logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Crime: ಗ್ರಾಹಕರಂತೆ ನಟಿಸಿ ಚಿನ್ನಾಭರಣ ದೋಚುತ್ತಿದ್ದವರ ಬಂಧನ; ನಕಲಿ ಯುಪಿಐ ಸೃಷ್ಟಿಸಿ ವಂಚಿಸುತ್ತಿದ್ದ ಜೋಡಿ ಅರೆಸ್ಟ್‌

Bengaluru Crime: ಗ್ರಾಹಕರಂತೆ ನಟಿಸಿ ಚಿನ್ನಾಭರಣ ದೋಚುತ್ತಿದ್ದವರ ಬಂಧನ; ನಕಲಿ ಯುಪಿಐ ಸೃಷ್ಟಿಸಿ ವಂಚಿಸುತ್ತಿದ್ದ ಜೋಡಿ ಅರೆಸ್ಟ್‌

Reshma HT Kannada

Mar 18, 2024 08:38 AM IST

google News

ಗ್ರಾಹಕರಂತೆ ನಟಿಸಿ ಚಿನ್ನಾಭರಣ ದೋಚುತ್ತಿದ್ದವರ ಬಂಧನ; ನಕಲಿ ಯುಪಿಐ ಸೃಷ್ಟಿಸಿ ವಂಚಿಸುತ್ತಿದ್ದ ಜೋಡಿ ಅರೆಸ್ಟ್‌

    • ಗ್ರಾಹಕರಂತೆ ನಟಿಸಿ ಚಿನ್ನಾಭರಣ ದೋಚಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ನಕಲಿ ಯುಪಿಐ ಪಾವತಿ, ವ್ಯಾಪಾರಿಗಳನ್ನು ವಂಚಿಸುತ್ತಿದ್ದ ಆರೋಪಿಗಳು ಬ್ಯಾಡರಹಳ್ಳಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ. (ವರದಿ: ಎಚ್‌. ಮಾರುತಿ)
ಗ್ರಾಹಕರಂತೆ ನಟಿಸಿ ಚಿನ್ನಾಭರಣ ದೋಚುತ್ತಿದ್ದವರ ಬಂಧನ; ನಕಲಿ ಯುಪಿಐ ಸೃಷ್ಟಿಸಿ ವಂಚಿಸುತ್ತಿದ್ದ ಜೋಡಿ ಅರೆಸ್ಟ್‌
ಗ್ರಾಹಕರಂತೆ ನಟಿಸಿ ಚಿನ್ನಾಭರಣ ದೋಚುತ್ತಿದ್ದವರ ಬಂಧನ; ನಕಲಿ ಯುಪಿಐ ಸೃಷ್ಟಿಸಿ ವಂಚಿಸುತ್ತಿದ್ದ ಜೋಡಿ ಅರೆಸ್ಟ್‌

ಬೆಂಗಳೂರು: ಗ್ರಾಹಕರಂತೆ ನಟಿಸಿ ಚಿನ್ನಾಭರಣ ಮಳಿಗೆಯೊಂದರಲ್ಲಿ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಹೊಸಕೆರೆಹಳ್ಳಿಯ ಕೃಷ್ಣ ಬ್ಯಾಂಕರ್ಸ್ ಮತ್ತು ಜ್ಯುವೆಲರ್ಸ್ ಮಳಿಗೆಯಲ್ಲಿ ಮಾರ್ಚ್ 4 ರಂದು ಕಳ್ಳತನ ನಡೆದಿತ್ತು. ಈ ಬಗ್ಗೆ ಜ್ಯುವೆಲರ್ಸ್‌ನ ಮಾಲೀಕರು ದೂರು ನೀಡಿದ್ದರು. ಆರೋಪಿಗಳಾದ ಮುಬಾರಕ್ ಹಾಗೂ ಅಸ್ಗರ್‌ನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳಿಂದ 2.70 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಚಿನ್ನದ ಉಂಗುರ ಖರೀದಿಸುವ ನೆಪದಲ್ಲಿ ಕೃಷ್ಣ ಬ್ಯಾಂಕರ್ಸ್ ಮತ್ತು ಜ್ಯುವೆಲರ್ಸ್ ಮಳಿಗೆಗೆ ಭೇಟಿ ನೀಡಿದ್ದರು. ವಿವಿಧ ವಿನ್ಯಾಸದ ಉಂಗುರಗಳನ್ನು ತೋರಿಸುವಂತೆ ಸಿಬ್ಬಂದಿಗೆ ಹೇಳಿದ್ದರು. ಸಿಬ್ಬಂದಿಯು, ಉಂಗುರಗಳನ್ನು ತೆಗೆದು ತೋರಿಸುವುದರಲ್ಲಿ ಮಗ್ನರಾಗಿದ್ದಾಗ ಚಿನ್ನದ ಉಂಗುರವನ್ನು ಆರೋಪಿಗಳು ಕದ್ದು ಬಚ್ಚಿಟ್ಟುಕೊಂಡಿದ್ದರು. ಅಂತಿಮವಾಗಿ ಯಾವ ಉಂಗುರವೂ ತಮಗೆ ಹೊಂದುತ್ತಿಲ್ಲ ಎಂದು ಹೇಳಿ ಮಳಿಗೆಯಿಂದ ಪರಾರಿಯಾಗಿದ್ದರು. ಇವರು ಹೊರ ಹೋದ ನಂತರ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಉಂಗುರ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಿಸಿ ಟಿವಿ ಕ್ಯಾಮೆರಾದಲ್ಲಿ ಆರೋಪಿಗಲು ಕಳವು ಮಾಡಿರುವುದು ಸೆರೆಯಾಗಿತ್ತು. ಅದೇ ಸುಳಿವನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನ ಮಾಡಿದ ನಂತರ ಆರೋಪಿಗಳು ತಮಿಳುನಾಡಿಗೆ ಪರಾರಿಯಾಗಿ ಅಲ್ಲಿ ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಖಚಿತ ಸುಳಿವನ್ನು ಆಧರಿಸಿ ಪೊಲೀಸರ ತಂಡ ತಮಿಳುನಾಡಿಗೆ ತೆರಳಿತ್ತು. ಈ ಆರೋಪಿಗಳನ್ನು ಬಂಧಿಸುವಾಗ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

ನಕಲಿ ಯುಪಿಐ ಪಾವತಿ, ವ್ಯಾಪಾರಿಗಳನ್ನು ವಂಚಿಸುತ್ತಿದ್ದ ಇಬ್ಬರ ಬಂಧನ

ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಮೂಲಕ ಹಣ ಪಾವತಿಸಲಾಗಿದೆ ಎಂದು ನಕಲಿ ರಶೀದಿಗಳನ್ನು ತೋರಿಸಿ ವ್ಯಾಪಾರಿಗಳನ್ನು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಯುಪಿಐ ನಕಲಿ ರಶೀದಿ ಹೆಸರಿನಲ್ಲಿ ವಂಚಿಸಲಾಗಿದೆ ಎಂದು ವ್ಯಾಪಾರಿಯೊಬ್ಬರು ನೀಡಿದ್ದರು. ಈ ದೂರಿನಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ನಂತರ ತನಿಖೆ ಕೈಗೊಂಡ ಪೋಲಿಸರು ಆರೋಪಿಗಳಾದ ನಂದನ್ ಹಾಗೂ ಕಲ್ಪಿತಾ ಎಂಬುವವರನ್ನು ಬಂಧಿಸಿದ್ದಾರೆ.

ಸ್ನೇಹಿತರಾಗಿದ್ದ ಇವರಿಬ್ಬರೂ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸಾಮಾನ್ಯವಾಗಿ ವಹಿವಾಟಿನಲ್ಲಿ ಯುಪಿಐ ಮೂಲಕ ಹಣ ವರ್ಗಾವಣೆಗೆ ಅವಕಾಶವಿದೆ.

ಆರೋಪಿಗಳು ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಾ, ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು.

ಇತ್ತೀಚೆಗೆ ಮಾಗಡಿ ರಸ್ತೆಯ ಗೊಲ್ಲರಹಟ್ಟಿಯಲ್ಲಿರುವ ಪರಮೇಶ್ವರ್ ಬ್ಯಾಂಕರ್ಸ್ ಆ್ಯಂಡ್ ಜುವೆಲರ್ಸ್ ಅಂಗಡಿಗೆ ಆರೋಪಿಗಳು ಗ್ರಾಹಕರ ಸೋಗಿನಲ್ಲಿ ಭೇಟಿ ನೀಡಿದ್ದರು.

ಶ್ರೀಮಂತರಂತೆ ಉಡುಪು ತೊಟ್ಟಿದ್ದ ಇವರು ಭಾರಿ ಪ್ರಮಾಣದಲ್ಲಿ ಚಿನ್ನಾಭರಣ ಖರೀದಿಸುವವರಂತೆ ಬಿಂಬಿಸಿಕೊಂಡಿದ್ದರು.

ಸಿಬ್ಬಂದಿಯು ಇವರಿಗೆ ವಿವಿಧ ವಿನ್ಯಾಸದ ಆಭರಣಗಳನ್ನು ತೋರಿಸಿದ್ದರು. ಅಂತಿಮವಾಗಿ ಆರೋಪಿಗಳು ರೂ. 1.65 ಲಕ್ಷ ಚಿನ್ನದ ಆಭರಣಗಳನ್ನು ಖರೀದಿಸಿದ್ದರು.

ತಮ್ಮ ಬಳಿ ಅಷ್ಟೊಂದು ನಗದು ಇಲ್ಲ ಎಂದು ಹೇಳಿದ್ದ ಆರೋಪಿಗಳು, ಆ್ಯಪ್‌ವೊಂದರ ಮೂಲಕ ಹಣ ವರ್ಗಾಯಿಸಿರುವುದಾಗಿ ಸಿಬ್ಬಂದಿಯನ್ನು ನಂಬಿಸಿದ್ದರು. ಹಣ ವರ್ಗಾವಣೆಯಾಗಿರುವುದಕ್ಕೆ ಸಾಕ್ಷಿಯಾಗಿ ರಶೀದಿಯೊಂದನ್ನು ತೋರಿಸಿ ಅಂಗಡಿಯಿಂದ ಹೊರಟು ಹೋಗಿದ್ದರು. ಸ್ವಲ್ಪ ಹೊತ್ತಿನ ನಂತರ ಮಳಿಗೆ ಸಿಬ್ಬಂದಿಯು ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಿದ್ದರು. ಆದರೆ ಯಾವುದೇ ಹಣ ಖಾತೆಗೆ ಜಮಾ ಆಗಿರಲಿಲ್ಲ.

ಮೋಸ ಹೋಗಿರುವುದನ್ನು ಅರಿತುಕೊಂಡ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಳವು ಮಾಡಿದ್ದ ಚಿನ್ನಾಭರಣಗಳನ್ನು ಆರೋಪಿಗಳು, ಬೇರೆ ಗಿರವಿ ಅಂಗಡಿಗಳಲ್ಲಿ ಅಡವಿಟ್ಟಿದ್ದರು. ಅದರಿಂದ ಬಂದ ಹಣವನ್ನು ಹಂಚಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೂ ಆರೋಪಿಗಳು ಇದೇ ಮಾದರಿಯಲ್ಲಿ ಕಳವು ಮಾಡಿರುವುದು ಪತ್ತೆಯಾಗಿದೆ. ಆರೋಪಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಹೆಚ್ಚಿನ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ