Bengaluru Crime: ರಿವಾಲ್ವರ್ ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯಗೆ ಸನ್ಮಾನ, ಕರ್ತವ್ಯಲೋಪದ ಮೇಲೆ ನಾಲ್ವರು ಪೊಲೀಸರ ಅಮಾನತು
Apr 24, 2024 05:06 PM IST
ಸೊಂಟದಲ್ಲಿ ರಿವಾಲ್ವಾರ್ ಇಟ್ಟುಕೊಂಡೇ ರಿಜ್ವಾನ್ ಸಿಎಂ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದ್ದ. ಈ ಪ್ರಕರಣದಲ್ಲಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
- ಸಿದ್ದರಾಮಯ್ಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರವಾಗಿ ರೋಡ್ ಶೋ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಸೊಂಟದಲ್ಲಿ ರಿವಾಲ್ವರ್ ಇಟ್ಟುಕೊಂಡೇ ರಿಯಾಜ್ ಅಹಮ್ಮದ್ ಎಂಬಾತ ತೆರೆದ ವಾಹನ ಏರಿ ಸಿದ್ದರಾಮಯ್ಯನವರನ್ನು ಸನ್ಮಾನಿಸಿದ್ದ.
ಬೆಂಗಳೂರು: ಚುನಾವಣಾ ಪ್ರಚಾರ ನಡೆಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೊಂಟದಲ್ಲಿ ರಿವಾಲ್ವರ್ ಇಟ್ಟುಕೊಂಡೇ ರಿಯಾಜ್ ಅಹಮ್ಮದ್ ಎಂಬ ವ್ಯಕ್ತಿಯೊಬ್ಬ ಸನ್ಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಸೇರಿ ನಾಲ್ವರು ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಏ 8 ರಂದು ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಭೈರಸಂದ್ರದಲ್ಲಿ ಸಿದ್ದರಾಮಯ್ಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರವಾಗಿ ರೋಡ್ ಶೋ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಸೊಂಟದಲ್ಲಿ ರಿವಾಲ್ವರ್ ಇಟ್ಟುಕೊಂಡೇ ರಿಯಾಜ್ ಅಹಮ್ಮದ್ ಎಂಬಾತ ತೆರೆದ ವಾಹನ ಏರಿ ಸಿದ್ದರಾಮಯ್ಯನವರನ್ನು ಸನ್ಮಾನಿಸಿದ್ದ. ಆಗ ರಿಯಾಜ್ ಸೊಂಟದಲ್ಲಿದ್ದ ರಿವಾಲ್ವರ್ ಎದ್ದು ಕಾಣುತ್ತಿತ್ತು. ಇದು ಭದ್ರತಾ ಲೋಪವಾಗಿದ್ದು, ಪ್ರತಿಪಕ್ಷಗಳ ವ್ಯಾಪಕ ಟೀಕೆಗೆ ಕಾರಣವಾಗಿತ್ತು.
ಈ ಭದ್ರತಾ ಲೋಪ ಕುರಿತು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಅವರು ತನಿಖೆಗೆ ಆದೇಶಿಸಿದ್ದರು. ದಕ್ಷಿಣ ವಿಭಾಗದ ಡಿಸಿಪಿ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರು ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು.
ಈ ವರದಿಯ ಅನ್ವಯ ಸಿದ್ದಾಪುರ ಠಾಣೆಯ ಪಿಎಸ್‌ಐ ಮೆಹಬೂಬ್ ಹುಡ್ದ, ಹೆಡ್ ಕಾನ್‌ಸ್ಟೆಬಲ್ ಮಂಜು ನಾಯಕ್, ಕಾನ್‌ಸ್ಟೆಬಲ್ ಸಚಿನ್ ಹಾಗೂ ಎಎಸ್‌ಐ ಒಬ್ಬರನ್ನು ಅಮಾನತು ಮಾಡಲಾಗಿದೆ. ಪಿಎಸ್‌ಐ ಮೆಹಬೂಬ್ ಮತ್ತು ಇವರೆಲ್ಲರನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದ ತೆರೆದ ವಾಹನದ ಸುತ್ತ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಮುಖ್ಯಮಂತ್ರಿಗಳ ಬಳಿಗೆ ಹೋಗುವವರನ್ನು ತಪಾಸಣೆ ನಡೆಸುವ ಜವಾಬ್ದಾರಿಯೂ ಇವರದ್ದೇ ಆಗಿತ್ತು.
ತನಿಖೆಯ ಪ್ರಕಾರ ರಿಯಾಜ್ ಅಹಮ್ಮದ್ ಸೊಂಟದಲ್ಲಿ ರಿವಾಲ್ವರ್ ಇಟ್ಟುಕೊಂಡು ಮುಖ್ಯಮಂತ್ರಿಗಳ ಹತ್ತಿರ ಹೋಗುವಾಗ ಕರ್ತವ್ಯದಲ್ಲಿದ್ದ ಪೊಲೀಸರು ತಡೆದಿರಲಿಲ್ಲ ಎನ್ನುವುದು ತಿಳಿದು ಬಂದಿದೆ.
ಈ ಪ್ರಕರಣದ ಬಗ್ಗೆ ಎಲ್ಲ ಆಯಾಮದಲ್ಲಿ ತನಿಖೆ ನಡೆಸಲಾಗುವುದು ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ ತಿಳಿಸಿದ್ದರು. ಈ ತೆರೆದ ವಾಹನದಲ್ಲಿ ಸಿದ್ದರಾಮಯ್ಯ ಅವರ ಜೊತೆ ಅಭ್ಯರ್ಥಿ ಸೌಮ್ಯಾ ರೆಡ್ಡಿ ಹಾಗೂ ಸಚಿವ ರಾಮಲಿಂಗಾರೆಡ್ಡಿ ಸಹ ಇದ್ದರು.
ರಿಯಾಜ್ ಸನ್ಮಾನ ಮಾಡುವುದರ ಜೊತೆಗೆ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಘೋಷಣೆ ಕೂಗಿದ್ದ. ಪ್ರಕರಣ ನಡೆದ ನಂತರ ರಿಯಾಜ್ ವಿಚಾರಣೆ ನಡೆಸಲಾಗಿತ್ತು. 2019ರಲ್ಲಿ ರಿಯಾಜ್ ಮೇಲೆ ಹಲ್ಲೆ ನಡೆದು ಕೊಲೆಗೆ ಯತ್ನ ನಡೆದಿತ್ತು. ಹಾಗಾಗಿ ರಿಯಾಜ್ ರಿವಾಲ್ವರ್ ಪರವಾನಗಿ ಪಡೆದುಕೊಂಡಿದ್ದ. ಚುನಾವಣೆ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸಬೇಕು. ಆದರೆ ರಿಯಾಜ್‌ಗೆ ಪ್ರಾಣ ಬೆದರಿಕೆ ಇರುವುದನ್ನು ಮನಗಂಡು ಠೇವಣಿ ಇರುವುದರಿಂದ ರಿಯಾಯಿತಿ ನೀಡಲಾಗಿತ್ತು. ಹಾಗೆಂದ ಮಾತ್ರಕ್ಕೆ ಸಾರ್ವಜನಿಕ ಸ್ಥಳದಲ್ಲಿ ರಿವಾಲ್ವರ್ ಪ್ರದರ್ಶಿಸಲು ಕಾನೂನಿನಲ್ಲಿ ಅವಕಾಶವಿಲ್ಲ.
ಸುಲಿಗೆಯಲ್ಲಿ ಪೊಲೀಸರಿಗೂ ಪಾಲುಕೊಡುತ್ತಿದ್ದ ಪೊಲೀಸ್ ಬಾತ್ಮೀದಾರನ ಬಂಧನ
ಪೊಲೀಸರು ಎಂದು ಹೇಳಿಕೊಂಡು ಗುಜರಿ ಮಳಿಗೆ ಮಾಲೀಕರೊಬ್ಬರನ್ನು ಹೆದರಿಸಿ 2 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದ ಆರೋಪದಡಿಯಲ್ಲಿ ಎಸ್.ನಿವಾಸ್ ಎಂಬಾತನನ್ನು ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಟ್ಟಂದೂರು ಅಗ್ರಹಾರ ಸಮೀಪ ಗುಜರಿ ಅಂಗಡಿ ನಡೆಸುತ್ತಿರುವ ಅಖ್ತಿರ್ ಅಲಿ ಮೊಂಡಲ್ ಅವರು ಈ ವಂಚನೆ ಕುರಿತು ದೂರು ನೀಡಿದ್ದರು. ಈ ದೂರಿನ ತನಿಖೆ ನಡೆಸಿದ ಪೊಲೀಸರು ನಿವಾಸ್‌ನನ್ನು ಬಂಧಿಸಿದ್ದಾರೆ. ಹಣ ವಸೂಲಿಗೆ ಸಹಕರಿಸಿದ ಇತರ ಮೂವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ನಿವಾಸ್ ಪೊಲೀಸ್ ಬಾತ್ಮಿದಾರನಾಗಿದ್ದ. ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮಗಳು ಮತ್ತು ಕಾನೂನು ಬಾಹಿರ ಚಟುವಟಿಕೆ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ. ಪೊಲೀಸರ ಕಾರ್ಯವೈಖರಿ ಕುರಿತು ತಿಳಿದುಕೊಂಡಿದ್ದ ಈತ ಪೊಲೀಸರ ಹೆಸರು ಹೇಳಿಕೊಂಡು ಗುಜರಿ ಮಳಿಗೆ ಮಾಲೀಕರಿಂದ ಹಣ ವಸೂಲಿ ಮಾಡಿದ್ದಾನೆ.
ಪ್ರಮುಖ ಆರೋಪಿ ನಿವಾಸ್ ಹಾಗೂ ಆತನ ಮೂವರು ಸ್ನೇಹಿತರು ಕಾರಿನಲ್ಲಿ ಗುಜರಿ ಮಳಿಗೆಗೆ ಹೋಗಿ ನಾವು ಪೊಲೀಸರು ಎಂದು ಪರಿಚಯಿಸಿಕೊಂಡಿದ್ದರು.
ಗುಜರಿ ಅಂಗಡಿಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದಿದೆ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ನಿಮ್ಮನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿದ್ದರು. ದೂರು ದಾಖಲಿಸುವುದು ಬೇಡವಾದಲ್ಲಿ ಹಣ ನೀಡಬೇಕು ಎಂದು ಹೆದರಿಸಿದ್ದರು. ಗುಜರಿ ಅಂಗಡಿಯಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿಲ್ಲ. ಆದ್ದರಿಂದ ಹಣ ನೀಡುವುದಿಲ್ಲ ಎಂದು ದೂರುದಾರ ಅಖ್ತಿರ್ ವಾದಿಸಿದ್ದರು.
ಗುಜರಿ ಅಂಗಡಿ ಮಾಲೀಕರ ಮೇಲೆ ಹಲ್ಲೆ ಮಾಡಿದ್ದ ನಿವಾಸ್, ಬಲವಂತವಾಗಿ ತನ್ನ ಖಾತೆಗೆ 80 ಸಾವಿರ ರೂಪಾಯಿ ವರ್ಗಾಯಿಸಿಕೊಂಡಿದ್ದ. ನಂತರ ಎಟಿಎಂ ಕಾರ್ಡ್ ಪಡೆದುಕೊಂಡು ಅದರಿಂದ 1.20 ಲಕ್ಷ ರೂಪಾಯಿ ಹಣ ಡ್ರಾ ಮಾಡಿಕೊಂಡಿದ್ದ. ಆರೋಪಿಯು ತಾನು ಪೊಲೀಸ್ ಬಾತ್ಮಿದಾರ ಎಂದು ಹೇಳಿಕೊಂಡು ಹಲವು ಜನರನ್ನು ಹೆದರಿಸಿ ಹಣ ಸುಲಿಗೆ ಮಾಡಿರುವ ಮಾಹಿತಿ ಲಭ್ಯವಾಗಿದೆ. ಸದ್ಯಕ್ಕೆ ಇದೊಂದು ಪ್ರಕರಣ ದಾಖಲಾಗಿದೆ. ಈತನಿಂದ ಮೋಸ ಹೋಗಿದ್ದಾರೆ ದೂರು ನೀಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ನಿವಾಸ್‌ನ ಕಾನೂನುಬಾಹಿರ ಚಟುವಟಿಕೆಗಳನ್ನು ಬೆಂಬಲಿಸಿ ಕೆಲವು ಪೊಲೀಸರು ಹಣ ಪಡೆದುಕೊಂಡಿರುವ ಮಾಹಿತಿಯೂ ಲಭ್ಯವಾಗಿದೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳ್ಳತನ ಮಾಡಿ ಸಿಕ್ಕಿಬಿದ್ದ ಅಡುಗೆ ಕೆಲಸದವ
ಬೆಂಗಳೂರಿನ ದೊಡ್ಡನೆಕ್ಕುಂದಿ ಅಪಾರ್ಟ್‌ಮೆಂಟ್ ಒಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಂದ್ರ ಕಾಮತ್ ಎಂಬಾತನನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ 29 ವರ್ಷದ ಸುರೇಂದ್ರ ಕಾಮತ್ ಎಂಬಾತ ಅಮಿತ್ ಜೈನ್ ಎಂಬುವರ ಮನೆಯಲ್ಲಿ ಹಲವು ತಿಂಗಳ ಹಿಂದೆ ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದ. ಮನೆ ಮಾಲೀಕರು ಇಲ್ಲದ ಸಂದರ್ಭ ನೋಡಿಕೊಂಡು ಚಿನ್ನಾಭರಣ, ವಜ್ರ ಮತ್ತು ನಗದು ಹಣವನ್ನು ಕಳವು ಮಾಡಿಕೊಂಡು ಓಡಿಹೋಗಿದ್ದ. ಈತನನ್ನು ಆಂಧ್ರಪ್ರದೇಶದ ವಿಜಯವಾಡದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕಾಮತ್‌ನಿಂದ 50 ಲಕ್ಷ ರೂಪಾಯಿ ಮೌಲ್ಯದ 502 ಗ್ರಾಂ ಚಿನ್ನಾಭರಣ, 99.5 ಗ್ರಾಂ ತೂಕದ ವಜ್ರದ ಆಭರಣ, 200 ಗ್ರಾಂ ಬೆಳ್ಳಿ ಪೂಜಾ ಸಾಮಗ್ರಿಗಳು ಮತ್ತು 12 ಸಾವಿರ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಮಿತ್ ಜೈನ್ ಹಾಗೂ ಅವರ ಕುಟುಂಬ ಮುಂಬೈಗೆ ತೆರಳಿತ್ತು. ಈ ಸಂದರ್ಭದಲ್ಲಿ ಆರೋಪಿ ಕಾಮತ್ ಕಳವು ಮಾಡಿ ಪರಾರಿಯಾಗಿದ್ದ. ಮೂರು ದಿನಗಳ ನಂತರ ಮನೆಗೆ ಹಿಂತಿರುಗಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿ ಸುರೇಂದ್ರನ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ಬಿಹಾರಕ್ಕೆ ಹೋಗಿತ್ತು. ಆದರೆ, ಆತ ತನ್ನ ಊರಿನಲ್ಲಿ ಇರಲಿಲ್ಲ. ನಂತರ ಆಂಧ್ರಪ್ರದೇಶದ ವಿಜಯವಾಡದಲ್ಲಿ ಇದ್ದಾನೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. ವಿಜಯವಾಡದ ರೈಲು ವಿಜಯವಾಡದ ರೈಲು ನಿಲ್ದಾಣದಲ್ಲಿ ಈತನನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.