ಡಿಕೆ ಶಿವಕುಮಾರ್‌, ವಿಜಯಲಕ್ಷ್ಮಿ ಭೇಟಿ ಹಿಂದಿನ ಕಾರಣ ನಟ ದರ್ಶನ್‌ ಅಲ್ವಂತೆ; ಡಿಕೆಶಿ ಹೇಳಿದ್ದೇನು, ಚಾರ್ಜ್‌ಶೀಟ್‌ ಸಲ್ಲಿಕೆ ಯಾವಾಗ?
ಕನ್ನಡ ಸುದ್ದಿ  /  ಮನರಂಜನೆ  /  ಡಿಕೆ ಶಿವಕುಮಾರ್‌, ವಿಜಯಲಕ್ಷ್ಮಿ ಭೇಟಿ ಹಿಂದಿನ ಕಾರಣ ನಟ ದರ್ಶನ್‌ ಅಲ್ವಂತೆ; ಡಿಕೆಶಿ ಹೇಳಿದ್ದೇನು, ಚಾರ್ಜ್‌ಶೀಟ್‌ ಸಲ್ಲಿಕೆ ಯಾವಾಗ?

ಡಿಕೆ ಶಿವಕುಮಾರ್‌, ವಿಜಯಲಕ್ಷ್ಮಿ ಭೇಟಿ ಹಿಂದಿನ ಕಾರಣ ನಟ ದರ್ಶನ್‌ ಅಲ್ವಂತೆ; ಡಿಕೆಶಿ ಹೇಳಿದ್ದೇನು, ಚಾರ್ಜ್‌ಶೀಟ್‌ ಸಲ್ಲಿಕೆ ಯಾವಾಗ?

ಕನ್ನಡ ನಟ ದರ್ಶನ್‌ ಜೈಲಿನಲ್ಲಿದ್ದು, ಇದೇ ಸಮಯದಲ್ಲಿ ಇಂದು ದರ್ಶನ್‌ ಧರ್ಮಪತ್ನಿ ವಿಜಯಲಕ್ಷ್ಮಿ ಅವರು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ಕಾರಣಗಳು ಈಗ ಬಹಿರಂಗವಾಗಿದೆ.

ಡಿಕೆ ಶಿವಕುಮಾರ್‌, ವಿಜಯಲಕ್ಷ್ಮಿ ಭೇಟಿ ಹಿಂದಿನ ಕಾರಣ ನಟ ದರ್ಶನ್‌ ಅಲ್ಲ
ಡಿಕೆ ಶಿವಕುಮಾರ್‌, ವಿಜಯಲಕ್ಷ್ಮಿ ಭೇಟಿ ಹಿಂದಿನ ಕಾರಣ ನಟ ದರ್ಶನ್‌ ಅಲ್ಲ

ಬೆಂಗಳೂರು: ಕನ್ನಡ ನಟ ದರ್ಶನ್‌ ಜೈಲಿನಲ್ಲಿದ್ದು, ಇದೇ ಸಮಯದಲ್ಲಿ ಇಂದು ದರ್ಶನ್‌ ಧರ್ಮಪತ್ನಿ ವಿಜಯಲಕ್ಷ್ಮಿ ಅವರು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ಕಾರಣಗಳು ಈಗ ಬಹಿರಂಗವಾಗಿದೆ. ಈ ಕುರಿತು ಡಿಕೆ ಶಿವಕುಮಾರ್‌ ಒಂದಿಷ್ಟು ವಿವರಗಳನ್ನು ಮಾಧ್ಯಮಗಳಿಗೆ ನೀಡಿದ್ದಾರೆ. ಇನ್ನೊಂದೆಡೆ ಪೊಲೀಸರು ಮತ್ತು ತನಿಖಾಧಿಕಾರಿಗಳು ಚಾರ್ಜ್‌ಶೀಟ್‌ ಸಿದ್ಧಪಡಿಸುತ್ತಿದ್ದಾರೆ. ಆಗಸ್ಟ್‌ ಎರಡನೇ ವಾರ ಚಾರ್ಜ್‌ ಶೀಟ್‌ ಸಲ್ಲಿಕೆಯಾಗುವ ಸೂಚನೆಯಿದೆ.

ವಿಜಯಲಕ್ಷ್ಮಿ- ಡಿಕೆಶಿ ಭೇಟಿ

ತನ್ನ ಮಗನ ಶಾಲೆಯ ವಿಷಯವನ್ನು ಮಾತನಾಡಲು ವಿಜಯಲಕ್ಷ್ಮಿ ಆಗಮಿಸಿದ್ದರು ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ. ನಿನ್ನೆ ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿ ನನ್ನನ್ನು ವಿಜಯಲಕ್ಷ್ಮಿ ಭೇಟಿಯಾಗಲು ಆಗಮಿಸಿದ್ದರು. ಅಲ್ಲಿ ಭೇಟಿಯಾಗಲು ಆಗಿರಲಿಲ್ಲ. ನಾಳೆ ಮನೆಗೆ ಬನ್ನಿ ಎಂದು ಅವರಿಗೆ ತಿಳಿಸಿದ್ದೆ. ಅವರ ಮಗ ವಿನೀಶ್‌ ದರ್ಶನ್‌ ನಮ್ಮ ಶಾಲೆಯಲ್ಲಿ ಓದುತ್ತಿದ್ದ. ಈ ಘಟನೆ ಬಳಿಕ ಬೇರೆ ಶಾಲೆಗೆ ಸೇರಿಸಿದ್ದರು. ಇದೀಗ ಮತ್ತೆ ನಮ್ಮ ಶಾಲೆಗೆ ಸೇರಿಸಿಕೊಳ್ಳಿ ಎಂದು ಮನವಿ ಸಲ್ಲಿಸಿದ್ದಾರೆ. ಈ ಕುರಿತು ನಾನು ಪ್ರಿನ್ಸಿಪಾಲ್‌ ಜತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿರುವೆ. ಈ ವಿಷಯದ ಕುರಿತು ಮಾತನಾಡಲು ಅವರು ಬಂದಿದ್ದರು. ದರ್ಶನ್‌ ಕೇಸ್‌ ವಿಚಾರ ಮಾತನಾಡಲು ಬಂದಿರಲಿಲ್ಲ" ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

"ನಟ ದರ್ಶನ್‌ ವಿಚಾರ ಕೋರ್ಟ್‌ನಲ್ಲಿದೆ. ಕಾನೂನು ಕ್ರಮ ನಡೆಯುತ್ತಿದೆ. ಇಂತಹ ಸಮಯದಲ್ಲಿ ಮಧ್ಯೆ ಪ್ರವೇಶಿಸಲು ಆಗೋದಿಲ್ಲ. ಹೆಣ್ಣು ಮಗಳಿಗೆ ಏನಾದರೂ ಅನ್ಯಾಯವಾಗಿದ್ದರೆ ಸಹಾಯ ಮಾಡುತ್ತಿದ್ದೆ. ನಿನ್ನೆ ಹುಡುಗರು ಒತ್ತಾಯ ಮಾಡಿದ್ದರು. ಕಾನೂನು ಚೌಕಟ್ಟಿನಡಿ ಏನಾದರೂ ಸಹಾಯ ಮಾಡೋಣ ಎಂದು ನಿನ್ನೆ ಹೇಳಿದ್ದೆ. ಆದರೆ, ಇದು ಕಾನೂನು ವಿಚಾರ. ನಾನು ಮಧ್ಯೆ ಬರುವುದಿಲ್ಲ. ಶಾಲೆಗೆ ವಿನೀಶ್‌ನ ಸೇರ್ಪಡೆ ಕುರಿತು ಮಾತ್ರ ಸಹಾಯ ಮಾಡುತ್ತೇನೆ" ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ನಿರ್ದೇಶಕ ಪ್ರೇಮ್‌ ಹೇಳಿದ್ದೇನು?

ವಿಜಯಲಕ್ಷ್ಮಿ ಜತೆಗೆ ನಿರ್ದೇಶಕ ಪ್ರೇಮ್‌ ಕೂಡ ಆಗಮಿಸಿದ್ದರು. "ನನ್ನ ಮಗ ಮತ್ತು ದರ್ಶನ್‌ ಮಗ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಆದರೆ, ಅವರ ಮಗನನ್ನು ಬೇರೆ ಶಾಲೆಗೆ ಶಿಫ್ಟ್‌ ಮಾಡಿದ್ರು. ಇದೀಗ ಅವರ ಮಗನನ್ನು ಮತ್ತೆ ಡಿಕೆ ಶಿವಕುಮಾರ್‌ ಅವರ ಶಾಲೆಗೆ ಸೇರಿಸುವಂತೆ ಕೇಳಲು ಬಂದಿದ್ದಾರೆ" ಎಂದು ನಿರ್ದೇಶಕ ಪ್ರೇಮ್‌ ಹೇಳಿದ್ದಾರೆ. "ನಾನು ಆಗಾಗ ಡಿಕೆ ಶಿವಕುಮಾರ್‌ ಅವರನ್ನು ಭೇಟಿಯಾಗಲು ಬರುತ್ತ ಇರುತ್ತೇನೆ. ದರ್ಶನ್‌ ಕೇಸ್‌ಗೂ ನನಗೂ ಸಂಬಂಧ ಇಲ್ಲ" ಎಂದು ಅವರು ಹೇಳಿದ್ದಾರೆ.

ವಿಜಯಲಕ್ಷ್ಮಿ ಅವರ ಜತೆಗೆ ದರ್ಶನ್‌ ಸಹೋದರ ದಿನಕರ್‌ ತೂಗುದೀಪ ಕೂಡ ಆಗಮಿಸಿದ್ದರು. ಚಾರ್ಜ್‌ ಶೀಟ್‌ ಸಿದ್ಧವಾಗುತ್ತಿರುವ ಸಮಯದಲ್ಲಿ ವಿಜಯಲಕ್ಷ್ಮಿ ಅವರು ಡಿಕೆ ಶಿವಕುಮಾರ್‌ ಅವರನ್ನು ಭೇಟಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Whats_app_banner