Flood Alert; ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಘಟಪ್ರಭಾ, ಭದ್ರಾ ನದಿಗಳು, ಮುಧೋಳ, ಹೊಳೆಹೊನ್ನೂರು ಭಾಗದಲ್ಲಿ ಪ್ರವಾಹ ಭೀತಿ ಹೆಚ್ಚಳ
Aug 02, 2024 03:12 PM IST
ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯ ಹರಿವಿನ ಪ್ರಮಾಣವು ಗಣನೀಯವಾಗಿ ಏರಿದ್ದು ಪ್ರವಾಹ ಪರಿಸ್ಥಿತಿ ಇದೆ.
Karnataka Flood Alert; ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿದ್ದು, ಜಲಾಶಯಗಳು ಬಹುತೇಕ ಭರ್ತಿಯಾಗತೊಡಗಿವೆ. ಕರ್ನಾಟಕದ 12 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮುಧೋಳ, ಹೊಳೆಹೊನ್ನೂರು ಭಾಗದಲ್ಲಿ ಹೆಚ್ಚು ಪ್ರವಾಹ ಪರಿಸ್ಥಿತಿ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಬೆಂಗಳೂರು: ಕರ್ನಾಟಕದಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ ಹೆಚ್ಚೇ ಬೀಳುತ್ತಿದ್ದು, ವಿವಿಧ ನದಿ ದಂಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ರಾಜ್ಯದ 12 ನದಿಗಳು ಸಾಮಾನ್ಯ ಮಟ್ಟ ಮೀರಿ ಅಪಾಯಕಾರಿ ಮಟ್ಟದಲ್ಲಿ ಪ್ರವಹಿಸುತ್ತಿದ್ದು, ಕೃಷ್ಣಾ, ಕಾವೇರಿ, ಭದ್ರಾ ಜಲಾನಯನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲವು ದಿನಗಳಿಂದ ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ವ್ಯಾಪಕ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ, ನಾಶ ನಷ್ಟಗಳು ಸಂಭವಿಸಿವೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಪರಿಹಾರ ಕೇಂದ್ರವು ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿ ಆಧರಿಸಿ ಕೆಲವು ಮುನ್ಸೂಚನೆಗಳನ್ನು ನೀಡಿದ್ದು, ಇದರಂತೆ ಮುಂದಿನ 5 ದಿನಗಳ ಅವಧಿಯಲ್ಲಿ ದಕ್ಷಿಣ ಗುಜರಾತ್ ಮತ್ತು ಕೇರಳ ರಾಜ್ಯಗಳ ಕರಾವಳಿ ಸಮುದ್ರಗಳಲ್ಲಿ ಸರಾಸರಿ ಸಮುದ್ರಮಟ್ಟದಲ್ಲಿ ಉಂಟಾದ ಮೇಲುಬ್ಬರದ ಪರಿಣಾಮ ರಾಜ್ಯದ ಕರಾವಳಿ ಮತ್ತು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಇಂದು ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಅಲ್ಲಲ್ಲಿ ಅತಿಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಭಾಗದಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ. ಆಗಸ್ಟ್ 3 ಮತ್ತು 4 ರಂದು ಭಾರಿ ಮಳೆ, ಇನ್ನುಳಿದ ದಿನಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಒಳನಾಡು ಜಿಲ್ಲೆಗಳಿಗೆ, ಇಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ, ಇನ್ನುಳಿದ ದಿನಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಕೆಲವೆಡೆ ರಸ್ತೆ ಅಡಚಣೆಗಳು, ಹಠಾತ್ ಪ್ರವಾಹ ಮತ್ತು ಭೂಕುಸಿತವುಂಟಾಗುವ ಸಾಧ್ಯತೆಗಳಿದೆ. ಹೆಚ್ಚಿನ ಮಳೆಯಿಂದಾಗಿ ನದಿಪಾತ್ರಗಳಿಗೆ ಹೆಚ್ಚಿನ ಒಳಹರಿವು ಕಂಡುಬರಲಿದೆ. ಅದ್ದರಿಂದ ರಾಜ್ಯದ ಕರಾವಳಿ ಮತ್ತು ಮಲೆನಾಡು ಹಾಗೂ ನದಿತೀರ ಪ್ರದೇಶದ ಜನವಸತಿಗಳು ಜಾಗ್ರತೆ ವಹಿಸಲು ಸೂಚಿಸಿದೆ.
ಮುಧೋಳ, ಹೊಳೆಹೊನ್ನೂರು ಭಾಗದಲ್ಲಿ ಗಂಭೀರ ಪ್ರವಾಹ ಪರಿಸ್ಥಿತಿ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಇಂದು (ಆಗಸ್ಟ್ 2) ಬೆಳಗ್ಗೆ 10 ಗಂಟೆಗೆ ಇದ್ದ ಪ್ರವಾಹ ಪರಿಸ್ಥಿತಿ ಸನ್ನಿವೇಶದ ವಿವರ ಇಲ್ಲಿದೆ.
ಗಂಭೀರ ಪ್ರವಾಹ ಪರಿಸ್ಥಿತಿ ಎಲ್ಲೆಲ್ಲಿ: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಘಟಪ್ರಭಾ ಹರಿಯುವ ಬಾಗಲಕೋಟೆ ಜಿಲ್ಲೆಯ ಮುಧೋಳ, ಭದ್ರಾ ನದಿ ಹರಿಯುವ ಶಿವಮೊಗ್ಗದ ಹೊಳೆಹೊನ್ನೂರು ಪ್ರದೇಶದಲ್ಲಿ ಗಂಭೀರ ಪ್ರವಾಹ ಪರಿಸ್ಥಿತಿ ಇದ್ದು ಸ್ಥಿರವಾಗಿದೆ. ಇನ್ನುಳಿದಂತೆ, ಕೃಷ್ಣಾ ಜಲಾನಯನ ಪ್ರದೇಶದ ತುಂಗಭದ್ರಾ ನದಿ ಹರಿಯುವ ಹಾವೇರಿ ಜಿಲ್ಲೆಯ ಹರಳಹಳ್ಳಿ, ಚಿಕ್ಕಮಗಳೂರಿನ ಲಕ್ಕವಲ್ಲಿ ಪ್ರದೇಶದಲ್ಲಿ, ಕಾವೇರಿ ಜಲಾನಯನ ಪ್ರದೇಶದ ಕಾವೇರಿ ನದಿ ಹರಿಯುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಗಂಭೀರ ಪ್ರವಾಹ ಪರಿಸ್ಥಿತಿ ಇದ್ದರೂ, ನೀರಿನ ಮಟ್ಟ ಇಳಿಯತೊಡಗಿದೆ.
ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ಪ್ರವಾಹ ಎಲ್ಲೆಲ್ಲಿ: ಕೃಷ್ಣಾ ಜಲಾನಯನ ಪ್ರದೇಶದ ಘಟಪ್ರಭಾ ನದಿ ಹರಿಯುವ ಗೋಕಾಕ್ ಜಲಪಾತ, ಹಾವೇರಿ ಜಿಲ್ಲೆಯಲ್ಲಿ ವರದಾ ನದಿ ಹರಿಯುವ ಮರೋಳ್ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಸ್ಥಿರವಾಗಿದೆ. ತುಂಗಾ ನದಿ ಹರಿಯುವ ಐರಾಣಿ ಪ್ರದೇಶದಲ್ಲಿ ಪ್ರವಾಹ ತಗ್ಗತೊಡಗಿದೆ. ತುಂಗಭದ್ರಾ ನದಿ ಹರಿಯುವ ದಾವಣಗೆರೆಯ ಹೊನ್ನಾಳಿಯಲ್ಲಿ ಪ್ರವಾಹದ ಮಟ್ಟ ಏರತೊಡಗಿದೆ.
ಇನ್ನು ಕಾವೇರಿ ಜಲಾನಯನ ಪ್ರದೇಶದ ವಯನಾಡು ಜಿಲ್ಲೆ ಮುತ್ತಂಕೆರೆಯಲ್ಲಿ ಕಬಿನಿ ನದಿ ಮೈದುಂಬಿ ಹರಿಯುತ್ತಿದ್ದು ನೀರಿನ ಮಟ್ಟ ಇಳಿಯತೊಡಗಿದೆ. ಅದೇ ರೀತಿ, ದಕ್ಷಿಣ ಕನ್ನಡದಲ್ಲಿ ಬಂಟ್ವಾಳದಲ್ಲಿ ನೇತ್ರಾವತಿ, ಅಡ್ಡೂರಿನಲ್ಲಿ ಗುರುಪುರ ನದಿ ಪ್ರವಾಹ ಮಟ್ಟ ಇಳಿಕೆಯಾಗತೊಡಗಿದೆ. ಉಡುಪಿ ಜಿಲ್ಲೆಯಲ್ಲಿ ಸಣೂರು ಪ್ರದೇಶದಲ್ಲಿ ಶಾಂಭವಿ ನದಿ ಪ್ರವಾಹ ಸ್ಥಿರವಾಗಿದ್ದು, ಎಣ್ಣೆಹೊಳೆಯಲ್ಲಿ ಸ್ವರ್ಣಾ ನದಿ ಪ್ರವಾಹ ಏರತೊಡಗಿದೆ. ಉತ್ತರ ಕನ್ನಡ ಜಿಲ್ಲೆಯ ಸಂತೆಗುಳಿಯಲ್ಲಿ ಅಘನಾಶಿನಿ ಹೊಳೆಯ ಪ್ರವಾಹ ಪರಿಸ್ಥಿತಿ ಏರತೊಡಗಿದೆ.