ಸುರಕ್ಷಾ 75; ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸ್ಮರಣಾರ್ಥ ಬೆಂಗಳೂರಿನ 75 ಜಂಕ್ಷನ್‌ಗಳ ಅಭಿವೃದ್ಧಿಗೆ ಯೋಜನಾ ವರದಿ ಸಿದ್ಧ
Feb 28, 2024 05:10 PM IST
ಬೆಂಗಳೂರಿನ 75 ಜಂಕ್ಷನ್‌ಗಳ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿಯನ್ನು ಬಿಬಿಎಂಪಿ ಸಿದ್ಧಪಡಿಸುತ್ತಿದೆ. (ಸಾಂಕೇತಿಕ ಚಿತ್ರ)
ಸುರಕ್ಷಾ 75: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸ್ಮರಣಾರ್ಥ ಬೆಂಗಳೂರಿನ 75 ಜಂಕ್ಷನ್‌ಗಳ ಅಭಿವೃದ್ಧಿಗೆ ಯೋಜನಾ ವರದಿ ಸಿದ್ಧವಾಗುತ್ತಿದೆ. ಬಿಬಿಎಂಪಿ ವಿವರ ಯೋಜನಾ ವರದಿ ಸಿದ್ಧಪಡಿಸುತ್ತಿದ್ದು, 100 ಕೋಟಿ ರೂಪಾಯಿ ವ್ಯಯಿಸಲು ಮುಂದಾಗಿದೆ.
ಬೆಂಗಳೂರು: ವರ್ಷದ ಹಿಂದೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸ್ಮರಣಾರ್ಥ ಘೋಷಿಸಲಾಗಿದ್ದ 'ಸುರಕ್ಷಾ 75' ಹೆಸರಿನ ಯೋಜನೆಗೆ ಮರುಚಾಲನೆ ನೀಡಲು ಬಿಬಿಎಂಪಿ ಮುಂದಾಗಿದೆ. ಇದರಂತೆ, ಬೆಂಗಳೂರಿನ 75 ಜಂಕ್ಷನ್‌ಗಳ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನಗೊಳಿಸಲು ಬಿಬಿಎಂಪಿ ವಿವರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುತ್ತಿದೆ. 100 ಕೋಟಿ ರೂಪಾಯಿ ಯೋಜನಾ ವೆಚ್ಚ ಗಮನದಲ್ಲಿರಿಸಿಕೊಂಡು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ.
ಬಿಬಿಎಂಪಿ ವ್ಯಾಪ್ತಿಯ ಪ್ರಮುಖ 75 ಜಂಕ್ಷನ್‌ಗಳನ್ನು ಅಭಿವೃದ್ಧಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಇದರ ಉದ್ದೇಶ. ಇದರ ಜೊತೆಗೆ ಜಂಕ್ಷನ್‌ಗಳನ್ನು ಸುಂದರವಾಗಿಸಲು 2023-24ನೇ ಸಾಲಿನ ಬಜೆಟ್‌ನಲ್ಲಿ ಸುರಕ್ಷಾ ಯೋಜನೆ ಘೋಷಿಸಲಾಗಿತ್ತು. ಇದರ ಅನುದಾನವನ್ನೂ ಬಳಸಲು ಬಿಬಿಎಂಪಿ ಯೋಜಿಸುತ್ತಿದೆ.
ಸುರಕ್ಷಾ 75 ಎಂಬ ವೆಬ್‌ಸೈಟ್ ಕೂಡ ಶುರುಮಾಡಿದ್ದ ಬಿಬಿಎಂಪಿ
ಈ ನಡುವೆ, ಈ ಯೋಜನೆ ಕುರಿತಾದ ವಿದ್ಯಮಾನಗಳನ್ನು, ಪ್ರಗತಿಯನ್ನು ಸಾರ್ವಜನಿಕರಿಗೆ ತಿಳಿಸುವುದಕ್ಕಾಗಿ ಸುರಕ್ಷಾ 75 ಹೆಸರಿನ ವೆಬ್‌ಸೈಟನ್ನು ಆರಂಭಿಸಲಾಗಿತ್ತು. ಆದಾಗ್ಯೂ, ಈ ಯೋಜನೆ ಜಾರಿಗೆ ಮಾತ್ರ ಬಿಬಿಎಂಪಿ ಮನಸ್ಸು ಮಾಡಿರಲಿಲ್ಲ. ಈಗ ಕಳೆದ ವರ್ಷ ಘೋಷಿಸಲಾಗಿದ್ದ ಸುರಕ್ಷಾ ಯೋಜನೆ ಅನುಷ್ಠಾನಕ್ಕೆ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಪ್ರಕ್ರಿಯೆಗೆ ಬಿಬಿಎಂಪಿ ಚಾಲನೆ ನೀಡಿದೆ.
ಯಾವ ವಲಯದಲ್ಲಿ ಎಷ್ಟು ಜಂಕ್ಷನ್ ಅಭಿವೃದ್ಧಿ
ವಲಯ- ಜಂಕ್ಷನ್‌ಗಳ ಸಂಖ್ಯೆ
ಪೂರ್ವ 13
ದಕ್ಷಿಣ 12
ಪಶ್ಚಿಮ 11
ಮಹದೇವಪುರ 12
ಯಲಹಂಕ 8
ರಾಜರಾಜೇಶ್ವರಿನಗರ 7
ಬೊಮ್ಮನಹಳ್ಳಿ 8
ದಾಸರಹಳ್ಳಿ 4
ಒಟ್ಟು 75
ಅಭಿವೃದ್ಧಿ ಯೋಜನೆಯಲ್ಲಿ ಏನೇನು ಕಾಮಗಾರಿ
ಸುರಕ್ಷತಾ 75 ಯೋಜನೆಯಲ್ಲಿ ಪ್ರಮುಖವಾಗಿ ಜಂಕ್ಷನ್‌ಗಳನ್ನು ಸೇರುವ ರಸ್ತೆ, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಸಿಗ್ನಲ್‌ಗಳನ್ನು ಮೇಲ್ದರ್ಜೆಗೇರಿಸುವುದು, ಬಸ್ ನಿಲುಗಡೆ, ಬಸ್ ಬೇ, ವಾಹನ ನಿಲುಗಡೆ ವ್ಯವಸ್ಥೆ ಸೇರಿ ಇನ್ನಿತರ ಅನುಕೂಲ, ಸೌಕರ್ಯಗಳನ್ನು ಒದಗಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕಾಗಿ ಡಿಪಿಆರ್‌ನಲ್ಲಿ ಜಂಕ್ಷನ್ ಸೇರುವ ರಸ್ತೆಗಳ ವಿವರ, ಪಾದಚಾರಿ ಮಾರ್ಗಗಳ ಪರಿಸ್ಥಿತಿ, ವಾಹನಗಳ ಸಂಚಾರದ ಸಂಖ್ಯೆ ಸೇರಿ ಇನ್ನಿತರ ಮಾಹಿತಿ ಆರಿಸಿ ಜಂಕ್ಷನ್ ಅಭಿವೃದ್ಧಿ ಕುರಿತು ವಿವರವನ್ನು ನೀಡಬೇಕು ಎಂದು ಟೆಂಡರ್ ಪಡೆಯುವ ಸಂಸ್ಥೆಗೆ ಬಿಬಿಎಂಪಿ ಸೂಚಿಸಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)
ವಿಭಾಗ