ಬೆಂಗಳೂರು ಉದ್ಯೋಗ ಮೇಳ 2024 ಇಂದು, ನಾಳೆ; ಯುವ ಸಮೃದ್ಧಿ ಸಮ್ಮೇಳನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ, 500ಕ್ಕೂ ಹೆಚ್ಚು ಕಂಪನಿಗಳು ಭಾಗಿ
Feb 26, 2024 07:33 AM IST
ಬೆಂಗಳೂರು ಉದ್ಯೋಗ ಮೇಳ 2024 ಇಂದು, ನಾಳೆ ನಡೆಯಲಿದೆ. ಯುವ ಸಮೃದ್ಧಿ ಸಮ್ಮೇಳನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದು 500ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗುತ್ತಿವೆ. (ಸಾಂಕೇತಿಕ ಚಿತ್ರ)
ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಂಗಳೂರು ಉದ್ಯೋಗ ಮೇಳ 2024 (Bengaluru Job Fair) ಇಂದು, ನಾಳೆ ನಡೆಯಲಿದೆ. ಈ ಯುವ ಸಮೃದ್ಧಿ ಸಮ್ಮೇಳನಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, 500ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗುತ್ತಿವೆ. ಈಗಾಗಲೇ 31,000ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಈ ಸಮ್ಮೇಳನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಬೆಂಗಳೂರು: ಕರ್ನಾಟಕದ ನಿರುದ್ಯೋಗಿ ಯುವಜನತೆಗೆ ಸೂಕ್ತ ಕೌಶಲ್ಯಾಧಾರಿತ ತರಬೇತಿ ನೀಡಿ, ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇಂದು ಮತ್ತು ನಾಳೆ (ಫೆ.26 ಮತ್ತು 27 ) ಬೆಂಗಳೂರು ಉದ್ಯೋಗ ಮೇಳ 2024 ನಡೆಯಲಿದೆ. ಕೌಶಲ್ಯಾಭಿವೃದ್ಧಿ ಇಲಾಖೆ ಇದನ್ನು “ಯುವ ಸಮೃದ್ಧಿ ಸಮ್ಮೇಳನ 2024” ಹೆಸರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದೆ. ಎರಡು ದಿನಗಳ ಉದ್ಯೋಗ ಮೇಳದಲ್ಲಿ 50,000 ಯುವಜನರಿಗೆ ಉದ್ಯೋಗ ಒದಗಿಸುವ ಗುರಿ ಇಟ್ಟುಕೊಂಡಿದೆ ಸರ್ಕಾರ.
ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ಉದ್ಯಮಶೀಲತೆ ಇಲಾಖೆಯ ವೆಬ್ ಸೈಟ್ ಮೂಲಕ ಈಗಾಗಲೇ 60,000 ಕ್ಕೂ ಅಧಿಕ ಉದ್ಯೋಗಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 1.10 ಲಕ್ಷಕ್ಕೂ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವುದಕ್ಕೆ 500ಕ್ಕೂ ಹೆಚ್ಚು ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುತ್ತಿವೆ.
ಈ ಉದ್ಯೋಗ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೋಮಾ, ಐಟಿಐ, ಐಟಿಐ, ಪದವಿ, ಸ್ನಾತಕೋತ್ತರ ಪದವೀಧರರು ಸೇರಿ ಎಲ್ಲ ಶೈಕ್ಷಣಿಕ ಹಂತದ ಶಿಕ್ಷಣ ಪಡೆದ ಅಭ್ಯರ್ಥಿಗಳೂ ಇದ್ದಾರೆ. ಉತ್ತೀರ್ಣರಾದವರಷ್ಟೇ ಅಲ್ಲದೆ, ಅನುತ್ತೀರ್ಣಗೊಂಡವರಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅವರವರ ಶೈಕ್ಷಣಿಕ ಅರ್ಹತೆ, ಕೌಶಲ ತಿಳಿವಳಿಕೆ ಆಧರಿಸಿ ಕೌಶಲ ತರಬೇತಿಯನ್ನೂ ಕೊಡಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಇ-ಕೌಶಲ್ಯ ಕಲಿಕೆ ವ್ಯವಸ್ಥೆ, ಇಂಟರ್ನ್‌ಶಿಪ್, ಅಪ್ರೆಂಟಿಸ್‌ಶಿಪ್‌ಗೂ ಅವಕಾಶ
ಒಂದೇ ಸೂರಿನಡಿಯಲ್ಲಿ ವೃತ್ತಿಪರ ಕೌಶಲ್ಯಕ್ಕೆ ಅನುಗುಣವಾಗಿ ಉದ್ಯೋಗಾವಕಾಶ ಕಲ್ಪಿಸುವುದು ಸಮ್ಮೇಳನದ ಉದ್ದೇಶ. ಪ್ರಸ್ತುತ ಕೈಗಾರಿಕಾ ಅಗತ್ಯಗಳಿಗೆ ಅನುಗುಣವಾಗಿ ತರಬೇತಿ ನೀಡಿ ಮಾನವಸಂಪನ್ಮೂಲ ಪೂರೈಸುವುದಕ್ಕೆ ಈ ಸಮ್ಮೇಳನದ ಮೂಲಕ ಗಮನ ಕೊಡಲಾಗುತ್ತಿದೆ. ಇಂಟರ್ನ್‌ಶಿಪ್, ಅಂಪ್ರೆಂಟಿಸ್‌ಶಿಪ್, ಲೈವ್ ಪ್ರಾಜೆಕ್ಟ್, ಗಿಗ್ ವರ್ಕ್ ಮತ್ತು ಕಲಿಕೆಗೂ ಪ್ರೋತ್ಸಾಹ ನೀಡುವ ರೀತಿಯಲ್ಲಿ ಸಮ್ಮೇಳನವನ್ನು ರೂಪಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಭವಿಷ್ಯದ ಕೌಶಲ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ 30ಕ್ಕೂ ಹೆಚ್ಚು ಕೋರ್ಸ್‌ಗಳ ತಿಳಿವಳಿಕೆ ಪಡೆಯಲು ಕೌಶಲ ಹೊಂದಲು ಆಕಾಂಕ್ಷಿಗಳಿಗೆ 'ಇ-ಕೌಶಲ್ಯ ಲರ್ನಿಂಗ್' ಮ್ಯಾನೇಜ್‌ಮೆಂಟ್ ಸಿಸ್ಟಮ್' ಎಂಬ ಆನ್ ಲೈನ್ ವೇದಿಕೆಯನ್ನು ಒದಗಿಸಲಾಗಿದೆ. ಇನ್‌ಫೋಸಿಸ್ ಸ್ಟಿಂಗ್ ಬೋರ್ಡ್, ಆರ್ ಸ್ಟಿಲ್ಸ್ ಇನ್ ಸ್ಟಿಟ್ಯೂಟ್, ಕೆರಿಯರ್ ಪ್ರಪ್, ಐಬಿಎಂ ಸ್ಟಿಲ್ಸ್ ಬ್ಯುಲ್ಸ್, ಅಮೆರಿಕನ್ ಇಂಡಿಯನ್ ಫೌಂಡೇಶನ್, ಕ್ಲಸ್ಟ್ ಅಲಯನ್ಸ್ ಸಂಸ್ಥೆಗಳ ಮೂಲಕ 10,000ಕ್ಕೂ ಅಧಿಕ ವಿಡಿಯೋ ಕೋರ್ಸ್ ಇದಕ್ಕಾಗಿ ಜೋಡಿಸಲಾಗಿದೆ ಎಂದು ಸರ್ಕಾರ ವಿವರಿಸಿದೆ.
ಬೆಂಗಳೂರು ಉದ್ಯೋಗ ಮೇಳಕ್ಕೆ ಇಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ
ಬೆಂಗಳೂರು ಉದ್ಯೋಗ ಮೇಳ (ಯುವ ಸಮೃದ್ಧಿ ಸಮ್ಮೇಳನ 2024) ವನ್ನು ಸೋಮವಾರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೇಳದ ಲಾಂಛನ ಅನಾವರಣಗೊಳಿಸುವರು. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಸೇರಿದಂತೆ ಇನ್ನಿತರರು ಪಾಲ್ಗೊಳ್ಳವರು.
ಎಚ್‌ಸಿಎಲ್' ಟೆಕ್, ಇನ್ ಫೋಸಿಸ್ ಲಿ., ಶಿಂಡ್ಲರ್ ಇಂಡಿಯಾ, ಮೊಲೆಕ್ಸ್ ಇಂಡಿಯಾ ವೈ.ಲಿ., ಎಚ್ ಡಿಎಫ್ ಡಿ ಬ್ಯಾಂಕ್, ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ), ಬಯೋಕಾನ್ ಬಯೋಲಜಿಕ್ಸ್ ಲಿ., ಆಂಪಲ್ ಟೆಕ್ನಾಲಜೀಸ್, ಮಹೀಂದ್ರಾ ಏರೋಸ್ಪೇಸ್, ನಂದಿ ಟೊಯೋಟಾ, ಟಾಟಾ ಸಮೂಹ ಸಂಸ್ಥೆ ಸೇರಿ ಮೇಳದಲ್ಲಿ ಹಲವು ಪ್ರತಿಷ್ಠಿತ ಕಂಪನಿಗಳು ಭಾಗಿಯಾಗುತ್ತಿವೆ.
(This copy first appeared in Hindustan Times Kannada website. To read more like this please logon to kannada.hindustantimes.com)