logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಚಿನ್ನಾಭರಣ, ನಗದು ಕಳವು ಮಾಡಿದ ಬಳಿಕ ಬಂಧನ ಭೀತಿ ಶುರುವಾಗಿ 12000 ಕಿಮೀ ಕಾರಿನಲ್ಲೇ ಸುತ್ತಾಡಿದ ಕಳ್ಳರು, ಕೊನೆಗೂ ಪೊಲೀಸರ ಬಲೆಗೆ!

ಬೆಂಗಳೂರು: ಚಿನ್ನಾಭರಣ, ನಗದು ಕಳವು ಮಾಡಿದ ಬಳಿಕ ಬಂಧನ ಭೀತಿ ಶುರುವಾಗಿ 12000 ಕಿಮೀ ಕಾರಿನಲ್ಲೇ ಸುತ್ತಾಡಿದ ಕಳ್ಳರು, ಕೊನೆಗೂ ಪೊಲೀಸರ ಬಲೆಗೆ!

Umesh Kumar S HT Kannada

Nov 22, 2024 07:37 AM IST

google News

ಬೆಂಗಳೂರು: ಕಳವು ಮಾಡಿದ ಬಳಿಕ ಬಂಧನ ಭೀತಿ ಶುರುವಾಗಿ 12000 ಕಿಮೀ ಕಾರಿನಲ್ಲೇ ಸುತ್ತಾಡಿದ ಕಳ್ಳರು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. (ಎಐ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ)

  • ಬೆಂಗಳೂರು ವಿದ್ಯಾರಣ್ಯಪುರದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ ಬಳಿಕ ಬಂಧನ ಭೀತಿ ಶುರುವಾಗಿ 12000 ಕಿಮೀ ಕಾರಿನಲ್ಲೇ ಸುತ್ತಾಡಿದ ಕಳ್ಳರು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಬಿಎಂಟಿಸಿ ಬಸ್‌ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದಾರೆ. (ವರದಿ- ಎಚ್.‌ ಮಾರುತಿ, ಬೆಂಗಳೂರು)

ಬೆಂಗಳೂರು: ಕಳವು ಮಾಡಿದ ಬಳಿಕ ಬಂಧನ ಭೀತಿ ಶುರುವಾಗಿ 12000 ಕಿಮೀ ಕಾರಿನಲ್ಲೇ ಸುತ್ತಾಡಿದ ಕಳ್ಳರು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. (ಎಐ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ)
ಬೆಂಗಳೂರು: ಕಳವು ಮಾಡಿದ ಬಳಿಕ ಬಂಧನ ಭೀತಿ ಶುರುವಾಗಿ 12000 ಕಿಮೀ ಕಾರಿನಲ್ಲೇ ಸುತ್ತಾಡಿದ ಕಳ್ಳರು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. (ಎಐ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ) (perchance AI image)

ಬೆಂಗಳೂರು: ಮನೆ ಮಾಲೀಕರು ತೀರ್ಥಯಾತ್ರೆಗೆ ಎಂದು ತೆರಳಿದ್ದಾಗ ಮನೆಯಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳು ಬಂಧನ ಭೀತಿಯಿಂದ ಸತತ 15 ದಿನಗಳ ಕಾಲ ಸಾವಿರಾರು ಕಿಲೋಮೀಟರ್‌ ಸಂಚರಿಸಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ದೀಪಕ್ ಹಾಗೂ ಪವನ್ ಬಂಧಿತ ಆರೋಪಿಗಳು. ಇವರಿಂದ ವಿದ್ಯಾರಣ್ಯಪುರ ಠಾಣೆ ಪೊಲೀಸರು, ಚಿನ್ನಾಭರಣ, ಎರಡು ಕಾರು ಹಾಗೂ ಆರು ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ರೂ. 41.36 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳ್ಳತನ ಪ್ರಕರಣದ ದೂರು ದಾಖಲಾದ ನಂತರ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದರು. ಲಾಡ್ಜ್‌ನಲ್ಲಿ ತಂಗಿದ್ದರೆ ಪೊಲೀಸರ ಕೈಗೆ ಸಿಕ್ಕಿಬೀಳಬಹುದೆಂಬ ಕಾರಣದಿಂದ ಇಬ್ಬರೂ 15 ದಿನ 12 ಸಾವಿರ ಕಿ.ಮೀ. ಪ್ರಯಾಣ ಮಾಡಿ ಕಾರಿನಲ್ಲೇ ಸಂಚರಿಸುತ್ತಾ ಕಾರಿನಲ್ಲೇ ವಾಸ್ತವ್ಯ ಹೂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇವರ ಬಂಧನದಿಂದ 7 ಮನೆಗಳ್ಳತನ ಹಾಗೂ 13 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಇವರು ಸಂಜೆ ವೇಳೆ ದೀಪ ಉರಿಯುವ ಮನೆಗಳನ್ನು ಗುರುತಿಸಿ ಬೆಳಗಿನ ಜಾವ ಕಳ್ಳತನ ಮಾಡುತ್ತಿದ್ದರು.

ಬಿಎಂಟಿಸಿ ಬಸ್‌ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪಿಯ ಬಂಧನ; 3 ತಿಂಗಳಲ್ಲಿ 9ನೇ ಪ್ರಕರಣ

ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ ಚಾಲಕರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ನಿನ್ನೆಯೂ ತನ್ನ ದ್ವಿಚಕ್ರ ವಾಹನಕ್ಕೆ ದಾರಿ ಬಿಡಲಿಲ್ಲ ಎಂದು ದ್ವಿಚಕ್ರ ವಾಹನ ಸವಾರನೊಬ್ಬ ಬಸ್‌ ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ವರದಿಯಾಗಿದೆ. ಬಸ್ ಚಾಲಕ ಕುಶಾಲ್ ಕುಮಾರ್ ನೀಡಿರುವ ದೂರು ಆಧರಿಸಿ, ಹಲ್ಲೆ ನಡೆಸಿದ ದ್ವಿಚಕ್ರ ವಾಹನ ಸವಾರ ಮೊಹಮ್ಮದ್ ಫೈಜಲ್ ಎಂಬಾತನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ಮೂರನೇ ಬಾರಿಗೆ ಹಲ್ಲೆ ನಡೆಸಿರುವ ಪ್ರಕರಣ ಇದಾಗಿದ್ದು ಮೂರು ತಿಂಗಳಲ್ಲಿ ಬಿಎಂಟಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ ಒಂಬತ್ತು ಪ್ರಕರಣಗಳು ವರದಿಯಾಗಿವೆ.

ಮೆಜೆಸ್ಟಿಕ್‌ನಿಂದ ಸಿ.ಕೆ. ಪಾಳ್ಯ ಕಡೆಗೆ ಹೊರಟಿದ್ದ ಬಸ್ ಅನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ದ್ವಿಚಕ್ರ ವಾಹನ ಸವಾರ ತಡೆದಿದ್ದಾನೆ. ಮುಂದೆ ಸಾಗಲು ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಚಾಲಕನಿಗೆ ಹೊಡೆದಿದ್ದಾನೆ. ಇದನ್ನು ಪ್ರಶ್ನಿಸಿದ ನಿರ್ವಾಹಕ ಕೃಷ್ಣ ಅವರ ಮೇಲೂ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದ ಮೊಹಮ್ಮದ್ ಫೈಜಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರ ಮೇಲೆ ಪದೇ ಪದೇ ಹಲ್ಲೆ ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರಿಗೆ ಪತ್ರ ಬರೆದಿದ್ದರು.

ಮರಕ್ಕೆ ಬೈಕ್‌ ಡಿಕ್ಕಿ; ಪೋಷಕರನ್ನು ನೋಡಲು ಹಾಂಕಾಂಗ್‌ ನಿಂದ ಆಗಮಿಸಿದ್ದ ಯುವಕ ಸಾವು

ನಿಯಂತ್ರಣ ಕಳೆದುಕೊಂಡು ಬೈಕ್‌ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸವಾರನೊಬ್ಬ ಅಸುನೀಗಿರುವ ಘಟನೆ ಕೆಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯ ರಾಜರಾಜೇಶ್ವರಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿದೇಶದಿಂದ ಪೋಷಕರನ್ನು ನೋಡಲು ನಗರಕ್ಕೆ ಬಂದಿದ್ದ ಆರ್.ಆರ್.ನಗರ ನಿವಾಸಿ 26 ವರ್ಷದ ಪ್ರಖ್ಯಾತ್ ಮೃತ ದುರ್ದೈವಿ. ಬುಧವಾರ ತಡರಾತ್ರಿ 1 ಗಂಟೆ ವೇಳೆಗೆ ಆರ್.ಆರ್.ನಗರ ಮುಖ್ಯರಸ್ತೆಯಿಂದ ಜಯಣ್ಣ ಸರ್ಕಲ್ ಕಡೆ ಹೋಗುತ್ತಿರುವಾಗ ಈ ಅಪಘಾತ ನಡೆದಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ

ಪ್ರಖ್ಯಾತ್ ನಾಲ್ಕು ತಿಂಗಳಿಂದ ಹಾಂಕಾಂಗ್‌ನ ವಿಮಾನಯಾನ ಸಂಸ್ಥೆಯ ಉದ್ಯೋಗಿ. ಕೆಲವು ದಿನಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದರು. ಬೆಂಗಳೂರು ನಗರದ ಆರ್.ಆರ್.ನಗರ ಆರ್ಚ್‌ ಬಳಿ ಸ್ನೇಹಿತರನ್ನು ಭೇಟಿ ಮಾಡಿ ಬೈಕ್‌ನಲ್ಲಿ ಮನೆಗೆ ಹಿಂತಿರುಗುವಾಗ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಇರುವ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪ್ರಖ್ಯಾತ್‌ ತಲೆ, ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು. ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ ಅವರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದರು. ಪೊಲೀಸರು ಕೇಸ್ ದಾಖಲಿಸಿ, ತನಿಖೆ ನಡೆಸಿದ್ದಾರೆ.

(ವರದಿ- ಎಚ್.‌ ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ