಚಕ ಘಟ್ಟ ತಲುಪಿದ ವಾದ-ಪ್ರತಿವಾದ, ನಾಳೆ ನಟನ ಬೇಲ್ ಭವಿಷ್ಯ ನಿರ್ಧಾರ?
Oct 09, 2024 07:07 PM IST
ದರ್ಶನ್ ಜಾಮೀನು ಅರ್ಜಿ ವಿಚಾರಣೆ; ರೋಚಕ ಘಟ್ಟ ತಲುಪಿದ ವಾದ-ಪ್ರತಿವಾದ
- Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ರೋಚಕ ಘಟ್ಟ ತಲುಪಿದೆ. ನಾಳೆ ನಟನ ಬೇಲ್ ಭವಿಷ್ಯ ನಿರ್ಧಾರವಾಗಲಿದೆ. (ವರದಿ-ಎಚ್.ಮಾರುತಿ)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ವಿಚಾರಣೆ ನಾಳೆ (ಅಕ್ಟೋಬರ್ 10) ಗುರುವಾರಕ್ಕೆ ಮುಂದೂಡಲ್ಪಟ್ಟಿದೆ. ಬುಧವಾರ (ಅಕ್ಟೋಬರ್ 9) ದಿನವಿಡೀ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್ ಅವರು ತಮ್ಮ ವಾದ ಆರಂಭಿಸಿ ದರ್ಶನ್ಗೆ ಜಾಮೀನು ನೀಡಬಾರದು ಎಂದು ಎಳೆಎಳೆಯಾಗಿ ಬಿಚ್ಚಿಟ್ಟರು. ಇದೇ ಸಂದರ್ಭದಲ್ಲಿ ಅವರು ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ದರ್ಶನ್, ಪವಿತ್ರಾ ಗೌಡ ಮತ್ತಿತರ ಆರೋಪಿಗಳ ಕರಾಳ ಮುಖಗಳನ್ನು ಅನಾವರಣಗೊಳಿಸುಸುತ್ತಾ ಹೋದರು.
ಸಂಜೆಯ ವೇಳೆಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ವರು ತಮ್ಮ ವಾದವನ್ನು ಪೂರ್ಣಗೊಳಿಸಿದ ನಂತರ ನ್ಯಾಯಾಧೀಶರು ವಿಚಾರಣೆಯನ್ನು ನಾಳೆಗೆ ಮುಂದೂಡಿದರು. ನಾಳೆ ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಲಿದ್ದಾರೆ. ನಿನ್ನೆಯ (ಅಕ್ಟೋಬರ್ 8ರ) ವಾದ ಸರಣಿಯನ್ನು ಮುಂದುವರೆಸಿದ ಪ್ರಸನ್ನಕುಮಾರ್ ಅವರು ದರ್ಶನ್, ಪವಿತ್ರಾ ಮೊದಲಾದ ಆರೋಪಿಗಳಿಗೆ ಜಾಮೀನು ನೀಡುವುದಕ್ಕೆ ಬಲವಾದ ಆಕ್ಷೇಪಣೆ ಸಲ್ಲಿಸಿದ್ದರು. ಶೆಡ್ಗೆ ಬ್ಲ್ಯಾಕ್ ಸ್ಕಾರ್ಪಿಯೋದಲ್ಲಿ ದರ್ಶನ್, ಪವಿತ್ರಾಗೌಡ ಆಗಮಿಸುತ್ತಾರೆ. ದರ್ಶನ್ ರೇಣುಕಾಸ್ವಾಮಿ ಎದೆಗೆ ಮತ್ತು ಮರ್ಮಾಂಗಕ್ಕೆ ಒದ್ದಿರುವ ಬಗ್ಗೆ ಪ್ರತ್ಯಕ್ಷದರ್ಶಿ ಕಿರಣ್ ಹೇಳಿದ್ದಾನೆ.
ಎಸ್ಪಿಪಿ ವಿಚಾರಣೆಯಲ್ಲಿ ಹೇಳಿದ್ದೇನು?
ಸಾಕ್ಷಿಗಳಾದ 76, 77, 78, 78, 79 ಶೆಡ್ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇವರೆಲ್ಲರ ಮೊಬೈಲ್ ಟವರ್ ಲೊಕೇಷನ್ ಇದೇ ಶೆಡ್ ಬಳಿ ಸಿಕ್ಕಿದೆ. ಕಾಲ್ ರೆಕಾರ್ಡ್ಸ್ ಕೂಡಾ ಸಾಕ್ಷಿಗಳು ಅಲ್ಲೇ ಇದ್ದರು ಎನ್ನುವುದಕ್ಕೆ ಪುರಾವೆ ಒದಗಿಸುತ್ತದೆ. ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳು ಮತ್ತು ಸಾಕ್ಷಿಗಳು ಶೆಡ್ನಲ್ಲಿಯೇ ಇದ್ದರು. ಸಾಕ್ಷಿ ನಂಬರ್ 69ನಿಗೆ ಕನ್ನಡ ಬರುವುದಿಲ್ಲ. ಹೀಗಾಗಿ ಆತ ಹಿಂದಿಯಲ್ಲಿ ಹೇಳಿಕೆ ನೀಡಿದ್ದಾನೆ. ಸಾಕ್ಷಿಗಳ ಹೇಳಿಕೆ ತಡವಾಗಿದ್ದಕ್ಕೆ ಕಾರಣ ನೀಡಿದ ಪಿಪಿಪಿ, ಪ್ರೊಫೆಸರ್ ಸಹಾಯದಿಂದ ಹಿಂದಿಯಿಂದ ಕನ್ನಡಕ್ಕೆ ತುರ್ಜಮೆ ಮಾಡಿಸಲಾಗಿದೆ. ಸಾಕ್ಷಿಯ ಹೇಳಿಕೆಯನ್ನು ಯಥಾವತ್ತಾಗಿ ದಾಖಲಿಸಿಕೊಳ್ಳಲಾಗಿದೆ ಎಂದರು.
ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ರೋಚಕ ಘಟ್ಟದ ತಲುಪಿತ್ತು. ಮಧ್ಯಾಹ್ನದ ಭೋಜನ ವಿರಾಮದ ನಂತರವೂ ವಾದವನ್ನು ಮುಂದುವರೆಸಿದರು. ದರ್ಶನ್ ಪರ ವಕೀಲರ ಪ್ರತಿಯೊಂದು ಅಕ್ಷೇಪಗಳಿಗೂ ಉತ್ತರ ನೀಡಿದರು. ದರ್ಶನ್ ಶೂ ಜಪ್ತಿ ಬಗ್ಗೆ ಅವರ ವಕೀಲರು ಪ್ರಸ್ತಾಪಿಸಿ ಒಂದೆಡೆ ಚಪ್ಪಲಿ, ಮತ್ತೊಂದೆಡೆ ಶೂ ಎಂದು ಉಲ್ಲೇಖ ಮಾಡಿದ್ದಾರೆ ಎಂದು ತಕರಾರು ಎತ್ತಿದ್ದಾರೆ. ಆದರೆ ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಸ್ಪಷ್ಟವಾಗಿದ್ದು, ಪಂಚನಾಮೆಯಲ್ಲಿ ಆರೋಪಿ ಹೇಳಿದ್ದನ್ನೇ ಬರೆದುಕೊಳ್ಳಬೇಕು ಎಂದರು.
ನನ್ನ ಮನೆಯಲ್ಲಿ ಇಟ್ಟಿರುವ ಬಟ್ಟೆ, ಚಪ್ಪಲಿ ತೋರಿಸುತ್ತೇನೆ ಎಂದು ದರ್ಶನ್ ಹೇಳಿದ್ದಾರೆ. ಅವರು ಹೇಳಿದ್ದನ್ನೇ ಇಲ್ಲಿ ದಾಖಲಿಸಲಾಗಿದೆ ಎಂದು ಎಸ್ಪಿಪಿ ತಿಳಿಸಿದರು. 96 ವಸ್ತುಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ಕೃತ್ಯವೆಸಗಿದಾಗ ಧರಿಸಿದ ಶೂ ಅಪಾರ್ಟ್ಮೆಂಟ್ನಲ್ಲಿ ಇರಲಿಲ್ಲ. ತೊಳೆಯಲು ಕೊಟ್ಟಿದ್ದಾಗಿ ಮನೆಯಾಳು ರಾಜು ಹೇಳಿದ್ದ. ಪತ್ನಿ ವಿಜಯಲಕ್ಷ್ಮೀ ಕೊಟ್ಟ ಶೂಗಳಲ್ಲಿ ದರ್ಶನ್ ನೀಲಿ ಬಣ್ಣದ ಶೂ ತೋರಿಸಿದ್ದರು. ದರ್ಶನ್ ಏನು ತೋರಿಸಿದ್ದಾರೋ ಅದನ್ನೇ ವಶಪಡಿಸಿಕೊಳ್ಳಲಾಗಿದೆ ಎಂದು ವಾದಿಸಿದರು.
‘ರೇಣುಕಾಸ್ವಾಮಿ ಡಿಎನ್ಎ ಮ್ಯಾಚ್ ಆಗಿದೆ’
ಕೊಲೆ ನಡೆದ ದಿನ ದರ್ಶನ್ ಧರಿಸಿದ್ದ ಬಟ್ಟೆಗಳನ್ನು ಕುರಿತು ದರ್ಶನ್ ವಕೀಲರು ಸಂದೇಹ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರವಿದೆ. ವೈಜ್ಞಾನಿಕ ವರದಿ ಈ ಬಗ್ಗೆ ಹೇಳಿದೆ. ಬಟ್ಟೆ ಒಗೆದ ಮೇಲೂ ಡಿಎನ್ಎ ಪತ್ತೆ ಹಚ್ಚಲು ಸಾಧ್ಯವಿದೆ. 40 ಡಿಗ್ರಿ, 60 ಡಿಗ್ರಿ 90 ಡಿಗ್ರಿಯಲ್ಲೂ ರಕ್ತದ ಡಿಎನ್ಎ ಪತ್ತೆಯಾಗಬಹುದು. ಈ ಪ್ರಕರಣದಲ್ಲಿ ಕೇವಲ ತಣ್ಣೀರಿನಲ್ಲಿ ಬಟ್ಟೆ ಒಗೆಯಲಾಗಿದೆ. ಬಟ್ಟೆ ಒಗೆದ ಮೇಲೂ ಡಿಎನ್ಎ ಪತ್ತೆ ಹಚ್ಚಲು ಸಾಧ್ಯವಿದೆ ಮತ್ತು ರಕ್ತದ ಮಾದರಿ ಕಂಡು ಹಿಡಿಯಬಹುದು ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ದರ್ಶನ್ ಬಟ್ಟೆಗಳನ್ನು ಒಗೆಯಲು ಹೇಳಿದ್ದರು. ಬಟ್ಟೆಗಳನ್ನು ಕುಕ್ಕಿ ಕುಕ್ಕಿ ಒಗೆದಿದ್ದೇನೆ. ಸರ್ಫ್, ಸೋಪು ಹಾಕಿ ಒಗೆದಿದ್ದೇನೆ ಎಂದು ಪವನ್ ಹೇಳಿದ್ದಾರೆ. ರಕ್ತದ ಕಲೆಗಳನ್ನು ಅಳಿಸುವ ಉದ್ದೇಶದಿಂದಲೇ ಈ ರೀತಿ ಮಾಡಿದ್ದಾರೆ ಎಂದರು. ಆರೋಪಿಗಳ ಬಟ್ಟೆ, ಚಪ್ಪಲಿ, ಶೂಗಳ ಮೇಲೆ ಡಿಎನ್ಎ ಪತ್ತೆಯಾಗಿದ್ದು, ಇದೆಲ್ಲವೂ ರೇಣುಕಾಸ್ವಾಮಿ ಡಿಎನ್ಎ ಜೊತೆ ಮ್ಯಾಚ್ ಆಗಿದೆ ಎಂದು ತಿಳಿಸಿದರು.
ಮರಣೋತ್ತರ ಪರೀಕ್ಷೆ ತಡ ಮಾಡಲಾಗಿದೆ ಎಂಬ ಆರೋಪಕ್ಕೆ ಎಸ್ಪಿಪಿ ಪ್ರತಿವಾದ ಮಂಡಿಸಿದರು. ಈ ಪ್ರಕರಣದಲ್ಲಿ ನೇರ ಸಾಕ್ಷಿ ಮತ್ತು ಸಾಂದರ್ಭಿಕ ಸಾಕ್ಷಿಗಳಿವೆ. ಮೃತ ದೇಹವನ್ನು ಸಂಬಂಧಿಗಳು ಗುರುತಿಸಬೇಕು. ಆಗ ಮಾತ್ರ ಮರಣೋತ್ತರ ಪರೀಕ್ಷೆ ಸಾಧ್ಯ. 2 ದಿನ ಕಳೆದಿದ್ದರೂ ಮೃತದೇಹದ ಗುರುತು ಸಿಕ್ಕಿರಲಿಲ್ಲ. ಹೀಗಾಗಿ ತಡವಾಗಿ ಮರಣೋತ್ತರ ಪರೀಕ್ಷೆ ಆಗಿದೆ ಎಂದು ಸ್ಪಷ್ಟಪಡಿಸಿದರು. ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ದೇಹದ ಎಲ್ಲಾ ಗಾಯಗಳು ಸಾವಿಗೆ ಮುನ್ನವೇ ಆಗಿವೆ. ಮುಖಕ್ಕೆ ನಾಯಿ ಕಚ್ಚಿರುವುದು ಸಾವಿನ ನಂತರ. ಮರಣೋತ್ತರ ಪರೀಕ್ಷೆ ತಡವಾಗಿದ್ದರೂ ತನಿಖೆಗೆ ಅಡ್ಡಿ ಆಗಿಲ್ಲ ಎಂದು ವಾದಿಸಿದರು.
ಹೀಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್ ಅವರು ದರ್ಶನ್ ಪರ ವಕೀಲರ ವಾದಕ್ಕೆ ತಕ್ಕ ಉತ್ತರ ನೀಡಿ ಸುದೀರ್ಘ ಮತ್ತು ಪ್ರಬಲ ಪ್ರತಿವಾದ ಮಂಡಿಸಿದ್ದಾರೆ. ದರ್ಶನ್ ಪರ ವಕೀಲ ಸಿವಿ ನಾಗೇಶ್ ಎತ್ತಿದ್ದ ಪ್ರತಿ ಪ್ರಶ್ನೆಗೂ ಉತ್ತರ ನೀಡಿದ್ದಾರೆ.