Ramanagara Rename: ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ; ಹೆಸರು ಬದಲಾವಣೆಗೆ ಕ್ಯಾಬಿನೆಟ್ ಒಪ್ಪಿಗೆ, ಈಡೇರಿತು ಡಿಕೆಶಿ ಬೇಡಿಕೆ
Jul 26, 2024 05:06 PM IST
ರಾಮನಗರ ಹೆಸರು ಬದಲಾವಣೆ
- Rename Ramanagara District: ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಬದಲಾಯಿಸಬೇಕೆಂದು ಕಳೆದ ಹಲವು ಸಮಯದಿಂದ ಆಗ್ರಹಿಸುತ್ತಿದ್ದ ಡಿಕೆ ಶಿವಕುಮಾರ್ ಅವರ ಬೇಡಿಕೆ ಕೊನೆಗೂ ಈಡೇರಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾಯಿಸುವ ನಿರ್ಧಾರಕ್ಕೆ ಕ್ಯಾಬಿನೆಟ್ ಸಮ್ಮತಿ ನೀಡಿದೆ.
ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಬದಲಾಯಿಸಬೇಕೆಂದು ಕಳೆದ ಹಲವು ಸಮಯದಿಂದ ಆಗ್ರಹಿಸುತ್ತಿದ್ದ ಡಿಕೆ ಶಿವಕುಮಾರ್ ಅವರ ಬೇಡಿಕೆ ಕೊನೆಗೂ ಈಡೇರಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾಯಿಸುವ ನಿರ್ಧಾರಕ್ಕೆ ಕ್ಯಾಬಿನೆಟ್ ಸಮ್ಮತಿ ನೀಡಿದೆ.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಕರ್ನಾಟಕ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ತಿಳಿಸಿದ್ದಾರೆ. ಎರಡು ತಿಂಗಳ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಮನಗರವನ್ನು ಬೆಂಗಳೂರಿನೊಂದಿಗೆ ವಿಲೀನಗೊಳಿಸಿ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಈ ನಿರ್ಧಾರಕ್ಕೆ ಬರಲಾಗಿದೆ.
"ರಾಮನಗರ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಲು ಉದ್ದೇಶಿಸಲಿದೆ. ಅಲ್ಲಿನ ಜನರ ಬಹುದಿನಗಳ ಬೇಡಿಕೆಯನ್ನು ಈ ಮೂಲಕ ಈಡೇರಿಸಲಾಗುತ್ತಿದೆ. ಇದು ಚುನಾವಣೆ ದೃಷ್ಟಿಯಿಂದ ಮಾಡಿರುವುದಲ್ಲ. ಹೆಸರು ಬದಲಾವಣೆ ಮಾತ್ರ ಮಾಡಲಾಗಿದೆ. ಉಳಿದಂತೆ ಎಲ್ಲವೂ ಈಗಿನಂತೆ ಇರಲಿದೆ" ಎಂದು ಎಚ್‌ಕೆ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಹೆಸರಿನಿಂದ ರಾಮ್ ತೆಗೆಯುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ಬಿಜೆಪಿ ಈ ಹಿಂದೆ ಆರೋಪಿಸಿತ್ತು. ಮೂಲತಃ ಈ ಜಿಲ್ಲೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದ್ದು, 2016 ರಲ್ಲಿ ರಾಮನಗರ ಎಂದು ಮರುನಾಮಕರಣ ಮಾಡಲಾಗಿತ್ತು. ಇದೀಗ ಮತ್ತೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಕ್ಯಾಬಿನೆಟ್ ಸಮ್ಮತಿ ನೀಡಿದೆ.
ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಜೆಕ್ಟ್‌ಗೂ ಈ ಹೆಸರು ಬದಲಾವಣೆಗೂ ಸಂಬಂಧವಿದೆ ಎನ್ನಲಾಗಿದೆ. ಬೃಹತ್ ಬೆಂಗಳೂರು ಯೋಜನೆಯ ಅಭಿವೃದ್ಧಿ ಗುರಿಯಿಂದಾಗಿ ಬೆಂಗಳೂರಿನ ನಗರವನ್ನು ವಿಸ್ತರಿಸುವ ಉದ್ದೇಶ ಹೊಂದಿದೆ. ಇದೇ ಕಾರಣಕ್ಕೆ ರಾಮನಗರವನ್ನೂ ಬೆಂಗಳೂರಿನ ಜತೆ ಸಂಯೋಜಿಸುವ ವಿಶಾಲ ಪ್ರಯತ್ನದ ಭಾಗವಾಗಿದೆ.
ಈಗಾಗಲೇ ರಾಮನಗರವನ್ನು ಬೆಂಗಳೂರಿಗೆ ಸೇರಿಸಲಾಗುತ್ತದೆ ಎಂಬ ಸುದ್ದಿಗಳಿಂದ ಅಲ್ಲಿನ ರಿಯಲ್ ಎಸ್ಟೆಟ್ ಚಟುವಟಿಕೆಗಳು ಗರಿಗೆದರಿವೆ. ರಾಮನಗರ ಜಿಲ್ಲೆಯ ಮಣ್ಣಿಗೆ ಈಗ ಬಂಗಾರದ ಬೆಲೆಯಿದೆ. ಇದೀಗ ಹೆಸರು ಬದಲಾವಣೆಗೆ ಕ್ಯಾಬಿನೆಟ್ ಸಮ್ಮತಿ ನೀಡಿರುವುದರಿಂದ ಅಲ್ಲಿನ ಭೂಮಿಯ ಬೆಲೆ ಇನ್ನಷ್ಟು ಏರಿಕೆ ಕಾಣುವ ಸೂಚನೆಗಳಿವೆ.
ಹೆಚ್ಚಾಗಿದೆ ರಾಮನಗರದ ಭೂಮಿಯ ದರ
ಈ ಹಿಂದೆ ಡಿಕೆ ಶಿವಕುಮಾರ್ ಅವರು ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸಲಾಗುವುದು ಎಂದು ಹೇಳಿಕೆ ನೀಡಿದ ಬಳಿಕ ರಾಮನಗರದ ಭೂಮಿಯ ದರ ಗಮನಾರ್ಹವಾಗಿ ಏರಿಕೆ ಕಂಡಿದೆ. ಡಿಕೆಶಿ ಅವರು ಘೋಷಣೆ ಮಾಡಿದ ಒಂದು ವಾರದಲ್ಲಿ ಶೇ.20ರಿಂದ 50ರವರೆಗೆ ಭೂಮಿಯ ಬೆಲೆ ಏರಿಕೆಯಾಗಿದೆ ಎಂದರೆ ಅಚ್ಚರಿಯಾದೀತು. ರಾಮನಗರಕ್ಕಿಂತಲೂ ಕನಕಪುರದ ಭೂಮಿಯ ಬೆಲೆ ಏರಿಕೆ ಕಂಡಿದೆ. ಕಾರಣ ಬೆಂಗಳೂರಿಗೆ ಅತಿ ಹೆಚ್ಚು ಸಮೀಪವಿರುವುದು ಮೊದಲ ಕಾರಣವಾದರೆ ಶಿವಕುಮಾರ್ ಅವರ ಸ್ವಕ್ಷೇತ್ರವಾಗಿರುವುದು, ಡಿಸಿಎಂ ಮತ್ತು ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿರುವುದು ಇತರ ಕಾರಣಗಳಾಗಿವೆ ಎಂದು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರು ಅಭಿಪ್ರಾಯಪಡುತ್ತಾರೆ.