Property Price: ಡಿಕೆ ಶಿವಕುಮಾರ್‌ ಹೇಳಿಕೆ ಪರಿಣಾಮ, ಗಗನಕ್ಕೇರಿದ ಕನಕಪುರ ರಾಮನಗರ ಭೂಮಿ ದರ, ಅಂದು ಚದರಡಿಗೆ 50 ರೂ, ಇಂದು 8 ಸಾವಿರ-bengaluru news dk shivakumar district rename ramanagara kanakapura land plot price booms real estate news in kannada pcp ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Property Price: ಡಿಕೆ ಶಿವಕುಮಾರ್‌ ಹೇಳಿಕೆ ಪರಿಣಾಮ, ಗಗನಕ್ಕೇರಿದ ಕನಕಪುರ ರಾಮನಗರ ಭೂಮಿ ದರ, ಅಂದು ಚದರಡಿಗೆ 50 ರೂ, ಇಂದು 8 ಸಾವಿರ

Property Price: ಡಿಕೆ ಶಿವಕುಮಾರ್‌ ಹೇಳಿಕೆ ಪರಿಣಾಮ, ಗಗನಕ್ಕೇರಿದ ಕನಕಪುರ ರಾಮನಗರ ಭೂಮಿ ದರ, ಅಂದು ಚದರಡಿಗೆ 50 ರೂ, ಇಂದು 8 ಸಾವಿರ

Ramanagara, Kanakapura Land/Plot Price Booms: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಕರೆಯುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ ಮಾತ್ರಕ್ಕೆ ರಾಮನಗರ ಜಿಲ್ಲೆಯ ಬೆಲೆ ಹೆಚ್ಚಾಗತೊಡಗಿದೆ. ಈ ಕುರಿತು ಒಂದು ವಿಶ್ಲೇಷಣೆ ಇಲ್ಲಿದೆ. (ವರದಿ: ಮಾರುತಿ ಎಚ್‌)

Property Price: ಡಿಕೆಶಿ ಹೇಳಿಕೆ ಪರಿಣಾಮ, ಗಗನಕ್ಕೇರಿದ ಕನಕಪುರ ರಾಮನಗರ ಭೂಮಿ ದರ
Property Price: ಡಿಕೆಶಿ ಹೇಳಿಕೆ ಪರಿಣಾಮ, ಗಗನಕ್ಕೇರಿದ ಕನಕಪುರ ರಾಮನಗರ ಭೂಮಿ ದರ

ಬೆಂಗಳೂರು: ಹೆಸರಿಗೆ ಶಕ್ತಿ ಇಲ್ಲ ಎಂದವರು ಯಾರು? ಕೇವಲ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಕರೆಯುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ

ನೀಡಿದ ಮಾತ್ರಕ್ಕೆ ರಾಮನಗರ ಜಿಲ್ಲೆಯ ಬೆಲೆ ಹೆಚ್ಚಾಗತೊಡಗಿದೆ. ಅರ್ಥವಾಗಲಿಲ್ಲವೇ? ಜಿಲ್ಲೆಯ ಭೂಮಿಯ ಬೆಲೆ ರಾಕೆಟ್ ವೇಗದಲ್ಲಿ ಏರತೊಡಗಿದೆ. ಈ ದಿಢೀರ್ ಬೆಲೆ ಹೆಚ್ಚಳಕ್ಕೆ ರಿಯಲ್ ಎಸ್ಟೇಟ್ ಉದ್ಯಮಿಗಳೇ ದಂಗಾಗಿ ಹೋಗಿದ್ದಾರೆ.

ಅಪ್‌ಡೇಟ್‌ (ಜುಲೈ 26,2024): Ramanagara Rename: ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ; ಹೆಸರು ಬದಲಾವಣೆಗೆ ಕ್ಯಾಬಿನೆಟ್‌ ಒಪ್ಪಿಗೆ, ಈಡೇರಿತು ಡಿಕೆಶಿ ಬೇಡಿಕೆ

ಅಂದು ಚದರಡಿಗೆ 50 ರೂಪಾಯಿ, ಇಂದು ಎಷ್ಟು ಸಾವಿರ?

ರಾಮನಗರದ ಗ್ರಾನೈಟ್ ಕಲ್ಲು ಬಂಡೆಗಳ ಮೇಲೆ 1975ರಲ್ಲಿ ರಮೇಶ್ ಸಿಪ್ಪಿ ಶೋಲೆ ಸಿನಿಮಾದ ಶೂಟಿಂಗ್ ನಡೆಸಿದಾಗ ಇಲ್ಲಿ ಚದುರ ಅಡಿಯ ಬೆಲೆ ಕೇವಲ 50 ರೂಪಾಯಿ! ನಂತರ ನಿಧಾನವಾಗಿ ಬೆಲೆ ಏರಿಕೆಯಾಗತೊಡಗಿತು. ಯಾವಾಗ 2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೋ ಆಗ ಭೂಮಿಯ ಬೆಲೆ ದಿಢೀರ್ ಹೆಚ್ಚಳ ಕಾಣಲು ಆರಂಭವಾಯಿತು.

ಅಂದಿನಿಂದ ಇಂದಿನವರೆಗೆ ಭೂಮಿ ಬೆಲೆ ಏರುತ್ತಲೇ ಇದೆಯೇ ಹೊರತು ಇಳಿಮುಖ ಕಂಡದ್ದೇ ಇಲ್ಲ. ರಾಮನಗರದ ಶಾಸಕರೂ ಆಗಿದ್ದ ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ರಾಮನಗರ ಜಿಲ್ಲಾ ಕೇಂದ್ರವಾಯಿತು. ಆಗ ಜಿಲ್ಲೆಯ ಅಭಿವೃದ್ದಿಯಾಗತೊಡಗಿತು. ಭೂಮಿಯ ಬೆಲೆ ಚದುರ ಅಡಿಗೆ 1500-2000 ರೂವರೆಗೆ ಏರಿಕೆ ಕಂಡಿತು. ಕುಮಾರಸ್ವಾಮಿ ಅಧಿಕಾರದಿಂದ ಇಳಿದಾಗ ಭೂಮಿಯ ಬೆಲೆ ನಿಂತಲ್ಲೇ ನಿಂತಿತ್ತು. 5019ರಲ್ಲಿ ಎಚ್ ಡಿಕೆ ಮುಖ್ಯಮಂತ್ರಿಯಾಗಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವನ್ನು ರಾಮನಗರಕ್ಕೆ ಸ್ಥಳಾಂತರವಾಗುವ ಘೋಷಣೆ ಮಾಡಿದಾಗ ಮತ್ತೊಮ್ಮೆ ಭೂಮಿಯ ಬೆಲೆ ಗಗನಕ್ಕೆ ಚಿಮ್ಮಿತು.

ರಾಮನಗರ ಹೆಸರು ಬದಲಾವಣೆ ಹೇಳಿಕೆ

ಇದೀಗ ಡಿಸಿಎಂ ಶಿವಕುಮಾರ್ ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಅಥವಾ ನವ ಬೆಂಗಳೂರು ಎಂದು ನಾಮಕರಣ ಮಾಡುವುದಾಗಿ ಘೋಷಣೆ ಮಾಡಿದಾಗ ಮತ್ತೊಮ್ಮೆ ಭೂಮಿಯ ಬೆಲೆ ಹೆಚ್ಚಾಗತೊಡಗಿತು. ಈ ಘೋಷಣೆಯಾದ ಒಂದು ವಾರದೊಳಗೆ ಶೇ.20ರಿಂದ 50ರವರೆಗೆ ಭೂಮಿಯ ಬೆಲೆ ಏರಿಕೆಯಾಗಿದೆ ಎಂದರೆ ಅಚ್ಚರಿಯಾದೀತು.

ರಾಮನಗರಕ್ಕಿಂತಲೂ ಕನಕಪುರದ ಭೂಮಿಯ ಬೆಲೆ ಏರಿಕೆ ಕಂಡಿದೆ. ಕಾರಣ ಬೆಂಗಳೂರಿಗೆ ಅತಿ ಹೆಚ್ಚು ಸಮೀಪವಿರುವುದು ಮೊದಲ ಕಾರಣವಾದರೆ ಶಿವಕುಮಾರ್ ಅವರ ಸ್ವಕ್ಷೇತ್ರವಾಗಿರುವುದು, ಡಿಸಿಎಂ ಮತ್ತು ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿರುವುದು ಇತರ ಕಾರಣಗಳಾಗಿವೆ ಎಂದು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರು ಅಭಿಪ್ರಾಯಪಡುತ್ತಾರೆ.

ಕನಕಪುರ ಪಟ್ಟಣ ಮತ್ತು ಸುತ್ತಮುತ್ತ ನಿವೇಶನದ ಬೆಲೆ ಚದುರ ಅಡಿಗೆ 2000 ರೂಪಾಯಿಗಳಿಂದ 5000 ರೂ.ಗಳವರೆಗೆ ಏರಿಕೆಯಾಗಿದೆ. ಬೆಂಗಳೂರಿಗೆ ಹತ್ತಿರವಾಗುತ್ತಿದ್ದಂತೆಲ್ಲಾ ಮತ್ತಷ್ಟು ಏರಿಕೆಯಾಗುತ್ತಿದೆ. ಒಂದು ವೇಳೆ ನವ ಬೆಂಗಳೂರು ಅಥವಾ ದಕ್ಷಿಣ ಬೆಂಗಳೂರು ಎಂದು ನಾಮಕರಣಗೊಂಡರೆ ಭೂಮಿಯ ಬೆಲೆ ಚ.ಅಡಿಗೆ 5000-8000 ರೂ.ವರೆಗೆ ಹೆಚ್ಚಳವಾಗುವುದು ನಿಶ್ಚಿತ ಎಂದು ಅಭಿಪ್ರಾಯಪಡುತ್ತಾರೆ. ಜೊತೆಗೆ ಈ ಜಿಲ್ಲೆಯಲ್ಲಿ ಗ್ಯಾಸ್ ಪೈಪ್ ಲೈನ್ ಹಾಕಲಾಗುತ್ತಿದೆ. ಹೈವೇಗಳ ಅಗಲೀಕರಣವಾಗುತ್ತಿದೆ.

ಮಾಗಡಿ ಮತ್ತು ರಾಮನಗರ ಕ್ಷೇತ್ರದ ಶಾಸಕರು ಕಾಂಗ್ರೆಸ್ ಪಕ್ಷದವರೇ ಆಗಿದ್ದು, ಮೆಟ್ರೋ ರೈಲು ವಿಸ್ತರಣೆಗೆ ಆಗ್ರಹಪಡಿಸುತ್ತಿದ್ದಾರೆ. ಇಂದಲ್ಲಾ ನಾಳೆ ಮೆಟ್ರೋ ಬರುವುದು ಖಚಿತವಾಗಿದ್ದು ಭೂಮಿಯ ಬೆಲೆ ಏರಿಕೆ ಕಾಣಲು ಇದೂ ಕಾರಣವಾಗಿದೆ.

ಎಂಜಿ ರಸ್ತೆಯಲ್ಲಿ 8000 ರೂವರೆಗೆ ಭೂಮಿ ಬೆಲೆ

ಈಗಾಗಲೇ ಬೆಂಗಳೂರಿನ ಖ್ಯಾತ ಕಂಪನಿಗಳೂ ರಾಮನಗರ ಕನಕಪುರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಭೂಮಿ ಖರೀದಿಗೆ ಮುಂದಾಗಿದ್ದಾರೆ. ಮಧ್ಯಮ ವರ್ಗದ ರಿಯಲ್ ಎಸ್ಟೇಟ್ ಉದ್ಯಮಿಗಳು ಒಂದರಿಂದ ಹತ್ತಿಪ್ಪತ್ತು ಎಕರೆ ಭೂಮಿ ಸಿಕ್ಕರೆ ಖರೀದಿಗೆ ಮುಂದಾಗಿದ್ದಾರೆ.

ರಾಮನಗರದ ಬಸವೇಶ್ವರ ನಗರ ಅಥವಾ ಎಂಜಿ ರಸ್ತೆಯಲ್ಲಿ ಊ.3000ದಿಂದ 4,5000 ರೂ.ವರೆಗೆ ಇದ್ದ ಭೂಮಿಯ ಬೆಲೆ ಡಿಕೆಶಿ ಹೇಳಿಕೆ ನಂತರ 8000 ರೂ.ವರೆಗೆ ಹೆಚ್ಚಳವಾಗಿದೆ. ನಿವೇಶನಗಳ ಮಾಲೀಕರು ಇದೇ ಬೆಲೆಯನ್ನು ಹೇಳುತ್ತಿದ್ದಾರೆ ಎಂದು ಏಜೆಂಟ್ ಗಳು ಹೇಳುತ್ತಾರೆ.

ಜಿಲ್ಲೆಯ ಅಭಿವೃದ್ದಿಯ ದೃಷ್ಟಿಯಿಂದ ರಾಮನಗರದ ಹೆಸರು ಬದಲಾವಣೆ ಅಗತ್ಯ ಎಂದೂ ಹೇಳಲಾಗುತ್ತಿದೆ. ಒಂದು ವೇಳೆ ಈ ಜಿಲ್ಲೆಯನ್ನು ಬೆಂಗಳೂರು ಎಂಬ ಹೆಸರಿನಿಂದ ಗುರುತಿಸಿದರೆ ಕೈಗಾರಿಕೆಗಳು ಸ್ಥಾಪನೆಯಾಗುತ್ತವೆ. ಬಂಡವಾಳ ಹೂಡಿಕೆಯಾಗುತ್ತದೆ. ಇದರಿಂದ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಅನೇಕ ಮುಖಂಡರು ಅಭಿಪ್ರಾಯಪಡುತ್ತಾರೆ. ಒಟ್ಟಿನಲ್ಲಿ ರಾಮನಗರ ಅಭಿವೃದ್ಧಿಗೆ ಕುಮಾರಸ್ವಾಮಿ ಮತ್ತು ಶಿವಕುಮಾರ್ ಇಬ್ಬರೂ ಕೊಡುಗೆ ನೀಡುರುವುದನ್ನು ಅಲ್ಲಗಳೆಯುವಂತಿಲ್ಲ.

ವಿಶೇಷ ವರದಿ: ಮಾರುತಿ ಎಚ್‌, ಬೆಂಗಳೂರು